ಕಿರುತೆರೆಯಿಂದ ಮತ್ತೆ ಹಿರಿತೆರೆಗೆ ಹಾರಿದ ಆಂಕರ್ ಅನುಶ್ರೀ
ಅನುಶ್ರೀ ನಿರೂಪಕಿಯಾಗಿ ಬಹಳ ದೊಡ್ಡ ಖ್ಯಾತಿಗಳಿಸಿದ್ದಾರೆ. ರಿಯಾಲಿಟಿ ಶೋಗಳಿಗೆ ಮಾತ್ರವಲ್ಲ ಸಿನಿಮಾ ಸಂಬಂಧಿ ಕಾರ್ಯಕ್ರಮಗಳ ನಿರೂಪಣೆಗೆ ಅನುಶ್ರೀಗೆ ದೊಡ್ಡ ಬೇಡಿಕೆ ಇದೆ.
ಕಿರುತೆರೆ ನಿರೂಪಣೆಯಿಂದಲೇ ಸಾಕಷ್ಟು ಹೆಸರು, ಹಣ ಗಳಿಸುತ್ತಿರುವ ಅನುಶ್ರೀ ಉತ್ತಮ ನಟಿಯಾಗಿದ್ದರೂ ಸಿನಿಮಾಗಳ ಬಗ್ಗೆ ಹೆಚ್ಚು ಗಮನವಹಿಸದೇ ನಿರ್ಲಕ್ಷ್ಯವಹಿಸಿದ್ದರು. ಆದರೆ ಈಗ ಮತ್ತೆ ಸಿನಿಮಾ ಕಡೆಗೆ ಮುಖ ಮಾಡಿದ್ದಾರೆ. ಅನುಶ್ರೀ ಹೊಸ ಸಿನಿಮಾವೊಂದನ್ನು ಒಪ್ಪಿಕೊಂಡಿದ್ದು ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ.
ಪ್ರಭಾಕರ್ ಎಂಬುವರು ನಿರ್ದೇಶಿಸುತ್ತಿರುವ ಮೊದಲ ಸಿನಿಮಾದಲ್ಲಿ ಅನುಶ್ರೀ ನಟಿಸುತ್ತಿದ್ದು, ಸಿನಿಮಾಕ್ಕೆ 'ಸೈತಾನ್' ಎಂದು ಹೆಸರಿಡಲಾಗಿದೆ. ಸಿನಿಮಾದ ಪೋಸ್ಟರ್ ಸಹ ಬಿಡುಗಡೆ ಆಗಿದ್ದು, ಮೇಲ್ನೋಟಕ್ಕೆ ಇದೊಂದು ಹಾರರ್ ಸಿನಿಮಾ ಎನಿಸುತ್ತಿದೆ.
'ಸೈತಾನ್' ಸಿನಿಮಾದ ಮೊದಲ ಹಂತದ ಚಿತ್ರೀಕರಣ ಈಗಾಗಲೇ ಮುಗಿದಿದ್ದು, ಚಿತ್ರತಂಡವು ಸಿನಿಮಾದ ಹೆಸರು ಅನಾವರಣಕ್ಕೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಚಿತ್ರತಂಡ ಭಾಗವಹಿಸಿ ಸಿನಿಮಾದ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದರು.
'ದೇವಕಿ', 'ಮಮ್ಮಿ' ಸಿನಿಮಾಗಳನ್ನು ನಿರ್ದೇಶನ ಮಾಡಿದ್ದ ಲೋಹಿತ್ ಎಚ್ ಈ ಸಿನಿಮಾಕ್ಕೆ ಬಂಡವಾಳ ಹೂಡಿದ್ದು ಅವರೊಟ್ಟಿಗೆ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಿದ್ದ ಪ್ರಭಾಕರ್ ಈ ಸಿನಿಮಾ ಮೂಲಕ ಸ್ವತಂತ್ರ ನಿರ್ದೇಶಕರಾಗುತ್ತಿದ್ದಾರೆ.

ಸಿನಿಮಾದ ಅವಕಾಶ ಸಿಕ್ಕ ಬಗ್ಗೆ ಮಾತನಾಡಿರುವ ನಟಿ ಅನುಶ್ರೀ, ''ನಾನು ಈ ಸಿನಿಮಾದಲ್ಲಿ ನಟಿಸಲು ನೃತ್ಯ ನಿರ್ದೇಶಕ ಇಮ್ರಾನ್ ಸರ್ದಾರಿಯಾ ಕಾರಣ. ಅವರೇ ನನಗೆ ಲೋಹಿತ್ ಅವರ ಪರಿಚಯ ಮಾಡಿಸಿದ್ದು. ಸಿನಿಮಾದಲ್ಲಿ ನಟಿಸುವ ಬಗ್ಗೆ ಇಮ್ರಾನ್ ಹೇಳಿದಾಗ ನಾನು ಬೇಡ ಎಂದಿದ್ದೆ. ಕಿರುತೆರೆಯಲ್ಲಿ ಆರಾಮವಾಗಿ ಇದ್ದೇನೆ ಸಿನಿಮಾ ಬೇಡ ಎಂದಿದ್ದೆ. ನಂತರ ಅವರು ಕಥೆ ಕೇಳಿ ಎಂದರು. ಲೋಹಿತ್ ಹೇಳಿದ ಕಥೆ ಕೇಳಿದ ಬಳಿಕ ಅಭಿನಯಿಸಲು ಒಪ್ಪಿಕೊಂಡೆ. 'ಉಪ್ಪು ಹುಳಿ ಖಾರ' ಚಿತ್ರದ ನಂತರ 'ಸೈತಾನ್' ಮೂಲಕ ರೀ ಎಂಟ್ರಿ ಕೊಡುತ್ತಿದ್ದೇನೆ. ಇದರಲ್ಲಿ ನಾಯಕ, ನಾಯಕಿ ಎಂದೇನೂ ಯಾರೂ ಇಲ್ಲ. ಕಥೆಯೇ ನಿಜವಾದ ಹೀರೋ'' ಎಂದರು ಅನುಶ್ರೀ.
''ನನ್ನ ಜೊತೆ ನಿರ್ದೇಶಕ ತಂಡದಲ್ಲಿ ಕೆಲಸ ಮಾಡಿರುವ ಪ್ರಭಾಕರ್ ಈ ಸಿನಿಮಾದ ನಿರ್ದೇಶನ ಮಾಡುತ್ತಿದ್ದಾರೆ. ಅನುಶ್ರೀ ಸೇರಿದಂತೆ ಚಿತ್ರದಲ್ಲಿ ನಟಿಸಿರುವ ಎಲ್ಲರೂ ಚೆನ್ನಾಗಿ ನಟಿಸಿದ್ದಾರೆ. ಈಗಾಗಲೇ ಸಿನಿಮಾದ ಮೊದಲ ಹಂತದ ಚಿತ್ರೀಕರಣ ಮುಗಿದಿದೆ. ಫೆಬ್ರವರಿ ಅಂತ್ಯದ ವೇಳೆಗೆ ಎರಡನೇ ಹಂತದ ಚಿತ್ರೀಕರಣ ಗೋವಾದಲ್ಲಿ ಪ್ರಾರಂಭವಾಗಲಿದೆ'' ಎಂದಿದ್ದಾರೆ ನಿರ್ಮಾಪಕ ಲೋಹಿತ್.
ಅನುಶ್ರೀ ಈಗಾಗಲೇ ಕೆಲವು ಸಿನಿಮಾಗಳಲ್ಲಿ ನಟನೆ ಮಾಡಿದ್ದಾರೆ, 2011 ರಲ್ಲಿ ಬಿಡುಗಡೆ ಆಗಿದ್ದ 'ಭೂಮಿತಾಯಿ' ಅವರ ಮೊದಲ ಸಿನಿಮಾ. 'ಮುರುಳಿ ಮೀಟ್ಸ್ ಮೀರಾ', 'ಬೆಳ್ಳಿ ಕಿರಣ', 'ಟ್ಯೂಬ್ ಲೈಟ್', 'ಬೆಂಕಿಪಟ್ಟಣ', 'ರಿಂಗ್ ಮಾಸ್ಟರ್', ರಮೇಶ್ ಅರವಿಂದ್ ನಿರ್ದೇಶನದ 'ಉತ್ತಮ ವಿಲನ್', 'ಉಪ್ಪು ಹುಳಿ ಖಾರ' ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ.


Click it and Unblock the Notifications











