ಆಂಕರ್ ಅನುಶ್ರೀಗೆ ರೋಷನ್ ಪರಿಚಯ ಆಗಿದ್ದೇಗೆ? ಲವ್ ಸ್ಟೋರಿ ಬಿಚ್ಚಿಟ್ಟ ಜೋಡಿ
ಕನ್ನಡ ನಟಿ, ನಿರೂಪಕಿ ಅನುಶ್ರೀ ಗೆಳೆಯ ರೋಷನ್ ಜೊತೆ ಹಸೆಮಣೆ ಏರಿದ್ದಾರೆ. ಬೆಂಗಳೂರಿನ ಹೊರ ವಲಯದ ಕಗ್ಗಲೀಪುರ ಬಳಿಕ ರೆಸಾರ್ಟ್‌ವೊಂದರಲ್ಲಿ ಇಬ್ಬರ ವಿವಾಹ ಮಹೋತ್ಸವ ನೆರವೇರಿದೆ. ಬಹಳ ಅದ್ಧೂರಿಯಾಗಿ ನಡೆದ ಮದುವೆ ಸಮಾರಂಭಕ್ಕೆ ಸಾಕಷ್ಟು ತಾರೆಯರು ಸಾಕ್ಷಿ ಆಗಿದ್ದರು.
ನಟ, ನಿರ್ದೇಶಕ ರಾಜ್ ಬಿ ಶೆಟ್ಟಿ, ಶಿವಣ್ಣ-ಗೀತಾ ದಂಪತಿ, ನಾದಬ್ರಹ್ಮ ಹಂಸಲೇಖ, ನಿರ್ದೇಶಕ ತರುಣ್ ಸುಧೀರ್, ನಟಿಯರಾದ ಪ್ರೇಮಾ, ತಾರಾ ಸೇರಿದಂತೆ ಚಿತ್ರರಂಗದ ತಾರೆಯರು ನವದಂಪತಿಗೆ ಶುಭ ಹಾರೈಸಿದ್ದರು. ಕೆಲವೇ ಆಪ್ತರಿಗೆ ಮಾತ್ರ ಮದುವೆ ಸಮಾರಂಭದಕ್ಕೆ ಆಹ್ವಾನ ನೀಡಲಾಗಿತ್ತು. ಅಭಿಮಾನಿಗಳಿಗೆ ಆಹ್ವಾನ ಇರಲಿಲ್ಲ. ತಮ್ಮ ಕನಸಿನಂತೆ ಅನುಶ್ರೀ ಹೊಸ ಬಾಳಿಗೆ ಕಾಲಿಟ್ಟಿದ್ದಾರೆ.

ಕಳೆದೊಂದು ತಿಂಗಳಿನಿಂದ ಅನುಶ್ರೀ, ರೋಷನ್ ಮದುವೆ ತಯಾರಿ ನಡೆದಿತ್ತು. ನಿನ್ನೆ(ಆಗಸ್ಟ್ 27) ರಾತ್ರಿ ಅರಿಸಿನ ಶಾಸ್ತ್ರ ನಡೆದಿತ್ತು. ಇಂದು(ಆಗಸ್ಟ್ 28) ಮಾಂಗಲ್ಯಧಾರಣೆಯಾಗಿದೆ. ಇನ್ನು ಕೆಂಪು, ಕೇಸರಿ ಮಿಶ್ರಿತ ಬಣ್ಣದ ಸೀರೆಯಲ್ಲಿ ವಧು ಅನುಶ್ರೀ ಮಿಂಚಿದ್ರೆ, ರೇಷ್ಮೆ ಪಂಚೆ, ಶರ್ಟ್ ತೊಟ್ಟು ವರ ರೋಷನ್ ಕಾಣಿಸಿಕೊಂಡಿದ್ದರು. ರೋಷನ್ ಉದ್ಯಮಿ, ದೊಡ್ಡ ಕೋಟ್ಯಧಿಪತಿ ಎಂದು ಕೆಲವರು ಭಾವಿಸಿದ್ದರು. ಆದರೆ "ನಾನು ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತೇನೆ. ನಾನು ಕೋಟ್ಯಧಿಪತಿ ಅಲ್ಲ" ಎಂದು ಸ್ವತಃ ರೋಷನ್ ಹೇಳಿದ್ದಾರೆ.
ಮದುವೆ ಬಳಿಕ ಮಾಧ್ಯಮಗಳ ಜೊತೆ ನವ ಜೋಡಿ ಮಾತನಾಡಿದ್ದಾರೆ. ಈ ವೇಳೆ ತಮ್ಮಿಬ್ಬರ ಲವ್ ಸ್ಟೋರಿ ಬಗ್ಗೆಯೂ ಪ್ರತಿಕ್ರಿಯಿಸಿದ್ದಾರೆ. ಸರಳವಾಗಿ ಮದುವೆ ಆಗಲು ಬಯಸಿದ್ದೆವು. ಮೊದಲಿಗೆ ಮಂತ್ರ ಮಾಂಗಲ್ಯ ಪದ್ಧತಿಯಲ್ಲಿ ಮದುವೆ ಆಗಲು ಬಯಸಿದ್ದರು. ಅದಕ್ಕೆ ಹೆಚ್ಚು ಜನ ಸೇರಬಾರದು ಎನ್ನುವ ನಿಯಮ ಇದೆ. ಇಬ್ಬರೂ ಕುಟುಂಬ ಸದಸ್ಯರನ್ನು ಸೇರಿಸಿದ್ರು ಜನ ಜಾಸ್ತಿ ಆಗುತ್ತಾರೆ. ಹಾಗಾಗಿ ಬಳಿಕ ಸರಳವಾಗಿ ಆಪ್ತರನ್ನು ಆಹ್ವಾನಿಸಿ ಮದುವೆ ಆಗಲು ನಿರ್ಧರಿಸಿದ್ದಾಗಿ ಅನುಶ್ರೀ ಹೇಳಿದ್ದಾರೆ.

ಅನುಶ್ರೀ ತಮ್ಮ ಪತಿಯನ್ನು ಪರಿಚಯ ಮಾಡಿಕೊಟ್ಟಿದ್ದಾರೆ. "ಇವರ ಹೆಸರು ರೋಷನ್ ರಾಮಮೂರ್ತಿ. ಕುಶಾಲ ನಗರದವರು. ಸದ್ಯ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದಾರೆ. ನನ್ನನ್ನು ಮದುವೆ ಆಗಿದ್ದಾರೆ. ಮದುವೆ ಬಂದಿರುವ ಎಲ್ಲರಿಗೂ ಧನ್ಯವಾದ ಎಂದು ಅನುಶ್ರೀ" ತಿಳಿಸಿದ್ದಾರೆ. "ನಮ್ಮದು ಸಿಂಪಲ್ ಲವ್ ಸ್ಟೋರಿ ಎಂದು ಹೇಳಿದ್ರೆ, ಯಾರು ನಂಬಲ್ಲ. ಅದಕ್ಕೆ ನಾವು ಹೇಳಲ್ಲ" ಎಂದು ಅನುಶ್ರೀ ನಕ್ಕಿದ್ದಾರೆ.
"ನಾವಿಬ್ಬರೂ ಫ್ರೆಂಡ್ಸ್ ಆದ್ವಿ. ಕಾಫಿ ಕುಡಿದ್ವಿ. ನಂಗೆ ಅವ್ರು ಇಷ್ಟ ಆದ್ರು, ಅವ್ರಿಗೆ ನಾನು ಇಷ್ಟ ಆಗಿದ್ದೆ. ಲವ್ ಆಯ್ತು, ಮದುವೆ ಆಯ್ತು. ನಿಮ್ಮ ಮುಂದೆ ಕೂತಿದ್ದೀವಿ. ರೋಷನ್ ಕೂಡ ಅಪ್ಪು ಸರ್ ಅಭಿಮಾನಿ. ಆತ್ಮೀಯ ಸ್ನೇಹಿತರಾಗಿದ್ದವರು. 'ಪುನೀತ ಪರ್ವ' ಕಾರ್ಯಕ್ರಮದಿಂದಲೇ ಇಬ್ಬರ ಪರಿಚಯವಾಯಿತು. ಒಂದರ್ಥದಲ್ಲಿ ಅಪ್ಪು ಸರ್ ನಮ್ಮಿಬ್ಬರನ್ನು ಸೇರಿಸಿದ್ದಾರೆ" ಎಂದು ಅನುಶ್ರೀ ಹೇಳಿದ್ದಾರೆ.
ರೋಷನ್ ಮಾತನಾಡಿ "5 ವರ್ಷಗಳಿಂದ ಅನುಶ್ರೀ ಪರಿಚಯ ಇದೆ. 3 ವರ್ಷದಿಂದ ಬಹಳ ಆತ್ಮೀಯರಾಗಿದ್ದೆವು. ಯುವ ಪತ್ನಿ ಶ್ರೀದೇವಿ ಭೈರಪ್ಪ ನನ್ನ ಬಾಲ್ಯದ ಗೆಳತಿ. ಆಕೆಯ ಮೂಲಕ ನಾನು ಅನುಶ್ರೀ ಪರಿಚಯವಾಯಿತು. ಆಕೆ ಬಹಳ ಸಿಂಪಲ್ ಹುಡುಗಿ. ಆಕೆ ಸೆಲೆಬ್ರೆಟಿ ಎಂದು ನನಗೆ ಎಂದು ಅನಿಸಲಿಲ್ಲ" ಎಂದು ತಿಳಿಸಿದ್ದಾರೆ.
ಅಪ್ಪು ಸರ್ ಪರವಾಗಿ ನನ್ನ ಸಹೋದರ ಸಮಾನರಾದ ವರುಣ್ ಮುಂದೆ ನಿಂತು ನಮ್ಮ ಮದುವೆ ಮಾಡಿಸಿದರು. ಎಲ್ಲಾ ಜವಾಬ್ದಾರಿ ಅವ್ರೇ ವಹಿಸಿಕೊಂಡಿದ್ದರು. ಇನ್ನು ರೋಷನ್ ಅವರ ಸಹಾಯಗುಣ ನನಗೆ ಬಹಳ ಇಷ್ಟವಾಯಿತು ಎಂದು ಅನುಶ್ರೀ ಹೇಳಿದ್ದಾರೆ.


Click it and Unblock the Notifications











