'ಕಾಂತಾರ'-1 ಚಿತ್ರದ ಮತ್ತೊಬ್ಬ ಕಲಾವಿದ ಸಾವು; ಹೋಂ ಸ್ಟೇನಲ್ಲಿ ದುರಂತ
ಹೊಂಬಾಳೆ ಫಿಲ್ಮ್ಸ್ ಬ್ಯಾನರ್‌ನಲ್ಲಿ ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸುತ್ತಿರುವ ಸಿನಿಮಾ 'ಕಾಂತಾರ' ಚಾಪ್ಟರ್- 1. ಗಾಂಧಿಜಯಂತಿ ಸಂಭ್ರಮದಲ್ಲಿ ಸಿನಿಮಾ ತೆರೆಗೆ ಬರ್ತಿದೆ. ಸಿನಿಮಾ ಚಿತ್ರೀಕರಣದ ನಡುವೆ ಪದೇ ಪದೆ ಅಪಶ್ರುತಿ ಕೇಳಿಬರ್ತಿದೆ. ಇದೀಗ ಚಿತ್ರದಲ್ಲಿ ನಟಿಸುತ್ತಿದ್ದ ಮತ್ತೊಬ್ಬ ಸಹ ಕಲಾವಿದ ಕೊನೆಯುಸಿರೆಳೆದಿದ್ದಾರೆ.
'ಕಾಂತಾರ- 1' ಸಿನಿಮಾ ಶುರುವಾದ ದಿನದಿಂದ ಒಂದಿಲ್ಲೊಂದು ಸಂಕಷ್ಟ ಎದುರಾಗುತ್ತಿದೆ. ಮೊದಲಿಗೆ ಚಿತ್ರದ ಸಹಕಲಾವಿದರು ಪ್ರಯಾಣಿಸುತ್ತಿದ್ದ ಮಿನಿ ಬಸ್ ಅಪಘಾತಕ್ಕೀಡಾಗಿತ್ತು. ಬಳಿಕ ಕೇರಳ ಮೂಲದ ಸಹನಟ ಕಪಿಲ್ ಎಂಬಾತ ಈಜಲು ಹೋಗಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದರು. ಬಳಿಕ ಹಾಸ್ಯ ನಟ ರಾಕೇಶ್ ಪೂಜಾರಿ ದಿಢೀರ್ ನಿಧನರಾಗಿದ್ದರು. ಇದೀಗ ವಿಜು ವಿಕೆ ಎಂಬ ಮತ್ತೊಬ್ಬ ಸಹ ಕಲಾವಿದ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

ಆಗುಂಬೆ ಸಮೀಪದ ಹೋಂಸ್ಟೇ ಒಂದರಲ್ಲಿ ಮೃತ ದುರ್ದೈವಿ ಉಳಿದುಕೊಂಡಿದ್ದರು. ರಾತ್ರಿ 11 ಗಂಟೆ ಸುಮಾರಿಗೆ ವಿಜು ವಿಕೆಗೆ ಎದೆನೋವು ಕಾಣಿಸಿಕೊಂಡಿತ್ತು. ಬಳಿಕ ಅವರನ್ನು ತೀರ್ಥಹಳ್ಳಿಯ ಆಸ್ಪತ್ರೆಗೆ ಕೊಂಡೊಯ್ಯುವ ಮಾರ್ಗದಲ್ಲೇ ಕೊನೆಯುಸಿರೆಳೆದಿದ್ದಾರೆ. ತೀರ್ಥಹಳ್ಳಿಯ ಜೆ.ಸಿ ಆಸ್ಪತ್ರೆಯಲ್ಲಿ ವಿಜು ವಿಕೆ ಮೃತ ದೇಹ ಇರಿಸಲಾಗಿದೆ. ಕೇರಳದಿಂದ ಕುಟುಂಬಸ್ಥರು ಆಸ್ಪತ್ರೆಗೆ ಆಗಮಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಮಿಮಿಕ್ರಿ ಕಲಾವಿದರಾಗಿ ವಿಜು ವಿಕೆ ಗುರ್ತಿಸಿಕೊಂಡಿದ್ದರು. 'ಕಾಂತಾರ- 1' ಚಿತ್ರದಲ್ಲಿ ಕೇರಳ ಮೂಲದ ಸಹಕಲಾವಿದರನ್ನು ಹೆಚ್ಚು ಬಳಸಿಕೊಳ್ಳಲಾಗುತ್ತಿದೆ. ಕರಾವಳಿ ಭಾಗದ ಕಥೆ ಆಗಿರುವುದರಿಂದ ಕೇರಳ ಪ್ರೇಕ್ಷಕರನ್ನು ಮನಸ್ಸಿನಲ್ಲಿಟ್ಟುಕೊಂಡು ಸಿನಿಮಾ ಕಟ್ಟಿಕೊಡಲಾಗುತ್ತಿದೆ. ಈಗಾಗಲೇ ಸಿನಿಮಾ ಚಿತ್ರೀಕರಣದ ಅಂತಿಮ ಹಂತಕ್ಕೆ ಬಂದು ನಿಂತಿದೆ. ಬಳಿಕ ಪೋಸ್ಟ್ ಪ್ರೊಡಕ್ಷನ್ ವರ್ಕ್ ಶುರುವಾಗಲಿದೆ. ಅಕ್ಟೋಬರ್ 2ಕ್ಕೆ ಸಿನಿಮಾ ಬಿಡುಗಡೆ ಆಗುವುದು ಖಚಿತ ಎಂದು ಚಿತ್ರತಂಡ ಮಾಹಿತಿ ನೀಡಿದೆ.
ಮಿನಿ ಬಸ್ ಅಪಘಾತ
ಕಳೆದ ವರ್ಷ ನವೆಂಬರ್ 24ರಂದು ಚಿತ್ರದ ಸಹ ಕಲಾವಿದರು ಪ್ರಯಾಣಿಸುತ್ತಿದ್ದ ಮಿನಿ ಬಸ್ ಕೊಲ್ಲೂರು ಸಮೀಪದ ಜಡ್ಕಳ್ ಬಳಿ ಪಲ್ಟಿಯಾಗಿತ್ತು. ಈ ವೇಳೆ 6 ಜನರಿಗೆ ಪೆಟ್ಟಾಗಿತ್ತು. ಕೂಡಲೇ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಅಪಘಾತದ ವೇಳೆ ಒಟ್ಟು 20 ಜನ ಬಸ್‌ನಲ್ಲಿ ಇದ್ದರು ಎಂದು ವರದಿಯಾಗಿತ್ತು.
ಸಹನಟ ಕಪಿಲ್ ಸಾವು
ಮೇ 6ರಂದು 'ಕಾಂತಾರ- 1' ಚಿತ್ರದ ಸಹ ಕಲಾವಿದ ಕಪಿಲ್ ಎಂಬಾತ ಮೃತಪಟ್ಟಿದ್ದರು. ಶೂಟಿಂಗ್ ಬಳಿಕ ಕೊಲ್ಲೂರಿನ ಸೌಪರ್ಣಿಕ ನದಿಯಲ್ಲಿ ಆತ ಸ್ನಾನ ಮಾಡಲು ತೆರಳಿದ್ದರು. ಆದರೆ ನದಿಯಲ್ಲಿ ನೀರಿನ ಆಳ ತಿಳಿಯದೇ ಮುಳುಗಿ ಸಾವನ್ನಪಿರುವುದಾಗಿ ವರದಿಯಾಗಿದೆ.
ರಾಕೇಶ್ ಪೂಜಾರಿ ಹೃದಯಾಘಾತ
ಇನ್ನು 'ಕಾಂತಾರ- 1' ಚಿತ್ರದಲ್ಲಿ ನಟಿಸಿದ್ದ ಹಾಸ್ಯ ಕಲಾವಿದ ರಾಕೇಶ್ ಪೂಜಾರಿ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದರು. ಮೇ 12ರಂದು ಅವರು ಇಹಲೋಕ ತ್ಯಜಿಸಿದ್ದರು. ಕೆಲ ಧಾರಾವಾಹಿಗಳಲ್ಲಿ ನಟಿಸಿದ್ದ ರಾಕೇಶ್, 'ಕಾಮಿಡಿ ಕಿಲಾಡಿಗಳು- 3' ವಿನ್ನರ್ ಆಗಿದ್ದರು. ಮೇ 11ರಂದು 'ಕಾಂತಾರ- 1' ಚಿತ್ರೀಕರಣದಲ್ಲಿ ರಾಕೇಶ್ ಭಾಗಿ ಆಗಿದ್ದರು. ಬಳಿಕ ಆಪ್ತರ ಮದುವೆ ಮೆಹಂದಿ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು. ಆದರೆ ಮಧ್ಯರಾರ್ತಿ ವೇಳೆಗೆ ಹೃದಯಾಘಾತವಾಗಿತ್ತು.
3 ವರ್ಷಗಳ ಹಿಂದೆ ಬಂದಿದ್ದ 'ಕಾಂತಾರ' ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. ಮೊದಲಿಗೆ ಕನ್ನಡದಲ್ಲಿ ತೆರೆಗೆ ಬಂದಿದ್ದ ಸಿನಿಮಾ ಬಳಿಕ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಿತ್ತು. ದೇಶ ವಿದೇಶಗಳಲ್ಲಿ ಸಿನಿಮಾ ತೆರೆಕಂಡು ಗಮನ ಸೆಳೆದಿತ್ತು. ಹಾಗಾಗಿ ಚಿತ್ರದ ಪ್ರೀಕ್ವೆಲ್ ಮಾಡಲು ಚಿತ್ರತಂಡ ಮುಂದಾಗಿತ್ತು. ಈ ಬಾರಿ ಬಹಳ ದೊಡ್ಡಮಟ್ಟದಲ್ಲಿ ಸಿನಿಮಾ ನಿರ್ಮಾಣ ಮಾಡಲಾಗುತ್ತಿದೆ. 1000 ಕೋಟಿ ರೂ. ಕಲೆಕ್ಷನ್ ಟಾರ್ಗೆಟ್ ಮಾಡಿ ಸಿನಿಮಾ ತೆರೆಗೆ ತರಲಾಗುತ್ತಿದೆ. ಆಸ್ಕರ್ ವೇದಿಕೆಗೂ ಸಿನಿಮಾ ಕೊಂಡೊಯ್ಯಲು ಚಿತ್ರತಂಡ ಮುಂದಾಗಿದೆ.


Click it and Unblock the Notifications











