ಅನಂತ್ ನಾಗ್ ಅವರಿಗೆ ಪದ್ಮಭೂಷಣ ಪ್ರಶಸ್ತಿ ಪ್ರದಾನ ಯಾವಾಗ? ಯಾಕೀ ಗೊಂದಲ?
ಕನ್ನಡದ ಹಿರಿಯ ನಟ ಅನಂತ್ ನಾಗ್ ಅವರಿಗೆ 4 ತಿಂಗಳ ಹಿಂದೆ ಪದ್ಮಭೂಷಣ ಪ್ರಶಸ್ತಿ ಘೋಷಿಸಲಾಗಿತ್ತು. ಇದು ಕನ್ನಡಿಗರಿಗೆ ಸಂತಸ ತಂದಿತ್ತು. ಅನಂತ್ ನಾಗ್ ಕೊಡುಗೆಯನ್ನು ಸರ್ಕಾರ ಯಾಕೆ ಗುರ್ತಿಸುತ್ತಿಲ್ಲ ಎಂದು ಸಾಕಷ್ಟು ಜನ ಕೇಳುತ್ತಿದ್ದರು. ಅಂತಿಮವಾಗಿ ಅವರಿಗೆ ದೇಶದ ತೃತೀಯ ನಾಗರಿಕ ಗೌರವ ಪದ್ಮಭೂಷಣ ಸಿಕ್ಕಿದ್ದು ಸಂತಸ ತಂದಿತ್ತು.
ಒಟ್ಟು 139 ಪದ್ಮ ಪ್ರಶಸ್ತಿಗಳಲ್ಲಿ ಏಳು ಜನರಿಗೆ ಪದ್ಮ ವಿಭೂಷಣ, 19 ಜನರಿಗೆ ಪದ್ಮಭೂಷಣ ಹಾಗೂ 113 ಜನರಿಗೆ ಪದ್ಮಶ್ರೀ ಪ್ರಶಸ್ತಿ ಈ ವರ್ಷ ಘೋಷಣೆ ಮಾಡಲಾಗಿತ್ತು. ಏಪ್ರಿಲ್ 28ರಂದು ರಾಷ್ಟ್ರಪತಿ ಭವನದ ಭವ್ಯ ದರ್ಬಾರ್ ಹಾಲ್‌ನಲ್ಲಿ ಉಪ ರಾಷ್ಟ್ರಪತಿ ಜಗದೀಪ್ ಧಂಖರ್, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಇತರರ ಸಮ್ಮುಖದಲ್ಲಿ ಕೆಲವರಿಗೆ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗಿತ್ತು.

ತೆಲುಗು ನಟ ಬಾಲಕೃಷ್ಣ, ತಮಿಳು ನಟ ಅಜಿತ್, ಹಿರಿಯ ನಟ ಶೇಖರ್ ಕಪೂರ್, ಪಿಟೀಲು ವಾದಕ ಲಕ್ಷ್ಮೀನಾರಾಯಣ ಸುಬ್ರಮಣ್ಯಂ, ಕ್ರಿಕೆಟಿಗ ರವಿಚಂದ್ರನ್ ಅಶ್ವಿನ್, ಹಾಕಿ ಆಟಗಾರ ಪಿಆರ್ ಶ್ರೀಜೇಶ್, ಏಷ್ಯನ್ ಇನ್ಸ್ಟಿಟ್ಯೂಟ್ ಆಫ್ ಗ್ಯಾಸ್ಟ್ರೋಎಂಟರಾಲಜಿ ಮತ್ತು ಎಐಜಿ ಆಸ್ಪತ್ರೆಗಳ ಅಧ್ಯಕ್ಷ ಡಿ ನಾಗೇಶ್ವರ ರೆಡ್ಡಿ ಸೇರಿದಂತೆ ಸಾಧಕರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಪ್ರಶಸ್ತಿ ಪ್ರದಾನ ಮಾಡಿದ್ದರು. ಆದರೆ ಕನ್ನಡ ನಟ ಅನಂತ್ ನಾಗ್ ಮಾತ್ರ ಕಾರ್ಯಕ್ರಮದಲ್ಲಿ ಭಾಗಿ ಆಗಲಿಲ್ಲ. ಪ್ರಶಸ್ತಿಯನ್ನು ಕೂಡ ಸ್ವೀಕರಿಸಲಿಲ್ಲ.
ಅನಂತ್ ನಾಗ್ ಪದ್ಮಭೂಷಣ ಪ್ರಶಸ್ತಿ ಸ್ವೀಕರಿಸುವುದನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾಯುತ್ತಿದ್ದಾರೆ. ಆದರೆ ಯಾಕೆ ಅಂದು ಪ್ರಶಸ್ತಿ ಪಡೆಯಲು ಹೋಗಲಿಲ್ಲ ಎಂದು ಕೆಲವರು ಗೊಂದಲಕ್ಕೀಡಾಗಿದ್ದರು. ಅಂದಹಾಗೆ ಏಪ್ರಿಲ್ 28ರಂದು ನಡೆದ ಪದ್ಮ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ 71 ಸಾಧಕರಿಗೆ ಮಾತ್ರ ಪ್ರಶಸ್ತಿ ನೀಡಲಾಗಿತ್ತು. ಇನ್ನುಳಿದ 68 ಮಂದಿಗೆ ಮತ್ತೊಮ್ಮೆ ಕಾರ್ಯಕ್ರಮ ನಡೆಸಿ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ.
ಅಂದರೆ ಪದ್ಮ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಎರಡು ಕಂತುಗಳಲ್ಲಿ ನಡೆಸಲಾಗುತ್ತದೆ. ಪದ್ಮಭೂಷಣ ಗೌರವಕ್ಕೆ ಪಾತ್ರರಾಗಿರುವ ಅನಂತ್ ನಾಗ್ ಅವರ ಹೆಸರು 2ನೇ ಪಟ್ಟಿಯಲ್ಲಿದೆ. ಹಾಗಾಗಿ ಈ ತಿಂಗಳ ಅಂತ್ಯಕ್ಕೆ ಮತ್ತೆ ಕಾರ್ಯಕ್ರಮ ನಡೆಯಲಿದ್ದು ಅಂದು ಅನಂತ್ ನಾಗ್ ಸಹ ರಾಷ್ಟ್ರಪತಿಗಳಿಂದ ಪ್ರಶಸ್ತಿ ಸ್ವೀಕರಿಸಲಿದ್ದಾರೆ. ಈ ವಿಚಾರ ಗೊತ್ತಿಲ್ಲದೇ ಕೆಲವರಿಗೆ ಗೊಂದಲವಾಗಿದೆ. ಪ್ರಶಸ್ತಿ ಘೋಷಣೆಯಾಗಿತು, ಯಾಕೆ ಕೊಟ್ಟಿಲ್ಲ ಎಂದು ಸೋಶಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ.
ಅನಂತ್ ನಾಗ್ ಅವರಿಗೆ ಪದ್ಮ ಗೌರವ ಯಾಕೆ ಸಿಗುತ್ತಿಲ್ಲ ಎನ್ನುವುದು ಸಾಕಷ್ಟು ಜನ ಪ್ರಶ್ನೆಯಾಗಿತ್ತು. ಬಾಲಿವುಡ್‌ನ ಯುವ ನಟಿಯರಿಗೂ ಕೊಡುವ ಪ್ರಶಸ್ತಿ ಕನ್ನಡದ ದಿಗ್ಗಜ ನಟನಿಗೆ ಯಾಕೆ ಇಲ್ಲ? ಅಷ್ಟಕ್ಕೂ ಪ್ರಶಸ್ತಿ ಪಡೆಯಲು ಮಾನದಂಡ ಏನು? ಎಂದು ಕೆಲವರು ಕೇಳುತ್ತಿದ್ದರು. ಪ್ರತಿಬಾರಿ ಪ್ರಶಸ್ತಿ ಘೋಷಣೆ ಆದಾಗ ಅನಂತ್ ನಾಗ್ ಹೆಸರು ಇಲ್ಲದೇ ಇರುವುದು ಬೇಸರ ತರಿಸುತ್ತಿತ್ತು. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಅಭಿಯಾನ ನಡೆಯುತ್ತಿತ್ತು. ನಟ ಪುನೀತ್ ರಾಜ್‌ಕುಮಾರ್ ಕೂಡ ಅನಂತ್ ನಾಗ್ ಸರ್‌ಗೆ ಪದ್ಮ ಗೌರವ ಸಿಗಬೇಕು ಎಂದು ಕನಸು ಕಂಡಿದ್ದರು.
1948ರಲ್ಲಿ ಬಟ್ಕಳದಲ್ಲಿ ಹುಟ್ಟಿ ಬೆಳೆದ ಅನಂತ್ ನಾಗರಕಟ್ಟೆ ರಂಗಭೂಮಿ ಹಿನ್ನೆಲೆಯಿಂದ ಚಿತ್ರರಂಗಕ್ಕೆ ಬಂದಿದ್ದರು. ಆರಂಭದಲ್ಲಿ ಕೊಂಕಣಿ, ಹಿಂದಿ ಹಾಗೂ ಮರಾಠಿ ನಾಟಕಗಳಲ್ಲಿ ನಟಿಸಿ ಗೆದ್ದಿದ್ದ ಅನಂತ್ 'ಸಂಕಲ್ಪ' ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ್ದರು. ಬಳಿಕ ಹಿಂತಿರುಗಿ ನೋಡಲೇ ಇಲ್ಲ.


Click it and Unblock the Notifications











