»   » ಗಜಗರ್ಭದಿಂದ ಹೊರಬಂದ 'ಅಪ್ಪು'

ಗಜಗರ್ಭದಿಂದ ಹೊರಬಂದ 'ಅಪ್ಪು'

Subscribe to Filmibeat Kannada

'ಅಪ್ಪು ಬಲು ಮೊಂಡ, ಕೋಪಿಷ್ಠ . ಅಷ್ಟೇ ಅಲ್ಲ ಪಕ್ಕಾ ಪೋಕರಿಯೂ ಹೌದು!" ಅಪ್ಪುವಿನ ಲೀಲೆಗಳನ್ನು ಉತ್ಸಾಹದಿಂದ ಪಟ್ಟಿ ಮಾಡಿದ ಪೂರಿ ಜಗನ್ನಾಥ್‌ ಒಗ್ಗರಣೆಯೆಂಬಂತೆ ನಿಧಾನವಾಗಿ ಹೇಳಿದರು, 'ಒರಟನಾದರೂ ಅಪ್ಪು ತುಂಬಾ ಒಳ್ಳೆಯವನು".

ಇವರೇನು ಸಿನಿಮಾದ ಕಥೆ ಹೇಳುತ್ತಿದ್ದಾರೋ ಅಥವಾ ಸಿನಿಮಾ ನಾಯಕನ ನಿಜ ಜೀವನದ ಗುಣಾವಗುಣಗಳನ್ನು ಪಟ್ಟಿ ಮಾಡುತ್ತಿದ್ದಾರೋ ಎಂದು ಅರೆಕ್ಷಣ ಎದುರಿಗೆ ಕೂತವರಿಗೆ ಅನ್ನಿಸದಿರಲಿಲ್ಲ . ರಾಜ್‌ ಪುತ್ರತ್ರಯರಲ್ಲಿ ಕೊನೆಯವರಾದ ಪುನೀತ್‌ ತುಂಟಾಟಕ್ಕೆ ಹೆಸರಾದವರು. 'ಭೂಮಿಗೆ ಬಂದ ಭಗವಂತ"ದಲ್ಲಿ ಬಾಲಕೃಷ್ಣನಾಗಿ, 'ಭಕ್ತ ಪ್ರಹ್ಲಾದ"ದಲ್ಲಿ ಪ್ರಹ್ಲಾದನಾಗಿ ನಟಿಸಿದ ಲೋಹಿತ್‌ 'ಬೆಟ್ಟದಹೂವು" ಸಿನಿಮಾದ ನಟನೆಗಾಗಿ ರಾಷ್ಟ್ರಪ್ರಶಸ್ತಿ ಪಡೆದು ಅಪ್ಪನನ್ನು ಮೀರಿಸಿದ್ದರು. ಬಾಲ್ಯನಟನಾಗಿ ಸುದ್ದಿ ಮಾಡಿದ ಲೋಹಿತ್‌ ತೆರೆ ಮರೆಗೆ ಸರಿದು ಪುನೀತ್‌ ಆದ ನಂತರ ಸುದ್ದಿ ಮಾಡಿದ್ದೆಲ್ಲ ತುಂಟಾಟಿಕೆಯಿಂದಲೇ!


ಅಣ್ಣಾವ್ರ ಕೊನೆಯ ಮಗನಲ್ಲವಾ, ಮುದ್ದಿನಿಂದ ಸೊಕ್ಕಿರಬಹುದು ಎಂದು ಕನ್ನಡಿಗರೂ ಅಂದುಕೊಂಡಿದ್ದರು. ಅದೇ ಪುನೀತ್‌ ನಾಯಕನಾಗಿ ಸಿನಿಮಾಗೆ ಮರು ಪ್ರವೇಶ ಮಾಡುತ್ತಿದ್ದಾರೆ. ಆ ಕುರಿತೇ ಮಾತನಾಡುತ್ತಿದ್ದರು ಅಪ್ಪುವಿನ ನಿರ್ದೇಶನದ ಹೊಣೆ ಹೊತ್ತಿರುವ ಪೂರಿ ಜಗನ್ನಾಥ್‌. 'ಯುವರಾಜ" ಅಂತಿಮ ಹಂತದ ಚಿತ್ರೀಕರಣದ ಸೆಟ್‌ನಲ್ಲಿ ಅವರು ಮಾತಿಗೆ ಸಿಕ್ಕಿದ್ದರು.

ಅಪ್ಪುವಿನದೊಂದಷ್ಟು ಇತಿಹಾಸ..

ಏಷ್ಯನ್‌ ಕ್ರೀಡೆಗಳ ಇತಿಹಾಸವನ್ನು ಬಲ್ಲವರಿಗೆಲ್ಲ ಅಪ್ಪು ಪರಿಚಿತನೇ. ದೆಹಲಿಯಲ್ಲಿ ನಡೆದ ಏಷ್ಯನ್‌ ಕ್ರೀಡೆಗಳ ಲಾಂಛನವಾಗಿದ್ದ ಅಪ್ಪು ಕ್ರೀಡಾಭಿಮಾನಿಗಳಿಗೆ ತುಂಟುಮರಿಯಾಗಿದ್ದ . ಅಂದಹಾಗೆ, ರಾಜ್‌ ಕುಟುಂಬದ ಮುದ್ದುಮರಿ ಪುನೀತ್‌ ಕೂಡ 'ಅಪ್ಪು " ಎಂತಲೇ ಆತ್ಮೀಯ ಬಳಗದಲ್ಲಿ ಪ್ರಸಿದ್ಧರು. ಆ ಕಾರಣದಿಂದಾಗಿಯೇ ಪುನೀತ್‌ರ ಚೊಚ್ಚಿಲ ಸಿನಿಮಾಕ್ಕೆ 'ಅಪ್ಪು" ಎಂದು ನಾಮಕರಣ ಮಾಡಲು ಅಪ್ಪು ಅಗ್ರಜ ಶಿವಣ್ಣ ಹಿಂದುಮುಂದು ನೋಡಲಿಲ್ಲ .

ಅಪ್ಪು ಸೆಟ್ಟೇರುತ್ತಿರುವ ಹಿಂದೆ ಶಿವಣ್ಣನ ಪಾತ್ರ ದೊಡ್ಡದು. ಮಣಿರತ್ನಂ ನಿರ್ದೇಶನ ಹಾಗೂ ರೆಹಮಾನ್‌ ಸಂಗೀತ ನಿರ್ದೇಶನ ತನ್ನ ಮೊದಲ ಸಿನಿಮಾಕ್ಕಿರಬೇಕು ಎನ್ನುವ ಕನಸನ್ನು ಅಪ್ಪು ಹೊತ್ತಿದ್ದರು. 'ಆಕ್ಸಿಡೆಂಟ್‌" ಮೆಚ್ಚಿಕೊಂಡಿದ್ದ ಅಪ್ಪುವಿಗೆ ಶಂಕರ್‌ನಾಗ್‌ ನಿರ್ದೇಶನವೂ ಇಷ್ಟವಿತ್ತು . ಆದರೆ, ಮಣಿರತ್ನಂ ತವರಲ್ಲೇ ಬಿಜಿಯಾಗಿದ್ದರೆ, ಶಂಕರ್‌ ದಿವಂಗತರ ಲಿಸ್ಟಿನಲ್ಲಿದ್ದಾರೆ.

ಕಿರಿ ಮಗನಿಗಾಗಿ ಕಥೆಗಳನ್ನು ಹುಡುಕಿ ತಡಕಿ ಪಾರ್ವತಮ್ಮ ಸುಸ್ತಾಗಿದ್ದರು. ಕೊನೆಗೆ 'ನಮ್ಮ ಅಪ್ಪುವಿಗೊಂದು ಕಥೆ ಹೊಸೆದುಕೊಡಿ ಮೇಷ್ಟ್ರೇ, ನಿರ್ದೇಶನವೂ ನಿಮ್ಮದೇ ಇರಲಿ" ಎಂದು ನಾಗತಿಹಳ್ಳಿಗೆ ಹೇಳಿದರೆ, ಅವರು ಚಾಲ್ತಿಯಲ್ಲಿರುವ ಉಪ್ಪಿ ಎಂಬ ಗೆದ್ದತ್ತಿನ ಬಾಲ ಹಿಡಿಯುವುದೇ? ಅಪ್ಪುವಿಗೇಕೋ ಯೋಗ ಕೂಡಿಬರದು ಎಂದು ಪಾರ್ವತಮ್ಮ ಅಂದುಕೊಳ್ಳುತ್ತಿರುವಾಗಲೇ ಕಥೆ ಹುಡುಕಿ ತಂದರು ಶಿವಣ್ಣ . ಯುವರಾಜ ಶೂಟಿಂಗ್‌ ಸಮಯದಲ್ಲಿ ಪೂರಿ ಹೇಳಿದ್ದ ಮೂರ್ನಾಲ್ಕು ಕಥೆಗಳಲ್ಲೊಂದು ಅಪ್ಪುವಿಗೆ ಒಪ್ಪುತ್ತದೆ ಎನಿಸಿದ್ದೇ ತಡ, ಶಿವಣ್ಣ ಮಾತೃಶ್ರೀ ಅವರಿಗೆ ವಿಷಯ ಮುಟ್ಟಿಸಿದರು. ಚಿಂತಕರ ಚಾವಡಿ ಅಸ್ತು ಎನ್ನುವುದರೊಂದಿಗೆ ತೆಲುಗುಬಿಡ್ಡ ಪೂರಿ ಜಗನ್ನಾಥ್‌ ಬಗಲಿಗೆ ಇನ್ನೊಂದು ಅವಕಾಶ ಸಿಕ್ಕಿತು.

ಕನ್ನಡಕ್ಕೆ ಮತ್ತೊಬ್ಬ ನಾಯಕ ಸಿಕ್ಕಾನೆ?

'ಕಥೆಯನ್ನು ಅಪ್ಪುವಿಗೆಂದೇ ನಾನು ಹೊಸೆದಿಲ್ಲ " ಅನ್ನುತ್ತಾರೆ ಪೂರಿ. 'ಅನೇಕ ವರ್ಷಗಳಿಂದ ಕಥೆ ತಲೆಯಲ್ಲಿತ್ತು . ಈಗಷ್ಟೇ ಕಂಕಣ ಕೂಡಿಬಂತು" ಎಂದು ತಮ್ಮ ಅದೃಷ್ಟದ ಗಡ್ಡ ಕೆರೆದುಕೊಳ್ಳುತ್ತಾರೆ. ಅಕ್ಟೋಬರ್‌ನಲ್ಲಿ ಚಿತ್ರೀಕರಣ ಪ್ರಾರಂಭ, ಮೂರ್ನಾಲ್ಕು ತಿಂಗಳಲ್ಲಿ ಮುಕ್ತಾಯ, ಬೇಸಗೆ ರಜೆಯ ಹೊತ್ತಿಗೆ ಮಕ್ಕಳೊಂದಿಗೆ ಆಡಲು ಅಪ್ಪು ಹಾಜರು. ಇದಿಷ್ಟು ಲೆಕ್ಕಾಚಾರ ಪೂರಿ ತಲೆಯಲ್ಲಿ ದೆ.

ಅಪ್ಪುವಿಗೆ ದಕ್ಷಿಣದ ನಾಯಕಿಯನ್ನೇ ಹುಡುಕುತ್ತೇವೆ ಎನ್ನುವುದು ಪೂರಿ ಲೀಕ್‌ ಮಾಡಿದ ಇನ್ನೊಂದು ಸೀಕ್ರೆಟ್‌. ಈ ನಡುವೆ ರಾಘು ಜೊತೆ ಸೇರಿ ಪೂರ್ಣಿಮಾ ಎಡಿಟಿಂಗ್‌ ಪಾಯಿಂಟ್‌ ಎನ್ನುವ ಸಂಕಲನ ಕೇಂದ್ರವನ್ನು ಅಪ್ಪು ಇತ್ತೀಚೆಗಷ್ಟೇ ಪ್ರಾರಂಭಿಸಿದ್ದಾರೆ. ವಜ್ರೇಶ್ವರಿ ಕಂಬೈನ್ಸ್‌ ಮಹಡಿಯ ಮೇಲಿರುವ ಈ ಕೇಂದ್ರ ಸಂಪೂರ್ಣ ಕಂಪ್ಯೂಟರೀಕೃತ. ಅಪ್ಪು ಈಗ ಕನಸುಗಳ ಮೋಡವೇರಿದ್ದಾರೆ. ಕನ್ನಡಕ್ಕೆ ಮತ್ತೊಬ್ಬ ನಾಯಕ ಸಿಕ್ಕಾನೆ!?

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada