ನಟಿ ಜಯಂತಿ ನಿಧನ: ಮಾಜಿ ಸೊಸೆ ಅನು ಪ್ರಭಾಕರ್ ಭಾವುಕ ವಿದಾಯ
ಚಂದನವನದ ಹಿರಿಯ ನಟಿ, ಅಭಿನಯ ಶಾರದೆ ಜಯಂತಿ ಇನ್ನು ನೆನಪು ಮಾತ್ರ. ಇಂದು (ಜುಲೈ 26) ಬೆಳಗ್ಗೆ ನಟಿ ಜಯಂತಿ ಬಾರದ ಲೋಕಕ್ಕೆ ಹೊರಟು ಹೋದರು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ನಟಿ ಜಯಂತಿ ಅನೇಕ ಬಾರಿ ಆಸ್ಪತ್ರೆಗೆ ದಾಖಲಾಗಿದ್ದರು. ಸಾಯುವ ಕೆಲವು ದಿನಗಳ ಮುಂಚೆ ಜಯಂತಿ ಅಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ತೆರಳಿದ್ದರು.
Recommended Video
ಸ್ಯಾಂಡಲ್ ವುಡ್ ನ ಹಿರಿಯ ನಟಿಯ ನಿಧನಕ್ಕೆ ರಾಜಕೀಯ ಮತ್ತು ಚಿತ್ರರಂಗದ ಗಣ್ಯರು ಸಂತಾಪ ಸೂಚಿಸುತ್ತಿದ್ದಾರೆ. ಇದೀಗ ಜಯಂತಿ ಅವರ ಮಾಜಿ ಸೊಸೆ, ಖ್ಯಾತ ನಟಿ ಅನುಪ್ರಭಾಕರ್ ಸಾಮಾಜಿಕ ಜಾಲತಾಣದ ಮೂಲಕ ಭಾವುಕ ವಿದಾಯ ಹೇಳಿದ್ದಾರೆ. ನಿಮ್ಮ ಜೊತೆ ಕಳೆದಂತ ಪ್ರತಿ ಕ್ಷಣ ಸದಾ ತನ್ನ ಮನಸು ಹಾಗು ಹೃದಯದಲ್ಲಿ ಇರುತ್ತೆ ಅಮ್ಮ ಎಂದು ಭಾವುಕ ಮಾತುಗಳನ್ನಾಡಿದ್ದಾರೆ. ಮುಂದೆ ಓದಿ...

ಅನು ಪ್ರಭಾಕರ್ ಭಾವುಕ ಮಾತು
ತನ್ನ ಮಾಜಿ ಅತ್ತೆಯ ನಿಧನತ್ತೆ ಅನು ಪ್ರಭಾಕರ್ ಭಾವುಕರಾಗಿದ್ದಾರೆ. "ನಿಮ್ಮ ಜೊತೆ ಕಳೆದಂತ ಪ್ರತಿ ಕ್ಷಣ ಸದಾ ನನ್ನ ಮನಸು ಹಾಗು ಹೃದಯದಲ್ಲಿ ಇರುತ್ತೆ Mom. ನಿಮ್ಮಿಂದ ಕಲಿತ ಜೀವನದ ಪಾಠಗಳು ನಾನು ಎಂದು ಮರೆಯೊಲ್ಲ. ನಿಮ್ಮ ಆತ್ಮೀಯರನ್ನು ಕಳೆದುಕೊಂಡಾಗ ಈ ವಿಷಯದ ಬಗ್ಗೆ ಎಷ್ಟೋ ಸರಿ ನನ್ನ ಹತ್ತಿರ ಮಾತಾಡಿದ್ರಿ. ಅಮ್ಮಮ್ಮ ಜೊತೆ ನೆಮ್ಮದಿಯಿಂದ ಇರಿ. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ" ಎಂದು ಬರೆದುಕೊಂಡಿದ್ದಾರೆ.

2002ರಲ್ಲಿ ಮದುವೆ, 2014ರಲ್ಲಿ ವಿಚ್ಛೇದನ
ನಟಿ ಅನು ಪ್ರಭಾಕರ್ 2002ರಲ್ಲಿ ಜಯಂತಿ ಪುತ್ರ ಕೃಷ್ಣ ಕುಮಾರ್ ಅವರನ್ನು ವಿವಾಹವಾಗಿದ್ದರು. 2014ರಲ್ಲಿ ಅನುಪ್ರಭಾಕರ್, ಕೃಷ್ಣ ಕುಮಾರ್ ಅವರಿಂದ ವಿಚ್ಛೇದನ ಪಡೆಯುವ ಮೂಲಕ 12 ವರ್ಷದ ದಾಂಪತ್ಯ ಜೀವನಕ್ಕೆ ಫುಲ್ ಸ್ಟಾಪ್ ಇಟ್ಟಿದ್ದರು. ಬಳಿಕ 2016ರಲ್ಲಿ ಅನು ಪ್ರಭಾಕರ್ ನಟ ರಘು ಮುಖರ್ಜಿ ಜೊತೆ ಎರಡನೇ ವಿವಾಹವಾದರು.

ವಿಚ್ಛೇದನದ ಬಗ್ಗೆ ಜಯಂತಿ ಹೇಳಿದ್ದೇನು?
ಮಗ-ಸೊಸೆಯ ವಿಚ್ಛೇದನದ ಬಗ್ಗೆ ನಟಿ ಜಯಂತಿ ಎಲ್ಲಿಯೂ ಮಾತನಾಡಿಲ್ಲ. ಈ ಬಗ್ಗೆ ಒಮ್ಮೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ, "ಈ ಬಗ್ಗೆ ನಾನೇನೂ ಹೇಳುವುದಿಲ್ಲ. ನನ್ನ ಪಾಲಿಗೆ ಅದೊಂದು ಮುಗಿದ ಅಧ್ಯಾಯ. ಒಂದು ವೇಳೆ ಆ ಬಗ್ಗೆ ಮಾತನಾಡಿದರೆ ಅಳುವೇ ನನ್ನ ಉತ್ತರ, ಆ ವಿಚಾರವನ್ನು ಅಲ್ಲಿಗೆ ಬಿಟ್ಟುಬಿಡಿ" ಎಂದಿದ್ದರು.

ಜಯಂತಿ ನಿಧನಕ್ಕೆ ರಘು ಮುಖರ್ಜಿ ಸಂತಾಪ
ಇನ್ನು ಜಯಂತಿ ನಿಧನಕ್ಕೆ ಅನು ಪ್ರಭಾಕರ್ ಪತಿ, ನಟ ರಘು ಮುಖರ್ಜಿ ಸಹ ಸಂತಾಪ ಸೂಚಿಸಿದ್ದಾರೆ. "ಭಾರತೀಯ ಚಿತ್ರರಂಗಕ್ಕೆ ದೊಡ್ಡ ನಷ್ಟ. ಅವರೊಂದಿಗೆ ಕೆಲಸ ಮಾಡುವ ಅದೃಷ್ಟ ನನಗೆ ಸಿಕ್ಕಿತ್ತು. ಆತ್ಮಕ್ಕೆ ಶಾಂತಿ ಸಿಗಲಿ" ಎಂದು ಟ್ವೀಟ್ ಮಾಡಿದ್ದಾರೆ.


Click it and Unblock the Notifications











