'ಕಬ್ಜ' ಕೋಟೆಯಲ್ಲಿ 'ಲಕ್ಮಣ'ನ ಆರ್ಭಟ: ಖಡಕ್ ರೋಲ್‌ನಲ್ಲಿ ಅನೂಪ್ ರೇವಣ್ಣ ರೀಎಂಟ್ರಿ
ಆರ್. ಚಂದ್ರು ನಿರ್ದೇಶನದ 'ಕಬ್ಜ' ಸಿನಿಮಾ ಬಿಡುಗಡೆಗೆ ಇನ್ನೊಂದು ದಿನ ಬಾಕಿಯಿದೆ. ಎಲ್ಲೆಲ್ಲೂ 'ಕಬ್ಜ' ಮೇನಿಯಾ ಜೋರಾಗಿದೆ. ಉಪೇಂದ್ರ ನಟನೆಯ ಈ ಗ್ಯಾಂಗ್‌ಸ್ಟರ್ ಡ್ರಾಮಾದಲ್ಲಿ ಘಟಾನುಘಟಿ ಕಲಾವಿದರು ನಟಿಸಿದ್ದಾರೆ. 'ಲಕ್ಷ್ಮಣ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಮಾಜಿ ಸಚಿವ ಎಚ್.ಎಂ. ರೇವಣ್ಣ ಅವರ ಮಗ ಅನೂಪ್ ರೇವಣ್ಣ ಕೂಡ ವಿಶೇಷ ಪಾತ್ರದಲ್ಲಿ ಬಣ್ಣ ಹಚ್ಚಿದ್ದಾರೆ.
'ಲಕ್ಷ್ಮಣ' ನಂತರ 2017ರಲ್ಲಿ ಬಿಡುಗಡೆಯಾದ 'ಪಂಟ' ಚಿತ್ರದಲ್ಲೂ ಅನೂಪ್ ನಾಯಕನಾಗಿ ನಟಿಸಿದ್ದರು. ಈಗ ಸುಮಾರು 7 ವರ್ಷಗಳ ಗ್ಯಾಪ್ ಬಳಿಕ ಪುನಃ ಆರ್. ಚಂದ್ರು ನಿರ್ದೇಶನದ 'ಕಬ್ಜ' ಚಿತ್ರದ ಮೂಲಕ ಅನೂಪ್ ವಾಪಸ್ ಬಂದಿದ್ದಾರೆ. ಆಕ್ಷನ್ ಎಂಟರ್‌ಟೈನರ್ 'ಕಬ್ಜ' ಚಿತ್ರದಲ್ಲಿ ಅನೂಪ್ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದ ನಾಯಕ ಅರಕೇಶ್ವರ ಉಪೇಂದ್ರ ಅವರ ಸ್ನೇಹಿತನ ಪಾತ್ರದಲ್ಲಿ ಅನೂಪ್ ನಟಿಸಿದ್ದು, ಇಡೀ ಚಿತ್ರದಲ್ಲಿ ಅವರ ಪಾತ್ರ ಸಾಗುತ್ತದಂತೆ.

'ಕಬ್ಜ' ಚಿತ್ರದಲ್ಲಿನ ತಮ್ಮ ಪಾತ್ರ ಹಾಗೂ ಚಿತ್ರದಲ್ಲಿ ನಟಿಸಿದ ಅನುಭವದ ಬಗ್ಗೆ ಮಾತನಾಡುವ ಅನೂಪ್, "ಉಪ್ಪಿ ಸರ್ ಬಲಗೈಬಂಟನಾಗಿ ನಟಿಸಿದ್ದೇನೆ. ಅವರ ಜತೆಗೆ ನಾನು ಸಹ ಭೂಗತಲೋಕದಲ್ಲಿ ಬೆಳೆಯುತ್ತೇನೆ. ಉಪ್ಪಿ ಸರ್ ನಿರ್ದೇಶಕರಾಗಿ, ನಟರಾಗಿ ಭಾರತೀಯ ಚಿತ್ರರಂಗದಲ್ಲೇ ದೊಡ್ಡ ಹೆಸರು. ಅವರ ಜೊತೆಗೆ 4 ವರ್ಷ ಕಾಲ ಕಳೆಯುವ ಅವಕಾಶ ಸಿಕ್ಕಿತು. ಅವರಿಂದ ತುಂಬಾ ಕಲಿತಿದ್ದೇನೆ. ಹಲವು ವಿಷಯಗಳ ಕುರಿತು ಚರ್ಚೆ ಮಾಡಿದ್ದೇನೆ. ಈ 4 ವರ್ಷ ಹೋಗಿದ್ದೇ ಗೊತ್ತಾಗಲಿಲ್ಲ. ಏಕೆಂದರೆ, ಚಿತ್ರದ ಕೆಲಸ ಅಷ್ಟಿತ್ತು."
"ಬರೀ ನಟನಾಗಿಯಷ್ಟೇ ಅಲ್ಲ, ಒಬ್ಬ ಸಿನಿಮಾ ವಿದ್ಯಾರ್ಥಿಯಾಗಿ ಈ ಚಿತ್ರದಿಂದ ತುಂಬಾ ಕಲಿತಿದ್ದೇನೆ. ಇಡೀ ತಂಡ ಬಹಳ ಕಷ್ಟಪಟ್ಟು ಕೆಲಸ ಮಾಡಿದೆ. ಚಿತ್ರ ಅದ್ಭುತವಾಗಿ ಮೂಡಿಬಂದಿದೆ. ಎಲ್ಲರ ಪರಿಶ್ರಮಕ್ಕೆ ಸೂಕ್ತ ಪ್ರತಿಫಲ ಸಿಗುತ್ತದೆ ಎಂಬ ನಂಬಿಕೆ ಇದೆ" ಎಂದು ಅನೂಪ್ ರೇವಣ್ಣ ಹೇಳಿದ್ದಾರೆ. 'ಕಬ್ಜ' ಮಾತ್ರವಲ್ಲದೇ 'ಹೈಡ್ ಅಂಡ್ ಸೀಕ್' ಎನ್ನುವ ಇನ್ನೊಂದು ಚಿತ್ರದಲ್ಲೂ ಅನೂಪ್ ನಟಿಸಿದ್ದು, ಆ ಸಿನಿಮಾ ಏಪ್ರಿಲ್‌ನಲ್ಲಿ ಬಿಡುಗಡೆಯಾಗಲಿದೆ. ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಚಿತ್ರವಾಗಿದ್ದು, ನೆಗೆಟಿವ್ ಶೇಡ್ ಇರುವ ಪಾತ್ರದಲ್ಲಿ ಅನೂಪ್ ಕಾಣಿಸಿಕೊಂಡಿದ್ದಾರಂತೆ.

"ಒಬ್ಬ ನಟನಾಗಿ ಎಲ್ಲ ರೀತಿಯ ಪಾತ್ರಗಳನ್ನು ಮಾಡುತ್ತಿರಬೇಕು, ಪ್ರಯೋಗಗಳನ್ನು ಮಾಡುತ್ತಿರಬೇಕು ಎಂದು ನಂಬಿದವನು ನಾನು. ಅದಕ್ಕೆ ಸರಿಯಾಗಿ 'ಹೈಡ್ ಅಂಡ್ ಸೀಕ್' ಚಿತ್ರದಲ್ಲೊಂದು ವಿಭಿನ್ನ ಪಾತ್ರ ಸಿಕ್ಕಿದೆ. ಇದರಲ್ಲಿ ಕಿಡ್ನಾಪರ್ ಆಗಿ ಕಾಣಿಸಿಕೊಂಡಿದ್ದೇನೆ. ಮುಂದಿನ ದಿನಗಳಲ್ಲಿ ಇನ್ನೂ ಬೇರೆ ಬೇರೆ ತರಹದ ಪ್ರಯೋಗಗಳನ್ನು ಮಾಡುವ ಆಸೆ ಇದೆ" ಎಂದಿದ್ದಾರೆ. ಈ 2 ಚಿತ್ರಗಳು ಮಾತ್ರವಲ್ಲದೇ ಒಂದಿಷ್ಟು ಕಥೆಗಳನ್ನು ಕೇಳಿದ್ದಾರಂತೆ. ಆದರೆ, ತಂದೆ ಚುನಾವಣೆಗೆ ಸ್ಪರ್ಧಿಸುತ್ತಿರುವುದರಿಂದ ಮತ್ತು ಅವರ ಪರ ಪ್ರಚಾರ ಮಾಡಬೇಕಿರುವುದರಿಂದ ಕೊಂಚ ಗ್ಯಾಪ್ ತೆಗೆದುಕೊಳ್ಳಲಿದ್ದಾರಂತೆ.
'ಕಬ್ಜ' ಚಿತ್ರವನ್ನು 7 ಭಾಷೆಗಳಲ್ಲಿ 4000ಕ್ಕೂ ಅಧಿಕ ಸ್ಕ್ರೀನ್‌ಗಳಲ್ಲಿ ವಿಶ್ವದಾದ್ಯಂತ ತೆರೆಗೆ ತರುವ ಪ್ರಯತ್ನ ನಡೀತಿದೆ. ಉಪೇಂದ್ರ ಜೊತೆಗೆ ಚಿತ್ರದಲ್ಲಿ ಕಿಚ್ಚ ಸುದೀಪ್ ಹಾಗೂ ಶಿವರಾಜ್‌ಕುಮಾರ್ ವಿಶೇಷ ಪಾತ್ರಗಳಲ್ಲಿ ನಟಿಸುತ್ತಿದ್ಧಾರೆ. ಈಗಾಗಲೇ ಚಿತ್ರದ ಟ್ರೈಲರ್ ಹಾಗೂ ಸಾಂಗ್ಸ್ ಹಿಟ್ ಆಗಿ ಸಿನಿಮಾ ಮೇಲೆ ನಿರೀಕ್ಷೆ ಹೆಚ್ಚಿಸಿದೆ. ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬದ ವಿಶೇಷವಾಗಿ ಮಾರ್ಚ್ 17ಕ್ಕೆ ಸಿನಿಮಾ ತೆರೆಗೆ ಬರ್ತಿದೆ.


Click it and Unblock the Notifications











