Padma Awards 2025 ; ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಪದ್ಮಭೂಷಣ ಪ್ರಶಸ್ತಿ ಸ್ವೀಕರಿಸಿದ ಅನಂತ್ ನಾಗ್..!
ಅನಂತ್ ನಾಗ್ ಕನ್ನಡ ಚಿತ್ರರಂಗದ ದಂತಕಥೆ. 50 ವರ್ಷಗಳಿಂದ ಕಲಾ ಸೇವೆಯನ್ನು ಮಾಡುತ್ತಿರುವ ಅನಂತ್ ನಾಗ್ ಕನ್ನಡ ಚಿತ್ರರಂಗದ ಅತ್ಯಂತ ಸುರದ್ರೂಪಿ ನಾಯಕ ಕೂಡ ಹೌದು. ಬಯಲು ದಾರಿ, ನಾ ನಿನ್ನ ಬಿಡಲಾರೆ, ಬೆಂಕಿಯ ಬಲೆ, ಚಂದನದ ಗೊಂಬೆ, ಹೀಗೆ ಅನೇಕ ಚಿತ್ರಗಳ ಮೂಲಕ ಹೆಣ್ಣು ಮಕ್ಕಳ ಹೃದಯದಲ್ಲಿ ಶಾಶ್ವತ ಸ್ಥಾನ ಪಡೆದ ಅನಂತ್ ನಾಗ್ ಅವರಿಗೆ ಹಾಗೇ ನೋಡಿದರೆ ಪದ್ಮ ಪ್ರಶಸ್ತಿಯನ್ನು ಯಾವತ್ತೋ ಕೊಡಬೇಕಿತ್ತು.
ಆದರೆ, ದುರ್ದೈವ ಅನಂತ್ ನಾಗ್ ಅವರ ಸಾಧನೆ ಕೇಂದ್ರ ಸರ್ಕಾರದ ಕಣ್ಣಿಗೆ ಯಾವತ್ತು ಕಾಣಿಸಲೇ ಇಲ್ಲ. ಹೀಗಾಗಿಯೇ ಕಳೆದ ಕೆಲ ವರ್ಷಗಳಿಂದ ಪದ್ಮ ಪ್ರಶಸ್ತಿಯ ವಿಚಾರದಲ್ಲಿ ಕನ್ನಡಿಗರು ಅನಂತ್ ನಾಗ್ ಅವರ ಪರ ವಕಾಲತ್ತು ವಹಿಸಿದ್ದರು. ಅನಂತ್ ನಾಗ್ ಅವರಂತಹ ದಿಗ್ಗಜರಿಗೆ ಪದ್ಮ ಪ್ರಶಸ್ತಿ ಕೊಡದಿದ್ದರೆ ಆ ಪ್ರಶಸ್ತಿಗೆ ಇರುವ ಗೌರವ ಕಡಿಮೆಯಾಗುತ್ತೆ ಎಂದು ಕಿಡಿ ಕಾರಲು ಶುರು ಮಾಡಿದ್ದರು.

ಪುನೀತ್ ರಾಜ್ ಕುಮಾರ್, ರಿಷಬ್ ಶೆಟ್ಟಿ, ರಕ್ಷಿತ್ ಶೆಟ್ಟಿ ಹೀಗೆ ಕನ್ನಡ ಚಿತ್ರರಂಗದ ಅನೇಕರು ಅನಂತ್ ನಾಗ್ ಅವರಿಗೆ ಪದ್ಮ ಪ್ರಶಸ್ತಿಯನ್ನು ನೀಡಬೇಕು ಎಂದು ಅಭಿಯಾನವನ್ನು ಮಾಡಿದ್ದರು. ಇದೆಲ್ಲದರ ಪರಿಣಾಮ ಎಂಬಂತೆ ನಾಲ್ಕು ತಿಂಗಳ ಹಿಂದೆ ಅನಂತ್ ನಾಗ್ ಅವರಿಗೆ ಪದ್ಮ ಭೂಷಣ ಪ್ರಶಸ್ತಿ ಘೋಷಿಸಲಾಗಿತ್ತು.
ಅದ್ರಂತೆ ಇಂದು ಅನಂತ್ ನಾಗ್ ಪದ್ಮ ಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಇಂದು ಪದ್ಮ ಭೂಷಣ ಪ್ರಶಸ್ತಿ ಪ್ರಧಾನ ಸಮಾರಂಭ ನಡೆದಿದ್ದು ಅನಂತ್ ನಾಗ್ ಸೇರಿ 68 ಸಾಧಕರಿಗೆ ಪ್ರಶಸ್ತಿಯನ್ನು ನೀಡಲಾಗಿದೆ. ಈ ಸಮಾರಂಭದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಸೇರಿದಂತೆ ಕೇಂದ್ರದ ಸಚಿವರು ಭಾಗವಹಿಸಿದ್ದರು. ಅನಂತ್ ನಾಗ್ ಅವರ ಮಗಳು ಮತ್ತು ಅಳಿಯ ಕೂಡ ಈ ಸಮಾರಂಭವನ್ನು ಕಣ್ತುಂಬಿಕೊಂಡರು. ಅನಂತ್ ಅವರ ಮಗಳ ಕಣ್ಣು ಹೆಮ್ಮೆಯಿಂದ ಹೊಳೆಯುತ್ತಿತ್ತು.

ಅಂದ್ಹಾಗೇ ಇದಕ್ಕೂ ಮೊದಲು ಏಪ್ರಿಲ್ 28ರಂದು ಪದ್ಮ ಪ್ರಶಸ್ತಿ ಪ್ರಧಾನ ಸಮಾರಂಭ ನಡೆದಿತ್ತು. ಅಂದು ನಡೆದ ಸಮಾರಂಭದಲ್ಲಿ 71 ಸಾಧಕರಿಗೆ ಮಾತ್ರ ಪ್ರಶಸ್ತಿ ನೀಡಲಾಗಿತ್ತು.
ಅವತ್ತು ನಡೆದ ಸಮಾರಂಭದಲ್ಲಿ ತೆಲುಗು ನಟ ಬಾಲಕೃಷ್ಣ, ತಮಿಳು ನಟ ಅಜಿತ್, ಹಿರಿಯ ನಟ ಶೇಖರ್ ಕಪೂರ್, ಪಿಟೀಲು ವಾದಕ ಲಕ್ಷ್ಮೀನಾರಾಯಣ ಸುಬ್ರಮಣ್ಯಂ, ಕ್ರಿಕೆಟಿಗ ರವಿಚಂದ್ರನ್ ಅಶ್ವಿನ್, ಹಾಕಿ ಆಟಗಾರ ಪಿಆರ್ ಶ್ರೀಜೇಶ್, ಏಷ್ಯನ್ ಇನ್ಸ್ಟಿಟ್ಯೂಟ್ ಆಫ್ ಗ್ಯಾಸ್ಟ್ರೋಎಂಟರಾಲಜಿ ಮತ್ತು ಎಐಜಿ ಆಸ್ಪತ್ರೆಗಳ ಅಧ್ಯಕ್ಷ ಡಿ ನಾಗೇಶ್ವರ ರೆಡ್ಡಿ ಸೇರಿದಂತೆ ಉಳಿದ ಸಾಧಕರು ಪ್ರಶಸ್ತಿಯನ್ನು ಪಡೆದಿದ್ದರು.
ಆದರೆ ಈ ಈ ಸಾಲಿನಲ್ಲಿ ಅವತ್ತು ಅನಂತ್ ನಾಗ್ ಅವರ ಹೆಸರು ಇರಲಿಲ್ಲ. ಹೀಗಾಗಿಯೇ ಗೊಂದಲಕ್ಕೀಡಾಗಿದ್ದ ಅನೇಕರು ಅನಂತ್ ನಾಗ್ ಪ್ರಶಸ್ತಿಯನ್ನು ಯಾಕೆ ಸ್ವೀಕರಿಸಲಿಲ್ಲ ಎಂದು ಚರ್ಚೆಯನ್ನು ಮಾಡಿದ್ದರು.ಈಗ ಅನಂತ್ ನಾಗ್ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ.
ಸದ್ಯ ಅನಂತ್ ನಾಗ್ ಅವರಿಗೆ ಅನೇಕರು ಅಭಿನಂದನೆಗಳನ್ನು ಸಲ್ಲಿಸುತ್ತಿದ್ದಾರೆ. ಇನ್ನುಳಿದಂತೆ ಪ್ರಶಸ್ತಿ ಘೋಷಣೆಯಾದಾಗ ತಮ್ಮ ಖುಷಿಯನ್ನು ಹಂಚಿಕೊಂಡಿದ್ದ ಅನಂತ್ ನಾಗ್ ಈ ಪ್ರಶಸ್ತಿ ಸಿಕ್ಕಿದ್ದಕ್ಕೆ ನನಗೆ ಖುಷಿ ಇದೆ ಎಂದು ಹೇಳಿದ್ದರು. ಕನ್ನಡಿಗರು ವಿಶೇಷವಾಗಿ ಈ ಪ್ರಶಸ್ತಿ ನನಗೆ ಬರಬೇಕು ಎಂದು ತುಂಬಾ ಆಸೆ ಪಟ್ಟಿದ್ದರು ಆ ಆಸೆ ಇಂದು ಈಡೇರಿದೆ ಎಂದಿರುವ ಅನಂತ್ ನಾಗ್ ನಮ್ಮ ದೇಶದಲ್ಲಿ ಹಿಂದಿನಿಂದ ಪದ್ಮ ಪ್ರಶಸ್ತಿ ಕೊಡುವ ವ್ಯವಸ್ಥೆ ಬೇರೆ ಇತ್ತು. ಆದರೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮೂರು ವರ್ಷಗಳ ಹಿಂದೆ ಪದ್ಮ ಪ್ರಶಸ್ತಿಯಲ್ಲಿ ಸಾರ್ವಜನಿಕರು ಭಾಗಿಯಾಗಬೇಕು ಎಂದು ಘೋಷಣೆ ಮಾಡಿದ್ದರು, ಬಳಿಕ ಕನ್ನಡಿಗರು ನನ್ನ ಹೆಸರನ್ನು ಸೂಚಿಸಿದ್ದರು ಎಂದು ಹೇಳಿದ್ದಾರೆ. ಆ ವರ್ಷ ನನಗೆ ಪ್ರಶಸ್ತಿ ಬರಲಿಲ್ಲ ಕಳೆದ ಮೂರು ವರ್ಷಗಳಿಂದ ಹೀಗೆ ಆಗ್ತಿತ್ತು ಎಂದು ಹೇಳಿದ್ದರು.


Click it and Unblock the Notifications











