"ಇನ್ನೊಂದು ತಿಂಗಳಲ್ಲಿ 'ಬಿಲ್ಲ ರಂಗ ಬಾಷ' ಅಪ್‌ಡೇಟ್": ಅನೂಪ್ ಭಂಡಾರಿ
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸದ್ಯ 'ಮ್ಯಾಕ್ಸ್' ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಮತ್ತೆರಡು ಸಿನಿಮಾಗಳನ್ನು ಕೂಡ ಘೋಷಣೆ ಮಾಡಿದ್ದಾರೆ. ಇದೆಲ್ಲದರ ನಡುವೆ ಬಹಳ ಹಿಂದೆ ಘೋಷಣೆ ಆಗಿದ್ದ 'ಬಿಲ್ಲ ರಂಗ ಬಾಷ' ಸಿನಿಮಾ ಬಗ್ಗೆ ಕಿಚ್ಚ ಕ್ರೇಜಿ ಅಪ್‌ಡೇಟ್ ನೀಡಿದ್ದಾರೆ. ಇದೇ ವರ್ಷ ಸಿನಿಮಾ ಶುರುವಾಗುವುದಾಗಿ ಸುದೀಪ್ ಇತ್ತೀಚೆಗೆ ಅಭಿಮಾನಿಗಳ ಜೊತೆ ನಡೆಸಿದ ಟ್ವಿಟರ್ ಸಂಭಾಷಣೆಯಲ್ಲಿ ತಿಳಿಸಿದ್ದಾರೆ.
ಅನೂಪ್ ಭಂಡಾರಿ ಹಾಗೂ ಸುದೀಪ್ ಕಾಂಬಿನೇಷನ್‌ನಲ್ಲಿ ಐದಾರು ವರ್ಷಗಳ ಹಿಂದೆ 'ಬಿಲ್ಲ ರಂಗ ಬಾಷ' ಸಿನಿಮಾ ಘೋಷಣೆ ಆಗಿತ್ತು. 'ಅಶ್ವತ್ಥಾಮ' ಎನ್ನುವ ಮತ್ತೊಂದು ಚಿತ್ರವನ್ನು ಈ ಜೋಡಿ ಘೋಷಿಸಿತ್ತು. 'ರಂಗಿತರಂಗ' ಸೂಪರ್ ಹಿಟ್ ಬೆನ್ನಲ್ಲೇ ಸುದೀಪ್ ಜೊತೆ ಅನೂಪ್ ಕೈ ಜೋಡಿಸುತ್ತಾರೆ ಎನ್ನುವ ಸುದ್ದಿಯೇ ಸಖತ್ ಥ್ರಿಲ್ ಕೊಟ್ಟಿತ್ತು. ಕಾರಣಾಂತರಗಳಿಂದ ಅದು ತಡವಾಗುತ್ತಾ ಬಂತು. ಈ ನಡುವೆ ಇವೆರಡು ಸಿನಿಮಾಗಳನ್ನು ಬಿಟ್ಟು 'ವಿಕ್ರಾಂತ್ ರೋಣ' ಚಿತ್ರ ಮೂಡಿ ಬಂತು.

ಕೊರೋನಾ ಆರ್ಭಟದ ನಡುವೆಯೂ ಸಿನಿಮಾ ಚಿತ್ರೀಕರಣ ಮಾಡಿ ಒಂದೂವರೆ ವರ್ಷದ ಹಿಂದೆ ಬಿಡುಗಡೆ ಮಾಡಲಾಗಿತ್ತು. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗಿ ಸಿನಿಮಾ ಯಶಸ್ವಿ ಪ್ರದರ್ಶನ ಕಂಡಿತ್ತು. ಬಳಿಕ ಒಂದು ವರ್ಷ ವಿಶ್ರಾಂತಿ ಪಡೆದ ಸುದೀಪ್ ಇದೀಗ 'ಮ್ಯಾಕ್ಸ್' ಚಿತ್ರದಲ್ಲಿ ನಟಿಸುತ್ತಿದ್ದಾರೆ. 'ಮಹಾಬಲಿಪುರಂ'ನಲ್ಲಿ ಭರ್ಜರಿ ಸೆಟ್ ಹಾಕಿ ಸಿನಿಮಾ ಚಿತ್ರೀಕರಣ ನಡೆಸಲಾಗುತ್ತಿದೆ.
ತಮಿಳು ನಿರ್ದೇಶಕ ವಿಜಯ್ ಕಾರ್ತಿಕೇಯನ್ 'ಮ್ಯಾಕ್ಸ್' ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಕಲೈಪುಲಿ ಎಸ್. ತನು ಜೊತೆ ಸೇರಿ ಸುದೀಪ್ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ತಮಿಳಿನ ಚೇರನ್ ನಿರ್ದೇಶದಲ್ಲಿ ಒಂದು ಸಿನಿಮಾ, ಆರ್. ಚಂದ್ರು ಕಾಂಬಿನೇಷನ್‌ನಲ್ಲಿ ಮತ್ತೊಂದು ಸಿನಿಮಾ ಘೋಷಣೆ ಆಗಿದೆ. ಇದೆಲ್ಲದರ ಜೊತೆಗೆ ತಮ್ಮದೇ ನಿರ್ದೇಶನದಲ್ಲಿ ಸುದೀಪ್ ನಟಿಸೋ ಲೆಕ್ಕಾಚಾರದಲ್ಲಿದ್ದಾರೆ.
ಮತ್ತೊಂದು ಕಡೆ 'ವಿಕ್ರಾಂತ್ ರೋಣ' ಬಳಿಕ ಕಿಚ್ಚನಿಗಾಗಿ ಅನೂಪ್ ಭಂಡಾರಿ ಕಥೆ ಸಿದ್ಧಪಡಿಸುತ್ತಿದ್ದಾರೆ. ಇದೆಲ್ಲದರ ನಡುವೆ 'ಬಿಲ್ಲ ರಂಗ ಬಾಷ' ಸಿನಿಮಾ ಬಗ್ಗೆ ಸುದೀಪ್ ಪ್ರತಿಕ್ರಿಯಿಸಿದ್ದಾರೆ. ಇತ್ತೀಚೆಗೆ ಟ್ವಿಟ್ಟರ್‌ನಲ್ಲಿ Ask kiccha ಸೆಷನ್ ನಡೆಸಿದ್ದರು. ಈ ವೇಳೆ 'ಬಿಲ್ಲ ರಂಗ ಬಾಷ' ಬಗ್ಗೆ ಅಭಿಮಾನಿಯೊಬ್ಬರ ಪ್ರಶ್ನೆಗೆ 2024ರಲ್ಲೇ ಎಂದು ಸುದೀಪ್ ಉತ್ತರಿಸಿದ್ದಾರೆ. ಇದನ್ನು ಕೇಳಿ ಸುದೀಪಿಯನ್ಸ್ ಖುಷಿಯಾಗಿದ್ದಾರೆ.

ಟೈಟಲ್‌ನಿಂದಲೇ 'ಬಿಲ್ಲ ರಂಗ ಬಾಷ' ಸಿನಿಮಾ ಭಾರೀ ಕುತೂಹಲ ಮೂಡಿಸಿದೆ. ಇನ್ನು ಕಿಚ್ಚ- ಅನೂಪ್ ಕಾಂಬಿನೇಷನ್ ಬಗ್ಗೆಯೂ ನಿರೀಕ್ಷೆಯಿದೆ. ಈ ಬಗ್ಗೆ ನಿರ್ದೇಶಕ ಅನೂಪ್ ಭಂಡಾರಿ ಅವರನ್ನು ಫಿಲ್ಮಿಬೀಟ್ ಸಂಪರ್ಕಿಸಿತ್ತು. 'ಬಿಲ್ಲ ರಂಗ ಬಾಷ' ಸಿನಿಮಾ ಬಗ್ಗೆ ಕೇಳಿದ ಪ್ರಶ್ನೆಗೆ "ಸದ್ಯಕ್ಕೆ ಏನು ಹೇಳುವುದಿಲ್ಲ. ಸುದೀಪ್ ಸರ್ ಹೇಳಿದ್ದಾರೆ ಈ ವರ್ಷವೇ ಸಿನಿಮಾ ಶುರು ಅಂತ. ಕೆಲಸಗಳು ನಡೀತಿದೆ. ಚರ್ಚೆ ನಡೆಯಬೇಕಿದೆ. ಆ ಬಳಿಕವೇ ಆ ಬಗ್ಗೆ ಮಾತನಾಡಲು ಸಾಧ್ಯ. ಮಾತುಕತೆ ನಡೆಸಿ ಇನ್ನೊಂದು ತಿಂಗಳಲ್ಲಿ ಏನಾದರೂ ಅಪ್‌ಡೇಟ್ ಸಿಗಬಹುದು" ಎಂದು ಹೇಳಿದ್ದಾರೆ.
ಇತ್ತೀಚೆಗೆ ಜೆಪಿ ನಗರದ ದೇವಸ್ಥಾನವೊಂದರಲ್ಲಿ ಅನೂಪ್ ಭಂಡಾರಿ ಸಿನಿಮಾ ಸ್ಕ್ರಿಪ್ಟ್ ಪೂಜೆ ನಡೆಸಿದ್ದರು. ಆ ಬಗ್ಗೆ ಗಮನ ಸೆಳೆದಾಗ "ಅದು ಯಾವ ಸಿನಿಮಾ ಎನ್ನುವುದನ್ನು ಈಗಲೇ ಹೇಳೋಕೆ ಸಾಧ್ಯವಿಲ್ಲ. ಸುದೀಪ್ ಸರ್ ಸಿನಿಮಾ ಸ್ಟ್ರಿಪ್ಟ್ ಪೂಜೆ ಅಷ್ಟೆ ಅಂಥ ಮಾತ್ರ ಹೇಳಬಹುದು. ಮುಂದೆ ಎಲ್ಲ ಮಾಹಿತಿ ಸಿಗುತ್ತದೆ" ಎಂದು ಉತ್ತರಿಸಿದ್ದಾರೆ. ಒಟ್ಟಾರೆ ಸೆಟ್ಟೇರುವುದಕ್ಕೂ ಮುನ್ನವೇ 'ಬಿಲ್ಲ ರಂಗ ಬಾಷ' ಸಖತ್ ಹೈಪ್ ಕ್ರಿಯೇಟ್ ಮಾಡಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ತೆರೆಗೆ ಬರುವ ಸಾಧ್ಯತೆಯಿದೆ. ಅಭಿಮಾನಿಗಳಂತೂ ಅಪ್‌ಡೇಟ್‌ಗಾಗಿ ಕಾಯುತ್ತಿದ್ದಾರೆ.


Click it and Unblock the Notifications











