'ತ್ರಯಂಬಕಂ' ಚಿತ್ರದಲ್ಲಿ ಅನುಪಮಾ ಗೌಡ ಪಾತ್ರವೇನು.?
ಕಿರುತೆರೆ ನಟಿ ಅನುಪಮಾ ಗೌಡ ಸ್ಯಾಂಡಲ್ ವುಡ್ ಗೆ ಪದಾರ್ಪಣೆ ಮಾಡಿ ಭಿನ್ನ ವಿಭಿನ್ನ ಪಾತ್ರಗಳನ್ನು ಪೋಷಿಸುತ್ತಾ ಬರುತ್ತಿದ್ದಾರೆ. 'ಅಕ್ಕ' ಸೀರಿಯಲ್ ನಲ್ಲಿ ಡಬಲ್ ರೋಲ್ ನಿರ್ವಹಿಸಿದ್ದ ಅನುಪಮಾ ಗೌಡ, 'ಆ ಕರಾಳ ರಾತ್ರಿ' ಚಿತ್ರದಲ್ಲಿ ಬಜಾರಿ ಹಳ್ಳಿ ಹುಡುಗಿಯಾಗಿ ನಟಿಸಿದ್ದರು.
ಇದೀಗ ನಟಿ ಅನುಪಮಾ ಗೌಡ, ನಿರ್ದೇಶಕ ದಯಾಳ್ ಪದ್ಮನಾಭನ್ ಆಕ್ಷನ್ ಕಟ್ ಹೇಳಿರುವ 'ತ್ರಯಂಬಕಂ' ಎಂಬ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.
'ತ್ರಯಂಬಕಂ' ಚಿತ್ರದಲ್ಲಿ ನಟಿ ಅನುಪಮಾ ಗೌಡ ಪತ್ರಕರ್ತೆಯ ಪಾತ್ರಕ್ಕೆ ಜೀವ ತುಂಬಿದ್ದಾರೆ. ಸಿನಿಮಾದಲ್ಲಿ ನಿವೃತ್ತ ಮಿಲಿಟರಿ ಆಫೀಸರ್ ಮಗಳಾಗಿ, ಪತ್ರಕರ್ತೆಯಾಗಿ ಅನುಪಮ ಗೌಡ ಮಿಂಚಲಿದ್ದಾರೆ.

ಐದು ಸಾವಿರ ವರ್ಷಗಳ ಹಿಂದೆ ನಡೆದ ಒಂದು ಘಟನೆಯ ಸುತ್ತ ಕುತೂಹಲ ಇರುವ ಪಾತ್ರಗಳ ಕುರಿತು 'ತ್ರಯಂಬಕಂ' ಚಿತ್ರದ ಕಥೆ ಹೆಣೆಯಲಾಗಿದೆ. ಈ ಚಿತ್ರದಲ್ಲಿ ಮೂರು ಪ್ರಮುಖ ಪಾತ್ರಗಳಿದ್ದು, ಅನುಪಮ ಗೌಡ ಜೊತೆಗೆ ರಾಘವೇಂದ್ರ ರಾಜಕುಮಾರ್ ಮತ್ತು ಆರ್.ಜೆ.ರೋಹಿತ್ ಕೂಡ ನಟಿಸಿದ್ದಾರೆ.
'ತ್ರಯಂಬಕಂ' ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ U ಸರ್ಟಿಫಿಕೇಟ್ ಸಿಕ್ಕಿದ್ದು, ಮಾರ್ಚ್ 29ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.


Click it and Unblock the Notifications











