ಅಪ್ಪುನ ಈ ಎರಡು ವಿಷಯಗಳಿಂದ ಹಿಡಿದುಹಾಕಬಹುದು; ಮತ್ತೆ ಅಪ್ಪು ನೆನೆದ ಒಳ್ಳೆ ಹುಡ್ಗ ಪ್ರಥಮ್
ಇನ್ನೇನು ಒಂದು ತಿಂಗಳು ಕಳೆದರೆ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ನಮ್ಮನ್ನ ಅಗಲಿ ಒಂದು ವರ್ಷ ತುಂಬಲಿದೆ. ಹೀಗೆ ಒಂದು ವರ್ಷ ಕಳೆದರೂ ಸಹ ಅಪ್ಪು ಇನ್ನಿಲ್ಲ ಎಂಬ ಸತ್ಯವನ್ನು ಒಪ್ಪಲು ಯಾರೊಬ್ಬರೂ ತಯಾರಿಲ್ಲ. ಸಾಮಾಜಿಕ ಜಾಲತಾಣದಲ್ಲಿ, ವಾಟ್ಸಪ್ ಸ್ಟೇಟಸ್‌ಗಳಲ್ಲಿ ಅವರನ್ನು ನೋಡದ ದಿನವೇ ಇಲ್ಲ ಎನ್ನಬಹುದು. ಯಾವುದೇ ಹಬ್ಬ ಬರಲಿ, ಯಾವುದೇ ದಿನಾಚರಣೆ ಬರಲಿ, ಯಾವುದೇ ನಟರ ಹುಟ್ಟುಹಬ್ಬ ಬರಲಿ ಅಪ್ಪು ಆ ದಿನದ ಕುರಿತು ಹಾಗೂ ಆ ವ್ಯಕ್ತಿಗಳ ಕುರಿತು ಮಾಡಿದ್ದ ಪೋಸ್ಟ್ ಹಾಗೂ ಟ್ವೀಟ್‌ಗಳು ವೈರಲ್ ಆಗುತ್ತಲೇ ಇವೆ.
ಕೇವಲ ಅಪ್ಪು ಅಭಿಮಾನಿಗಳು ಮಾತ್ರವಲ್ಲದೇ ಸೆಲೆಬ್ರಿಟಿಗಳೂ ಸಹ ಅಪ್ಪು ಅವರನ್ನು ಪದೇ ಪದೇ ನೆನಪಿಸಿಕೊಳ್ತಾನೆ ಇದ್ದಾರೆ. ಈಗಾಗಲೇ ಇನ್ನೂರಕ್ಕೂ ಹೆಚ್ಚು ಚಲನಚಿತ್ರಗಳು ಪುನೀತ್ ರಾಜ್‌ಕುಮಾರ್ ಅವರಿಗೆ ಚಿತ್ರದ ಆರಂಭದಲ್ಲಿ ನಮನ ಸಲ್ಲಿಸಿದ ದಾಖಲೆಯೂ ನಿರ್ಮಾಣವಾಗಿದೆ. ತಮಿಳಿನ ವಿಕ್ರಮ್ ಸಿನಿಮಾದ ಪ್ರೆಸ್ ಮೀಟ್, ಇಡೀ ಕೆಜಿಎಫ್ ಚಿತ್ರ ಸರಣಿಯನ್ನು ಪ್ರಶಾಂತ್ ನೀಲ್ ಅಪ್ಪುಗೆ ಅರ್ಪಿಸಿದ್ದು, ಆರ್ಆರ್ಆರ್ ಪ್ರಚಾರದ ವೇಳೆ ಅಪ್ಪು ಇಲ್ಲದ ಕರ್ನಾಟಕ ಶೂನ್ಯ ಎಂದು ಎನ್‌ಟಿಆರ್ ಹೇಳಿದ್ದು, ಲೈಗರ್ ಮೂವಿಯಲ್ಲೂ ಅಪ್ಪು ನೆನಪಿಸಿಕೊಂಡದ್ದು ಹಾಗೂ ಇತ್ತೀಚೆಗಷ್ಟೆ ಪೊನ್ನಿಯಿನ್ ಸೆಲ್ವನ್ ಕಾರ್ಯಕ್ರಮದ ವೇದಿಕೆ ಮೇಲೆ ಅಪ್ಪು ಫೋಟೊ ರಾರಾಜಿಸಿದ್ದು ಚಿತ್ರರಂಗ ಹಾಗೂ ಕಲಾವಿದರು ಅಪ್ಪು ಮೇಲೆ ಇರಿಸಿರುವ ಪ್ರೀತಿಯನ್ನು ತೋರಿಸಿವೆ.
ಇನ್ನು ನಿನ್ನೆ ( ಸೆಪ್ಟೆಂಬರ್ 26 ) ಒಳ್ಳೆ ಹುಡ್ಗ ಪ್ರಥಮ್ ಕೂಡ ಪುನೀತ್ ರಾಜ್‌ಕುಮಾರ್ ಅವರನ್ನು ಮತ್ತೊಮ್ಮೆ ನೆನಪು ಮಾಡಿಕೊಂಡು ಈ ಹಿಂದೆ ತಾನು ಅಪ್ಪು ವ್ಯಕ್ತಿತ್ವದ ಕುರಿತು ಮಾತನಾಡಿದ್ದ ವಿಡಿಯೋವೊಂದನ್ನು ಹಂಚಿಕೊಂಡು ವಿಶೇಷವಾಗಿ ಬರೆದುಕೊಂಡಿದ್ದಾರೆ.

ವಾಟ್ಸಪ್ ಬ್ರಾಡ್‌ಕಾಸ್ಟ್ ಪಟ್ಟಿಯಿಂದ ಇನ್ನೂ ಅಪ್ಪು ಸರ್ ಹೆಸರು ತೆಗೆದಿಲ್ಲ
ಈ ಹಿಂದೆ ಖಾಸಗಿ ವಾಹಿನಿಯೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ಪುನೀತ್ ಅವರ ಹೆಸರನ್ನು ಇನ್ನೂ ಸಹ ನನ್ನ ವಾಟ್ಸಪ್ ಬ್ರಾಡ್‌ಕಾಸ್ಟ್ ಲಿಸ್ಟ್‌ನಲ್ಲಿ ಇಟ್ಟುಕೊಂಡಿದ್ದೇನೆ, ಯಾಕಂದ್ರೆ ಯಾವಾಗಾದ್ರೂ ಆ ಸಿಂಗಲ್ ಟಿಕ್ ಬ್ಲೂ ಟಿಕ್ ಆಗಬಹುದು ಎಂಬ ನಂಬಿಕೆಯಿದೆ ಎಂದು ಪ್ರಥಮ್ ಹೇಳಿದ್ದರು. ಈ ವಿಡಿಯೋವನ್ನು ಮತ್ತೆ ಶೇರ್ ಮಾಡಿರುವ ಪ್ರಥಮ್ ಇಂದಿಗೂ ಸಹ ಅದೇ ಸಾಲುಗಳನ್ನು ಬರೆದುಕೊಂಡಿದ್ದಾರೆ. ಕ್ಯಾಮೆರಾ ಇದೆ ಅನ್ನೋದನ್ನು ಸಹ ಮರೆತು ಮಾತನಾಡಿದಾಗ ಬಂದ ಪ್ರಾಮಾಣಿಕ ಮಾತುಗಳಿವು ಎಂದೂ ಸಹ ಪ್ರಥಮ್ ಬರೆದುಕೊಂಡಿದ್ದಾರೆ.

ಅಪ್ಪುನ ಎರಡು ವಿಧಾನದಲ್ಲಿ ಹಿಡಿದುಹಾಕಬಹುದು
ಇನ್ನು ಆ ವಿಡಿಯೋದಲ್ಲಿ ಪ್ರಥಮ್ ಅಪ್ಪು ಅವರನ್ನು ಎರಡು ವಿಧಾನದಲ್ಲಿ ಹಿಡಿದುಹಾಕಬಹುದು ಎಂದಿದ್ದರು. ಒಂದು ಕಷ್ಟ ಹೇಳಿಕೊಂಡ್ರೆ ಸಿಂಪ್ಲಿಸಿಟಿ ಇದ್ದ ಅಪ್ಪುವನ್ನು ಗೆಲ್ಲಬಹುದಿತ್ತು, ಇನ್ನೊಂದು ಟ್ಯಾಲೆಂಟ್ ಮತ್ತು ಕೆಲಸದಿಂದ ಹಿಡಿದುಹಾಕಬಹುದು ಎಂದು ಪ್ರಥಮ್ ಹೇಳಿಕೆ ನೀಡಿದ್ದರು.

ಎಲ್ಲರ ಕೈಗೆ ಸಿಗ್ತಿದ್ದ ಏಕೈಕ ಸೂಪರ್ ಸ್ಟಾರ್ ಅಪ್ಪು
ಇನ್ನೂ ಮುಂದುವರೆದು ಮಾತನಾಡಿದ್ದ ಪ್ರಥಮ್ ಎಲ್ಲರ ಕೈಗೂ ಸಿಗ್ತಾ ಇದ್ದ ಏಕೈಕ ಸೂಪರ್ ಸ್ಟಾರ್ ಅಂದ್ರೆ ಪುನೀತ್ ರಾಜ್‌ಕುಮಾರ್ ಎಂದು ಎಲ್ಲರಿಗೂ ಬೆಂಬಲ ನೀಡ್ತಿದ್ದ ಅಪ್ಪು ಅವರನ್ನು ನೆನೆದರು ಹಾಗೂ ಅಂತಹ ನಟ ಮತ್ತೆ ಹುಟ್ಟಲ್ಲ ಎಂದು ಕಣ್ಣಂಚಲ್ಲಿ ನೀರು ತುಂಬಿಕೊಂಡಿದ್ದರು.


Click it and Unblock the Notifications











