»   » ಕುಂಬ್ಳೆ ಏನು ಮಾಡುತ್ತಿದ್ದಾರೆ

ಕುಂಬ್ಳೆ ಏನು ಮಾಡುತ್ತಿದ್ದಾರೆ

Posted By: Staff
Subscribe to Filmibeat Kannada

ಸಿನಿಮಾ ನಟಿಯರು ಹಾಗೂ ಕ್ರಿಕೆಟ್‌ ಕಲಿಗಳು ಒಬ್ಬರಿಗೊಬ್ಬರು ಪ್ರದಕ್ಷಿಣೆ ಹಾಕುವುದಕ್ಕೆ ಈ ಹೊತ್ತು ಫಾರ್ಮ್‌ ಕಳಕೊಂಡು ಕೂತಿರುವ ಸೌರವ್‌ ಗಂಗೂಲಿ ಹಾಗೂ ಸಿನಿಮಾಗಳಲ್ಲಿ ಅವಕಾಶ ವಂಚಿತೆ ನಗ್ಮಾ ಸೇರಿದಂತೆ ಹತ್ತಾರು ಉದಾಹರಣೆಗಳನ್ನು ಕೊಡಬಹುದು.

ಇದೇ ಗಂಗೂಲಿ, ತಮ್ಮ ನೃತ್ಯಗಾರ್ತಿ ಪತ್ನಿ ಡೋನಾ ಜೊತೆ ಸಿನಿಮಾ ಮಾಡುತ್ತಾರೆನ್ನುವ ಸುದ್ದಿಯೂ ಚಾಲ್ತಿಯಲ್ಲಿತ್ತು . ಬಿಜಲಾನಿಯ ಸೆರಗ್ಹಿಡಿದು ಈಗ ಮೈದಾನದಿಂದ ಹೊರಬಿದ್ದಿರುವ ಅಜರ್‌, ನೀನಾಗೆ ಗರ್ಭದಾನ ಮಾಡಿದ ವಿಂಡೀಸ್‌ನ ರಿಚರ್ಡ್ಸ್‌.. ಪಟ್ಟಿ ಮುಂದುವರಿಯುತ್ತದೆ. ಅದೇನು ಆಕರ್ಷಣೆಯಾ, ಪರಸ್ಪರರಲ್ಲಿ . ಸಿನಿಮಾ ನಟಿಯರ ಕಾಕದೃಷ್ಟಿ ಕ್ರಿಕೆಟ್ಟಿಗರ ಮೇಲಾದರೆ, ಕ್ರಿಕೆಟ್ಟಿಗರ ವಕ್ರದೃಷ್ಟಿ ಸಿನಿಮಾ ನಟಿಯರ ಮೇಲೆ.

ಭಾರತದಲ್ಲಂತೂ ಬಾಲಿವುಡ್‌ ಬಿಟ್ಟರೆ ಕ್ರಿಕೆಟ್ಟಿನ ಆಕರ್ಷಣೆಗೆ ಹೋಲಿಸಬಹುದಾದ ಕ್ಷೇತ್ರಗಳೇ ಇಲ್ಲವೆನ್ನಬಹುದು. ಆ ಕಾರಣಕ್ಕಾಗೆ, ಅವರ ಹಿಂದೆ ಇವರು, ಇವರ ಹಿಂದೆ ಅವರು. ಅದೆಲ್ಲಾ ಯೌವನ, ಆಕರ್ಷಣೆ, ಪ್ರೇಮದ ಮಾತಾಯಿತು. ಇದೆಲ್ಲ ಹೊರತುಪಡಿಸಿಯೂ, ವ್ಯಾಪಾರದ ಹಿನ್ನೆಲೆಯಲ್ಲೂ ಸಿನಿಮಾಕ್ಕೂ ಕ್ರಿಕೆಟ್ಟಿಗೂ ನಂಟುಂಟು. ಕ್ರಿಕೆಟ್ಟಿಗರ ಜನಪ್ರಿಯತೆಯನ್ನು ಸಿನಿಮಾಕ್ಕೆ ಬಳಸಿಕೊಳ್ಳುವ ಉದ್ದೇಶ ನಿರ್ಮಾಪಕರದು. ಇಷ್ಟೆಲ್ಲಾ ಪೀಠಿಕೆಗೆ ಕಾರಣ ಎಂದರೆ - ಭಾರತದ ಅಗ್ರಮಾನ್ಯ ಸ್ಪಿನ್ನರ್‌, ಸದ್ಯಕ್ಕೆ ತೋಳಿಗೆ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡು ಪೆವಿಲಿಯನ್‌ನಿಂದಲೇ ಕ್ರಿಕೆಟ್‌ ಸವಿಯುತ್ತಿರುವ ಅಚ್ಚ ಕನ್ನಡಿಗ ಅನಿಲ್‌ಕುಂಬ್ಳೆ ಸಿನಿಮಾ ಒಂದರಲ್ಲಿ ನಟಿಸುತ್ತಿರುವುದು.

ರಾಜೀವ್‌ ಮೆನನ್‌ ಯಾರಿಗೆ ಗೊತ್ತಿಲ್ಲ . ಕಂಡುಕೊಂಡೇನ್‌ ಕಂಡುಕೊಂಡೇನ್‌ ಖ್ಯಾತಿಯ ಅವರು ಅನಿಲ್‌ಕುಂಬ್ಳೆ ಮುಖ್ಯಪಾತ್ರದಲ್ಲಿರುವ ಸಿನಿಮಾ ನಿರ್ಮಿಸಲು ಮುಂದಾಗಿದ್ದಾರೆ. ಸಿನಿಮಾ ಇನ್ನೂ ಚಿತ್ರಕಥೆಯ ಹಂತದಲ್ಲಿದೆ. ಕಥಾವಸ್ತು , ಕ್ರಿಕೆಟ್ಟಿಗ ಹಾಗೂ ಅಂಗವಿಕಲ ಮಗುವೊಂದರ ನಡುವಣ ಸಂಬಂಧ ಕುರಿತಾದ್ದು .

ಮೊನ್ನೆ , ಚೆನ್ನೈನ ಚಿದಂಬರಂ ಸ್ಟೇಡಿಯಂನಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವೆ ಹಣಾಹಣಿ ಟೆಸ್ಟ್‌ ನಡೆಯುತ್ತಿರುವ ಹೊತ್ತಿನಲ್ಲಿ ಮೆನನ್‌ ಅಲ್ಲಿಯೇ ಇದ್ದರು. ಆಟ ನೋಡಿದರು. ಒಂದಷ್ಟು ನೋಟ್ಸ್‌ ಮಾಡಿಕೊಂಡರು. ಅದೆಲ್ಲಾ ಸಿನಿಮಾ ಮಾಡುವ ಹೊತ್ತಿಗೆ ಅನುಕೂಲಕ್ಕೆ ಬರಲಿದೆ.

ಕುಂಬ್ಳೆ ಸಿನಿಮಾದಲ್ಲಿ ನಟಿಸುತ್ತಿರುವ ಮೊದಲ ಕ್ರಿಕೆಟ್ಟಿಗನೇನೂ ಅಲ್ಲ . ಈಗಾಗಲೇ ಕನ್ನಡದವರೇ ಆದ ಜಿ.ಆರ್‌. ವಿಶ್ವನಾಥ್‌, ನಂಜುಂಡೇಗೌಡರ ನಿರ್ದೇಶನದ - ಕುಮಾರ್‌ ಬಂಗಾರಪ್ಪ ಅಭಿನಯದ ನವತಾರೆ ಸಿನಿಮಾದಲ್ಲಿ ನಾಲ್ಕೈದು ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದರು. ಸಯ್ಯದ್‌ ಕಿರ್ಮಾನಿ ಸೇರಿದಂತೆ ರಾಜ್ಯದ ಕೆಲವು ಕ್ರಿಕೆಟ್ಟಿಗರು ಕೂಡ ಬಂದುಹೋಗುವ ದೃಶ್ಯದಲ್ಲಿದ್ದರು. ಆದರೆ, ಪೂರ್ಣ ಪ್ರಮಾಣದ ನಟನೆಯ ಗೌರವ ಕುಂಬ್ಳೆಗೆ ಸಿಕ್ಕಿದೆ.

ಅಂದಹಾಗೆ, ಕುಂಬ್ಳೆ ಅವರಿಗೆ ಸಿನಿಮಾ ಅಥವಾ ಸಿನಿಮಾ ಮಂದಿಯ ಸಹವಾಸ ಹೊಸದೇನೂ ಅಲ್ಲ . ಮೊದಲ ಮದುವೆಯಿನ್ನೂ ನಡೆಯದಿದ್ದ ಹಾಗೂ ನಾಯಕಿಯಾಗಿ ಉಚ್ಛಾ ್ರಯ ಸ್ಥಿತಿಯಲ್ಲಿದ್ದ ಕಾಲದಲ್ಲಿ ಸುಧಾರಾಣಿಯಾಂದಿಗೆ ಕುಂಬ್ಳೆ ಮದುವೆ ಅನ್ನುವುದು ದೊಡ್ಡ ಸುದ್ದಿಯಾಗಿತ್ತು . ಬಹಳಷ್ಟು ಕಾಲದವರೆಗೆ, ಆ ಸುದ್ದಿಯನ್ನು ಉಭಯತ್ರರೂ ನಿರಾಕರಿಸುವ ಗೋಜಿಗೆ ಹೋಗಿರಲಿಲ್ಲ . ಆದರೆ, ಆ ಮದುವೆ ನಡೆಯಲಿಲ್ಲ . ಸುಧಾರಾಣಿ ಮದುವೆ, ಮರು ಮದುವೆ ಮಾಡಿಕೊಂಡರು. ಕುಂಬ್ಳೆಯ ಮದುವೆಯೂ ಮೆಚ್ಚಿದ ಗೆಳತಿಯಾಂದಿಗೆ ನಡೆಯಿತು. ಅದೆಲ್ಲಾ ಇತಿಹಾಸ.

ಕುಂಬ್ಳೆ ಈಗ ದಣಿದಿದ್ದಾರೆ. ಅದನ್ನವರು ಒಪ್ಪಿಕೊಳ್ಳದಿದ್ದರೂ, ಶಸ್ತ್ರ ಚಿಕಿತ್ಸೆಗೊಳಗಾಗಿರುವ ತೋಳು ಸುಮ್ಮನಿರುವುದಿಲ್ಲ . ಅವರೇನೊ, ಇನ್ನೊಂದೆರಡು ತಿಂಗಳಲ್ಲಿ ಕ್ರಿಕೆಟ್ಟಿಗೆ ಮರಳುವ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ. ಕುಂಬ್ಳೆಯಂಥದ್ದೇ ಮಾದರಿಯ ಶಸ್ತ್ರಚಿಕಿತ್ಸೆಗೊಳಗಾಗಿರುವ ಶ್ರೀನಾಥ್‌ ಪ್ರಸ್ತುತ ಪಡುತ್ತಿರುವ ಪಾಡು ಗಮನಿಸಿದರೆ, ಕುಂಬ್ಳೆಯ ಎರಡನೆ ಇನಿಂಗ್ಸ್‌ ಬಗೆಗೆ ಅನುಮಾನಗಳು ಉದ್ಭವಿಸುತ್ತವೆ. ಅದೇನೇ ಇರಲಿ, ಅವರಿಗೆ ಯಶಸ್ಸು ಸಿಗಲೆಂದು ಹಾರೈಸುವ, ಸಿನಿಮಾದಲ್ಲಿಯೂ.

English summary
Cricketers as movie ikons, now it is Anil Kumble turn

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada