ಅಪ್ಪಾಜಿ ಪುಣ್ಯಭೂಮಿ ಬಗ್ಗೆ ನಾವು ಸರ್ಕಾರದ ಬಳಿ ಕೇಳಲ್ಲ.. ಅದರ ಸಂಪೂರ್ಣ ಜವಾಬ್ದಾರಿ ಅಭಿಮಾನಿಗಳದ್ದು; ಅನಿರುದ್ಧ್
ಸಾಹಸಸಿಂಹ ವಿಷ್ಣುವರ್ಧನ್ ಪುಣ್ಯಭೂಮಿ ವಿಚಾರ ಇನ್ನು ಕಗ್ಗಂಟಾಗಿಯೇ ಉಳಿದಿದೆ. ಈಗಾಗಲೇ ಸರ್ಕಾರ ಮೈಸೂರಿನಲ್ಲಿ ವಿಷ್ಣು ಸ್ಮಾರಕ ನಿರ್ಮಿಸಿದೆ. ಆದರೆ ದಾದಾ ಅಂತ್ಯಕ್ರಿಯೆ ನಡೆದ ಪುಣ್ಯಭೂಮಿಯು ಬೆಂಗಳೂರಿನ ಅಭಿಮಾನ್ ಸ್ಟುಡಿಯೋದಲ್ಲಿದೆ. ಅಲ್ಲಿಯೇ ಅಭಿಮಾನಿಗಳು ಪೂಜೆ ಸಲ್ಲಿಸುತ್ತಾ ಬಂದಿದ್ದರು. ಆದರೆ ಕಳೆದ ವರ್ಷ ಮಂಟಪದ ಸಮೇತ ವಿಷ್ಣು ಸಮಾಧಿಯನ್ನು ನೆಲಸಮ ಮಾಡಲಾಗಿತ್ತು.
ವಿಷ್ಣುವರ್ಧನ್ ಅವರ ಸ್ಮಾರಕವನ್ನು ರಾತ್ರೋರಾತ್ರಿ ತೆರವುಗೊಳಿಸಿರುವ ಬಗ್ಗೆ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದರು. ಅದೇ ಸ್ಥಳದಲ್ಲಿ ವಿಷ್ಣು ಸ್ಮಾರಕ ನಿರ್ಮಿಸಬೇಕು ಎಂದು ಅಭಿಮಾನಿಗಳು ಕೇಳುತ್ತಲೇ ಇದ್ದಾರೆ. ಇದೇ ವಿಚಾರದ ಬಗ್ಗೆ ವಿಷ್ಣುವರ್ಧನ್ ಅವರ ಅಳಿಯ ಅನಿರುದ್ಧ್ ಪ್ರತಿಕ್ರಿಯಿಸಿದ್ದಾರೆ. ಇನ್ನು ಮುಂದೆ ಅಭಿಮಾನ್ ಸ್ಟುಡಿಯೋದಲ್ಲಿ ವಿಷ್ಣು ಪುಣ್ಯಭೂಮಿ ವಿಚಾರವಾಗಿ ಕುಟುಂಬದವರು ಸರ್ಕಾರದ ಬಳಿ ಕೇಳುವುದಿಲ್ಲ. ಅದು ಅಭಿಮಾನಿಗಳ ಜವಾಬ್ದಾರಿ ಎಂದಿದ್ದಾರೆ. ಈ ಬಗ್ಗೆ ಇನ್‌ಸ್ಟಾಗ್ರಾಮ್‌ನಲ್ಲಿ ಸುದೀರ್ಘ ಪತ್ರ ಬರೆದಿದ್ದಾರೆ.

"ಪುಣ್ಯಭೂಮಿಯ ಬಗ್ಗೆ ನನ್ನ ಸಾಮಾಜಿಕ ಜಾಲತಾಣದಲ್ಲಿ ಕೆಲವರು ಕೇಳಿದ್ದಾರೆ. ಪುಣ್ಯಭೂಮಿಯ ಬಗ್ಗೆ ಈಗಾಗಲೇ ನಾವು ಮಾನ್ಯ ಮಂತ್ರಿರವರನ್ನು ಕೇಳಿದ್ದೇವೆ... ಕೆಲವು ಅಧಿಕಾರಿಗಳನ್ನೂ ಸಂಪರ್ಕಿಸಿ ಕೇಳಿದ್ದೇವೆ. ಆದರೆ ಅದು ಈಗ ಅರಣ್ಯ ಇಲಾಖೆಗೆ ಸೇರಿದೆ ಎಂದು ತಿಳಿಸಿದ್ದಾರೆ. ಅದರಿಂದಾಗಿ ಸಾಕಷ್ಟು ಅಡಚಣೆಗಳಿವೆ. ಸರ್ಕಾರ ಈಗಾಗಲೇ ಸ್ಮಾರಕವನ್ನು ಮೈಸೂರಿನಲ್ಲಿ ನಿರ್ಮಿಸಿದೆ. ಇನ್ನು ಮುಂದೆ ನಾವು, ಅಂದರೆ ಕುಟುಂಬದವರು, ಅಭಿಮಾನ ಸ್ಟುಡಿಯೋ ಬಗ್ಗೆ ಮತ್ತೆ ಕೇಳುತ್ತಾ ಹೋಗುವುದು ಸರಿಯಲ್ಲ" ಎಂದು ಅನಿರುದ್ಧ್ ಬರೆದುಕೊಂಡಿದ್ದಾರೆ.
ಅಭಿಮಾನಿಗಳಾಗಿ ಅಪ್ಪಾಜಿ ಪುಣ್ಯಭೂಮಿಯ ಸಂಪೂರ್ಣ ಜವಾಬ್ದಾರಿ ಈಗ ನಿಮ್ಮದು. ತಾವೆಲ್ಲರೂ ಕೂಡ ಪ್ರಯತ್ನ ಮಾಡಿ... ಅದು ಆದರೆ ನಾವೂ ಸಂತೋಷಪಡುತ್ತೇವೆ. ಜೊತೆಗೆ ಅಭಿಮಾನಿಗಳಿಂದ ಆಯಿತು ಅನ್ನೋ ಹೆಗ್ಗಳಿಕೆಗೂ ತಾವೆಲ್ಲರೂ ಪಾತ್ರರಾಗುತ್ತೀರಿ, ಮಾದರಿ ಆಗುತ್ತೀರಿ ಎಂದು ಅನಿರುದ್ಧ್ ತಿಳಿಸಿದ್ದಾರೆ. ಅಭಿಮಾನ ಸ್ಟುಡಿಯೋದಲ್ಲಿದ್ದ ಮಂಟಪವನ್ನು ಭಾರತಿ ಅಮ್ಮ ಸ್ವಂತ ಖರ್ಚಿನಲ್ಲೇ ಕಟ್ಟಿಸಿದ್ದರು. ನಾವು ಕೆಲ ಕಾರಣಗಳಿಂದ ಅಲ್ಲಿ ಹೋಗದೇ ಇದ್ದರೂ, ಅಭಿಮಾನಿಗಳಿಗೋಸ್ಕರ ಅದು ಹಾಗೆಯೇ ಇರಲಿ ಅಂದುಕೊಂಡಿದ್ದಿ. ಆದರೆ ಅದು ತೆರವುಗೊಂಡಿದ್ದು ಖಂಡನೀಯ" ಎಂದಿದ್ದಾರೆ.
"ಅಭಿಮಾನ್ ಸ್ಟುಡಿಯೋದಲ್ಲೇ ಸ್ಮಾರಕ ಆಗಬೇಕು" ಅಂತ ಹಠ ಹಿಡಿದಿದ್ದರೆ, ಅಥವಾ ನಾವು ಪ್ರಯತ್ನಿಸದೇ ಇದ್ದಿದ್ದರೆ, ಇವತ್ತಿಗೂ ಸ್ಮಾರಕವೇ ನಿರ್ಮಾಣವಾಗುತ್ತಿರಲಿಲ್ಲ ಎಂದು ಅನಿರುದ್ಧ್ ಹೇಳಿದ್ದಾರೆ. "ನಮ್ಮ ಪ್ರಾಮಾಣಿಕತೆ, ಪರಿಶ್ರಮದ ಬಗ್ಗೆ ಏನೂ ಗೊತ್ತಿಲ್ಲದೇ, ಕೆಲವರು ಮಾತಾಡುವುದು, ಆರೋಪಗಳನ್ನು ಮಾಡುವುದು, ಏನೂ ಮಾಡದೇ
ಹೇಳಿಕೆಗಳನ್ನು ಕೊಟ್ಟು ಚಪ್ಪಾಳೆ ಗಿಟ್ಟಿಸಿಕೊಂಡು ಪ್ರಚಾರ ಪಡೆಯುವ ವ್ಯಕ್ತಿಗಳ ಬಗ್ಗೆ ತಮಲ್ಲಿ ಕೆಲವರಿಗೆ ವಿಶ್ವಾಸವಿರುವುದು ನಮಗೆ ನಿಜಕ್ಕೂ ತುಂಬಾ ಬೇಸರ ತಂದಿದೆ" ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.
ಕೆಲವರು ಅಭಿಮಾನಿಗಳ ವೇಷ ತೊಟ್ಟು, ತಮ್ಮ ತಮ್ಮ ಸ್ವಾರ್ಥಕ್ಕಾಗಿ ನಮ್ಮ ಮಧ್ಯೆ ಬಿರುಕು ಮೂಡಿಸಲು ಪ್ರಯತ್ನಿಸುತ್ತಿದ್ದಾರೆ. ದಯವಿಟ್ಟು ಎಚ್ಚರಿಕೆಯಿಂದಿರಿ ಎಂದು ಅನಿರುದ್ಧ್ ತಿಳಿ ಹೇಳಿದ್ದಾರೆ. ಮೈಸೂರಲ್ಲೇ ಸ್ಮಾರಕ ಆಗಬೇಕು ಅನ್ನೋದು ಅಪ್ಪ ಅವರ ಆಸೆಯಾಗಿರಬಹುದು. ಅದಕ್ಕಾಗಿಯೇ ಅವರು ತಮ್ಮ ಕೊನೆಯುಸಿರೆಳೆದರು. ಅಲ್ಲಿ ಅವರ ಅಸ್ತಿ ಇರಿಸಲಾಗಿದೆ. ಅದರ ಮೇಲೆಯೇ ಅವರ ಪ್ರತಿಮೆ ನಿಂತಿದೆ. ಇನ್ನೂ ಮುಂದೆ ನಮ್ಮ ಕುಟುಂಬದಿಂದ ಇದರ ಬಗ್ಗೆ ಯಾವುದೇ ಸ್ಪಷ್ಟನೆ ನಿರೀಕ್ಷೆ ಮಾಡಬೇಡಿ. ಅಪ್ಪ ಅವರ ಮೇಲೆ ನಮಗಿರುವ ಪ್ರೀತಿ, ಅಭಿಮಾನ ಯಾರಿಗೂ ಸಾಬೀತುಪಡಿಸೋ ಅವಶ್ಯಕತೆ ನಮಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.


Click it and Unblock the Notifications