"ಅನಿಮಲ್ ನಿರ್ದೇಶಕ ಒಬ್ಬ ಸೈಕೋ, ರಶ್ಮಿಕಾ ಇನ್ನು ಆತನ ಚಿತ್ರದಲ್ಲಿ ನಟಿಸಲ್ಲ": ವಿಮರ್ಶಕನ ಗಂಭೀರ ಆರೋಪ
2023 ಕೊನೆಯಲ್ಲಿ ಬಾಲಿವುಡ್ ಸಿನಿಮಾ 'ಅನಿಮಲ್' ಭಾರೀ ಚರ್ಚೆಯಾಗುತ್ತಿದೆ. ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ವಿರುದ್ಧ ಕೆಲವರು ಗಂಭೀರ ಆರೋಪ ಮಾಡುತ್ತಿದ್ದಾರೆ. 'ಅನಿಮಲ್' ಸಿನಿಮಾ ನೋಡಿದ ಕೆಲವರು ನಿರ್ದೇಶಕನನ್ನು ಸ್ತ್ರೀ ವಿರೋಧಿ ಎಂದು ಆರೋಪ ಮಾಡುತ್ತಿದ್ದಾರೆ.
ಭಾರತದಾದ್ಯಂತ ಅದೆಷ್ಟೇ ವಿರೋಧಗಳು ವ್ಯಕ್ತವಾಗುತ್ತಿದ್ದರೂ, ರಣ್‌ಬೀರ್ ಕಪೂರ್ ಹಾಗೂ ರಶ್ಮಿಕಾ ಮಂದಣ್ಣ ಜೋಡಿಯ ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸುತ್ತಿದೆ. ಬಿಡುಗಡೆಯಾದ 10 ದಿನಗಳ ಅಂತರದಲ್ಲಿ ವಿಶ್ವದಾದ್ಯಂತ 600 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ.

'ಅರ್ಜುನ್ ರೆಡ್ಡಿ'ಯಂತಹ ಸಿನಿಮಾ ಮಾಡಿದಾಗಲೂ ಸಂದೀಪ್ ರೆಡ್ಡಿ ವಂಗಾ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು. ಆದರೆ, 2017ರಲ್ಲಿ ತೆರೆಕಂಡ ಈ ಸಿನಿಮಾ ಕೂಡ ಬ್ಲಾಕ್ ಬಸ್ಟರ್ ಹಿಟ್ ಆಗಿತ್ತು. ಇದೇ ಸಿನಿಮಾ ಹಿಂದಿಯಲ್ಲಿ ರಿಮೇಕ್ ಮಾಡಲಾಯ್ತು. ಅದೇ ಕಬೀರ್ ಸಿಂಗ್. ಆ ಸಿನಿಮಾ ಕೂಡ ಹಿಟ್ ಆಯ್ತು. ಈಗ 'ಅನಿಮಲ್'. ಇದೂ ಕೂಡ ಬ್ಲಾಕ್ ಬಸ್ಟರ್ ಅಂತ ಸಾಬೀತಾಗಿದೆ. ಆದರೆ, ಕೆಲವರು ಸಿನಿಮಾದಲ್ಲಿ ತೋರಿಸಲಾದ ಕ್ರೌರ್ಯಕ್ಕೆ ಕಿಡಿಕಾರುತ್ತಿದ್ದಾರೆ. ಅದರಲ್ಲೂ ತಮಿಳು ವಿಮರ್ಶಕ ಚೆಯ್ಯರು ಬಾಬು ನಿರ್ದೇಶಕನನ್ನು ಸೈಕೋ ಎಂದು ಗಂಭೀರ ಆರೋಪ ಮಾಡಿದ್ದಾರೆ.
'ಅನಿಮಲ್' ಬಗ್ಗೆ ಯಾಕಿಷ್ಟು ಚರ್ಚೆ?
ರಣ್‌ಬೀರ್ ಕಪೂರ್ ಹಾಗೂ ರಶ್ಮಿಕಾ ಮಂದಣ್ಣ ಇದೇ ಮೊದಲ ಬಾರಿಗೆ ಸ್ಕ್ರೀನ್ ಶೇರ್ ಮಾಡಿಕೊಂಡಿದ್ದರು. ಈ ಸಿನಿಮಾದಲ್ಲಿ ಸಾಕಷ್ಟು ಕ್ರೌರ್ಯವನ್ನು ಮರೆಯುವ ದೃಶ್ಯಗಳಿವೆ ಎಂದು ಹಲವರು ವಿರೋಧಿಸುತ್ತಿದ್ದಾರೆ. ಮತ್ತೆ ಕೆಲವರು ರಣ್‌ಬೀರ್ ಹಾಗೂ ರಶ್ಮಿಕಾ ನಡುವಿನ ದೃಶ್ಯಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. 'ಅನಿಮಲ್' ನೋಡಿದ ಮೇಲೆ ನಿರ್ದೇಶಕ ಸಂದೀಪ್ ರೆಡ್ಡಿ ಸ್ತ್ರೀ ವಿರೋಧಿ ಇರಬೇಕು ಎಂದು ಹಲವರು ಕಮೆಂಟ್ ಮಾಡುತ್ತಿದ್ದಾರೆ.
ಬೆಡ್ ರೂಂ ದೃಶ್ಯಗಳಿಗೆ ಕೊರತೆ ಇಲ್ಲ
'ಅನಿಮಲ್' ಸಿನಿಮಾ ಎಲ್ಲಾ ವರ್ಗ ಇಷ್ಟ ಆಗಿಲ್ಲ ಅನ್ನೋದಂತೂ ಸ್ಪಷ್ಟ. ಕೆಲವರಿಗೆ ಕ್ರೌರ್ಯದ ದೃಶ್ಯಗಳು ಹಿಂಸೆ ಅಂತ ಅನಿಸಿದ್ದರೆ, ಮತ್ತೆ ಕೆಲವರಿಗೆ ಸಿನಿಮಾ ಚುಂಬನ ಹಾಗೂ ಬೆಡ್ ರೂಮ್ ದೃಶ್ಯಗಳಿಗೇನು ಕೊರೆತೆಯಿಲ್ಲ ಅಂತ ಅನಿಸಿದೆ. ಹೀಗಾಗಿ ಕುಟುಂಬ ಸಮೇತ ಸಿನಿಮಾ ನೋಡಲು ಕಷ್ಟ ಅನ್ನುವಂತಹ ಅಭಿಪ್ರಾಯ ಬಿಡುಗಡೆಯಾದಾಗಲೇ ವ್ಯಕ್ತವಾಗಿತ್ತು. ಅದಕ್ಕೆ ತಕ್ಕಂತೆ ತಮಿಳು ವಿಮರ್ಶಕ ಈ ಸಿನಿಮಾದ ನಿರ್ದೇಶಕನನ್ನು ಸೈಕೋ ಎಂದಿದ್ದಾರೆ.

ನಿರ್ದೇಶಕ ಒಬ್ಬ ಸೈಕೋ
ತಮಿಳಿನ ವಿಮರ್ಶಕ ಚೆಯ್ಯರು ಬಾಬು ಇತ್ತೀಚೆಗೆ ಯೂಟ್ಯೂಬ್ ಚಾನೆಲ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ 'ಅನಿಮಲ್' ಸಿನಿಮಾ ವಿರುದ್ಧ ಕಿಡಿಕಾರಿದ್ದಾರೆ. "ಅನಿಮಲ್ ಸಿನಿಮಾದ ನಿರ್ದೇಶಕ ಸಂದೀಪ್ ರೆಡ್ಡಿ ವಂಗ ಒಬ್ಬ ಸೈಕೋ ಡೈರೆಕ್ಟರ್.. ಅದಕ್ಕಾಗಿಯೇ ಅವರು ಸೈಕೋ ಸಿನಿಮಾವನ್ನೇ ಮಾಡಿದ್ದಾರೆ." ಎಂದು ಸಂದರ್ಶನದಲ್ಲಿ ಆರೋಪ ಮಾಡಿದ್ದಾರೆ.
"ರಶ್ಮಿಕಾಗೆ ಕಿರುಕುಳ ನೀಡಲಾಗಿದೆ"
ಇದೇ ಸಂದರ್ಶನದಲ್ಲಿ ರಶ್ಮಿಕಾ ಮಂದಣ್ಣ ಆಯ್ಕೆ ಪ್ರಕ್ರಿಯೆ ಬಗ್ಗೆನೂ ಮಾತಾಡಿದ್ದಾರೆ. ನಿರ್ದೇಶಕ ಪ್ರತಿನಿತ್ಯ ರಶ್ಮಿಕಾ ಮಂದಣ್ಣಗೆ ಕಿರುಕುಳ ನೀಡಿದ್ದಾರೆಂದು ಗಂಭೀರ ಆರೋಪ ಮಾಡಿದ್ದಾರೆ. ರಣಬೀರ್ ಮತ್ತು ರಶ್ಮಿಕಾ ಇಬ್ಬರ ನಡುವೆ ಸಾಕಷ್ಟು ಅಶ್ಲೀಲ ದೃಶ್ಯಗಳಿವೆ. ರಶ್ಮಿಕಾ ಮಂದನಾಗೆ ದಿನನಿತ್ಯದ ನಿರ್ದೇಶಕ ಕಿರುಕುಳ ನೀಡಿದ್ದಾರೆ. ಈ ಕಾರಣದಿಂದ ಇನ್ನು ಮುಂದೆ ಸಂದೀಪ್ ರೆಡ್ಡಿ ನಿರ್ದೇಶನದಲ್ಲಿ ರಶ್ಮಿಕಾ ನಟಿಸದೇ ಇರಲು ನಿರ್ಧರಿಸಿದ್ದಾರೆ" ಎಂದು ಚೆಯ್ಯರು ಬಾಬು ಆರೋಪ ಮಾಡಿದ್ದಾರೆಂದು ತಮಿಳು ಮಾಧ್ಯಮಗಳು ವರದಿ ಮಾಡಿವೆ.


Click it and Unblock the Notifications











