ಒಂಟಿ ಟ್ರಿಪ್: ವಿಯೆಟ್ನಾಂನಲ್ಲಿ ಕಿರುತೆರೆ ನಟಿ ಅನುಪಮಾ ಗೌಡ ಜಾಲಿ ಮೂಡ್
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿದ್ದ 'ಅಕ್ಕ' ಧಾರಾವಾಹಿ ಮೂಲಕ ಫೇಮಸ್ ಆದ ನಟಿ ಅನುಪಮಾ ಗೌಡ. 'ಅಕ್ಕ' ಮುಗಿದ ಬಳಿಕ 'ಬಿಗ್ ಬಾಸ್' ಕಾರ್ಯಕ್ರಮದಲ್ಲಿ ಅನುಪಮಾ ಗೌಡ ಸ್ಪರ್ಧಿಸಿದ್ದರು. 'ಬಿಗ್ ಬಾಸ್' ಮನೆಯೊಳಗಿದ್ದಾಗ ಸಿಕ್ಕಾಪಟ್ಟೆ ಸದ್ದು-ಸುದ್ದಿ ಮಾಡಿದ್ದ ಅನುಪಮಾ ಗೌಡ 'ಮಜಾ ಭಾರತ' ಶೋನಲ್ಲಿ ನಿರೂಪಣೆಯ ಜವಾಬ್ದಾರಿ ವಹಿಸಿಕೊಂಡರು.
ಕಿರುತೆರೆ ಲೋಕದಲ್ಲಿ ಸಖತ್ ಬಿಜಿಯಾಗಿರುವ ಅನುಪಮಾ ಗೌಡ ಇದೀಗ ಕೊಂಚ ಬಿಡುವು ಮಾಡಿಕೊಂಡು ವಿದೇಶಕ್ಕೆ ಹಾರಿದ್ದಾರೆ. ಕೆಲಸದಿಂದ ಸ್ವಲ್ಪ ಬ್ರೇಕ್ ಪಡೆದುಕೊಂಡಿರುವ ಅನುಪಮಾ ಗೌಡ ವಿಯೆಟ್ನಾಂಗೆ ಫ್ಲೈಟ್ ಹತ್ತಿದ್ದಾರೆ.
ಫ್ಯಾಮಿಲಿ ಮತ್ತು ಫ್ರೆಂಡ್ಸ್ ಜೊತೆಗೆ ಅನುಪಮಾ ಗೌಡ ಫಾರಿನ್ ಟ್ರಿಪ್ ಗೆ ಹೋಗಿರಬಹುದು ಎಂದುಕೊಳ್ಳಬೇಡಿ. ವಿಯೆಟ್ನಾಂಗೆ ನಟಿ ಅನುಪಮಾ ಗೌಡ ಒಂಟಿಯಾಗಿ ಹೋಗಿದ್ದಾರೆ. ಗೊತ್ತು ಗುರಿಯಿಲ್ಲದ ದೇಶದಲ್ಲಿ ಸೋಲೋ ಟ್ರಿಪ್ ಮಾಡುತ್ತಿದ್ದಾರೆ ಅನುಪಮಾ ಗೌಡ. ಮುಂದೆ ಓದಿರಿ...

ವಿಯೆಟ್ನಾಂನಲ್ಲಿ ಅನುಪಮಾ ಗೌಡ
ಇತ್ತೀಚೆಗೆಷ್ಟೇ ಹಿಮಾಚಲ ಪ್ರದೇಶವನ್ನು ಒಂದು ರೌಂಡ್ ಹೊಡೆದುಕೊಂಡು ಬಂದಿದ್ದ ಅನುಪಮಾ ಗೌಡ ಇದೀಗ ವಿಯೆಟ್ನಾಂಗೆ ಹಾರಿದ್ದಾರೆ. ಒಂಟಿಯಾಗಿ ವಿಯೆಟ್ನಾಂಗೆ ಹೋಗಿರುವ ಅನುಪಮಾ ಗೌಡ, ಅಲ್ಲಿ ಖುಷಿ ಖುಷಿಯಾಗಿ ಕಾಲ ಕಳೆಯುತ್ತಿದ್ದಾರೆ.

ಫೋಟೋಗಳನ್ನು ಹಂಚಿಕೊಳ್ಳುತ್ತಿರುವ ಅನುಪಮಾ ಗೌಡ
ಅನುಪಮಾ ಗೌಡ ಈ ರೀತಿ ಒಂಟಿಯಾಗಿ ಟ್ರಿಪ್ ಮಾಡ್ತಿರೋದು ಇದೇ ಮೊದಲು. ತಮ್ಮ ಮೊಟ್ಟ ಮೊದಲ ಸೋಲೋ ಟ್ರಿಪ್ ಅನುಭವ ಮತ್ತು ಫೋಟೋಗಳನ್ನು ಅನುಪಮಾ ಗೌಡ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಳ್ಳುತ್ತಿದ್ದಾರೆ.

ಅನುಭವ ಹಂಚಿಕೊಂಡ ಅನುಪಮಾ ಗೌಡ
''ಇದು ನನ್ನ ಮೊಟ್ಟ ಮೊದಲ ಸೋಲೋ ಟ್ರಿಪ್. ಒಂಟಿಯಾಗಿ ಪ್ರಯಾಣ ಮಾಡುವ ಐಡಿಯ ಮೊದಲು ಭಯಾನಕ ಅನಿಸಿದರೂ, ಪ್ರಯತ್ನ ಮಾಡಲು ನಿರ್ಧರಿಸಿದೆ. ವಿಯೆಟ್ನಾಂಗೆ ಹೋಗಲು ಮುಂದಾದೆ. ಎಲ್ಲವನ್ನೂ ನಾನೊಬ್ಬಳೇ ಪ್ಲಾನ್ ಮಾಡಿದೆ. ಈ ಸುಂದರ ತಾಣದಲ್ಲಿ ಓಡಾಡುತ್ತ, ಹೊಸ ಸ್ನೇಹಿತರನ್ನು ಮಾಡಿಕೊಂಡಿದ್ದೇನೆ. ಅವರೊಂದಿಗೆ ಹೊಸ ವರ್ಷದ ಸಂಭ್ರಮ'' ಎಂದು ಇನ್ಸ್ಟಾಗ್ರಾಮ್ ನಲ್ಲಿ ಅನುಪಮಾ ಗೌಡ ಬರೆದುಕೊಂಡಿದ್ದಾರೆ.

ಹಿಂದಿ ಸಿನಿಮಾದಲ್ಲಿ ಅನುಪಮಾ ಗೌಡ
'ಆ ಕರಾಳ ರಾತ್ರಿ', 'ತ್ರಯಂಬಕಂ' ಮುಂತಾದ ಚಿತ್ರಗಳಲ್ಲಿ ನಟಿಸಿದ ಅನುಪಮಾ ಗೌಡ ಇದೀಗ ಹಿಂದಿಯ ಇಂಡಿಪೆಂಡೆಂಟ್ ಫೀಚರ್ ಫಿಲ್ಮ್ ನಲ್ಲಿ ಅಭಿನಯಿಸಲು ತಯಾರಾಗಿದ್ದಾರೆ. 'ಊರ್ವಿ' ಖ್ಯಾತಿಯ ನಿರ್ದೇಶಕ ಪ್ರದೀಪ್ ವರ್ಮಾ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.


Click it and Unblock the Notifications











