ಶೂಟಿಂಗ್ ಇಲ್ಲದ ಸಮಯದಲ್ಲಿ ಅಡುಗೆ ಮನೆಯಲ್ಲಿ
ಅನು ಪ್ರಭಾಕರ್ ಎರಡು ಹೊಸ ಚಿತ್ರಗಳಿಗೆ ಸಹಿ ಹಾಕಿದ್ದಾರೆ. ಅದರಲ್ಲಿ ಶಿವರಾಜ್ ಕುಮಾರ್ ಹಾಗೂ ರವಿಚಂದ್ರನ್ ಜೊತೆಯಾಗಿ ನಟಿಸುವ ಸಿನಿಮಾ ಕೂಡ ಇದೆ ಅನ್ನುವುದು ಗಮನಾರ್ಹ. ಮತ್ತೊಂದು ಸಿನಿಮಾದಲ್ಲಿ ಅನು ನಟಿಸುವ ಕುರಿತು ಮಾತುಕತೆಗಳು ನಡೆಯುತ್ತಿವೆ, ಆ ಮೂರನೇ ಸಿನಿಮಾ ಅಂತಿಮವಾಗಿಲ್ಲ . ಇಷ್ಟೆಲ್ಲಾ ಸುದ್ದಿ ಹೊರಬಿದ್ದಿರುವುದು ಅನು ಮದುವೆ ಸುದ್ದಿ ಹೊರಬಿದ್ದ ನಂತರ ಅನ್ನುವುದು ಇಲ್ಲಿನ ಗಮ್ಮತ್ತು .
ಸಿನಿಮಾ ಲೆಕ್ಕಾಚಾರಗಳ ಪ್ರಕಾರ, ಮದುವೆ ಅನ್ನುವುದು ನಟಿಯಾಬ್ಬಳ ಪಾಲಿಗೆ ಅವಕಾಶಗಳನ್ನು ಬಂದು ಮಾಡುವ ಬಾಗಿಲು. ಅನು ಪಾಲಿಗೆ ಇದು ತಿರುಗು ಮುರುಗು ಅನ್ನುವುದೆ ವಿಶೇಷ. ಮದುವೆ ಸುದ್ದಿ ನಂತರವೂ ಅವರು ಅವಕಾಶಗಳನ್ನು ಬಾಚಿಕೊಳ್ಳುತ್ತಿದ್ದಾರೆ, ಅದೂ ದೊಡ್ಡ ಬ್ಯಾನರ್‌ಗಳಲ್ಲಿ . ಅನು ಅದೃಷ್ಟವಂತೆ ! ಹಾಗಂತ ಅವರಮ್ಮ ಗಾಯತ್ರಿಯೂ ನಂಬಿದ್ದಾರೆ.
'ಗೌರಮ್ಮನಂತೆ ಮನೆಯಲ್ಲೇ ಕೂರಲ್ಲ "
ಮದುವೆಯ ನಂತರವೂ ಅನು ನಟಿಸುತ್ತಾರಂತೆ(ಯಾಕೆ ನಟಿಸಬಾರದು ? ಸುಧಾರಾಣಿ, ಶ್ರುತಿ ನಟಿಸುತ್ತಿರುವ ಉದಾಹರಣೆ ಇಲ್ಲವೆ!). ಪಂಡು (ಭಾವೀ ಪತಿ ಕೃಷ್ಣ ಕುಮಾರ್ ಉರುಫ್ ಕೆಕೆಯ ಮುದ್ದಿನ ಹೆಸರು) ಕೂಡ ತಮಗೆ ಬೆಂಬಲವಾಗಿರುವ ನಂಬುಗೆ ಅವರದು.
'ಪಂಡುವಿನ ಹೃದಯ ತುಂಬಾ ದೊಡ್ಡದು. ಅವರು ಹಾಗೆಲ್ಲಾ ತಪ್ಪು ಅರ್ಥ ಮಾಡಿಕೊಳ್ಳುವವರಲ್ಲ, ನಾನು ಚಿತ್ರರಂಗದಲ್ಲಿ ಮುಂದುವರೆಯುವ ಬಗ್ಗೆ ಅವರದು ಯಾವುದೇ ತಕರಾರು ಇಲ್ಲ . ಮತ್ತೆ ಹೆಂಗಸರೆಂದರೆ ಪಂಡುವಿಗೆ ತುಂಬಾ ಗೌರವ" ಎನ್ನುವ ಅನು 'ಆ ಸ್ವಭಾವ"ಕ್ಕೇ ಪಂಡುವಿಗೆ ಹೃದಯ ಕೊಟ್ಟಿದ್ದು ಎಂದು 'ಹೃದಯಾ ಹೃದಯಾ" ನಾಯಕಿಯಂತೆಯೇ ನಾಚಿಕೊಳ್ಳುತ್ತಾರೆ.
ಅನು ಚಿತ್ರರಂಗದಲ್ಲಿ ಮುಂದುವರೆಯುವುದಕ್ಕೆ ಪಂಡು ಅವರ ದೊಡ್ಡ ಮೊಹರು ಬಿದ್ದ ಮೇಲೆ ಇನ್ನೇನು! ಜಯಂತಿ , ಗಾಯತ್ರಿ ಪ್ರಭಾಕರ್ ಕೂಡ ಅನುವಿನ ನಿರ್ಣಯಕ್ಕೆ ಜೈ ಹೇಳಿದ್ದಾರೆ. 'ಮದುವೆ ಸಂದರ್ಭದಲ್ಲಿ ಒಂದೆರಡು ತಿಂಗಳು ಸಿನೆಮಾಕ್ಕೆ ರಜೆ , ನಂತರ ಮತ್ತೆ ಸೆಟ್‌ಗೆ, ಇದು ಅನು ಲೆಕ್ಕಾಚಾರ.
ಅಂದಹಾಗೆ, ಅನು ಅಡುಗೆ ಕಲಿಯುತ್ತಿದ್ದಾರೆ!
ಬರೆ ನಟಿಯಾದರೆ ಆದೀತಾ, ಒಳ್ಳೆಯ ಗೃಹಿಣಿಯಾಗುವುದು ಬೇಡವಾ ? ಒಳ್ಳೆಯ ಗೃಹಿಣಿಗೆ ಒಳ್ಳೆಯ ಅಡುಗೆ ಮಾಡಲಿಕ್ಕೆ ಬರುತ್ತದೆ ಎಂದು ನಂಬಿರುವವರಲ್ಲಿ ಅನು ಕೂಡ ಒಬ್ಬರು. ಶೂಟಿಂಗ್ ಇಲ್ಲದಿದ್ದರೆ ಅನು ಅಡುಗೆ ಮನೆಯಲ್ಲಿ ಬಿಜಿ. ಚಿಕನ್ ಖಾದ್ಯಗಳನ್ನು ತಯಾರಿಸುವುದರಲ್ಲಿ ಅವರು ಪಳಗುತ್ತಿದ್ದಾರೆ. ಅನುವಿಗೆ ಚಿಕನ್ ತುಂಬಾ ಇಷ್ಟ . ಅವರಿಗೂ ಚಿಕನ್ ಇಷ್ಟ ಅನ್ನುವುದನ್ನು ಕಂಡುಕೊಂಡಿದ್ದಾರೆ.
ಪಂಡುಗೆ ಸಿನಿಮಾ ಅಂದರೆ ಅಂತಹ ಆಸಕ್ತಿ ಏನಿಲ್ಲ ಎಂದು ಅನು ತುಸು ಬೇಜಾರಿನಿಂದಲೇ ಹೇಳುತ್ತಾರೆ. ಅನು ನಟಿಸಿದ 'ಅಂಜಲಿ ಗೀತಾಂಜಲಿ" ಮತ್ತು 'ಶಾಪ" ಸಿನೆಮಾಗಳನ್ನು ಮಾತ್ರ ನೋಡಿರುವ ಪಂಡುವಿನದು ಸಾದಾ ಕಾಮೆಂಟ್- 'ಚೆನ್ನಾಗಿ ಅಭಿನಯಿಸಿದ್ದಾಳೆ"
'ನಾನೀಗ ಚೆನ್ನಾಗಿ ಅಡುಗೆ ಮಾಡಬಲ್ಲೆ ಗೊತ್ತಾ ? ಹೊಸ ಹೊಸ ರೀತಿಯ ಖಾದ್ಯಗಳನ್ನು ತಯಾರಿಸಲು ಕಲಿತಿದ್ದೇನೆ. ಸದ್ಯಕ್ಕೆ ಅಮ್ಮನ ಮೇಲೇ ಪ್ರಯೋಗ. ಇನ್ನು ಮೇಲೆ ಈ ಪ್ರಯೋಗ ಪಂಡು ಮೇಲೆ ನಡೆಯುತ್ತದಷ್ಟೇ" ಎನ್ನುತ್ತಾ ಕುಲುಕುಲು ನಗುತ್ತಾರೆ. ಪಾಪ ! ಪಂಡು ?
'ಅಮ್ಮ ಯಾವಾಗಲೂ ನಾನು ಒಂದು ಒಳ್ಳೆ ಫ್ಯಾಮಿಲಿಗೆ ಮದುವೆಯಾಗಿ ಹೋಗಬೇಕು ಅಂತ ಹೇಳುತ್ತಲೇ ಇದ್ದರು.
ನಾನು ಮದುವೆಯ ಬಗ್ಗೆ ಯೋಚನೆಯೂ ಮಾಡಲಾಗದಷ್ಟು ಬಿಸಿಯಾಗಿದ್ದೆ. ಹೀಗಾಗುತ್ತೆ ಅಂತ ನಾನು ಕನಸು ಮನಸ್ಸಿನಲ್ಲಿಯೂ ಊಹಿಸಿರಲಿಲ್ಲ ಎಂದು ತಮ್ಮ ಹೃದಯ ಕಳ್ಳತನದ ಬಗ್ಗೆ ಅನು ಅಚ್ಚರಿಪಡುತ್ತಾರೆ.
ಕೊನೆಯದಾಗಿ ಅನು ಹೇಳಿದ್ದು - ಈ ವರ್ಷ ಎಂಗೇಜ್‌ಮೆಂಟ್ ಊಟ ಮಾತ್ರ. ಮದುವೆ ಊಟ ಏನಿದ್ದರೂ ಬರೋ ವರ್ಷ. ಇನ್ನು ಟೈಮಿದೆ ಅಂತೀರಾ?


Click it and Unblock the Notifications