ಅವರು ಬದಲಾಗಿದ್ದಾರೆ, ನಟಿಸುವ ಹೊತ್ತಿಗೆ ಕೈ ನಡುಗುವುದಿಲ್ಲ , ರಾತ್ರಿ ಕೂಡ ಮಾತು ತೊದಲುವುದಿಲ್ಲ

By Staff

*ಸತ್ಯನಾರಾಯಣ

ಅನಂತನಾಗ್‌ ಬದಲಾಗಿದ್ದಾರೆ. ಸಂಜೆ ನಂತರ ಶೂಟಿಂಗ್‌ಗೆ ಬರೋದಿಲ್ಲ, ಮೂಡ್‌ ಕೆಟ್ಟರೆ ನಟಿಸೋದಿಲ್ಲ ಮೊದಲಾದ ಹಳೇ ಜನಪ್ರಿಯ ಆರೋಪಗಳಿಂದ ಅವರೀಗ ಕಳಚಿಕೊಂಡಿದ್ದಾರೆ. ಅನಂತ್‌ರಂಥ ನಟರೊಂದಿಗೆ ಕೆಲಸ ಮಾಡುವುದೇ ಒಂದು ಅವಿಸ್ಮರಣೀಯ ಅನುಭವ ಎಂದು ಎ.ಆರ್‌.ಬಾಬುವಿನಂಥ ದಿಢೀರ್‌ ನಿರ್ದೇಶಕರಿಂದ ಹಿಡಿದು, ಟಿ.ಎನ್‌. ಸೀತಾರಾಂರಂಥ ಜಾಣ ನಿರ್ದೇಶಕರೂ ಗಟ್ಟಿಯಾಗಿ ಹೇಳುತ್ತಿದ್ದಾರೆ.

ಸೂರ್ಯ ಮುಳುಗುವುದಕ್ಕೆ ಮುಂಚೆ ಚಿಯರ್ಸ್‌ ಎನ್ನುವ ಅನಂತ್‌ ಈಗ ಮತದಾನದಲ್ಲಿ ರಾತ್ರಿ 2ರ ತನಕ ಶೂಟಿಂಗ್‌ ಮಾಡಿದ್ದಾರೆ. ಮಲೆನಾಡಿನ ಚಳಿಗೆ ಬೆದರದೆ ಹೊಳೆಯಲ್ಲಿ, ಬಯಲಲ್ಲಿ ನಡೆದಾಡಿದ್ದಾರೆ. ಚಿತ್ರತಂಡದವರೇ ಆತಂಕಗೊಂಡಾಗ ‘ನನ್ನ ಸ್ಟಾಕ್‌ ಜೇಬಲ್ಲಿದೆ , ಆಮೇಲೆ ತಗೊತೀನಿ’ ಎಂದು ಸಮಾಧಾನ ಮಾಡಿದ್ದಾರೆ. ಚಿತ್ರಕಥೆಯಲ್ಲಾಗಲೀ, ಸಂಭಾಷಣೆಯಲ್ಲಾಗಲೀ ಯಾವತ್ತೂ ಹಸ್ತಕ್ಷೇಪ ಮಾಡದ ಅನಂತ್‌ ಈ ಬಾರಿ ಎಲ್ಲದರ ಬಗ್ಗೆಯೂ ವಿಚಾರಿಸುತ್ತಿದ್ದಾರೆ. ತಮ್ಮ ಪಾತ್ರದಲ್ಲಿ ತಾವೇ ಒಂದಿಷ್ಟು ಇಂಪ್ರೊವೈಸೇಷನ್‌ ಮಾಡಿಕೊಂಡಿದ್ದಾರೆ. ನಟಿಸುವ ಹೊತ್ತಿಗೆ ಅವರ ಕೈ ನಡುಗುವುದಿಲ್ಲ. ರಾತ್ರಿ ಕೂಡ ಮಾತು ತೊದಲುವುದಿಲ್ಲ !

ತೀರ್ಥಹಳ್ಳಿಯಲ್ಲಿ ತೀರ್ಥಸೇವನೆಗೆ ಮೊದಲೇ ಬಿಚ್ಚಿಕೊಂಡ ಅನಂತ ಚಿಂತನೆ ಇಲ್ಲಿದೆ :

  • ತಾವು ಮತ್ತೆ ರಾಜಕೀಯದತ್ತ ಹೊರಳುವ ಸಾಧ್ಯತೆಯಿದೆಯೇ?
ಇಲ್ಲ . ನನ್ನಂಥವರ ಬಗ್ಗೆ ರಾಜಕೀಯಕ್ಕೇ ಈಗ ಆಸಕ್ತಿ ಇಲ್ಲ. ಇನ್ನೊಂದೆಡೆ ನನಗೂ ಅಲ್ಲಿ ಹೋಗಿ ಏನಾದರೂ ಸಾಧಿಸುವುದಕ್ಕಿದೆ ಅಂತ ಅನ್ನಿಸ್ತಾ ಇಲ್ಲ. ನಾನು ಜೆಪಿ ಚಳವಳಿಯಿಂದ ಪ್ರೇರಿತನಾಗಿ ರಾಜಕೀಯಕ್ಕೆ ಬಂದವನು. ಈಗ ಅಂಥ ಚಳವಳಿಯ ಅಗತ್ಯವೂ ಕಾಣಿಸುತ್ತಿಲ್ಲ.

  • ರಾಜಕೀಯಕ್ಕೆ ಹೋಗಿ ಮತ್ತೆ ಚಿತ್ರರಂಗಕ್ಕೇ ಬಂದದ್ದಕ್ಕೆ ನಿಮಗೆ ಪಶ್ಚಾತಾಪವಿದೆಯೇ?
ಖಂಡಿತಾ ಇಲ್ಲ. ರಾಜಕೀಯದಲ್ಲಿ ನಾನು ಸಾಕಷ್ಟು ಅನುಭವ ಗಳಿಸಿದ್ದೇನೆ. ರಾಜ್ಯದಲ್ಲಿ ಸಚಿವನಾಗಿದ್ದೆ. ಪ್ರಧಾನಿಯವರನ್ನು ಭೇಟಿಯಾಗಿ ಮಾತಾಡುವ ಅವಕಾಶ ಸಿಕ್ಕಿತ್ತು. ಇವೆಲ್ಲಾ ಅನುಭವಗಳು ನನ್ನೊಳಗಿನ ನಟನನ್ನು ಇನ್ನಷ್ಟು ಪ್ರಬುದ್ಧನನ್ನಾಗಿಸಿವೆ. ಮತದಾನದಂಥ ರಾಜಕೀಯವೇ ಕೇಂದ್ರವಸ್ತುವಾಗಿರುವ ಸಿನಿಮಾದಲ್ಲಿ ನಟಿಸುವಾಗ ಇದು ಇನ್ನಷ್ಟು ಉಪಯೋಗಕ್ಕೆ ಬರುತ್ತಿದೆ.

  • ರಾಜಕೀಯದ ಕನೆಕ್ಷನನ್ನು ನೀವು ಕಳಚಿಕೊಂಡದ್ದರ ಬಗ್ಗೆ ನಿಮ್ಮ ಸ್ನೇಹಿತರಿಗಾಗಲಿ, ಅಭಿಮಾನಿಗಳಾಗಲೀ ಬೇಸರವಾಗಿಲ್ಲವೇ?
ನನ್ನ ಮನೆಗೆ ಬರುವ ಜನ ಕಡಿಮೆಯಾಗಿದ್ದಾರೆ. ರಾಜಕೀಯದಲ್ಲೂ ಒಂದಿಷ್ಟು ಸ್ನೇಹಿತರಿದ್ದರೂ ಅವರ್ಯಾರೂ ಅಂಥಾ ಒತ್ತಾಯವನ್ನೇನೂ ಮಾಡುತ್ತಿಲ್ಲ. ಪಟೇಲ್‌ ಅನಾರೋಗ್ಯದಲ್ಲಿದ್ದಾಗ ಅವರನ್ನು ನೋಡಲು ಹೋಗಿದ್ದೆ. ಅವರ ಹುಟ್ಟುಹಬ್ಬಕ್ಕೆ ನನ್ನನ್ನು ಕರೆದಿರಲಿಲ್ಲ.

  • ರಾಮಕೃಷ್ಣ ಹೆಗಡೆ ಅವರು ರಾಜ್‌ಕುಮಾರ್‌ ತವರೂರಿನ ಬಗ್ಗೆ ಆಡಿದ ಮಾತಿನ ಬಗ್ಗೆ ನಿಮ್ಮ ಅನಿಸಿಕೆಯೇನು?
ಅದು ಶುದ್ಧ ತಪ್ಪು. ರಾಜ್‌ಕುಮಾರ್‌ ತಮಿಳ್ನಾಡಲ್ಲಿ ಹುಟ್ಟಿದವರು ಅನ್ನಬಾರದಿತ್ತು. ಹಾಗೆ ನೋಡಿದರೆ ಆ ಕಾಲದಲ್ಲಿ ಸಾಹಿತಿಗಳು, ರಾಜಕಾರಣಿಗಳು ಮಾಡದೇ ಇರುವ ಕೆಲಸವನ್ನು ರಾಜ್‌ ಮಾಡಿದ್ದಾರೆ. ಅವರ ಚಿತ್ರಗಳು ಮಾಡಿವೆ. ಯಾಕೆಂದರೆ ಬೇರಾವುದೇ ಚಳವಳಿಗಳು ಇಲ್ಲದೇ ಇದ್ದ ಕಾಲವದು. ಅವರನ್ನು ಸಿನಿಮಾ ನಟನಾಗಿಯಷ್ಟೇ ನೋಡುವುದು ತಪ್ಪು.

  • ಮತದಾನ ಮೂಲಕ ಒಳ್ಳೆ ಚಿತ್ರಗಳ ಪರಂಪರೆ ಮತ್ತೆ ಶುರುವಾಗುತ್ತದೆ ಅನ್ನುವ ನಂಬಿಕೆ ನಿಮಗಿದೆಯೇ?
ಮಾರ್ಕೆಟಿಂಗ್‌ ಚೆನ್ನಾಗಿದ್ದರೆ ಆಗಬಹುದು. ಸರ್ಕಾರ ಇಂಥಾ ಚಿತ್ರಗಳಿಗೆ ಮೀಸಲಾಗಿರುವ ಮಿನಿ ಥಿಯೇಟರ್‌ ಕಟ್ಟಬೇಕು. ಬಾಡಿಗೆ ಕಡಿಮೆಯಿರಬೇಕು. ಆದರೆ ನಮ್ಮಲ್ಲಿ ಸರ್ಕಾರಿ ಸ್ವಾಧೀನದಲ್ಲಿರುವ ಎನ್‌ಎಫ್‌ಡಿಸಿ ಸಂಸ್ಥೆಯೇ ವಿದೇಶೀ ಚಿತ್ರಗಳನ್ನು ಇಲ್ಲಿ ಹಂಚಿಕೆ ಮಾಡುವ ಕೆಲಸ ಮಾಡುತ್ತಿದೆ. ಒಂದು ಕಡೆ ಖಾಸಗೀಕರಣ, ಇನ್ನೊಂದು ಕಡೆ ಖಾಸಗಿ ಸಂಸ್ಥೆ ಮಾಡಬೇಕಾದ ಕೆಲಸವನ್ನು ಸರ್ಕಾರಿ ಸಂಸ್ಥೆಗಳೇ ಮಾಡುವುದು. ಇದು ದ್ವಂದ್ವ ನೀತಿ. ಸೀತಾರಾಂ ಒಳ್ಳೆ ನಿರ್ದೇಶಕ. ನನ್ನ ತಮ್ಮ ಶಂಕರನ ಜೊತೆ ಕೆಲಸ ಮಾಡುತ್ತಿದ್ದಾಗಿನ ಅನುಭವವೇ ಈಗಲೂ ಆಗುತ್ತಿದೆ.

ವಾರ್ತಾ ಸಂಚಯ
ಮುಖಪುಟ / ಸ್ಯಾಂಡಲ್‌ವುಡ್‌

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X