»   » ಇಬ್ಬರು ಪ್ರತಿಭಾವಂತ ಕನ್ನಡತಿಯರ ಸೀಮೋಲ್ಲಂಘನ

ಇಬ್ಬರು ಪ್ರತಿಭಾವಂತ ಕನ್ನಡತಿಯರ ಸೀಮೋಲ್ಲಂಘನ

Posted By: Super
Subscribe to Filmibeat Kannada

ಕಂಕಣ ಕೂಡಿ ಬಂದದ್ದೆ ತಡ- ಅನು ಪ್ರಭಾಕರ್‌ಗೆ ಅವಕಾಶಗಳೂ ಮೇಲಿಂದ ಮೇಲೆ ಒದಗಿಬರುತ್ತಿವೆ. ಎಲ್ಲವೂ 'ಕೃಷ್ಣ ಪ್ರಸಾದ " ಅನ್ನುವಂತಿಲ್ಲ ! ಈಚೆಗಷ್ಟೇ ತಮ್ಮ ಪ್ರತಿಭೆಯ ಬ್ಯಾಂಕಿನಿಂದ ಇಷ್ಟಿಷ್ಟೇ ಸರಕನ್ನು ಹೊರತೆಗೆಯುತ್ತಿರುವ ಅನು ಬೇಜಾರು ಮಾಡಿಕೊಳ್ಳುತ್ತಾರೆ. ಇರಲಿ ಬಿಡಿ, ಹೊಸ ವಿಷಯವೆಂದರೆ ಗಂಡನ ಮನೆಗೆ ತೆರಳುವ ಮುನ್ನ ಅನು ತಮಿಳಿಗೆ ಪದಾರ್ಪಣ ಮಾಡುತ್ತಿದ್ದಾರೆ.

ಆರ್‌.ಬಿ. ಚೌಧುರಿ ತಮಿಳಿನಲ್ಲಿ ದೊಡ್ಡ ನಿರ್ಮಾಪಕ. ಆತನ ಬ್ಯಾನರ್‌ನಲ್ಲಿ ಕೆಲಸ ಮಾಡುವ ಅವಕಾಶ ಅನೂಗೆ ಕೂಡಿ ಬಂದಿದೆ. ಅಬ್ಬಾಸ್‌, ಲಾರೆನ್ಸ್‌, ಲಿವಿಂಗ್‌ಸ್ಟನ್‌ರಂತಹ ಖ್ಯಾತ ನಟರು ಈ ಚಿತ್ರದಲ್ಲಿದ್ದಾರೆ. ಅಷ್ಟು ಮಾತ್ರವಲ್ಲ , ಈ ಚಿತ್ರವನ್ನು ತೆಲುಗಿನಲ್ಲಿ ನಿರ್ಮಿಸುವ ಉತ್ಸಾಹವೂ ಚೌಧುರಿ ಅವರಿಗೆ. ಈ ಪ್ರಕಾರವಾಗಿ ಅನು ತಮಿಳು ಹಾಗೂ ತೆಲುಗು ಪ್ರವೇಶ ಏಕ ಕಾಲದಲ್ಲಿಯಾಗಬಹುದು. ಭಲೇ ಅದೃಷ್ಟವೋ ಅದೃಷ್ಟ ಅನ್ನಬಹುದಾ!?

ಅಂದಹಾಗೆ, ತಮಿಳಿನಿಂದ ಅನೂಗೆ ಆಫರ್‌ ಬರುತ್ತಿರುವುದು ಇದೇ ಮೊದಲೇನಲ್ಲ . ಆದರೆ, ಈ ಮುಂಚಿನ ಕರೆಗಳನ್ನು ನಿರಾಕರಿಸಿದ್ದ ಅನು ಪ್ರಭಾಕರ್‌, ದೊಡ್ಡ ಬ್ಯಾನರ್‌ನಿಂದ ಅವಕಾಶ ಸಿಕ್ಕಾಗ ಬಾಚಿಕೊಂಡಿದ್ದಾರೆ. ತಮಿಳು ಚಿತ್ರದ ನಂತರ, ಸಣ್ಣ ಬ್ರೇಕ್‌, ಆಮೇಲೆ ಮದುವೆ ಅನ್ನುವುದು ಈ ಹೊತ್ತಿನ ಅನು ಹಿತಚಿಂತಕರ ಲೆಕ್ಕಾಚಾರ. ಕೊನೆಯದಾಗಿ, ಸದ್ಯಕ್ಕೆ 4 ಕನ್ನಡ ಚಿತ್ರಗಳು ಆಕೆಯ ಕೈಯ್ಯಲ್ಲಿವೆ.

ಭಾವನಾ : ಆಸ್ಟ್ರೇಲಿಯಾದಿಂದ ಹೈದರಾಬಾದ್‌ಗೆ !?

ಅನು ಪ್ರಭಾಕರ್‌ ಚೆನ್ನೈ ಟಿಕೇಟು ಪಡೆದ ಸುದ್ದಿಯ ಬೆನ್ನಿಗೇ 'ಚಂದ್ರಮುಖಿ" ಖ್ಯಾತಿಯ ಹಾಗೂ 'ಕುರಿಗಳು.." ಕುಖ್ಯಾತಿಯ ಭಾವನಾ ಹೈದರಾಬಾದ್‌ ನಿರ್ಮಾಪಕರ ಕೃಪೆಗೆ ಪಾತ್ರರಾದ ಸುದ್ದಿ ಬಂದಿದೆ.

ಈಗಂತೂ ಸ್ಯಾಂಡಲ್‌ವುಡ್‌ನಲ್ಲಿ ತೆಲುಗು ನಿರ್ಮಾಪಕರದ್ದೇ ಗದ್ದಲ. ಕನ್ನಡದ ಪ್ರಮುಖ ನಟರೆಲ್ಲ ತೆಲುಗು ನಿರ್ಮಾಪಕರಿಗೆ ಕಾಲ್‌ಷೀಟ್‌ ನೀಡಲು ತುದಿಗಾಲಲ್ಲಿ ನಿಂತಿರುವಾಗ, ಕನ್ನಡದ ನಾಯಕಿ ನೇರವಾಗಿ ತೆಲುಗು ಪ್ರವೇಶ ಪಡೆದಿದ್ದಾಳೆ. ಭಾವನಾ 4 ತೆಲುಗು ಚಿತ್ರಗಳಿಗೆ ಬುಕ್‌ ಆಗಿದ್ದಾಳಂತೆ! ಅಂದಹಾಗೆ, ಭಾವನಾ ಪ್ರಸ್ತುತ ಆಸ್ಟ್ರೇಲಿಯಾದಲ್ಲಿ ಕಾರ್ಯಕ್ರಮ ನೀಡುತ್ತಿದ್ದಾರೆ.

ಕನ್ನಡಕ್ಕೆ ಪರಭಾಷಾ ನಟಿಯರು ಸಾಲು ಸಾಲಾಗಿ ಆಗಮಿಸುತ್ತಿರುವ ಸಂದರ್ಭದಲ್ಲಿ , ಇಬ್ಬರು ಪ್ರತಿಭಾವಂತ ಕನ್ನಡತಿಯರ ಸೀಮೋಲ್ಲಂಘನ- ಕೊಡು ಕೊಳ್ಳುವಿಕೆಯಾ? ಸಾಂಸ್ಕೃತಿಕ ವಿನಿಮಯವಾ ಅಥವಾ ಇಲ್ಲಿ ಸಲ್ಲದವರು ಅಲ್ಲಿ ಸಲ್ಲುವರೆನ್ನುವುದಕ್ಕೆ ಉದಾಹರಣೆಯಾ?

English summary
Anu moves to tamil, bhavana to telugu film industry

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada