»   » ಕೃಷ್ಣನ ವರಮಾಲೆಗೆ ಕೊರಳೊಡ್ಡಿದ ಅನು ಪ್ರಭಾಕರ್‌

ಕೃಷ್ಣನ ವರಮಾಲೆಗೆ ಕೊರಳೊಡ್ಡಿದ ಅನು ಪ್ರಭಾಕರ್‌

Posted By: Super
Subscribe to Filmibeat Kannada

ಬೆಂಗಳೂರು : 'ಹೃದಯಾ ಹೃದಯಾ" ಚಿತ್ರದ ಮೂಲಕ ಕನ್ನಡ ರಂಗ ಪ್ರವೇಶಿಸಿ, ಚಿತ್ರರಸಿಕರ ಮನಗೆದ್ದ ಯುವ ನಟಿ ಅನುಪ್ರಭಾಕರ್‌ ಶುಕ್ರವಾರ ನಗರದ ಬನ್ನೇರುಘಟ್ಟ ರಸ್ತೆಯ ಕಲ್ಯಾಣ ಮಂಟಪದಲ್ಲಿ ವಿವಾಹ ಬಂಧನಕ್ಕೊಳಗಾದರು. ಅನು ಅವರನ್ನು ವರಿಸಿದ ಅದೃಷ್ಟಶಾಲಿ, ಹಿರಿಯ ಅಭಿನೇತ್ರಿ ಜಯಂತಿ ಅವರ ಪುತ್ರ ಕೃಷ್ಣ ಕುಮಾರ್‌.

ಕೃಷ್ಣಕುಮಾರ್‌ ಉರುಫ್‌ ಕೆಕೆ ಉರುಫ್‌ 'ಪಂಡು" (ಗೆಳೆಯರು ಪ್ರೀತಿಯಿಂದ ಹಾಗೆ ಕರೀತಾರೆ), ಬೆಂಗಳೂರು ಬಿ.ಎಂ.ಎಸ್‌. ಕಾಲೇಜಿನಲ್ಲಿ ಎಂಜನಿಯರಿಂಗ್‌ ಕಲಿತು ಅಮೆರಿಕದಲ್ಲಿ ಎಂಜನಿಯರ್‌ ಆಗಿ ಕೆಲಸ ಮಾಡಿ ಈ ಹೊತ್ತು ಬೆಂಗಳೂರಿಗೆ ಮರಳಿ ಗೃಹಸ್ಥಾಶ್ರಮ ಪ್ರವೇಶಿಸಿದ್ದಾರೆ.

ಶುಕ್ರವಾರ ವೈಭವದಿಂದ ನಡೆದ ಮದುವೆಯ ಸಮಾರಂಭದಲ್ಲಿ ಹಿರಿಯ ಚಿತ್ರತಾರೆಯರಾದ ಶ್ರೀನಾಥ್‌, ಪ್ರಮೀಳಾ ಜೋಷಾಯ್‌, ತಾರಾ, ಬಿ.ವಿ. ರಾಧಾ ಮೊದಲಾದವರು ಆಗಮಿಸಿ ವಧೂ-ವರರರನ್ನು ಆಶೀರ್ವದಿಸಿದರು. ಅನುಪ್ರಭಾಕರ್‌ ತಂದೆ ಎಂ.ವಿ. ಪ್ರಭಾಕರ್‌ ಹಾಗೂ ತಾಯಿ ಗಾಯತ್ರಿ ಶಾಸ್ತ್ರೋಕ್ತವಾಗಿ ಮಗಳ ಧಾರೆ ಎರೆದುಕೊಟ್ಟರು.

ಅನು ಪ್ರಭಾಕರ್‌ ನಿಮಗೆಲ್ಲಾ ತಿಳಿದಂತೆ ಹಿರಿಯ ಕಂಠದಾನ ಕಲಾವಿದೆ ಗಾಯತ್ರಿ ಪ್ರಭಾಕರ್‌ ಅವರ ಪುತ್ರಿ. ಶಾಪ, ಶ್ರೀರಸ್ತು ಶುಭಮಸ್ತು, ಕನಸುಗಾರ, ಯಾರಿಗೆ ಸಾಲತ್ತೆ ಸಂಬಳ, ಅಂಜಲಿ ಗೀತಾಂಜಲಿ, ಸೂರಪ್ಪ ಮೊದಲಾದ ಚಿತ್ರಗಳಲ್ಲಿ ಮನಗೆದ್ದ ಅನು, ಮದುವೆಯ ನಂತರವೂ ನಟಿಸುತ್ತೇನೆ ಎಂದು ಹೇಳಿದ್ದಾರೆ.

ಅನು - ಕೃಷ್ಣ ದಂಪತಿಗಳಿಗೆ ದಟ್ಸ್‌ಕನ್ನಡ.ಕಾಂ ಶುಭಾಶಯಗಳು

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada