'ಬಿಲ್ಲ ರಂಗ ಬಾಷ' ಅಪ್‌ಡೇಟ್ ಬಗ್ಗೆ ಪೋಸ್ಟ್ ಮಾಡಿ ಡಿಲೀಟ್ ಮಾಡಿದ್ರಾ ಅನೂಪ್ ಭಂಡಾರಿ?
ಕಿಚ್ಚ ಸುದೀಪ್ ಹಾಗೂ ಅನೂಪ್ ಭಂಡಾರಿ ಕಾಂಬಿನೇಷನ್‌ನಲ್ಲಿ ಬಂದ 'ವಿಕ್ರಾಂತ್ ರೋಣ' ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. ಇದೇ ಕಾಂಬಿನೇಷನ್‌ನಲ್ಲಿ 'ಬಿಲ್ಲ ರಂಗ ಬಾಷ' ಸಿನಿಮಾ ಭಾರೀ ನಿರೀಕ್ಷೆ ಮೂಡಿಸಿದೆ. ಈ ವರ್ಷವೇ ಸಿನಿಮಾ ಶುರುವಾಗುತ್ತದೆ ಎಂದು ನಟ ಸುದೀಪ್ ಹೇಳಿದ್ದಾರೆ.
'ಬಿಲ್ಲ ರಂಗ ಬಾಷ' ಕಥೆ ಚಿತ್ರಕಥೆ ಸಿದ್ಧಪಡಿಸುವುದರಲ್ಲಿ ನಿರ್ದೇಶಕ ಅನೂಪ್ ಭಂಡಾರಿ ಬ್ಯುಸಿಯಾಗಿದ್ದಾರೆ. ವಿಕ್ರಾಂತ್ ರೋಣ ಸಿನಿಮಾ ನೋಡಿದ ಮೇಲೆ ಸಹಜವಾಗಿಯೇ 'ಬಿಲ್ಲ ರಂಗ ಬಾಷ' ಬಗ್ಗೆ ಕುತೂಹಲ ಮೂಡಿದೆ. ಐದಾರು ವರ್ಷಗಳ ಹಿಂದೆಯೇ ಈ ಸಿನಿಮಾ ಮಾಡುವುದಾಗಿ ಹೇಳಲಾಗಿತ್ತು. ಕಾರಣಾಂತರಗಳಿಂದ ತಡವಾಗುತ್ತಾ ಬಂದಿತ್ತು.

ಇದೀಗ 'ಬಿಲ್ಲ ರಂಗ ಬಾಷ' ಸಿನಿಮಾ ಕಟ್ಟಿಕೊಡಲು ವೇದಿಕೆ ಸಿದ್ಧವಾಗುತ್ತಿದೆ. ಬಹಳ ದೊಡ್ಡಮಟ್ಟದಲ್ಲಿ ಸಿನಿಮಾ ತೆರೆಗೆ ಬರಲಿದೆ. ಅಭಿಮಾನಿಗಳಂತೂ ಬರೀ ಟೈಟಲ್ ಕೇಳಿಯೇ ಥ್ರಿಲ್ಲಾಗಿದ್ದಾರೆ. ಇನ್ನು ಫ್ಯಾನ್ ಮೇಡ್ ಪೋಸ್ಟರ್‌ಗಳು, ಟೀಸರ್‌ಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಲೇ ಇದೆ. ಇದೇ ವರ್ಷ ಸಿನಿಮಾ ಶುರುವಾಗುತ್ತದೆ ಎನ್ನುವುದನ್ನು ಕೇಳಿ ಮತ್ತಷ್ಟು ಉತ್ಸುಕರಾಗಿದ್ದಾರೆ.
ಅಭಿಮಾನಿಗಳು 'ಬಿಲ್ಲ ರಂಗ ಬಾಷ' ಸಿನಿಮಾ ಅಪ್‌ಡೇಟ್‌ಗಾಗಿ ಅನೂಪ್ ಭಂಡಾರಿಯವರನ್ನು ಪ್ರೀತಿಯಿಂದ ಕಾಡುತ್ತಲೇ ಇದ್ದಾರೆ. ಬೇಡ ಅಪ್‌ಡೇಟ್ ಕೊಡಿ ಎಂದು ಕೇಳುತ್ತಲೇ ಇದ್ದಾರೆ. ಅಪ್‌ಡೇಟ್ ಕೊಡದಿದ್ದರೆ ಊಟ ಮಾಡಲ್ಲ ಅಂತೆಲ್ಲಾ ಹಠ ಹಿಡಿಯುತ್ತಿದ್ದಾರೆ. ಸದ್ಯ ಅನೂಪ್ ಭಂಡಾರಿ 'ಬಿಲ್ಲ ರಂಗ ಬಾಷ' ಅಪ್‌ಡೇಟ್ ಬಗ್ಗೆ ಸುಳಿವು ಕೊಟ್ಟು ಪೋಸ್ಟ್ ಡಿಲೀಟ್ ಮಾಡಿದ್ದಾರೆ ಎಂದು ಟ್ರೆಂಡ್ ಮಾಡುತ್ತಿದ್ದಾರೆ.
ನಿರ್ದೇಶಕ ಅನೂಪ್ ಭಂಡಾರಿ 'ಬಿಲ್ಲ ರಂಗ ಬಾಷ' ಅಪ್‌ಡೇಟ್ ಆದಷ್ಟು ಬೇಗ ಎನ್ನುವಂತೆ ಇನ್‌ಸ್ಟಾ ಸ್ಟೋರಿ ಹಾಕಿರುವ ಸ್ಕ್ರೀನ್ ಶಾಟ್ ವೈರಲ್ ಆಗುತ್ತಿದೆ. ಅನೂಪ್ ಇಂತಾದೊಂದು ಪೋಸ್ಟ್ ಮಾಡಿ ಇದೀಗ ಡಿಲೀಟ್ ಮಾಡಿದ್ದಾರೆ ಎಂದು ಅಭಿಮಾನಿಗಳು ಸ್ಕ್ರೀನ್ ಶಾಟ್ ವೈರಲ್ ಮಾಡುತ್ತಿದ್ದಾರೆ. ಈ ಬಗ್ಗೆ ಫಿಲ್ಮಿಬೀಟ್‌ಗೆ ಸ್ವತಃ ಅನೂಪ್ ಭಂಡಾರಿ ಪ್ರತಿಕ್ರಿಯಿಸಿದ್ದಾರೆ.

"ನಾನು ಆ ರೀತಿಯ ಯಾವುದೇ ಪೋಸ್ಟ್ ಮಾಡಿಲ್ಲ, ಡಿಲೀಟ್ ಸಹ ಮಾಡಿಲ್ಲ. ಅಭಿಮಾನಿಗಳು 'ಬಿಲ್ಲ ರಂಗ ಬಾಷ' ಅಪ್‌ಡೇಟ್ ಕೇಳಲು ನಮ್ಮ ಗಮನ ಸೆಳೆಯಲು ಈ ರೀತಿ ಮಾಡುತ್ತಿದ್ದಾರೆ. ಅಪ್‌ಡೇಟ್ ಕೊಡದಿದ್ದರೆ ಊಟ ಮಾಡಲ್ಲ ಎಂದು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. ಅದು ಅವರ ಪ್ರೀತಿ. ಸಿನಿಮಾ ಮೇಲಿನ ನಿರೀಕ್ಷೆ" ಎಂದಿದ್ದಾರೆ.
ಸುದೀಪ್ ಸರ್ ಹೇಳಿದಂತೆ 'ಬಿಲ್ಲ ರಂಗ ಬಾಷ' ಸಿನಿಮಾ ಈ ವರ್ಷವೇ ಶುರುವಾಗಲಿದೆ. ಪೋಸ್ಟ್ ಪ್ರೊಡಕ್ಷನ್ಸ್ ವರ್ಕ್‌ಗೆ ಬಹಳ ಸಮಯ ಬೇಕು. ಹಾಗಾಗಿ 'ಮ್ಯಾಕ್ಸ್' ಬಳಿಕ ಮತ್ತೊಂದು ಸಿನಿಮಾದಲ್ಲಿ ಸುದೀಪ್ ನಟಿಸುತ್ತಾರೆ. ಆ ನಂತರವಷ್ಟೆ ನಮ್ಮ ಸಿನಿಮಾ ಎಂದಿದ್ದಾರೆ.
'ರಂಗಿತರಂಗ' ಸಿನಿಮಾ ಮೂಲಕ ಅನೂಪ್ ಭಂಡಾರಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಬಳಿಕ ಮಾಡಿದ 'ರಾಜರಥ' ಸಿನಿಮಾ ಅಷ್ಟಾಗಿ ಸದ್ದು ಮಾಡಲಿಲ್ಲ. 'ವಿಕ್ರಾಂತ್ ರೋಣ' ಸಿನಿಮಾ ಮಾಡಿ ಭರ್ಜರಿ ಕಂಬ್ಯಾಕ್ ಮಾಡಿದ್ದರು. ಇದೀಗ ಮುಂದಿನ ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ.
ಇನ್ನು ನಟ ಸುದೀಪ್ 'ಮ್ಯಾಕ್ಸ್' ಸಿನಿಮಾ ಚಿತ್ರೀಕರಣದಲ್ಲಿ ಮಗ್ನರಾಗಿದ್ದಾರೆ. ತಮಿಳು ನಿರ್ದೇಶಕ ವಿಜಯ್ ಕಾರ್ತಿಕೇಯನ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಬಳಿಕ ತಮಿಳು ನಿರ್ದೇಶಕ ಚೇರನ್ ಕಾಂಬಿನೇಷನ್‌ನಲ್ಲಿ ಸಿನಿಮಾ ಮೂಡಿ ಬರುವ ಸಾಧ್ಯತೆಯಿದೆ. ಇನ್ನು ತಮಿಳು ನಿರ್ದೇಶಕ ವೆಂಕಟ್ ಪ್ರಭು ಜೊತೆ ಸದ್ಯಕ್ಕೆ ಸಿನಿಮಾ ಇಲ್ಲ ಎಂದು ಕಿಚ್ಚ ಸುದೀಪ್ ಸ್ಪಷ್ಟಪಡಿಸಿದ್ದಾರೆ.


Click it and Unblock the Notifications











