'KGF'- 3 ನಿರ್ದೇಶನದಿಂದ ಒಂದು ಕಾಲು ಹೊರಗಿಟ್ಟ ನೀಲ್: ಹಾಗಾದ್ರೆ ಹೊಸ ಚಾಪ್ಟರ್‌ಗೆ ಆಕ್ಷನ್ ಕಟ್ ಹೇಳೋದು ಇವ್ರೇನಾ?
ರಾಕಿಂಗ್ ಸ್ಟಾರ್ ನಟನೆಯ 'KGF' ಸರಣಿ ಬ್ಲಾಕ್‌ಬಸ್ಟರ್ ಹಿಟ್ ಆಗಿ ಇಡೀ ಭಾರತೀಯ ಚಿತ್ರರಂಗ ಸ್ಯಾಂಡಲ್‌ವುಡ್‌ನತ್ತ ತಿರುಗಿ ನೋಡುವಂತಾಯಿತು. ಪ್ರಶಾಂತ್ ನೀಲ್ ಸ್ಟೋರಿ, ಸ್ಟ್ರೀನ್‌ಪ್ಲೇ, ನಿರ್ದೇಶನ ಹಾಗೂ ಯಶ್ ಪರ್ಫಾರ್ಮನ್ಸ್‌ಗೆ ಸಿನಿರಸಿಕರು ಬಹುಪರಾಕ್ ಎಂದರು. ಇದೀಗ 'KGF'-3 ಬಗ್ಗೆ ನೀಲ್ ಮಾತನಾಡಿದ್ದಾರೆ.
ಹೊಂಬಾಳೆ ಸಂಸ್ಥೆ ನಿರ್ಮಾಣದ 'KGF' ಸಿನಿಮಾ ಕನ್ನಡ ಚಿತ್ರರಂಗದಲ್ಲಿ ಹೊಸ ಇತಿಹಾಸ ನಿರ್ಮಿಸಿದ್ದು ಗೊತ್ತೇಯಿದೆ. ಯಾವುದೇ ನಿರೀಕ್ಷೆ ಇಲ್ಲದೇ ಬಂದಿದ್ದ ಮೊದಲ ಭಾಗ 250 ಕೋಟಿ ರೂ. ಗಳಿಕೆ ಕಂಡು ಸಂಚಲನ ಸೃಷ್ಟಿಸಿತ್ತು. ಭಾರೀ ನಿರೀಕ್ಷೆಯೊಂದಿಗೆ ಬಂದಿದ್ದ ಸೀಕ್ವೆಲ್ 1200 ಕೋಟಿ ರೂ. ಬಾಚಿ ಎಲ್ಲರ ಹುಬ್ಬೇರಿಸಿತ್ತು. ಈ ಸಿನಿಮಾ ಕನ್ನಡ ಚಿತ್ರರಂಗದ ದಿಕ್ಕನ್ನೇ ಬದಲಿಸಿದ್ದು ಸುಳ್ಳಲ್ಲ.

ಕನ್ನಡ ಸಿನಿಮಾಗಳು 50 ಕೋಟಿ ರೂ. ಗಳಿಸೋದೇ ಕಷ್ಟ ಎನ್ನುವ ಸಮಯದಲ್ಲಿ 'KGF' ಚಾಪ್ಟರ್-1 ಸಿನಿಮಾ 250 ರೂ. ಕಲೆಕ್ಷನ್ ಮಾಡುವುದು ಸಾಧ್ಯ ಎಂದು ತೋರಿಸಿತ್ತು. ಚಾಪ್ಟರ್ -2 ಸಿನಿಮಾ 1000 ಕೋಟಿ ರೂ. ಗಳಿಕೆ ಕೂಡ ಅಸಾಧ್ಯ ಅಲ್ಲ ಎಂದು ಸಾಬೀತು ಮಾಡಿತ್ತು. ಒಂದೇ ಒಂದು ಸಿನಿಮಾದಿಂದ ಪ್ರಶಾಂತ್ ನೀಲ್ ಸ್ಟಾರ್ ನಿರ್ದೇಶಕನ ಪಟ್ಟ ಅಲಂಕರಿಸಿದ್ದಾರೆ. ಈಗ ನೀಲ್ ಜೊತೆ ಸಿನಿಮಾ ಮಾಡಲು ಬಾಲಿವುಡ್ ನಿರ್ಮಾಪಕರು ಕ್ಯೂ ನಿಂತಿದ್ದಾರೆ.
ಚಾಪ್ಟರ್-2 ಕ್ಲೈಮ್ಯಾಕ್ಸ್‌ನಲ್ಲೇ ಸರಣಿ ಮುಂದುವರೆಯುವ ಬಗ್ಗೆ ಸುಳಿವು ಸಿಕ್ಕಿತ್ತು. ಹೊಂಬಾಳೆ ಸಂಸ್ಥೆ ಕೂಡ 'KGF'-3 ಮಾಡುವ ಬಗ್ಗೆ ಪರೋಕ್ಷವಾಗಿ ಹೇಳಿದೆ. ಇದೀಗ ನಿರ್ದೇಶಕ ಪ್ರಶಾಂತ್ ನೀಲ್ ಈ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಬಾಲಿವುಡ್‌ನ 'ಪಿಂಕ್‌ವಿಲ್ಲಾ'ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದಾರೆ.

"KGF ಚಾಪ್ಟರ್-3 ಬರ್ತಿದೆ. ನಾನು ಸಿನಿಮಾ ನಿರ್ದೇಶಕ ಹೌದೋ ಅಲ್ಲವೋ ಅನ್ನೋದು ಗೊತ್ತಿಲ್ಲ" ಎಂದು ನಗು ಬೀರಿದ್ದಾರೆ. ಆದರೆ "ಯಶ್ ಚಿತ್ರದಲ್ಲಿ ಇರ್ತಾರೆ. ಸ್ಕ್ರಿಪ್ಟ್ ರೆಡಿ ಇದೆ. ಘೋಷಣೆ ಮಾಡುವ ಮುನ್ನವೇ ಸ್ಕ್ರಿಪ್ಟ್ ಬಗ್ಗೆ ನಿರ್ಧರಿಸಿದ್ದೆವು. ಯಶ್ ಅವರು ಸಾಕಷ್ಟು ಜವಾಬ್ದಾರಿಯುತ ವ್ಯಕ್ತಿ. ಕೇವಲ ಕಮರ್ಷಿಯಲ್ ಕಾರಣಕ್ಕೆ ಸಿನಿಮಾ ಮಾಡೋಕೆ ಒಪ್ಪಲ್ಲ. KGF -2 ಕೊನೆಯಲ್ಲಿ ಮುಂದಿನ ಪಾರ್ಟ್ ಬಗ್ಗೆ ಅನೌನ್ಸ್ ಮಾಡುವ ಮೊದಲೇ ಕಥೆ ಬರೆದುಕೊಂಡಿದ್ದೆವು ಎಂದು ಹೇಳಿದ್ದಾರೆ.
ಯಶ್ ಹಾಗೂ ಪ್ರಶಾಂತ್ ನೀಲ್ ಇಬ್ಬರು 'KGF' ಸರಣಿ ಚಿತ್ರಗಳ ಎರಡು ಕಂಬಗಳು. ನೀಲ್ ಎಲಿವೇಷನ್ಸ್, ರಾಕಿಂಗ್ ಸ್ಟಾರ್ ಪರ್ಫಾರ್ಮೆನ್ಸ್ ಸಿಂಕ್ ಆಗಿದ್ದಕ್ಕೆ ತೆರೆಮೇಲೆ ಮ್ಯಾಜಿಕ್ ಕ್ರಿಯೇಟ್ ಆಗಿದ್ದು. ಪ್ರಶಾಂತ್ ನೀಲ್ ನಿರ್ದೇಶನದ ಬಗ್ಗೆ ಕನ್ನಡ ಸಿನಿರಸಿಕರು ಮಾತ್ರವಲ್ಲ ಪರಭಾಷಾ ಪ್ರೇಕ್ಷಕರು, ಫಿಲ್ಮ್ ಮೇಕರ್ಸ್ ಮೆಚ್ಚಿಕೊಂಡಿದ್ದಾರೆ. ಹಾಡಿ ಹೊಗಳಿದ್ದಾರೆ. ಹಾಗಿರುವಾಗ ನೀಲ್ 'KGF'- 3 ನಾನು ನಿರ್ದೇಶನ ಮಾಡುವುದಿಲ್ಲ ಎನ್ನವ ಸುಳಿವು ಕೊಟ್ಟಿರುವುದು ಅಭಿಮಾನಿಗಳಲ್ಲಿ ಬೇಸರ ಮೂಡಿಸಿದೆ.
ಚಾಪ್ಟರ್-3 ಪ್ರಶಾಂತ್ ನೀಲ್- ಯಶ್ ಮಾತ್ರ ಮಾಡೋಕೆ ಸಾಧ್ಯ ಎನ್ನುವುದು ಅಭಿಮಾನಿಗಳ ವಾದ. ಆದರೂ ನೀಲ್ ಈಗ ಒಂದು ಕಾಲು ಆಚೆ ಇಟ್ಟಿರುವುದು ಬೇಸರ ಮೂಡಿಸಿದೆ. ಬೇರೆ ಭಾಷೆಗಳಲ್ಲಿ ದೊಡ್ಡ ದೊಡ್ಡ ಸಿನಿಮಾಗಳನ್ನು ನಿರ್ದೇಶನ ಮಾಡಲು ನಿರ್ದೇಶಕರು ಒಪ್ಪಿಕೊಂಡಿದ್ದಾರೆ. ಹಾಗಾದರೆ 'KGF'-3 ಚಿತ್ರಕ್ಕೆ ಯಾರು ಆಕ್ಷನ್ ಕಟ್ ಹೇಳುತ್ತಾರೆ? ಎನ್ನುವ ಚರ್ಚೆ ಮುನ್ನಲೆಗೆ ಬರುತ್ತದೆ. ನೀಲ್ ಬಳಗದಲ್ಲಿರುವ ಯಾರಾದರೂ ಆ ಸಾಹಸಕ್ಕೆ ಕೈ ಹಾಕುತ್ತಾರಾ? ಎನ್ನುವ ಅನುಮಾನ ಮೂಡಿದೆ.
ತಮ್ಮ ಶಿಷ್ಯರಲ್ಲಿ ಯಾರಿಗಾದರೂ ನಿರ್ದೇಶನದ ಜವಾಬ್ದಾರಿ ವಹಿಸಿ ಪ್ರಶಾಂತ್ ನೀಲ್ ಬೆನ್ನಿಗೆ ನಿಲ್ಲುತ್ತಾರಾ? ಎನ್ನುವ ಮಾತುಗಳು ಕೇಳಿಬರ್ತಿದೆ. ಅಥವಾ ಸ್ವತಃ ಯಶ್ 'KGF'-3 ಸಿನಿಮಾ ನಿರ್ದೇಶನ ಮಾಡುತ್ತಾರಾ? ಅನ್ನುವ ಅನುಮಾನವೂ ಮೂಡುತ್ತದೆ. ಯಶ್ ಅವರೊಳಗೊಬ್ಬ ಒಳ್ಳೆ ನಿರ್ದೇಶಕ ಇದ್ದಾನೆ ಎಂದು ಈಗಾಗಲೇ ಕೆಲವರು ಕೇಳಿದ್ದಾರೆ. ಯಶ್ ಸಿನಿಮಾ ನಿರ್ದೇಶನದ ಪ್ರತಿ ವಿಚಾರವನ್ನು ತಿಳಿದುಕೊಂಡಿದ್ದಾರೆ. ರಂಗಭೂಮಿ ಹಿನ್ನೆಲೆಯೂ ಇದೆ. ಹಾಗಾಗಿ ಚಾಪ್ಟರ್-3 ಚಿತ್ರವನ್ನು ಸ್ವತಃ ತಾವೇ ನಿರ್ದೇಶಿಸಿ ನಟಿಸಿದರೂ ಅಚ್ಚರಿಪಡಬೇಕಿಲ್ಲ.
'KGF'-3 ಚಿತ್ರಕ್ಕೆ ನಿರ್ದೇಶಕರು ಯಾರು? ಎನ್ನುವುದನ್ನು ಪಕ್ಕಕ್ಕಿಟ್ಟರೆ ನಿರೀಕ್ಷೆಗೆ ತಕ್ಕಂತೆ ಈ ಸಿನಿಮಾ ಮಾಡೋಕೆ ಸಾಧ್ಯಾನಾ? ಎನ್ನುವ ಪ್ರಶ್ನೆ ಕೆಲವರನ್ನು ಕಾಡುತ್ತಿದೆ. ಮೊದಲ ಭಾಗವೇ ಎಲ್ಲರ ನಿರೀಕ್ಷೆ ಮೀರಿತ್ತು. ಸೀಕ್ವೆಲ್‌ನಲ್ಲಿ ಅದು ಮತ್ತೊಂದು ಹಂತಕ್ಕೆ ಹೋಗಿಬಿಟ್ಟಿತ್ತು. ಆದರೆ ಚಾಪ್ಟರ್-1 ಇಷ್ಟಪಟ್ಟ ಸಾಕಷ್ಟು ಜನರಿಗೆ ಚಾಪ್ಟರ್-2 ಅಷ್ಟಾಗಿ ರುಚಿಸಲಿಲ್ಲ. ಹಾಗಿರುವಾಗ ಬೆಟ್ಟದಷ್ಟು ನಿರೀಕ್ಷೆ ಹೊತ್ತುಬರುವ 'KGF'-3 ಅದನ್ನು ತಲುಪುತ್ತಾ? ಎನ್ನುವ ಆತಂಕ ಕೆಲವರಲ್ಲಿದೆ.


Click it and Unblock the Notifications











