ತೆಲುಗು ಅಲ್ಲ, ತಮಿಳೂ ಅಲ್ಲ, ಕನ್ನಡದ ಈ ಹಳೇ ನಿರ್ದೇಶಕನ ಜತೆ ಸುದೀಪ್ ಮುಂದಿನ ಚಿತ್ರ; ಸುಳಿವು ಕೊಡ್ತು ಪೋಸ್ಟ್!
ಕಳೆದ ವರ್ಷ ಬಿಡುಗಡೆಗೊಂಡ ವಿಕ್ರಾಂತ್ ರೋಣ ಚಿತ್ರದ ಮೂಲಕ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಿದ ಕಿಚ್ಚ ಸುದೀಪ್ ತಮ್ಮ ಮುಂದಿನ ಚಿತ್ರವನ್ನು ಯಾವ ನಿರ್ದೇಶಕನ ಜತೆ ಮಾಡಲಿದ್ದಾರೆ ಎಂಬ ಪ್ರಶ್ನೆ ಮೂಡಿದೆ. ವಿಕ್ರಾಂತ್ ರೋಣ ಬಿಡುಗಡೆಗೊಂಡ ಬಳಿಕ ಸುದೀಪ್ ಮುಂದಿನ ಚಿತ್ರದ ಬಗ್ಗೆ ಯಾವುದೇ ಮಾಹಿತಿ ಸಹ ಹೊರಬಿದ್ದಿಲ್ಲ. ಹಲವಾರು ನಿರ್ದೇಶಕರ ಜತೆ ಸುದೀಪ್ ಸಿನಿಮಾ ಮಾಡ್ತಾರೆ ಎಂಬ ಸುದ್ದಿಗಳು ಹರಿದಾಡಿದರೂ ಯಾವುದೂ ಸಹ ಅಧಿಕೃತವಾಗಿ ಘೋಷಣೆಯಾಗಿಲ್ಲ.
ಕೆಲ ದಿನಗಳ ಹಿಂದೆ ತಮಿಳಿನ ಸೋಲೇ ಇಲ್ಲದ ನಿರ್ದೇಶಕ ವೆಂಕಟ್ ಪ್ರಭು ಜತೆ ಕಿಚ್ಚ ಸುದೀಪ್ ಮುಂದಿನ ಸಿನಿಮಾ ಮಾಡ್ತಾರೆ ಎಂಬ ಸುದ್ದಿ ಇತ್ತು. ಸುದೀಪ್ ಮನೆಗೆ ಭೇಟಿ ನೀಡಿದ್ದ ವೆಂಕಟ್ ಪ್ರಭು ಸುದೀಪ್ ಅವರನ್ನು ಅಪ್ಪಿ ನಿಂತಿರುವ ಫೋಟೊವೊಂದು ಸಹ ವೈರಲ್ ಆಗಿತ್ತು. ಇದನ್ನೆಲ್ಲಾ ಕಂಡ ಸುದೀಪ್ ಅಭಿಮಾನಿಗಳು ಹಾಗೂ ಸಿನಿ ರಸಿಕರು ವೆಂಕಟ್ ಪ್ರಭು ಜತೆ ಸುದೀಪ್ ಮುಂದಿನ ಸಿನಿಮಾ ಪಕ್ಕಾ ಎಂದು ಊಹಿಸಿದ್ದರು.

ಆದರೆ ಇದೀಗ ಕನ್ನಡದ ನಿರ್ದೇಶಕ ಹಂಚಿಕೊಂಡಿರುವ ಪೋಸ್ಟ್ ಒಂದು ಸುದೀಪ್ ಮುಂದಿನ ಚಿತ್ರದ ಸುಳಿವನ್ನು ನೀಡಿದೆ. ಹೌದು, ಆ ನಿರ್ದೇಶಕ ಬೇರೆ ಯಾರೂ ಅಲ್ಲ. ಸುದೀಪ್ ಕೊನೆಯ ಚಿತ್ರ ವಿಕ್ರಾಂತ್ ರೋಣಗೆ ಆಕ್ಷನ್ ಕಟ್ ಹೇಳಿದ್ದ ಅನುಪ್ ಭಂಡಾರಿ. ಹೌದು, ನಿನ್ನೆ ( ಮಾರ್ಚ್ 2 ) ಅನುಪ್ ಭಂಡಾರಿ ತಮ್ಮ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದರು. ಅನುಪ್ ಭಂಡಾರಿ ಸೋದರ ನಿರುಪ್ ಭಂಡಾರಿ ಅಣ್ಣನ ಹುಟ್ಟುಹಬ್ಬದ ಸಲುವಾಗಿ ಹಂಚಿಕೊಂಡ ಪೋಸ್ಟ್‌ನಲ್ಲಿ ಸುದೀಪ್ ಮುಂದಿನ ಚಿತ್ರದ ಸುಳಿವನ್ನು ನೀಡಿದ್ದಾರೆ.
ವಿಕ್ರಾಂತ್ ರೋಣ ಚಿತ್ರೀಕರಣದ ಸಂದರ್ಭದ ಫೋಟೊವೊಂದನ್ನು ಹಂಚಿಕೊಂಡಿರುವ ನಿರೂಪ್ ಭಂಡಾರಿ ಹುಟ್ಟುಹಬ್ಬದ ಶುಭಾಶಯಗಳು ಅನುಪ್ ಭಂಡಾರಿ, ಈ ವರ್ಷ 'ಬಿ ರಿಮಾರ್ಕೆಬಲಿ ಬ್ರಿಲ್ಲಿಯಂಟ್' ಎಂದು ಬರೆದುಕೊಂಡಿದ್ದಾರೆ. ಹೀಗೆ 'ಬಿ ರಿಮಾರ್ಕೆಬಲಿ ಬ್ರಿಲ್ಲಿಯಂಟ್' ಎಂದು ಬರೆದಿರುವ ನಿರುಪ್ ಭಂಡಾರಿ ಪರೋಕ್ಷವಾಗಿ ಈ ವರ್ಷ ಬಿಲ್ಲ ರಂಗ ಬಾಷಾ ತೆರೆಗೆ ಬರಲಿದೆ ಎಂಬುದನ್ನು ತಿಳಿಸಿದ್ದಾರೆ. ಹೌದು, 'ಬಿ ರಿಮಾರ್ಕೆಬಲಿ ಬ್ರಿಲ್ಲಿಯಂಟ್' ಈ ಸಾಲಿನ ಪ್ರತಿ ಪದದ ಮೊದಲ ಅಕ್ಷರಗಳನ್ನು ತೆಗೆದುಕೊಂಡರೆ "BRB" ಆಗಲಿದ್ದು, BRB ಎಂದರೆ ಬಿಲ್ಲ ರಂಗ ಬಾಷಾ ಎಂದರ್ಥ.
ಕೇವಲ ನಿರುಪ್ ಭಂಡಾರಿ ಮಾತ್ರವಲ್ಲದೇ ಅನುಪ್ ಭಂಡಾರಿ ಸಹ ಇದೇ ರೀತಿ ಪೋಸ್ಟ್ ಮೂಲಕ ಈ ವರ್ಷ ಬಿಲ್ಲ ರಂಗ ಬಾಷಾ ತೆರೆಗೆ ಬರಲಿದೆ ಎಂಬುದನ್ನು ತಿಳಿಸಿದ್ದಾರೆ. ತಮ್ಮ ಹುಟ್ಟುಹಬ್ಬಕ್ಕೆ ಶುಭ ಕೋರಿದವರಿಗೆ ಧನ್ಯವಾದ ತಿಳಿಸಲು ಪೋಸ್ಟ್ ಹಂಚಿಕೊಂಡ ಅನುಪ್ ಭಂಡಾರಿ "ಬಿ ಗಿಯಾಗ್ ಕೂತ್ಕೊಳಿ, ರಂ ಪಾಟ ಶುರುವಾಗೋಕೆ ಸ್ವಲ್ಪ ಸಮಯ ಬೇಕು, ಬಾ ಡೂಟದ್ ಜತೆ ಬರ್ತಿವಿ. ಅಲ್ಲಿವರೆಗೂ ಎಂದಿನ ಹಾಗೆ ತಾಳ್ಮೆಯಿಂದ ಇರಿ. ಬಿ ರೈಟ್ ಬ್ಯಾಕ್' ಎಂದು ಬರೆದುಕೊಂಡಿದ್ದಾರೆ.

ಈ ಪೋಸ್ಟ್‌ನಲ್ಲಿ ಕನ್ನಡದ ಸಾಲುಗಳ ಮೊದಲ ಅಕ್ಷರಗಳನ್ನು ಜೋಡಿಸಿದರೂ ಹಾಗೂ ಬಿ ರೈಟ್ ಬ್ಯಾಕ್‌ನ ಮೊದಲ ಅಕ್ಷರಗಳನ್ನು ತೆಗೆದುಕೊಂಡರೂ ಬಿಲ್ಲ ರಂಗ ಬಾಷಾ ಎಂಬ ಅರ್ಥ ಬರಲಿದ್ದು, ಸುದೀಪ್ ಮುಂದಿನ ಚಿತ್ರ ಈ ವರ್ಷವೇ ಶುರುವಾಗಲಿದೆ ಎಂಬುದನ್ನು ಪರೋಕ್ಷವಾಗಿ ತಿಳಿಸಿದ್ದಾರೆ. ಸದ್ಯ ಕಿಚ್ಚ ಸುದೀಪ್ ವಿಶೇಷ ಪಾತ್ರ ನಿರ್ವಹಿಸಿರುವ ಆರ್ ಚಂದ್ರು ಹಾಗೂ ರಿಯಲ್ ಸ್ಟಾರ್ ಉಪೇಂದ್ರ ಕಾಂಬಿನೇಶನ್‌ನ ಕಬ್ಜ ಚಿತ್ರ ತೆರೆಗೆ ಬರಲು ಸಿದ್ಧವಾಗಿದ್ದು, ಸುದೀಪ್ ಸಿಸಿಎಲ್ ಕ್ರಿಕೆಟ್ ಟೂರ್ನಿಯಲ್ಲಿ ನಿರತರಾಗಿದ್ದಾರೆ. ಈ ಟೂರ್ನಿ ಮುಗಿದ ಬಳಿಕ ಸುದೀಪ್ ಮುಂದಿನ ಚಿತ್ರದ ಅಪ್‌ಡೇಟ್ ಹೊರ ಬೀಳಲಿದೆ.


Click it and Unblock the Notifications











