twitter
    For Quick Alerts
    ALLOW NOTIFICATIONS  
    For Daily Alerts

    'ವಿಷ್ಣುವರ್ಧನ್ ಸ್ಮಾರಕ' ಗುಂಪಿನಲ್ಲಿ ಗೋಂವಿಂದ ಆಗುವುದು ಬೇಡ: ನಟ ಅನಿರುಧ್ದ್

    |

    ಈಗ ವಿಷ್ಣು ಸ್ಮಾರಕ ಮೈಸೂರಿನಲ್ಲಿ ಆಗುತ್ತಿರುವುದರ ಬಗ್ಗೆ ನಟ ಹಾಗೂ ವಿಷ್ಣುವರ್ಧನ್ ಅಳಿಯ ಅನಿರುದ್ಧ್ ಮಾತನಾಡಿದ್ದಾರೆ. ಸ್ಮಾರಕದ ವಿಚಾರವಾಗಿ ಅವರು ಮಾಡಿದ ಹೋರಾಟವನ್ನು ಇಂಚಿಂಚಾಗಿ ಬಿಚ್ಚಿಟ್ಟಿದ್ದಾರೆ

    ದಿವಂಗತ ನಟ ಡಾ.ವಿಷ್ಣುವರ್ಧನ್ ಇಹಲೋಕ ತ್ಯಜಿಸಿ 12 ವರ್ಷ ಆಗುತ್ತಿವೆ. ಆದರೆ ಇನ್ನೂ ಕೂಡ ಸ್ಮಾರಕ ಸಂಪೂರ್ಣವಾಗಿ ನಿರ್ಮಾಣ ಆಗಿಲ್ಲ. ಈ ಕೊರಗು ವಿಷ್ಣುವರ್ಧನ್ ಕುಟುಂಬಕ್ಕೆ ಇದ್ದೇ ಇದೆ. ಸಾಕಷ್ಟು ಹೋರಾಟದ ಬಳಿಕ ಈಗ ವಿಷ್ಣು ಸ್ಮಾರಕ ಮೈಸೂರಿನಲ್ಲಿ ನಿರ್ಮಾಣ ಆಗುತ್ತಿದೆ.

    ಇದೇ ಡಿಸೆಂಬರ್ 30ಕ್ಕೆ ವಿಷ್ಣುವರ್ಧನ್ 12ನೇ ಪುಣ್ಯ ಸ್ಮರಣೆ ಇದೆ. ಹಾಗಾಗಿ ಈ ವರ್ಷವೂ ಸ್ಮಾರಕದ ವಿಚಾರದಲ್ಲಿ ಒಂದಷ್ಟು ವಾದ-ವಿವಾದಗಳು ಕೇಳಿ ಬರುವ ಸಾಧ್ಯತೆ ಇದೆ. ಪ್ರತಿ ಬಾರಿ ವಿಷ್ಣು ಪುಣ್ಯಸ್ಮರಣೆ ಹಾಗೂ ಹುಟ್ಟುಹಬ್ಬದ ದಿನ ಅವರ ಸ್ಮಾರಕದ ವಿಚಾರ ಸದ್ದು ಮಾಡುತ್ತದೆ.

    ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕೊಟ್ಟ ಭರವಸೆ ಏನು?

    ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕೊಟ್ಟ ಭರವಸೆ ಏನು?

    ವಿಷ್ಣುವರ್ಧನ್ ಅವರ ಅಂತ್ಯಕ್ರಿಯೆಯ ನಂತರ ಆಗಿದ್ದು ಏನು ಎನ್ನುವುದನ್ನು ವಿವರಿಸಿದ್ದಾರೆ ಅನಿರುದ್ಧ್. " 2009 ಡಿಸೆಂಬರ್ 30 ಅಪ್ಪ ಅವರು ನಮ್ಮನ್ನು ಶಾರೀರಿಕವಾಗಿ ಬಿಟ್ಟು ಹೋದರು. ಮೈಸೂರಿನಲ್ಲಿ ಘಟನೆ ನಡೆಯಿತು. ನಂತರ ಅಪ್ಪ ಅವರನ್ನು ಬೆಂಗಳೂರಿನ ಮನೆಗೆ ಕರೆದುಕೊಂಡು ಬರಲಾಯಿತು.

    "ಆಗ ಕುಮಾರಸ್ವಾಮಿ ಅವರು ನನಗೆ ಕರೆ ಮಾಡಿ ಮಾತನಾಡಿದರು. ಎಲ್ಲಿ ಅಂತ್ಯಸಂಸ್ಕಾರ ಮಾಡುತ್ತೀರಿ ಎಂದು ಕೇಳಿದರು. ಬೆಂಗಳೂರಿನ ಬನಶಂಕರಿ ರುದ್ರಭೂಮಿಯಲ್ಲಿ ಅಪ್ಪ ಅವರ ಕುಟುಂಬದ ಎಲ್ಲಾ ಸದಸ್ಯರ ಅಂತ್ಯಸಂಸ್ಕಾರ ನಡೆದಿದೆ. ಹಾಗಾಗಿ ಅಲ್ಲೇ ಸಂಸ್ಕಾರ ಮಾಡಲು ತೀರ್ಮಾನಿಸಿದ್ದೇವೆ ಎಂದು ಹೇಳಿದೆ. ಆಗ ಕುಮಾರಸ್ವಾಮಿ ಅವರು ಹೇಳಿದರು, ವಿಷ್ಣುವರ್ಧನ್ ದೊಡ್ಡ ವ್ಯಕ್ತಿ ಅವರ ಅಂತ್ಯಸಂಸ್ಕಾರ ದೊಡ್ಡ ಮಟ್ಟದಲ್ಲಿಯೇ ನಡೆಯಬೇಕು. ರಾಜ್ಯ ಸರ್ಕಾರದ ಗೌರವದಿಂದಲೇ ಅಂತ್ಯಸಂಸ್ಕಾರ ನಡೆಯಬೇಕು ಎಂದು ಹೇಳಿ ಅಭಿಮಾನ್‌ ಸ್ಟುಡಿಯೋವನ್ನು ಅವರು ಸೂಚಿಸಿದರು. ಆಗ ಅವರು ಹೇಳಿದ ರೀತಿಗೆ ಅವರ ಪ್ರೀತಿಗೆ ನಾವು ಅವರಿಗೆ ತಲೆಬಾಗಿ ಕೃತಜ್ಞತೆಗಳನ್ನು ಹೇಳುತ್ತೇವೆ".

    ಕೇಸ್‌ ಇರುವ ಜಾಗವನ್ನು ವಿಷ್ಣು ಸಮಾಧಿಗೆ ನೀಡಲಾಗಿತ್ತು!

    ಕೇಸ್‌ ಇರುವ ಜಾಗವನ್ನು ವಿಷ್ಣು ಸಮಾಧಿಗೆ ನೀಡಲಾಗಿತ್ತು!

    "ಅಭಿಮಾನ್ ಸ್ಟುಡಿಯೋದಲ್ಲಿ ಅಂದು ಸಂಸ್ಕಾರ ನಡೆಯಿತು. ಅದು ಅಗ್ನಿ ಸಂಸ್ಕಾರ ಆಗಿತ್ತು. ಅಪ್ಪ ಅವರನ್ನು ಅಲ್ಲಿ ಮಣ್ಣು ಮಾಡಿಲ್ಲ. ಮಾಡಿರುವುದು ಅಗ್ನಿ ಸಂಸ್ಕಾರ. ಅಂದು ಅಂತ್ಯಸಂಸ್ಕಾರ ಸುಸೂತ್ರವಾಗಿ ನಡೆಯಿತು. ಯಾವುದೇ ಅಡಚಣೆ ಆಗಲಿಲ್ಲ. ಅಂಬರೀಶ್ ಅಂಕಲ್ ಮುಂದಾಳತ್ವ ವಹಿಸಿದ್ದರು. ಆದರೆ ಮರುದಿನ ನಮಗೆ ಗೊತ್ತಾಯಿತು, ಆ ಜಾಗದ ಮೇಲೆ ಕೇಸ್‌ ಇದೆ. 2004ರಿಂದ ಈ ಜಾಗದ ಮೇಲೆ ಕೇಸ್ ನಡೆಯುತ್ತಿದೆ ಎನ್ನುವ ವಿಚಾರ".

    "ಬಾಲಣ್ಣ ಅವರು ಸ್ಟೂಡಿಯೋ ನಿರ್ಮಾಣ ಮಾಡಲು 20 ಎಕರೆ ಈ ಜಾಗವನ್ನು ಖರೀದಿ ಮಾಡಿದರು. ಅವರ ಮಕ್ಕಳು ಆ ಜಾಗದಲ್ಲಿ 10 ಎಕರೆ ಜಾಗ ಮಾರಿಕೊಂಡು ಅದೇ ದುಡ್ಡಿನಲ್ಲಿ ಉಳಿದ ಹತ್ತು ಎಕರೆಯಲ್ಲಿ ಸ್ಟುಡಿಯೋವನ್ನು ಅಭಿವೃದ್ಧಿ ಮಾಡುತ್ತೇವೆ ಎಂದು ಸರ್ಕಾರಕ್ಕೆ ಕೇಳಿಕೊಂಡಿದ್ದಾರೆ. ಸರ್ಕಾರ ಅದಕ್ಕೆ ನಿಯಮಗಳನ್ನು ಹಾಕಿದ್ದು, ಅಭಿವೃದ್ಧಿ ಆಗಿಲ್ಲ ಎಂದರೆ ಅದನ್ನು ವಶಪಡಿಸಿ ಕೊಳ್ಳುವುದಾಗಿ ಷರತ್ತು ಹಾಕಿತ್ತು. ಆದರೆ ಅಭಿಮಾನ್ ಸ್ಟುಡಿಯೋ ಇಲ್ಲಿ ತನಕ ಅಭಿವೃದ್ಧಿಗೊಂಡಿಲ್ಲ. ಮೊದಲು ಹೇಗಿತ್ತೊ ಈಗಲೂ ಹಾಗೆಯೇ ಇದೆ. ಆದರೆ ಸರ್ಕಾರ ಹಲವು ಕಾರಣಗಳಿಗೆ ಆ ಕೆಲಸ ಮಾಡಿಲ್ಲ".

    ಎರಡು ಎಕರೆ ಜಾಗಕ್ಕಾಗಿ ವರ್ಷಗಳ ಹೋರಾಟ!

    ಎರಡು ಎಕರೆ ಜಾಗಕ್ಕಾಗಿ ವರ್ಷಗಳ ಹೋರಾಟ!

    "ಈ ಜಾಗ ವಿವಾದಾತ್ಮಕ ಜಾಗ. ಹಾಗಾಗಿ ಕೋರ್ಟಿಗೆ ಹೋಗಿ ಎರಡು ಎಕರೆ ಜಾಗವನ್ನು ಬೇರ್ಪಡಿಸಿ ಎಂದು ಕೇಳಿಕೊಂಡೆವು. ಆದರೆ ಅದು ಸಾಧ್ಯವಾಗಿಲ್ಲ. ಎರಡು ಎಕರೆಯಲ್ಲಿ ನಾವು ಸ್ಮಾರಕವನ್ನು ಕಟ್ಟಲು ಸರ್ಕಾರ 2 ಕೋಟಿ ಮಂಜೂರು ಮಾಡಿತ್ತು. ಆದರೆ ಎರಡು ಎಕರೆ ಜಾಗವನ್ನು ಮಾತ್ರ ಬೇರ್ಪಡಿಸಲು ಸಾಧ್ಯವಿಲ್ಲ. ಕೇಸ್‌ ಇತ್ಯರ್ಥ ಆಗಲು ಸಂಪೂರ್ಣ ಜಾಗದ ಮೇಲೆಯೇ ಆಗಬೇಕು ಎಂದು ಕೋರ್ಟ್ ಹೇಳಿತು. ಆದರೆ ಕೇಸ್‌ ಹಿಂಪಡೆಯಲು ಬಾಲಣ್ಣ ಅವರ ಪುತ್ರಿ ಗೀತಾ ಬಾಲಿ ಒಪ್ಪಿಕೊಳ್ಳಲಿಲ್ಲ".

    ವಿಷ್ಣು ಸ್ಮಾರಕ ನಿರ್ಮಾಣದ ವಿರುದ್ಧ ನಡೆಯಿತೇ ಹುನ್ನಾರ?

    ವಿಷ್ಣು ಸ್ಮಾರಕ ನಿರ್ಮಾಣದ ವಿರುದ್ಧ ನಡೆಯಿತೇ ಹುನ್ನಾರ?

    ಈ ವಿಚಾರವಾಗಿ ಮಾತು ಮುಂದುವರೆಸಿದ ಅನಿರುದ್ಧ್, ಸ್ಮಾರಕ ವಿಚಾರವಾಗಿ ನಡೆದಿರವ ಹುನ್ನಾರಗಳ ಬಗ್ಗೆಯೂ ಮಾತನಾಡಿದ್ದಾರೆ. "ಇಷ್ಟೆಲ್ಲಾ ಆದ ಮೇಲೆ ಒಬ್ಬ ಪ್ರಿನ್ಸಿಪಲ್ ಸೆಕ್ರೆಟರಿ ಈ ಜಾಗವನ್ನು ಸರ್ಕಾರ ವಶಕ್ಕೆ ಪಡಿಸಿಕೊಳ್ಳಲು ಮುಂದಾಗಿದ್ದರು. ಜೊತೆಗೆ ಸ್ಮಾರಕ ನಿರ್ಮಾಣ ಮಾಡಲು ಎರಡು ಎಕರೆ ಬೇರೆ ಕಡೆ ಜಾಗವನ್ನು ಕೊಡುತ್ತೇವೆ ಎಂದಿದ್ದರು. ಆದರೆ ರಾತ್ರೋ ರಾತ್ರಿ ಅವರ ವರ್ಗಾವಣೆ ಆಯಿತು. ನಂತರ ಗೀತಾಬಾಲಿ ಅವರು ಮನಸ್ಸು ಬದಲಿಸಿ ಕೇಸ್ ಹಿಂಪಡೆಯುತ್ತಿದ್ದಾರೆ ಎನ್ನುವಾಗ ಕೆಲವರು ಅವರ ತಲೆ ಕೆಡಿಸಿದ್ದಾರೆ. ಇಂತಹ ಕುತಂತ್ರ ಮಾಡುವ ಕೆಲಸವನ್ನು ಕೆಲವರು ಈಗಲೂ ಬಿಟ್ಟಿಲ್ಲ".

    "ಅಭಿಮಾನ್ ಸ್ಟುಡಿಯೋದಲ್ಲಿ ಎಷ್ಟೇ ಪ್ರಯತ್ನಪಟ್ಟರೂ ಅಲ್ಲಿ ಸ್ಮಾರಕ ನಿರ್ಮಾಣ ಮಾಡಲು ಸಾಧ್ಯ ಆಗಲಿಲ್ಲ. ಸರ್ಕಾರವೇ ಇಲ್ಲಿ ಸ್ಮಾರಕ ನಿರ್ಮಾಣ ಮಾಡಲು ಸಾಧ್ಯವಿಲ್ಲ ಎಂದು ಹೇಳಿ ಕೈಚೆಲ್ಲಿತು. ಹಾಗಾಗಿ ಅಭಿಮಾನ್ ಸ್ಟುಡಿಯೋದ ಪಕ್ಕದಲ್ಲಿ ಒಂದು ಜಾಗವನ್ನು ಸರ್ಕಾರವೇ ನಮಗೆ ಸೂಚಿಸಿತು. ಅದಕ್ಕೂ ಅಡಚಣೆ, ನಂತರ ಅಭಿಮಾನ್ ಸ್ಟುಡಿಯೋ ಎದುರಲ್ಲಿ ಸರ್ಕಾರ ಒಂದು ಜಾಗ ನಿಗದಿ ಮಾಡಿತ್ತು. ಅಲ್ಲಿ ಎಲ್ಲಾ ರೀತಿಯ ಕೆಲಸ ಮುಗಿದು ಶಂಕುಸ್ಥಾಪನೆ ಮಾಡುವ ದಿನವೇ ಪರಿಸರವಾದಿಗಳು ಸ್ಟೇ ಆರ್ಡರ್ ತಂದರು".

    ವಿಷ್ಣುವರ್ಧನ್‌ ಟ್ರಸ್ಟ್‌ನ 11 ಕೋಟಿ ಯಾರ ಪಾಲು?

    ವಿಷ್ಣುವರ್ಧನ್‌ ಟ್ರಸ್ಟ್‌ನ 11 ಕೋಟಿ ಯಾರ ಪಾಲು?

    "ಬೆಂಗಳೂರಿನಲ್ಲಿ ಸ್ಮಾರಕ ನಿರ್ಮಾಣ ಸಾಧ್ಯ ಆಗದೇ ಹೋದಾಗ, ನಾವು ಮೈಸೂರಿನಲ್ಲಿ ಜಾಗ ಹುಡುಕಿದೆವು. ಅಲ್ಲಿ ಮೊದಲು ನೋಡಿದ ಎರಡು ಜಾಗಕ್ಕೆ ಅಡಚಣೆ ಉಂಟಾಗಿ ಅವುಗಳನ್ನು ಕೈ ಬಿಡಬೇಕಾಯಿತು. ನಂತರ ಮೂರನೇ ಜಾಗ ನೋಡಿ ಅಲ್ಲಿ ಏನು ತೊಂದರೆ ಇಲ್ಲ ಎಂದಾದಾಗ ನಾವು ಮುಂದುವರಿದೆವು. ಆದರೆ ಅಲ್ಲಿ ಕೆಲವು ರೈತರು ಬಂದು ಇದು ಗೋಮಾಳದ ಜಾಗ ಅಂತ ಕೇಸ್ ಹಾಕಿದರು. ಆದರೆ, ಇದು ಗೋಮಾಳದ ಜಾಗ ಅಲ್ಲ ಎಂದು ಸರ್ಕಾರವೇ ದಾಖಲೆಯನ್ನು ತೋರಿಸಿತು. ಆದರೆ ಕೇಸ್ ಹಾಕಿದ ಕಾರಣ ಮತ್ತೆ ಕೋರ್ಟ್ ಮೆಟ್ಟಿಲು ಹತ್ತ ಬೇಕಾಯಿತು. ಅಲ್ಲಿ ಈ ಜಾಗ ನಮಗೆ ಸಿಕ್ಕಿತು".

    "ಈ ಸ್ಮಾರಕ ವಿಚಾರ ನಿರ್ಮಾಣಕ್ಕಾಗಿ ಸರ್ಕಾರ ಡಾ.ವಿಷ್ಣುವರ್ಧನ್ ಟ್ರಸ್ಟ್ ರಚಿಸಿದೆ. ಈ ಟ್ರಸ್ಟ್‌ಗೆ ಮುಖ್ಯಮಂತ್ರಿಗಳೇ ಅಧ್ಯಕ್ಷರಿದ್ದಾರೆ. ಕುಟುಂಬಸ್ಥರಿಗೆ ಯಾವುದೇ ಹಕ್ಕು ಇಲ್ಲ, ಕೇವಲ ಟ್ರಸ್ಟಿಗಳಾಗಿ ನಾವು ಇದ್ದೇವೆ. ಈ ಟ್ರಸ್ಟ್ ಗೆ 11 ಕೋಟಿ ಹಣವನ್ನು ಸರ್ಕಾರ ಮಂಜೂರು ಮಾಡಿದೆ. ಇದರಲ್ಲಿ ಒಂದು ರೂಪಾಯಿ ಕೂಡ ನಮಗೆ ಸಿಗುವುದಿಲ್ಲ. ಈ ದುಡ್ಡು ನಾವು ತೆಗೆದುಕೊಳ್ಳುತ್ತೇವೆ ಎನ್ನುವ ತಪ್ಪು ಕಲ್ಪನೆ ಕೆಲವರಲ್ಲಿ ಇದೆ. ಆದು ನಮಗೆ ಸೇರುವುದಿಲ್ಲ, ನಮಗೆ ಅದು ಬೇಡವೂ ಬೇಡ".

    ಕಂಠೀರವ ಸ್ಟೂಡಿಯೋ ರುದ್ರಭೂಮಿ ಆಗುವುದು ಬೇಡ!

    ಕಂಠೀರವ ಸ್ಟೂಡಿಯೋ ರುದ್ರಭೂಮಿ ಆಗುವುದು ಬೇಡ!

    ಇನ್ನು ಕುಮಾರಸ್ವಾಮಿ ಅವರು ಮತ್ತೊಮ್ಮೆ ಸಿ.ಎಂ ಆದಾಗ ಕಂಠೀರವದಲ್ಲಿ ಸ್ಮಾರಕ ನಿರ್ಮಾಣ ಮಾಡಲು ಹೇಳಿದರು, ವಿಷ್ಣು ಕುಟುಂಬ ಏಕೆ ಒಪ್ಪಲಿಲ್ಲ ಎನ್ನುವುದನ್ನು ಅನಿರುದ್ಧ್ ಹೇಳಿಕೊಂಡಿದ್ದಾರೆ. "ಅಂಬರೀಶ್ ಅವರು ವಿಧಿವಶ ಆದಾಗ, ಕುಮಾರಸ್ವಾಮಿ ಅವರು ಮತ್ತೆ ಕಂಠೀರವ ಸ್ಟುಡಿಯೋದಲ್ಲಿ ಸ್ಮಾರಕ ನಿರ್ಮಾಣ ಮಾಡಲು ಹೇಳುತ್ತಾರೆ. ಆದರ ಅದಕ್ಕೆ ನಾವು ಒಪ್ಪಲಿಲ್ಲ. ಮೈಸೂರಿನಲ್ಲಿ ಎಲ್ಲವೂ ಸರಿಯಾಗಿದೆ. ಈಗ ಮತ್ತೆ ಇಲ್ಲಿ ಬಂದರೆ ಏನು ತೊಂದರೆ ಆಗುತ್ತದೋ ಗೊತ್ತಿಲ್ಲ. ಜೊತೆಗೆ ಅಪ್ಪ ಅವರಿಗೆ ಪ್ರತ್ಯೇಕತೆ ಬೇಕು. ಕಂಠೀರವ ಸ್ಟುಡಿಯೋದಲ್ಲಿ ಗುಂಪಿನಲ್ಲಿ ಗೋವಿಂದ ಆಗುವುದು ಬೇಡ. ಜೊತೆಗೆ ಕಂಠೀರವ ಸ್ಟುಡಿಯೋ ಕರ್ಮ ಭೂಮಿ. ಅದು ರುದ್ರಭೂಮಿ ಆಗುವುದು ಬೇಡ ಎಂದು ಮೈಸೂರಿನಲ್ಲಿಯೇ ಸ್ಮಾರಕ ನಿರ್ಮಾಣ ಮಾಡುತ್ತಿದ್ದೇವೆ" ಎಂದು ಅನಿರುದ್ಧ ವಿವರಿಸಿದರು.


    ಸ್ಮಾರಕದ ವಿಚಾರವಾಗಿ ಹರಿದಾಡುತ್ತಿದ್ದ ಹಲವು ಊಹಾಪೋಹಗಳಿಗೆ ನಟ ಅನಿರುಧ್ಧ್ ಸದ್ಯ ಪೂರ್ಣ ವಿರಾಮ ಇಟ್ಟಿದ್ದಾರೆ. ಇನ್ನು ಮುಂದಿನ ವರ್ಷ ಸೆಪ್ಟೆಂಬರ್ ವೇಳೆಗೆ ಮೈಸೂರಿನಲ್ಲಿ ವಿಷ್ಣು ಸ್ಮಾರಕ ಸಂಪೂರ್ಣ ಆಗಲಿದೆ ಎನ್ನುವುದನ್ನೂ ಕೂಡ ಅನಿರುದ್ಧ್ ಸ್ಪಷ್ಟ ಪಡಿಸಿದ್ದಾರೆ.

    English summary
    Actor Anirudh Spoke About The Vishnuvardhan Monument And Express The Struggles Of Making It.
    Monday, November 22, 2021, 11:30
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X