9 ವರ್ಷಗಳ ನಂತರ ರಾಮಾ ರಾಮಾ ರೇ ಬಗ್ಗೆ ಮಾತನಾಡಿದ ಅನುರಾಗ್ ಕಶ್ಯಪ್, ಬೆರಗಾದ ನಿರ್ದೇಶಕ ಸತ್ಯಪ್ರಕಾಶ್..!
ನೂರು -ನೂರಿಪ್ಪತ್ತೈದು ಚಿತ್ರಕ್ಕೆ ಹೇಗೋ ಸಬ್ಸಿಡಿ ಕೊಡ್ತಾರೆ ಎನ್ನುವ ಆಲೋಚನೆಯಲ್ಲಿ ಅನೇಕರು ಇಲ್ಲಿ ಸಂತೆ ಹೊತ್ತಿಗೆ ಮೂರು ಮೊಳ ನೇಯ್ದಂತೆ ಸಿನಿಮಾವನ್ನು ಮಾಡುತ್ತಾರೆ. ಸರ್ಕಾರದ ಸಹಾಯಧನ ಕಬಳಿಸುವ ಏಕೈಕ ಉದ್ದೇಶ ಇವರ ಚಿತ್ರಗಳ ಹಿಂದೆ ಇರುತ್ತೆ. ಆದರೆ. ಇದಕ್ಕೆ ಅಪವಾದ ಎನ್ನುವಂತೆ ಚಿತ್ರರಂಗದಲ್ಲಿ ಅಲ್ಲೊಬ್ಬರು .. ಇಲ್ಲೊಬ್ಬರು .. ಸಿನಿಮಾವನ್ನೇ ಉಸಿರಾಗಿಸಿಕೊಳ್ಳುತ್ತಾರೆ. ಯಾವುದೇ ಅಬ್ಬರವಿಲ್ಲದೆ, ಯಾವ ಪ್ರಚಾರದ ಗೀಳಿಲ್ಲದೆ, ತಮ್ಮಷ್ಟಕ್ಕೆ ತಾವು ಕೆಲಸ ಮಾಡುತ್ತಾ ಮುಂದುವರೆಯುತ್ತಾರೆ.
ಒಂದೊಳ್ಳೆಯ ಸದಭಿರುಚಿಯ ಚಿತ್ರವನ್ನು ಮಾಡುವುದೇ ಇವರ ಬದುಕಿನ ಗುರಿಯಾಗಿರುತ್ತೆ. ಗೆಲುವು -ಸೋಲು .. ಫಲಿತಾಂಶ ಏನೇ ಇರಲಿ ಒಂದೊಳ್ಳೆಯ ಚಿತ್ರ ಮಾಡಿರುವ ತೃಪ್ತಿ ಇವರಿಗೆ ಯಾವಾಗಲೂ ಇರುತ್ತೆ. ತಮ್ಮ ಚಿತ್ರಕ್ಕೆ ಇಂದಲ್ಲ, ನಾಳೆ ಸಿಗಬೇಕಾದ ಮನ್ನಣೆ ಸಿಗುತ್ತೆ ಎನ್ನುವ ವಿಶ್ವಾಸವೂ ಇವರಲ್ಲಿರುತ್ತೆ. ಆ ಪೈಕಿ ಡಿ. ಸತ್ಯ ಪ್ರಕಾಶ್ ಕೂಡ ಒಬ್ಬರು.

ಹೌದು. ಸತ್ಯ ಪ್ರಕಾಶ್ .. ರಾಮಾ ರಾಮಾ ರೇ .. ಒಂದಲ್ಲಾ ಎರಡಲ್ಲಾ .. ಅಂತಹ ಹೊಸ ಅಲೆ ಸಿನಿಮಾಗಳನ್ನು ಕನ್ನಡಿಗರ ಮಡಿಲಿಗೆ ಹಾಕಿದ ನಿರ್ದೇಶಕ. ಇವರಲ್ಲಿನ ಪ್ರತಿಭೆಗೆ ಮನ ಸೋತು ಡಾ.ಪುನೀತ್ ರಾಜ್ ಕುಮಾರ್ ಖುದ್ದು ಇವರ ಜೊತೆ ಕೈ ಜೋಡಿಸಿದ್ದರು. ಮ್ಯಾನ್ ಆಫ್ ದಿ ಮ್ಯಾಚ್ ಚಿತ್ರವನ್ನು ಮಾಡಿದ್ದರು.
ಇಂಥಾ ಸತ್ಯ ಪ್ರಕಾಶ್ ಅವರಿಗೆ ಈಗ ಭಾರತದ ಖ್ಯಾತ ನಿರ್ದೇಶಕರಲ್ಲಿ ಒಬ್ಬರಾದ ಅನುರಾಗ್ ಕಶ್ಯಪ್ ಸಲಾಂ ಹೊಡೆದಿದ್ದಾರೆ. ಈ ಮೂಲಕ ಸತ್ಯ ಪ್ರಕಾಶ್ ಅವರನ್ನೇ ಅಚ್ಚರಿಗೆ ದೂಡಿದ್ದಾರೆ.
ಹೌದು, ರಾಮಾ ರಾಮಾ ರೇ.. ಸರಿ ಸುಮಾರು 09 ವರ್ಷಗಳ ಹಿಂದೆ ತೆರೆಗೆ ಬಂದ ಚಿತ್ರ. ಸತ್ಯ ಪ್ರಕಾಶ್ ನಿರ್ದೇಶನದ ಚೊಚ್ಚಲ ಚಿತ್ರ ಇದು. ಪ್ರೇಕ್ಷಕರ ಮತ್ತು ವಿಮರ್ಷಕರ ಪ್ರೀತಿಯನ್ನು ಗಳಿಸಿದ್ದ ಈ ಚಿತ್ರ ಆ ಕಾಲಕ್ಕೆ ಬೇರೆ ಭಾಷೆಯವರನ್ನು ಕೂಡ ನಿಬ್ಬೇರಗಾಗಿಸಿತ್ತು. ಇದಕ್ಕೆ ಕೈಗನ್ನಡಿ ಎನ್ನುವಂತೆ ತೆಲುಗಿನಲ್ಲಿ 'ಆಟಗದರ ಶಿವ' ಹೆಸರಿನಲ್ಲಿ ಈ ಚಿತ್ರ ರಿಮೇಕ್ ಕೂಡ ಆಗಿತ್ತು.
ಇನ್ನು.. ಕೊರೊನಾದಿಂದ ಜಗತ್ತೇ ಕಂಗಾಲಾದ ಸಮಯದಲ್ಲಿ ನಮ್ಮ ಕನ್ನಡದ ರಾಮಾ ರಾಮಾ ರೇ ಚಿತ್ರವನ್ನು ಹತ್ತು ಲಕ್ಷಕ್ಕೂ ಅಧಿಕ ಜನ ಯೂಟ್ಯೂಬ್‌ನಲ್ಲಿ ನೋಡಿದ್ದರು. ಚಿತ್ರಮಂದಿರದಲ್ಲಿ ಚಿತ್ರವನ್ನು ನೋಡದಿದ್ದಕ್ಕೆ ಪಶ್ಚಾತಾಪವನ್ನು ಕೂಡ ಪಟ್ಟಿದ್ದರು. ಎಷ್ಟೋ ಜನ ಯೂಟ್ಯೂಬ್‌ನಲ್ಲಿ ಚಿತ್ರವನ್ನು ನೋಡಿ ಚಿತ್ರತಂಡಕ್ಕೆ ಹಣವನ್ನು ಕೂಡ ಕಳುಹಿಸಿದ್ದರು.
ವಾಸುಕಿ ವೈಭವ ಸಂಗೀತ ನಿರ್ದೇಶನದಲ್ಲಿ ಬಂದಿದ್ದ ಈ ಚಿತ್ರದ ಹಾಡುಗಳು ಇಂದಿಗೂ ಕೂಡ ಜನಪ್ರಿಯ. ಅದರಲ್ಲಿಯೂ ಕೇಳು ಕೃಷ್ಣ .. ಹೇಳು ಪಾರ್ಥ .. ಹಾಡನ್ನು ಅನೇಕರು ಇವತ್ತು ಕೂಡ ಗುನುಗುತ್ತಲೇ ಇರುತ್ತಾರೆ. ಪ್ರೇಕ್ಷಕರಿಂದ ಸಿಕ್ಕ ಮತ್ತು ಸಿಗುತ್ತಿರುವ ಈ ಪ್ರೀತಿಯಿಂದ ಆಗಾಗ ಮೂಕವಿಸ್ಮಿತಗೊಳ್ಳುವ ಸತ್ಯಪ್ರಕಾಶ್ ತಮ್ಮ ಚಿತ್ರಕ್ಕೆ ಸಿಕ್ಕ ಈ ಜನಬೆಂಬಲದ ಬಗ್ಗೆ ತಮಗೆ ತಾವು ಅನೇಕ ಬಾರಿ ಪ್ರಶ್ನೆ ಮಾಡಿಕೊಂಡಿದ್ದು ಇದೆ.
ಹೀಗಿರುವಾಗ ಇದೀಗ ಈ ಚಿತ್ರದ ಕುರಿತು ಅನುರಾಗ್ ಕಶ್ಯಪ್ ಅಭಿಮಾನದ ಮಾತುಗಳನ್ನಾಡಿದ್ದಾರೆ. ಹೌದು, ಭಾರತೀಯ ಚಿತ್ರರಂಗಕ್ಕೆ ಸಂಬಂಧಿಸಿದಂತೆ 'ದಿ ಹಿಂದೂ'ಗೆ ನೀಡಿದ ಸಂದರ್ಶನದಲ್ಲಿ ಹತ್ತು ಹಲವು ವಿಚಾರಗಳ ಕುರಿತು ಮಾತನಾಡಿರುವ ಅನುರಾಗ್ ಕಶ್ಯಪ್ ಮಾತನಾಡುತ್ತಾ ಮಾತನಾಡುತ್ತಾ 'ರಾಮಾ ರಾಮಾ ರೇ' ಚಿತ್ರವನ್ನು ನೆನಪಿಸಿಕೊಂಡಿದ್ದಾರೆ.
ತೆಲುಗು, ತಮಿಳು, ಮಲಯಾಳಂ ಚಿತ್ರರಂಗದಲ್ಲಿ ಆಗುತ್ತಿರುವ ಬದಲಾವಣೆಗಳು ಅಲ್ಲಿ ಮಾಡಲಾಗುತ್ತಿರುವ ತಪ್ಪುಗಳ ಕುರಿತು ವಿಶ್ಲೇಷಣೆ ಮಾಡುತ್ತಾ ಮಾತನಾಡಿರುವ ಅನುರಾಗ್ ಕಶ್ಯಪ್ ಈಗೀಗ ನಾನು ಕನ್ನಡ ಚಿತ್ರಗಳನ್ನು ಹೆಚ್ಚು ನೋಡಿಲ್ಲ ಎಂದು ಹೇಳಿದ್ದಾರೆ. ನಾನು ನೋಡಿದ ಇತ್ತೀಚೆನ ಅತ್ಯುತ್ತಮ ಕನ್ನಡ ಚಿತ್ರ ಅಂದರೆ ಅದು ''ರಾಮಾ ರಾಮಾ ರೇ'' ಎಂದು ಹೇಳಿದ್ದಾರೆ.
ಸಹಜವಾಗಿ ಯಾರಿಗೇ ಆಗಲಿ 08-09 ವರ್ಷವಾದರೂ ಕೂಡ ತಮ್ಮ ಕೃತಿಯ ಕುರಿತು ಯಾರಾದರೂ ಮಾತನಾಡಿದರೆ ಖುಷಿಯಾಗಿಯೇ ಆಗುತ್ತೆ. ಅದರಲ್ಲಿಯೂ ಅನುರಾಗ್ ಕಶ್ಯಪ್ ಅವರಂತಹ ನಿರ್ದೇಶಕ ತಮ್ಮ ಚಿತ್ರವನ್ನು ಮೆಚ್ಚಿಕೊಂಡಿದ್ದಾರೆ ಎಂದರೆ ಅದು ಆ ನಿರ್ದೇಶಕನ ಪಾಲಿಗೆ ಹೆಮ್ಮೆಯ ಮತ್ತು ಗೌರವದ ವಿಚಾರ. ಇದಕ್ಕೆ ಕೈಗನ್ನಡಿ ಎಂಬಂತೆ ಸತ್ಯ ಪ್ರಕಾಶ್ ಕೂಡ ಅನುರಾಗ್ ಕಶ್ಯಪ್ ಮಾತುಗಳಿಂದ ಸದ್ಯ ಖುಷಿಯಾಗಿದ್ದಾರೆ. ತಮ್ಮ ಖುಷಿಯನ್ನು 'ಫಿಲ್ಮಿ ಬೀಟ್ ಕನ್ನಡ'ದ ಜೊತೆ ಹಂಚಿಕೊಂಡಿದ್ದಾರೆ.
ಈ ಕುರಿತು ಫಿಲ್ಮಿ ಬೀಟ್ ಕನ್ನಡ ಜೊತೆ ಮಾತನಾಡಿರುವ ಸತ್ಯ ಪ್ರಕಾಶ್ '' ಅನುರಾಗ್ ಕಶ್ಯಪ್ ನಮ್ಮ ಚಿತ್ರವನ್ನು ನೋಡಿದ್ದಾರೆ, ಅದರ ಬಗ್ಗೆ ಮಾತನಾಡಿದ್ದಾರೆ ಎನ್ನುವ ಚಿಕ್ಕ ಸುಳಿವು ಕೂಡ ನನಗೆ ಇರಲಿಲ್ಲ, ಮೇ 15ರಂದು ಯೂಟ್ಯೂಬ್‌ನಲ್ಲಿ ಪ್ರಸಾರವಾದ ಸಂದರ್ಶನದ ತುಣುಕನ್ನು ನನಗೆ ಹೀಗೆ ಪರಿಚಯಸ್ಥರು ಕಳಿಸಿದ್ದರು, ಆ ಸಂದರ್ಶನ ನೋಡಿ ನನಗೆ ಒಂದು ಕ್ಷಣ ಆಶ್ಚರ್ಯವಾಯ್ತು'' ಎಂದು ಹೇಳಿದ್ದಾರೆ.
ಎಲ್ಲ ಬಿಟ್ಟು ನಮ್ಮ ಚಿತ್ರ ಯಾಕೆ ನೋಡಿದರು ಗೊತ್ತಿಲ್ಲ.
''ಒಂದು ಚಿತ್ರದ ಹಿಂದೆ ಹಲವರ ಶ್ರಮ ಇರುತ್ತೆ ಈ ತರಹದ ಮೆಚ್ಚುಗೆಯ ಮಾತುಗಳು ಇಂತಹ ನಿರ್ದೇಶಕರಿಂದ ಬಂದಾಗ ನಮ್ಮ ಜವಾಬ್ಧಾರಿ ಕೂಡ ಹೆಚ್ಚಾಗುತ್ತೆ, ನಮ್ಮ ಚಿತ್ರವನ್ನು ಅನುರಾಗ್ ಕಶ್ಯಪ್ ಎಲ್ಲಿ ನೋಡಿದರು ? ಅದ್ಹೇಗೆ ಬೇರೆ ಎಲ್ಲ ಚಿತ್ರ ಬಿಟ್ಟು ನಮ್ಮ ಚಿತ್ರ ನೋಡಿದರು ಎನ್ನುವುದೇ ನನಗೆ ಗೊತ್ತಾಗುತ್ತಿಲ್ಲ, ಕಳೆದ ಎರಡು ಮೂರು ದಿನಗಳಿಂದ ನಾನು ಇದೇ ಪ್ರಶ್ನೆಗೆ ಉತ್ತರ ಹುಡುಕುವ ಪ್ರಯತ್ನ ಮಾಡುತ್ತಿದ್ದೇನೆ'' ಎಂದು ಸತ್ಯ ಪ್ರಕಾಶ್ ಹೇಳಿದ್ದಾರೆ.
ಒಂದಿಲ್ಲೊಂದು ದಿನ ನಮ್ಮ ಕಥೆ ತಲುಪುತ್ತೆ
ಮುಂದುವರೆದು ಮಾತನಾಡಿರುವ ಸತ್ಯ ಪ್ರಕಾಶ್ ''08 09 ವರ್ಷದ ಹಿಂದಿನ ಚಿತ್ರವನ್ನು ಸಂದರ್ಶನದಲ್ಲಿ ನೆನಪು ಮಾಡಿಕೊಂಡಿದ್ದು ಖುಷಿ ನೀಡಿದೆ, ಕಥೆಯನ್ನು ನಂಬಿ ಸಿನಿಮಾ ಮಾಡಿದರೆ, ಆ ಕ್ಷಣಕ್ಕೆ ಅದು ಎಲ್ಲರನ್ನು ತಲುಪದಿರಬಹುದು ಆದರೆ ಒಂದಿಲ್ಲೊಂದು ದಿನ ಅದು ಎಲ್ಲರಿಗೆ ತಲುಪಿಯೇ ತಲುಪುತ್ತೆ ಎನ್ನುವ ವಿಶ್ವಾಸ ನನಗೆ ಮೊದಲಿಂದ ಇತ್ತು. ಆ ವಿಶ್ವಾಸ ಈಗ ಇನ್ನೂ ಹೆಚ್ಚಾಗಿದೆ'' ಎಂದು ಹೇಳಿದ್ದಾರೆ.
ಒಳ್ಳೆಯ ಕಂಟೆಂಟ್‌ಗಳು ದಿನಗಳದಂತೆ ಇನ್ನು ಪ್ರಭಾವ ಬೀರುತ್ತವೆ
'' ಸಿನಿಮಾ ನಮ್ಮೆಲ್ಲರನ್ನು ಮೀರಿದ್ದು, ಒಳ್ಳೆಯ ಕಂಟೆಂಟ್‌ಗಳನ್ನೊಂದಿರುವ ಚಿತ್ರಗಳು ದಿನಗಳು ಉರುಳಿದಂತೆ ಹೆಚ್ಚೆಚ್ಚು ಶಕ್ತಿಶಾಲಿಯಾಗುತ್ತವೆ, ಪ್ರಭಾವ ಬೀರಲು ಶುರು ಮಾಡುತ್ತವೆ, ಹೋಗುತ್ತಾ ಹೋಗುತ್ತಾ ಪ್ರೇಕ್ಷಕರನ್ನು ಆವರಿಸಿಕೊಳ್ಳುತ್ತವೆ, ಅನುರಾಗ್ ಕಶ್ಯಪ್ ಅವರಂತಹ ನಿರ್ದೇಶಕರು ನಮ್ಮ ಚಿತ್ರವನ್ನು ಮೆಚ್ಚಿಕೊಂಡಿದ್ದಾರೆ ಅಂದರೆ ಅದು ಅವರ ದೊಡ್ಡ ಗುಣ'' ಸತ್ಯ ಪ್ರಕಾಶ್ ಫಿಲ್ಮಿಬೀಟ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಅನುರಾಗ್ ಕಶ್ಯಪ್ ಸಂಪರ್ಕ ಮಾಡುವ ಪ್ರಯತ್ನ
''ಅನುರಾಗ್ ಕಶ್ಯಪ್ ಅವರ ಈ ಮಾತುಗಳನ್ನು ಕೇಳಿ ನನಗೆ ಆಶ್ಚರ್ಯವಾಗಿದೆ. ಹೀಗಾಗಿ ಹೇಗಾದರೂ ಮಾಡಿ ಅವರನ್ನು ಸಂಪರ್ಕಿಸಿ ಅವರಿಗೊಂದು ಧನ್ಯವಾದ ಹೇಳಬೇಕೆಂದುಕೊಂಡಿದ್ದೇನೆ, ಈ ದಿಸೆಯಲ್ಲಿ ಪ್ರಯತ್ನ ಕೂಡ ನಾನು ಮಾಡುತ್ತಿದ್ದು ಹೀಗೆ ಒಬ್ಬರಿಂದ ಅವರ ನಂಬರ್ ಕಲೆ ಹಾಕಿದ್ದಾನೆ, ಮೆಸೆಜ್ ಕೂಡ ಮಾಡಿದ್ದೇನೆ, ಆ ನಂಬರ ನಿಜಕ್ಕೂ ಅವರದ್ದೇನಾ ಗೊತ್ತಿಲ್ಲ ಆದರೆ ಸದ್ಯಕ್ಕೆ ನಾನು ಅವರಿಗೆ ಕಳುಹಿಸಿದ ಮೆಸೇಜ್‌ಗೆ ಅವರಿಂದ ಯಾವುದೇ ಪ್ರತ್ಯುತ್ತರ ಬಂದಿಲ್ಲ'' ಎಂದು ಸತ್ಯ ಪ್ರಕಾಶ್ ಹೇಳಿದ್ಧಾರೆ.


Click it and Unblock the Notifications











