'ಟಗರು' ನಟನ ವಿರುದ್ಧ ಮತ್ತೊಂದು ವಂಚನೆ ಪ್ರಕರಣ ದಾಖಲು
ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅಭಿನಯಿಸಿದ್ದ 'ಟಗರು' ಚಿತ್ರದಲ್ಲಿ ಸಣ್ಣದೊಂದು ಪಾತ್ರ ನಿರ್ವಹಿಸಿದ್ದ ವೈಕೆ.ದೇವನಾಥ (ಬೇಬಿ ಕೃಷ್ಣ) ಉದ್ಯಮಿಯೊಬ್ಬರಿಗೆ ವಂಚಿಸಿರುವ ಆರೋಪದಲ್ಲಿ ಬಂಧನವಾಗಿದ್ದರು.
ಇದೀಗ, ಅದೇ ವೈಕೆ.ದೇವನಾಥ ವಿರುದ್ಧ ಮತ್ತೊಂದು ವಂಚನೆ ಪ್ರಕರಣ ದಾಖಲಾಗಿದೆ. ರಾಮನಗರದ ಜಮೀನು ಮಾರುವುದಾಗಿ ಹೇಳಿ 30 ಲಕ್ಷ ಪಡೆದು ವಂಚಿಸಿರುವುದಾಗಿ ಪ್ರಶಾಂತ್ ಸಾಂಬರ್ಗಿ ಎಂಬವರು ಇಂದಿರಾನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಇದಕ್ಕೂ ಮುಂಚೆ ಉತ್ತರಹಳ್ಳಿ ಬಳಿ 30*50 ಸೈಟ್ ವಿಚಾರದಲ್ಲೂ ವೈಕೆ.ದೇವನಾಥ ಮತ್ತು ಉದ್ಯಮಿ ನಡುವೆ 52 ಲಕ್ಷ ರೂಪಾಯಿ ವ್ಯವಹಾರವಾಗಿದೆ. ಅಲ್ಲಿಯೂ ಆರೋಪಿ ವಂಚಿಸಿದ್ದಾರೆ ಎನ್ನಲಾಗಿದೆ.
ಇದರಿಂದ ಬೇಸೆತ್ತ ಉದ್ಯಮಿ ಸುಬ್ರಮಣ್ಯಪುರ ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದರು. ಮೂರು ತಿಂಗಳ ಹಿಂದೆ ಕೊಟ್ಟಿದ್ದ ದೂರಿನ ಅನ್ವಯ ಜೂನ್ 19 ರಂದು ವೈಕೆ.ದೇವನಾಥನನ್ನ ಪೊಲೀಸರು ಬಂಧಿಸಿದ್ದರು. ಅದರ ಬೆನ್ನಲ್ಲೆ ಇನ್ನೊಂದು ಪ್ರಕರಣ ಬೆಳಕಿಗೆ ಬಂದಿದೆ.
ಅಂದ್ಹಾಗೆ, ವೈಕೆ.ದೇವನಾಥನ ಮೇಲೆ ಇದೊಂದೇ ಕೇಸ್ ಅಲ್ಲ, ಇಂತಹ ಹಲವು ಕೇಸ್ ಗಳಿವೆ. ತಾನು 'ಟಗರು' ಚಿತ್ರದ ನಿರ್ಮಾಪಕ ಅಂತ ಹೇಳಿಕೊಂಡು ಎಷ್ಟೋ ಜನಕ್ಕೆ ವೈಕೆ.ದೇವನಾಥ ಮಂಕು ಬೂದಿ ಎರಚಿದ್ದಾನೆ. ಸಾಲದಕ್ಕೆ, ರಾಜಮೌಳಿ ನಿರ್ದೇಶನದ 'ಮಹಾಭಾರತ' ಚಿತ್ರದಲ್ಲಿ 'ಶಕುನಿ' ಪಾತ್ರ ಮಾಡುತ್ತಿರುವೆ ಅಂತ ಹೇಳಿಕೊಂಡು ಅನೇಕರಿಗೆ ಉಂಡೆನಾಮ ತಿಕ್ಕಿದ್ದಾನೆ.


Click it and Unblock the Notifications











