'ವಿಕ್ರಾಂತ್ ರೋಣ' ವೀಕ್ಷಿಸಿ ಸುದೀಪ್ ನಟನೆ ಹೊಗಳಿದ ಅನಿಲ್ ಕುಂಬ್ಳೆ
ಕ್ರಿಕೆಟ್ ಹಾಗೂ ಸಿನಿಮಾ ಬಹಳ ಹತ್ತಿರದ ಸಂಬಂಧ ಹೊಂದಿವೆ. ಅದರಲ್ಲೂ ಬಾಲಿವುಡ್‌ನಲ್ಲಿ ಕ್ರಿಕೆಟಿಗರು ಹಾಗೂ ಸಿನಿಮಾ ತಾರೆಯರ ನಡುವೆ ಬಹಳ ಆತ್ಮೀಯತೆ. ಕರ್ನಾಟಕದಲ್ಲೂ ಸಹ ಇಲ್ಲಿನ ಕ್ರಿಕೆಟಿಗರು ಹಾಗೂ ಸಿನಿಮಾ ತಾರೆಯರ ನಡುವೆ ಉತ್ತಮ ಬಾಂಧವ್ಯವಿದೆ.
ಸ್ಯಾಂಡಲ್‌ವುಡ್ ತಾರೆಯರು ಆಗಾಗ್ಗೆ ಕ್ರಿಕೆಟ್ ಪಂದ್ಯಾವಳಿಗಳನ್ನು ಆಯೋಜಿಸುತ್ತಲೇ ಇರುತ್ತಾರೆ, ತಮ್ಮ ಸಿನಿಮಾ ಸಂಬಂಧಿ ಕಾರ್ಯಕ್ರಮಗಳು, ಖಾಸಗಿ ಕೌಟುಂಬಿಕ ಕಾರ್ಯಕ್ರಮಗಳಿಗೆ ಇಲ್ಲಿನ ಜನಪ್ರಿಯ ಕ್ರಿಕೆಟ್ ತಾರೆಯರಿಗೆ ಆಹ್ವಾನ ನೀಡುತ್ತಿರುತ್ತಾರೆ. ಹಾಗಾಗಿ ಒಂದು ಉತ್ತಮ ಬಾಂಧವ್ಯ ಕ್ರಿಕೆಟಿಗರು ಹಾಗೂ ಸ್ಯಾಂಡಲ್‌ವುಡ್‌ನ ಕೆಲವು ತಾರೆಯರ ನಡುವೆ ಇದೆ.
ನಟ ಸುದೀಪ್ ಅವರಂತೂ ಕರ್ನಾಟಕದ ಕ್ರಿಕೆಟ್ ತಾರೆಯರೊಟ್ಟಿಗೆ ಮಾತ್ರವಲ್ಲ ವಿಶ್ವದ ಕೆಲವು ಶ್ರೇಷ್ಠ ಕ್ರಿಕೆಟಿಗರ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಇದೀಗ ಕರ್ನಾಟಕದ ಮಾಜಿ ಕ್ರಿಕೆಟ್ ತಾರೆ ಅನಿಲ್ ಕುಂಬ್ಳೆ ಸುದೀಪ್ ಅವರ ಹೊಸ ಸಿನಿಮಾ ವೀಕ್ಷಿಸಿ ಟ್ವಿಟ್ಟರ್‌ನಲ್ಲಿ ತಮ್ಮ ಸಂತಸ ಹಂಚಿಕೊಂಡಿದ್ದಾರೆ.

ಸುದೀಪ್ ನಟನೆಯ 'ವಿಕ್ರಾಂತ್ ರೋಣ' ಸಿನಿಮಾ ವೀಕ್ಷಿಸಿರುವ ಕ್ರಿಕೆಟಿಗ ಅನಿಲ್ ಕುಂಬ್ಳೆ, ''ವಿಕ್ರಾಂತ್ ರೋಣ' ಸಿನಿಮಾ ವೀಕ್ಷಿಸಿದೆ. ಆತ್ಮೀಯ ಗೆಳೆಯ ಸುದೀಪ್ ಅದ್ಭುತವಾದ ನಟನೆ ಮಾಡಿದ್ದಾರೆ. ಸಿನಿಮಾದ ಕೊನೆಯವರೆಗೆ ಕುತೂಹಲ ಕಾಯ್ದಿರಿಸಿಕೊಂಡಿರುತ್ತದೆ ಸಿನಿಮಾ. ವಿಜಯ್ ಪ್ರಕಾಶ್ ಹಾಡಿರುವ ಹಾಡು ಚೆನ್ನಾಗಿದೆ. ನಿರ್ದೇಶಕ ಅನುಪ್ ಭಂಡಾರಿ ಹಾಗೂ ಇಡೀಯ ತಂಡಕ್ಕೆ ಅಭಿನಂದನೆಗಳು'' ಎಂದಿದ್ದಾರೆ.
'ವಿಕ್ರಾಂತ್ ರೋಣ' ಸಿನಿಮಾ ಬಿಡುಗಡೆ ಆಗಿ ಎರಡು ತಿಂಗಳಾಗಿವೆ, ಕೆಲವು ದಿನಗಳ ಹಿಂದೆ ಇದೇ ಸಿನಿಮಾ ವೂಟ್ ನಲ್ಲಿ ತೆರೆಗೆ ಬಂದಿದೆ. ಅನಿಲ್ ಕುಂಬ್ಳೆ ಅವರು ಸಿನಿಮಾವನ್ನು ವೂಟ್‌ನಲ್ಲಿ ನೋಡಿ ಸುದೀಪ್‌ಗೆ ಟ್ವೀಟ್ ಮಾಡಿದ್ದಾರೆ.
ಕರ್ನಾಟಕದ ನಾಲ್ವರು ದಿಗ್ಗಜ ಕ್ರಿಕೆಟಿಗರಾದ ಜಾವಗಲ್ ಶ್ರೀನಾಥ್, ಅನಿಲ್ ಕುಂಬ್ಳೆ, ರಾಹುಲ್ ದ್ರಾವಿಡ್ ಹಾಗೂ ವೆಂಕಟೇಶ್ ಪ್ರಸಾದ್ ಅವರುಗಳಲ್ಲಿ ಸಿನಿಮಾ ರಂಗದವರೊಟ್ಟಿಗೆ ತುಸು ಹೆಚ್ಚಿಗೆ ಬಾಂಧವ್ಯ ಹೊಂದಿರುವುದು ಅನಿಲ್ ಕುಂಬ್ಳೆ. ಹಲವು ಸಿನಿಮಾ ಸಂಬಂಧಿ ಕಾರ್ಯಕ್ರಮಗಳಲ್ಲಿ ಅನಿಲ್ ಕುಂಬ್ಳೆ ಕಾಣಿಸಿಕೊಂಡಿದ್ದಾರೆ. ಕನ್ನಡದ ಕೆಲವು ರಿಯಾಲಿಟಿ ಶೋಗಳಲ್ಲಿಯೂ ಕುಂಬ್ಳೆ ಕಾಣಿಸಿಕೊಂಡಿದ್ದಾರೆ. ಕೆಲವು ತಿಂಗಳ ಹಿಂದೆ ರಿಯಾಲಿಟಿ ಶೋ ಒಂದರಲ್ಲಿ ಪಾಲ್ಗೊಂಡು ಕನ್ನಡ ಹಾಡೊಂದನ್ನು ಕುಂಬ್ಳೆ ಹಾಡಿದ್ದರು.


Click it and Unblock the Notifications











