ಯಶ್ 'ಟಾಕ್ಸಿಕ್' ಚಿತ್ರಕ್ಕೆ ಟ್ಯೂನ್ ಹಾಕುವ ಬಗ್ಗೆ ಪ್ರತಿಕ್ರಿಯಿಸಿದ ಸಂಗೀತ ನಿರ್ದೇಶಕ
'ಕೂಲಿ' ಸಕ್ಸಸ್ ಸಂಭ್ರಮದಲ್ಲಿ ಅನಿರುದ್ಧ್ ರವಿಚಂದರ್ ತೇಲುತ್ತಿದ್ದಾರೆ. ಲೋಕೇಶ್ ಕನಕರಾಜ್ ನಿರ್ದೇಶನದ ಸಿನಿಮಾದಲ್ಲಿ ರಾಕ್‌ಸ್ಟರ್ ಮ್ಯೂಸಿಕ್ ಸೌಂಡ್ ಜೋರಾಗಿದೆ. ಸದ್ಯ ಭಾರತದ ಬಹುಬೇಡಿಕೆಯ ಸಂಗೀತ ನಿರ್ದೇಶಕನಾಗಿ ಅನಿರುದ್ದ್ ಗುರ್ತಿಸಿಕೊಂಡಿದ್ದಾರೆ. ಯಶ್ ನಟನೆಯ 'ಟಾಕ್ಸಿಕ್' ಚಿತ್ರಕ್ಕೂ ಅವರು ಮ್ಯೂಸಿಕ್ ಕಂಪೋಸ್ ಮಾಡ್ತಾರೆ ಎನ್ನುವ ಊಹಾಪೋಹ ಕೇಳಿಬಂದಿತ್ತು.
ಧನುಷ್ ನಟಿಸಿದ 'ತ್ರೀ' ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡುವ ಮೂಲಕ ಅನಿರುದ್ದ್ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. 'ಕೊಲವೆರಿ ಡಿ' ಸಾಂಗ್ ಕಂಪೋಸ್ ಮಾಡಿ ಮ್ಯಾಜಿಕ್ ಮಾಡಿದ್ದರು. ಬಳಿಕ ಸಾಲು ಸಾಲು ಹಿಟ್ ಸಿನಿಮಾಗಳಿಗೆ ಟ್ಯೂನ್ ಹಾಕುತ್ತಾ ಬರ್ತಿದ್ದಾರೆ. ತಮಿಳು ಮಾತ್ರವಲ್ಲದೇ ತೆಲುಗು ಚಿತ್ರಗಳಿಗೂ ಮ್ಯೂಸಿಕ್ ಕಂಪೋಸ್ ಮಾಡುತ್ತಿದ್ದಾರೆ. 'ಜವಾನ್' ಚಿತ್ರಕ್ಕೆ ಟ್ಯೂನ್ ಹಾಕಿ ಬಾಲಿವುಡ್ ಅಂಗಳಕ್ಕೂ ಎಂಟ್ರಿ ಕೊಟ್ಟಿದ್ದರು. ಇದೀಗ ಕನ್ನಡ ಚಿತ್ರರಂಗಕ್ಕೆ ಬರ್ತಿದ್ದಾರೆ.

'ಕೂಲಿ' ಚಿತ್ರ ಸಕ್ಸಸ್ ಸಂಭ್ರಮದಲ್ಲಿ ದಿ ಹಾಲಿವುಡ್ ರಿಪೋರ್ಟರ್ ವೆಬ್ ಸೈಟ್ ಸಂದರ್ಶನದಲ್ಲಿ ಅನಿರುದ್ದ್ ರವಿಚಂದರ್ ಮಾತನಾಡಿದ್ದಾರೆ. ಈ ವೇಳೆ ಸಾಕಷ್ಟು ವಿಚಾರಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ನಡುವೆ 'ಟಾಕ್ಸಿಕ್' ಸಂಗೀತ ನೀಡುವ ಬಗ್ಗೆ ಪರೋಕ್ಷವಾಗಿ ಮಾತನಾಡಿದ್ದಾರೆ. 'ಹುಕುಂ ಟೂರ್' ಹೆಸರಿನಲ್ಲಿ ಅನಿರುದ್ಧ್ ಸಾಕಷ್ಟು ಕಡೆಗಳಲ್ಲಿ ಮ್ಯೂಸಿಕಲ್ ನೈಟ್ಸ್ ನಡೆಸುತ್ತಾ ಬರ್ತಿದ್ದಾರೆ. 'ಜೈಲರ್- 2', 'ಜನನಾಯಗನ್' ಹಾಗೂ 'ಟಾಕ್ಸಿಕ್' ರೀತಿಯ ಚಿತ್ರಗಳಲ್ಲಿ ಕೆಲಸ ಮಾಡುತ್ತಿದ್ದೀರಾ, ಈ ನಡುವೆ 'ಹುಕುಂ ಟೂರ್' ಮುಂದುವರೆಸುತ್ತೀರಾ? ಎನ್ನುವ ಪ್ರಶ್ನೆಗೆ ಪ್ರತಿಕ್ರಿಯಿಸಿದ್ದಾರೆ.
ಹುಕುಂ ಟೂರ್ ಬಹಳ ಹಿಂದೆಯೇ ನಿಲ್ಲಿಸಬೇಕು ಎಂದುಕೊಂಡೆವು. ಬಳಿಕ ಮುಂದುವರೆಸಿದೆವು. ಮುಂದೆ 'ಪವರ್‌ಹೌಸ್' ಟೂರ್ ಪ್ಲಾನ್ ಮಾಡುತ್ತಿದ್ದೇವೆ. ಬಳಿಕ 6 ತಿಂಗಳ ವಿಶ್ರಾಂತಿ ಪಡೆದು ಮತ್ತೆ ಮ್ಯೂಸಿಕಲ್ ನೈಟ್ಸ್ ಮುಂದುವರೆಸುತ್ತೇನೆ ಎಂದು ಅನಿರುದ್ಧ್ ರವಿಚಂದರ್ ಹೇಳಿದ್ದಾರೆ. ಈ ಮೂಲಕ 'ಟಾಕ್ಸಿಕ್' ಚಿತ್ರಕ್ಕೆ ಮ್ಯೂಸಿಕ್ ಮಾಡುವ ಬಗ್ಗೆ ಇಲ್ಲ ಎನ್ನದೇ ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ. ಜನವರಿಯಲ್ಲಿ 'ಜನನಾಯಗನ್', ಮಾರ್ಚ್ 'ಟಾಕ್ಸಿಕ್' ಸಿನಿಮಾ ತೆರೆಗೆ ಬರಲಿದೆ. ಆ ಎರಡೂ ಸಿನಿಮಾಗಳಿಗೆ ಕೆಲಸ ಮಾಡಲು ಮ್ಯೂಸಿಕಲ್ ನೈಟ್ಸ್‌ನಿಂದ 6 ತಿಂಗಳು ಬಿಡುವು ಮಾಡಿಕೊಳ್ಳುತ್ತಾರೆ ಎನ್ನಲಾಗ್ತಿದೆ.

ಇನ್ನು 'ಟಾಕ್ಸಿಕ್' ಚಿತ್ರಕ್ಕಾಗಿ ಅನಿರುದ್ಧ್ 15 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದಾರೆ ಎನ್ನುವ ವದಂತಿ ಹರಿದಾಡಿತ್ತು. ಕ್ರೇಜ್‌ಗೆ ತಕ್ಕಂತೆ ರಾಕ್‌ಸ್ಟರ್ ಡಿಮ್ಯಾಂಡ್ ಮಾಡುತ್ತಿದ್ದಾರೆ ಎಂದು ಕೆಲವರು ಕಾಮೆಂಟ್ ಮಾಡಿದ್ದರು. ಗೀತು ಮೋಹನ್ ದಾಸ್ ನಿರ್ದೇಶನದ ಈ ಗ್ಯಾಂಗ್‌ಸ್ಟರ್ ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ಬಹುಕೋಟಿ ವೆಚ್ಚದಲ್ಲಿ ಸಿನಿಮಾ ನಿರ್ಮಾಣವಾಗುತ್ತಿದೆ. ಪ್ಯಾನ್ ಇಂಡಿಯಾ ಅಲ್ಲ, ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ಸಿನಿಮಾ ಪ್ರೇಕ್ಷಕರ ಮುಂದೆ ಬರ್ತಿದೆ.
ಯಾವುದೇ ಚಿತ್ರಕ್ಕೆ ಕಥೆ, ಚಿತ್ರಕಥೆ, ಕಲಾವಿದರ ನಟನೆ, ಕ್ಯಾಮರಾ ವರ್ಕ್, ಮ್ಯೂಸಿಕ್ ಎಲ್ಲವೂ ಮುಖ್ಯವಾಗುತ್ತದೆ. ದೊಡ್ಡ ಸಿನಿಮಾಗಳನ್ನು ಮಾಡುವಾಗ ಯಾವುದಕ್ಕೂ ರಾಜಿ ಆಗುವ ಮಾತೇ ಬರುವುದಿಲ್ಲ. 'ಟಾಕ್ಸಿಕ್' ಚಿತ್ರಕ್ಕೆ ರವಿ ಬಸ್ರೂರು, ಚರಣ್ ರಾಜ್ ಮ್ಯೂಸಿಕ್ ಮಾಡಬಹುದು ಎನ್ನುವ ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ನಡೆದಿತ್ತು. ಆದರೆ ಚಿತ್ರತಂಡ ಅನಿರುದ್ಧ್ ರವಿಚಂದರ್ ಆಯ್ಕೆ ಮಾಡಿಕೊಂಡಿರುವಂತೆ ಕಾಣುತ್ತಿದೆ.
'ಟಾಕ್ಸಿಕ್' ಚಿತ್ರದಲ್ಲಿ ಯಶ್ ಜೊತೆ ನಯನತಾರ, ಹುಮಾ ಖುರೇಷಿ, ಕಿಯಾರಾ ಅದ್ವಾನಿ ಸೇರಿದಂತೆ ಘಟಾನುಘಟಿ ಕಲಾವಿದರು ನಟಿಸುತ್ತಿದ್ದಾರೆ. ಕೆವಿಎನ್ ಪ್ರೊಡಕ್ಷನ್ಸ್ ಜೊತೆ ಸೇರಿ ಸ್ವತಃ ಯಶ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಕನ್ನಡ ಹಾಗೂ ಇಂಗ್ಲೀಷ್‌ನಲ್ಲಿ ಏಕಕಾಲಕ್ಕೆ ಸಿನಿಮಾ ಚಿತ್ರೀಕರಣ ನಡೆದಿದೆ. ಯೂರೋಪ್ ಭಾಷೆಗಳಿಗೂ ಸಿನಿಮಾ ಡಬ್ ಮಾಡಿ ರಿಲೀಸ್ ಮಾಡುವ ಲೆಕ್ಕಾಚಾರ ನಡೀತಿದೆ. ಕೊನೆ ಹಂತದ ಚಿತ್ರೀಕರಣ ಶುರುವಾಗಿದೆ ಎನ್ನಲಾಗ್ತಿದೆ.


Click it and Unblock the Notifications











