»   » ಅಮೇರಿಕಾದಿಂದ ಮರಳಿ ಬಂದಾಳೇ ಆರತಿ:ಹಳೇ ಗಂಡನ ಪಾದವೇ ಗತಿ ?

ಅಮೇರಿಕಾದಿಂದ ಮರಳಿ ಬಂದಾಳೇ ಆರತಿ:ಹಳೇ ಗಂಡನ ಪಾದವೇ ಗತಿ ?

Subscribe to Filmibeat Kannada

*ಸುಬ್ಬು

ಕನ್ನಡ ಚಿತ್ರರಂಗದ ನಟಿಯರ ಪೈಕಿ ಅತ್ಯಂತ ದೊಡ್ಡ ಪ್ರಮಾಣದ ಗಾಸಿಪ್‌ಗೆ ಕಾರಣವಾದ ನಟಿ ಎಂದರೆ ಆರತಿ. ಆಕೆ ಮಧ್ಯಮ ವರ್ಗದ ಮಂದಿಯ ಮನೆ ಹುಡುಗಿ ಆಗಿದ್ದುಕೊಂಡು ಇದನ್ನು ಸಾಧಿಸಿದ್ದು ಅದ್ಭುತಗಳಲ್ಲೊಂದು. ಸಾಮಾನ್ಯವಾಗಿ ಅಷ್ಟಾಗಿ ಜನಪ್ರಿಯತೆ, ಕನ್ನಡದ ಎಲ್ಲಾ ನಾಯಕನಟರೊಂದಿಗೆ ನಟಿಸುವ ಗೌರವ, ಅತ್ಯುತ್ತಮ ನಟಿಯೆಂಬ ಪ್ರಶಂಸೆ, ಪ್ರಶಸ್ತಿ ಎಲ್ಲ ಸಿಕ್ಕಿದ ನಂತರವೂ ಆರತಿ ಚಂಚಲೆಯಾಗಿಯೇ ಉಳಿದರು.

ಕಣಗಾಲರ ಮುಡಿಯೇರಿದ ಕಣಗಿಲೆ, ಅಶೋಕ್‌ ಮಡಿಲೇರಿದ ಕುಂತಳೆ, ರಘುಪತಿ ರಸಿಕತೆಗೆ ಮುನ್ನೆಲೆ ಎಂಬಿತ್ಯಾದಿ ಬಿರುದುಗಳಿಗೆ ಪಾತ್ರವಾಗಿದ್ದ ಆರತಿ, ಅದೊಂದು ದಿನ ಇದ್ದಕ್ಕಿದ್ದಂತೆ ಚಿತ್ರರಂಗದಿಂದ ಮಾಯವಾದಾಕೆ. ಆರತಿ ಅಮೆರಿಕಾಗೆ ಹೋದರಂತೆ ಎಂಬ ಸುದ್ದಿಯ ಹಿಡಿಬೂದಿ ಮಾತ್ರ ಚಿತ್ರರಂಗದಲ್ಲಿ ಉಳಿಯಿತೇ ವಿನಾ, ಹಲವಾರು ಬಾರಿ ಮರುಹುಟ್ಟು ಪಡೆದ ಆರತಿಯೆಂಬ ಫೀನಿಕ್ಸ್‌ ಪಕ್ಷಿ ಪತ್ತೆಯಾಗಲಿಲ್ಲ.

ಆರತಿ ಇಲ್ಲದೇ ಹೋದದ್ದಕ್ಕೇ ಚಿತ್ರರಂಗವೇನೂ ಬಡವಾಗಲೂ ಇಲ್ಲ ಅಂತ ಹುಂಬ ನಿರ್ದೇಶಕರು ಮಾತಾಡಿಕೊಂಡರು. ಭಾಳಾ ಓವರ್‌ ಅ್ಯಕ್ಟಿಂಗ್‌ ಮಾಡ್ತಾ ಇದ್ದಳು ಮಾರಾಯರೇ ಎಂದು ರೂಟ್‌ಲೆಸ್‌ ಪತ್ರಕರ್ತರು ಬರೆದುಕೊಂಡರು. ಪಟ್ಟಣ್ಣರಿಂದ ನಾಶವಾದಳು ಅಂತ ಚಿತ್ರರಂಗ ಹಾಗೂ ರಾಜಕಾರಣದ ನೈಚಾನುಸಂಧಾನಕ್ಕೆ ಕೆಲವರು ಕನಲಿದರು.

ಆರತಿ ಮನಸ್ಸಿನಲ್ಲಿ ಏನಿತ್ತು ಅನ್ನುವುದು ಆ ನಂತರ ಎಲ್ಲೂ ಬಹಿರಂಗವಾಗಲೇ ಇಲ್ಲ. ಅಮೆರಿಕದ ಲಾಸ್‌ ಏಂಜಲೀಸ್‌ನಲ್ಲಿ ಇದ್ದಾಳಂತೆ. ಗಂಡ ಅದ್ಯಾವುದೋ ದೇಸಾಯಿಯಂತೆ. ಕಂಪ್ಯೂಟರ್‌ ಪಂಟರ್‌ ಅಂತೆ. ಸುಧಾರಾಣಿಗೊಮ್ಮೆ ಅಮೆರಿಕಾದಲ್ಲಿ ಸಿಕ್ಕಿದ್ದಳಂತೆ... ಎಂಬಿತ್ಯಾದಿ ಗಾಳಿ ಮಾತುಗಳು ತೇಲಿ ಬಂದವು. ಆರತಿಯನ್ನು ನಿಜವಾಗಿಯೂ ಕಂಡವರಿದ್ದಾರೋ ಇಲ್ಲವೋ ಅನ್ನುವುದು ಕೊನೆಗೂ ವಿಷದವಾಗಲಿಲ್ಲ.

ಇದೀಗ ಆರತಿ ಬೆಂಗಳೂರಿಗೆ ಬರುತ್ತಿರುವುದು ದೊಡ್ಡ ಸುದ್ದಿಯೇ ಆಗಿದೆ. ಇಪ್ಪತ್ತು ದಿನಗಳ ಹಿಂದೆ ಆಕೆ ಬೆಂಗಳೂರಿಗೆ ಗುಟ್ಟಾಗಿ ಬಂದು ಹೋಗಿದ್ದಾರೆ. ಇನ್ನು ಮುಂದೆ ಇಲ್ಲೇ ಸೆಟ್ಲ್‌ ಆಗುವ ನಿರ್ಧಾರ ಮಾಡಿದ್ದಾರೆ. ಆರತಿ ಮತ್ತೆ ಬತ್ತವ್ಳಂತೆ! ಏನಮ್ಮಾ ಕಿರಿಕ್ಕಾ? ಅಂತ ಪಡ್ಡೆ ಹುಡುಗರು ಪಿಸುಗುಟ್ಟುತ್ತಿದ್ದಾರೆ.

ಅಮೆರಿಕಾದಲ್ಲಿ ನಡೆದದ್ದೇ ಬೇರೆ ಅಂತ ಉದ್ಯಮವಲಯದ ಮೂಲಗಳು ಅಪ್ಪಟ ನಿಜ ಹೇಳುತ್ತಿರುವ ದನಿಯಲ್ಲಿ ಮಾತಾಡತೊಡಗಿವೆ :

‘ದೇಸಾಯಿ ಒಳ್ಳೆಯ ಮನುಷ್ಯನೇ ಸಾರ್‌. ಆದರೆ ದುರಾಸೆ ಜಾಸ್ತಿ. ಅಮೆರಿಕಾನೂ ಇಂಡಿಯಾನೂ ಒಂದೇ ಅಂದುಕೊಂಡುಬಿಟ್ಟ. ಅದ್ಯಾವುದೋ ಟ್ಯಾಕ್ಸ್‌ ಕಟ್ಟದೆ ವಂಚನೆ ಮಾಡೋಕೆ ನೋಡಿದ. ಅಮೆರಿಕ ಸರ್ಕಾರದಲ್ಲಿ ಏನು ಬೇಕಾದರೂ ಮೋಸ ಮಾಡಬಹುದು, ಆದ್ರೆ ತೆರಿಗೆ ವಂಚಿಸೋ ಹಾಗಿಲ್ಲ. ಹಿಡಕೊಂಡರು ನೋಡಿ. ಈಗ ಮನೆ ಆಸ್ತಿ ಪಾಸ್ತಿ ಎಲ್ಲ ಮಾರಿ, ಲಾಯರಿಗೆ ಕೊಡ್ತಾ ಇದ್ದಾನೆ. ಕಂಪ್ಯೂಟರ್‌ ಅಂಗಡಿಗೆ ಸರ್ಕಾರವೇ ಬೀಗ ಜಡಿದಿದೆ. ಲಾಸ್‌ ಏಂಜಲೀಸ್‌ ಮನೆ ಮಾರಿ, ಹಳ್ಳಿ ಕಡೆ ಹೊರಟು ಹೋಗಿದ್ದಾನಂತೆ..

.. ಪಾಪ ಆರತಿ, ಏನು ಮಾಡುತ್ತೇ ಹೇಳಿ.. ಅವನ ಸಹವಾಸವೇ ಸಾಕು ಅಂತ ಬೆಂಗಳೂರಿಗೆ ಬರೋಕೆ ನೋಡ್ತಿದೆ. ಯಶಸ್ವಿನಿ ನಂತರ ಅವಳಿಗೊಂದು ಹೆಣ್ಮಗು ಹುಟ್ಟಿತ್ತಲ್ಲ. ಅದನ್ನು ಸ್ಕೂಲಿಗೆ ಸೋರಿಸೋಕೆ ಬೆಂಗಳೂರಿಗೆ ಬಂದಿದ್ಳು ’

ಆರತಿ ಬೆಂಗಳೂರಿಗೆ ಬಂದಿದ್ದು ನಿಜ. ಆಕೆಯ ಎರಡನೆಯ ಮಗಳನ್ನು ಇಲ್ಲಿ ಸ್ಕೂಲಿಗೆ ಸೇರಿಸಲು ಪ್ರಯತ್ನಪಟ್ಟಿರೋದೂ ನಿಜ. ದೇಸಾಯಿ ಕಷ್ಟದಲ್ಲಿರೋದೂ ಅಷ್ಟೇ ನಿಜ. ಸದ್ಯದಲ್ಲೇ ಆರತಿ ಬೆಂಗಳೂರಲ್ಲೇ ಸೆಟ್ಲ್‌ ಆಗುತ್ತಾರೆ ಅನ್ನೋದೂ ಸತ್ಯ.

ಸದ್ಯ ಹಾಗಾದರೆ ಸಾಕು ಅಂತ ಉದ್ಯಮ ಕಾಯುತ್ತಿದೆ. ಏಕೆಂದರೆ ಅಮ್ಮನ ಪಾತ್ರಕ್ಕೆ, ಟೀವಿ ಧಾರಾವಾಹಿಗಳಿಗೆ ಒಬ್ಬ ನಟಿ ಸಿಕ್ಕ ಹಾಗಾಯಿತಲ್ಲ!

ಜೀವನ ಹೇಗೆ ಬೇಕಾದರೂ ಇರಲಿ, ನಟನೆ ಚೆನ್ನಾಗಿರಲಿ ಅನ್ನೋದು ಚಿತ್ರರಂಗದ ಏಕೈಕ ಆಸೆ.

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada