ನಟ ನಾಗಾರ್ಜುನ ಫಾರ್ಮ್ ಹೌಸಿನಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ
Recommended Video
ತೆಲುಗು ಚಿತ್ರರಂಗದ ಸೂಪರ್ ಸ್ಟಾರ್ ಅಕ್ಕಿನೇನಿ ನಾಗಾರ್ಜುನ ಒಡೆತನ ಫಾರ್ಮ್ ಹೌಸಿನ ಶೆಡ್ ವೊಂದರಲ್ಲಿ ವ್ಯಕ್ತಿಯೊಬ್ಬನ ಶವ ಪತ್ತೆಯಾಗಿದೆ.ನಾಗಾರ್ಜುನ ಅವರ ಕೃಷಿ ಭೂಮಿಗೆ ಹೊಂದಿಕೊಂಡಂತೆ ಇರುವ ಶೆಡ್ ನಲ್ಲಿ ಬುಧವಾರ ರಾತ್ರಿ ಅಪರಿಚಿತ ವ್ಯಕ್ತಿಯ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಸುಮಾರು 6 ತಿಂಗಳ ಹಿಂದೆ ಸಾವು ಸಂಭವಿಸಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತೀವ್ರ ತನಿಖೆ ಕೈಗೊಂಡಿದ್ದಾರೆ.
ಸೈಬರಾಬಾದ್ ಪೊಲೀಸರು, "ಈ ಬಗ್ಗೆ ಪ್ರತಿಕ್ರಿಯಿಸಿ, ಕ್ಷೇಮಂಪೇಟ್ ಪೊಲೀಸ್ ಠಾಣೆ ವ್ಯಾಪ್ತಿಯ ಪಾಪಿರೆಡ್ಡಿ ಗ್ರಾಮದಲ್ಲಿ ಈ ಘಟನೆ ಸಂಭವಿಸಿದ್ದು, ನಾಗಾರ್ಜುನ ಅವರಿಗೆ ಸೇರಿದ ಈ ಕೃಷಿಭೂಮಿ ಅನೇಕ ತಿಂಗಳುಗಳಿಂದ ಖಾಲಿ ಬಿದ್ದಿತ್ತು. ಹಾಗಾಗಿ ಇಲ್ಲಿ ಯಾರೂ ಅಷ್ಟಾಗಿ ಸುಳಿದಾಡಿದ ಗುರುತುಗಳಿಲ್ಲ. ಮೃತ ವ್ಯಕ್ತಿಯ ಗುರುತು ಪತ್ತೆ ಇನ್ನೂ ಆಗಿಲ್ಲ. ಸ್ಥಳೀಯ ಪೊಲೀಸ್ ಠಾಣೆ ಸೇರಿದಂತೆ ಈ ವ್ಯಾಪ್ತಿಯ ಎಲ್ಲಾ ಸರಹದ್ದುಗಳಲ್ಲಿ ಈ ಬಗ್ಗೆ ಹುಡುಕಾಟ ಜಾರಿಯಲ್ಲಿದೆ" ಎಂದಿದ್ದಾರೆ.

ಸುಮಾರು 40 ಎಕರೆ ವಿಸ್ತೀರ್ಣದ ಕೃಷಿ ಭೂಮಿ
ಸುಮಾರು 40 ಎಕರೆ ವಿಸ್ತೀರ್ಣದ ಈ ಭೂಮಿಯನ್ನು ಖರೀದಿಸಿದ ನಂತರ ಇಲ್ಲಿ ಹೆಚ್ಚಾಗಿ ಕೃಷಿ ಚಟುವಟಿಕೆಗಳು ನಡೆದಿಲ್ಲ, ಅಕ್ಕಿನೇನಿ ನಾಗಾರ್ಜುನ ಅವರ ಪತ್ನಿ ಅಮಲಾ ಅವರು ಸೆಪ್ಟೆಂಬರ್ ಮೊದಲ ವಾರ ಇಲ್ಲಿಗೆ ಭೇಟಿ ನೀಡಿದ್ದರು ಎಂದು ಮಾಹಿತಿ ಬಂದಿದೆ. ಈ ಪ್ರದೇಶದಲ್ಲಿ ಸಾವಯವ ಕೃಷಿ ಕಾರ್ಯ ನಡೆಸಲು ಮುಂದಾಗಿದ್ದರು. ಈ ಬಗ್ಗೆ ತಮ್ಮ ಕಾರ್ಮಿಕರಿಗೆ ಸೂಚನೆ ನೀಡಿ ಬಂದಿದ್ದರು.

ಶೆಡ್ ನಿಂದ ದುರ್ವಾಸನೆ ಬಂದಿದೆ
ಬುಧವಾರದಂದು ಕೃಷಿ ಚಟುವಟಿಕೆ ಆರಂಭಿಸಿದ ಸ್ಥಳೀಯ ರೈತರಿಗೆ ಶೆಡ್ ನಿಂದ ದುರ್ವಾಸನೆ ಬಡಿದಿದೆ. ನಂತರ ಹೋಗಿ ಪರಿಶೀಲಿಸಿದಾಗ ಕೊಳತ ಸ್ಥಿತಿಯಲ್ಲಿ ವ್ಯಕ್ತಿಯ ಮೃತ ದೇಹ ಕಂಡು ಬಂದಿದೆ. ತಕ್ಷಣವೇ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಕ್ಷೇಮಂಪೇತ್ ಪೊಲೀಸರು ಸ್ಥಳಕ್ಕೆ ಶ್ವಾನದಳದೊಡನೆ ಆಗಮಿಸಿ ಪರಿಶೀಲನೆ ನಡೆಸಿದ್ದು, ತನಿಖೆ ಮುಂದುವರೆದಿದೆ.

ಮರಣೋತ್ತರ ಪರೀಕ್ಷೆ ವರದಿಗಾಗಿ ಕಾಯುತ್ತಿದ್ದಾರೆ
ಘಟನಾ ಸ್ಥಳಕ್ಕೆ ಆಗಮಿಸಿದ ಎಸ್ ಐ ವೆಂಕಟೇಶ್ವರುಲು ಸುದ್ದಿಗಾರರೊಂದಿಗೆ ಮಾತನಾಡಿ, ಕಳೆದ ರಾತ್ರಿ ನಮಗೆ ವಿ ಆರ್ ಒನಿಂದ ಅಲರ್ಟ್ ಬಂದಿತು. ಈ ಪ್ರದೇಶದಲ್ಲಿ ಪರಿಶೀಲನೆ, ಪಂಚನಾಮೆ ನಡೆಸಿ, ಮರಣೋತ್ತರ ಪರೀಕ್ಷೆಗೆ ಕಳಿಸಿದ್ದೇವೆ. ಇದು ಆತ್ಮಹತ್ಯೆಯೋ, ಕೊಲೆಯೋ ಈ ಕ್ಷಣ ಹೇಳುವುದು ಕಷ್ಟ, ಮರಣೋತ್ತರ ಪರೀಕ್ಷೆ ನಂತರ ಹೆಚ್ಚಿನ ವಿವರಗಳು ತಿಳಿದು ಬರಲಿದೆ. ಮೃತ ವ್ಯಕ್ತಿಯ ಗುರುತು ಪತ್ತೆ ಕಾರ್ಯ ಮುಂದುವರೆದಿದೆ. ನಾಪತ್ತೆ ಪ್ರಕರಣಗಳ ಫೈಲ್ ಗಳಲ್ಲಿ ಯಾವುದೇ ಹೊಂದಿಕೆ ಇನ್ನೂ ಕಂಡು ಬಂದಿಲ್ಲ ಎಂದಿದ್ದಾರೆ.

ಸೈಬರಾಬಾದ್ ಪೊಲೀಸ್ ಆಯುಕ್ತ ವಿಸಿ ಸಜ್ಜನರ್
ಪುರುಷನೊಬ್ಬನ ಅಸ್ಥಿಪಂಜರ ಸ್ಥಿತಿಯ ಮೃತ ದೇಹದ ಮೇಲೆ ಪೂರ್ತಿ ತೋಳಿನ ಶರ್ಟ್ ಹಾಗೂ ಕೋಟು, ಪ್ಯಾಂಟ್ ಇದೆ ಬೇರೆ ಯಾವುದೆ ವಸ್ತುಗಳು ಸಿಕ್ಕಿಲ್ಲ. ಸ್ಥಳೀಯ ರೈತರು ಆ ಗ್ರಾಮದ ಕಂದಾಯ ಅಧಿಕಾರಿಗೆ ಮಾಹಿತಿ ತಿಳಿಸಿದ್ದಾರೆ. ಅಲ್ಲಿಂದ ಕ್ಷೇಮಂ ಪೇಟ್ ಪೊಲೀಸರಿಗೆ ವಿಷಯ ಮುಟ್ಟಿದೆ. ಸ್ಥಳೀಯ ಪೊಲೀಸರು ಸಿ ಆರ್ ಪಿಸಿ ಸೆಕ್ಷನ್ 174 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ ಎಂದು ಸೈಬರಾಬಾದ್ ಪೊಲೀಸ್ ಆಯುಕ್ತ ವಿಸಿ ಸಜ್ಜನರ್ ಹೇಳಿದ್ದಾರೆ.


Click it and Unblock the Notifications