'ರೈತ' ಗಣಪತಿಯನ್ನ ಪ್ರತಿಷ್ಠಾಪಿಸಿ, ಪೂಜೆ ಸಲ್ಲಿಸಿದ ಅಮೂಲ್ಯ ದಂಪತಿ
ಇಂದು ಸಂಕಷ್ಟ ಹರ ಗಣೇಶ ಚತುರ್ಥಿ.. ನಾಡಿನ ಮನೆ ಮನೆಯಲ್ಲೂ ಗಣೇಶ ಹಬ್ಬವನ್ನ ಜೋರಾಗಿ ಆಚರಿಸಲಾಗುತ್ತಿದೆ. ನಟಿ ಅಮೂಲ್ಯ ಮನೆಯಲ್ಲೂ ಗೌರಿ-ಗಣೇಶ ಹಬ್ಬದ ಸಂಭ್ರಮ ಅದ್ಧೂರಿಯಾಗಿದೆ.
ಹೇಳಿ ಕೇಳಿ ನಟಿ ಅಮೂಲ್ಯ ಹಾಗೂ ಪತಿ ಜಗದೀಶ್ ಅವರಿಗೆ ಪರಿಸರ ಕಾಳಜಿ ಹೆಚ್ಚು. ಪರಿಸರ ಪ್ರೇಮಿಗಳಾಗಿರುವ ಈ ದಂಪತಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮೇಲೆ ಸಸಿ ನೆಟ್ಟಿದ್ದು ನಿಮಗೆ ನೆನಪಿರಬಹುದು.

ಇದೀಗ ಪರಿಸರ ಸ್ನೇಹಿಯಾಗಿ ಗಣೇಶ ಹಬ್ಬವನ್ನ ಅಮೂಲ್ಯ-ಜಗದೀಶ್ ದಂಪತಿ ಆಚರಿಸಿದ್ದಾರೆ. ಜೇಡಿ ಮಣ್ಣಿನಿಂದ ತಯಾರಿಸಲಾದ ವಿಶೇಷ ರೈತ ಗಣಪತಿಯನ್ನ ಮನೆಯಲ್ಲಿ ಪ್ರತಿಷ್ಠಾಪಿಸಿ, ಅಮೂಲ್ಯ-ಜಗದೀಶ್ ಪೂಜೆ ಸಲ್ಲಿಸಿದ್ದಾರೆ.
ಅಂದ್ಹಾಗೆ, ಈ ರೈತ ಗಣಪನನ್ನು ಜೇಡಿ ಮಣ್ಣು ಹಾಗೂ ಸಗಣಿಯಿಂದ ತಯಾರಿಸಲಾಗಿದೆ. ಇದರಲ್ಲಿ ಕಾಳುಗಳನ್ನೂ ಸೇರಿಸಲಾಗಿದೆ. ರೈತ ಗಣಪತಿಯನ್ನ ಕುಂಡದಲ್ಲಿ ಅಥವಾ ತೋಟದಲ್ಲಿ ವಿಸರ್ಜಿಸಿದರೆ, ಮೂರ್ತಿಯಲ್ಲಿದ್ದ ಕಾಳುಗಳು ಮೊಳಕೆಯೊಡೆದು ಸಸಿಯಾಗಿ ಬೆಳೆಯುತ್ತದೆ.
''ನೀವೂ ಕೂಡ ನಿಮ್ಮ ಮನೆಯಲ್ಲಿ ಪರಿಸರ ಸ್ನೇಹಿ ಗಣೇಶನನ್ನು ಕೂರಿಸಿ, ಪರಿಸರ ಉಳಿಸಿ... ನಮ್ಮ ಗಣಪ.. ರೈತ ಗಣಪ'' ಅಂತ ಹೇಳುವ ಮೂಲಕ ಗಣೇಶ ಹಬ್ಬದ ಪ್ರಯುಕ್ತ ಎಲ್ಲರಿಗೂ ಶುಭ ಕೋರುವುದರ ಜೊತೆಗೆ ಜಾಗೃತಿಯನ್ನೂ ಮೂಡಿಸಿದ್ದಾರೆ ಅಮೂಲ್ಯ ದಂಪತಿ.


Click it and Unblock the Notifications











