ಆ. 28ಕ್ಕೆ ಆಂಕರ್ ಅನುಶ್ರೀ ಮದುವೆ ಫಿಕ್ಸ್; ಮಾತಿನ ಮಲ್ಲಿ ಕೈ ಹಿಡಿಯುವ ಹುಡುಗ ಯಾರು?
ಕನ್ನಡದ ಜನಪ್ರಿಯ ನಿರೂಪಕಿ ಅನುಶ್ರೀ. ಕೆಲ ಸಿನಿಮಾಗಳಲ್ಲಿ ಕೂಡ ಆಕೆ ನಟಿಸಿದ್ದಾರೆ. ಅದು ಕಿರುತೆರೆ ವಾಹಿನಿ ಆಗಿರಲಿ, ಸಭೆ ಸಮಾರಂಭವೇ ಆಗಿರಲಿ ಅನುಶ್ರೀ ಇದ್ದರೆ ಅದಕ್ಕೊಂದು ಕಳೆ ಎನ್ನುವುದು ಅಭಿಮಾನಿಗಳ ಮಾತು. ಇದೀಗ ಅನುಶ್ರೀ ಮದುವೆ ವಿಚಾರ ಬಹಳ ಸದ್ದು ಮಾಡ್ತಿದೆ.
ಈ ಹಿಂದೆ ಕೂಡ ಸಾಕಷ್ಟು ಬಾರಿ ಅನುಶ್ರೀ ಮದುವೆ ವದಂತಿ ಹರಿದಾಡಿತ್ತು. ಸೋಶಿಯಲ್ ಮೀಡಿಯಾದಲ್ಲಿ ಪ್ರತಿದಿನ ಇಂತಾದೊಂದು ಸುದ್ದಿ ಕೇಳಿ ಬರುತ್ತಲೇ ಇತ್ತು. ಆದರೆ ಈ ಬಾರಿ ಅಂತೆ ಕಂತೆ ಸುದ್ದಿ ಅಲ್ಲ. ಖಂಡಿತ ಅನುಶ್ರೀ ಮದುವೆ ಆಗುತ್ತಾರೆ ಎಂದು ಹೇಳಲಾಗುತ್ತಿದೆ. ಕುಟುಂಬ ಸದಸ್ಯರು ನೋಡಿ ಮೆಚ್ಚಿದ ಹುಡುಗನ ಕೈ ಹಿಡಿಯುತ್ತಾರೆ ಎಂದು ವರದಿಯಾಗಿದೆ. ಸಣ್ಣ ಪುಟ್ಟ ಶೋಗಳಿಂದ ಶುರು ಮಾಡಿ ಅನುಶ್ರೀ ಬಳಿಕ ಬಹುಬೇಡಿಕೆಯ ನಿರೂಪಕಿಯಾಗಿ ಗುರ್ತಿಸಿಕೊಂಡರು.

ನಾಗಭೂಷಣ್ ಹಾಗೂ ಮಲೈಕಾ ನಟನೆಯ 'ವಿದ್ಯಾಪತಿ' ಚಿತ್ರದ ಪ್ರಚಾರದ ವೇಳೆ ಅನುಶ್ರೀ ತಮ್ಮ ಮದುವೆ ಬಗ್ಗೆ ಮಾತನಾಡಿದ್ದರು. ಈ ವರ್ಷವೇ ಹಸೆಮಣೆ ಏರುವುದಾಗಿ ಹೇಳಿದ್ದರು. ಆಗಸ್ಟ್ 28ಕ್ಕೆ ಆಕೆಯ ಮದುವೆ ನಿಗದಿಯಾಗಿದೆ ಎಂದು ಹೇಳಲಾಗ್ತಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಮಾತ್ರ ಸಿಕ್ಕಿಲ್ಲ. ಬೆಂಗಳೂರಿನಲ್ಲೇ ಅದ್ಧೂರಿಯಾಗಿ ಅನುಶ್ರೀ ಮದುವೆ ನಡೆಯುತ್ತದೆ ಎನ್ನುವ ಊಹಾಪೋಹ ಶುರುವಾಗಿದೆ.
ಮಂಗಳೂರು ಮೂಲದ ಆದರೆ ಬೆಂಗಳೂರಿನಲ್ಲಿ ನೆಲೆಸಿರುವ ಟೆಕ್ಕಿ ಜೊತೆ ಅನುಶ್ರೀ ಮದುವೆ ಎನ್ನುವ ಮಾತುಗಳು ಕೇಳಿಬರ್ತಿದೆ. ಬೆಂಗಳೂರು ಮೂಲದ ಉದ್ಯಮಿ ರೋಷನ್ ಜೊತೆ ಮದುವೆ ನಡೆಯುತ್ತದೆ ಎಂದು ಟಿವಿ9 ವೆಬ್ ಸೈಟ್ ವರದಿ ಮಾಡಿದೆ. ಈಗಾಗಲೇ ಅನುಶ್ರೀ ಹಾಗೂ ರೋಷನ್ ಮದುವೆಗೆ ಕುಟುಂಬ ಸದಸ್ಯರು ಸಿದ್ಧತೆ ಆರಂಭಿಸಿದ್ದಾರೆ.
ಗೂರ್ಗ್ ಮೂಲದ ಉದ್ಯಮಿ ರೋಷನ್ ಮಗಳಿಗೆ ಸರಿಯಾದ ಜೋಡಿ ಎಂದು ಅನುಶ್ರೀ ತಾಯಿ ಕೂಡ ಒಪ್ಪಿದ್ದಾರಂತೆ. ಕೆಲ ದಿನಗಳ ಹಿಂದೆ ತಾವು ಮದುವೆ ಆಗುವ ಹುಡುಗ ಹೇಗಿರಬೇಕು ಎಂದು ಅನುಶ್ರೀ ಮನದಾಳ ತೆರೆದಿಟ್ಟಿದ್ದರು. "ಹುಡುಗ ಬಹಳ ರೆಸ್ಪಾನ್ಸಿಬಲ್ ಆಗಿರಬೇಕು. ನನ್ನ ಪರವಾಗಿ ಅಲ್ಲ, ಅವನ ಲೈಫ್ ಬಗ್ಗೆ ರೆಸ್ಪಾನ್ಸಿಬಲ್ ಆಗಿದ್ರೆ ಸಾಕು. ಅವನು ಬದುಕಬೇಕು, ನನ್ನನ್ನು ಬದುಕೋಕೆ ಬಿಡಬೇಕು" ಎಂದು ಹೇಳಿಕೊಂಡಿದ್ದರು.

ಮೊದಲಿಗೆ ಮಂಗಳೂರು ಪ್ರಾದೇಶಿಕ ವಾಹಿನಿ 'ನಮ್ಮ ಟಿವಿ'ಯಲ್ಲಿ ಅನುಶ್ರೀ ಕೆಲಸ ಮಾಡಲು ಆರಂಭಿಸಿದ್ದರು. 'ಟೆಲಿ ಅಂತ್ಯಾಕ್ಷರಿ' ಎಂಬ ಫೋನ್-ಇನ್ ಮ್ಯೂಸಿಕ್ ಶೋನಲ್ಲಿ ನಿರೂಪಕಿಯಾಗಿ ಗಮನ ಸೆಳೆದಿದ್ದರು. ಬಳಿಕ ಈಟಿವಿಯಲ್ಲಿ ಪ್ರಸಾರವಾಗಿದ್ದ 'ಡಿಮ್ಯಾಂಡಪ್ಪೋ ಡಿಮ್ಯಾಂಡು' ಕಾರ್ಯಕ್ರಮ ನಡೆಸಿಕೊಡುವ ಅವಕಾಶ ಸಿಕ್ಕಿತ್ತು. 'ಕಾಮಿಡಿ ಕಿಲಾಡಿಗಳು', 'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್', 'ಸರಿಗಮಪ' ಶೋಗಳನ್ನು ನಿರೂಪಣೆ ಮಾಡಿ ಅನುಶ್ರೀ ಕರ್ನಾಟಕದ ಮನೆಮಾತಾದರು.
ಪಟ ಪಟನೆ ಹರಳು ಹುರಿದಂತೆ ಮಾತನಾಡುವ ಅನುಶ್ರೀ ವೀಕ್ಷಕರ ಗಮನ ಸೆಳೆಯುತ್ತಾರೆ. ಕನ್ನಡ ಕಿರುತೆರೆಯ ಬಹುಬೇಡಿಕೆಯ ನಿರೂಪಕಿ ಎನಿಸಿಕೊಂಡಿದ್ದಾರೆ. ಅದೇ ಕಾರಣಕ್ಕೆ ಅನುಶ್ರೀ ಮದುವೆ ಯಾವಾಗ ಎಂದು ಅಭಿಮಾನಿಗಳು ಪದೇ ಪದೆ ಕೇಳುತ್ತಿದ್ದರು. ಆದಷ್ಟು ಬೇಗ ಮದುವೆ ಆಗ್ತೀನಿ ಎಂದಿದ್ದ ಚೆಲುವೆ ಈಗ ಹಸೆಮಣೆ ಏರಲು ಸಜ್ಜಾಗುತ್ತಿದ್ದಾರೆ.
ಶೀಘ್ರದಲ್ಲೇ ಮದುವೆ ಬಗ್ಗೆ ಅನುಶ್ರೀ ಅಧಿಕೃತವಾಗಿ ಮಾಹಿತಿ ಹಂಚಿಕೊಳ್ಳುವ ಸಾಧ್ಯತೆಯಿದೆ. ಆಕೆಯ ಮದುವೆಗೆ ಚಿತ್ರರಂಗದ ಗಣ್ಯರು ಸಾಕ್ಷಿ ಆಗಲಿದ್ದಾರೆ. 'ಬೆಂಕಿಪಟ್ನಂ', 'ಉಪ್ಪು ಹುಳಿ ಖಾರ', 'ಮುರಳಿ ಮೀಟ್ಸ್ ಮೀರಾ', 'ರಿಂಗ್ ಮಾಸ್ಟರ್' ಸೇರಿ ಕೆಲ ಸಿನಿಮಾಗಳಲ್ಲಿ ಕೂಡ ಅನುಶ್ರೀ ಬಣ್ಣ ಹಚ್ಚಿ ನಟಿಸಿದ್ದರು. ಬಿಗ್‌ಬಾಸ್ ಶೋ ಸ್ಪರ್ಧಿಯಾಗಿ ದೊಡ್ಮನೆ ಒಳಗೆ ಹೋಗಿದ್ದರು.


Click it and Unblock the Notifications











