'45' ಕಥೆಗೂ ಆ ಪೌರಾಣಿಕ ಕಥೆಗೂ ಲಿಂಕ್ ಇದ್ಯಾ? ಏನ್ ಹೇಳೊಕೆ ಹೊರಟಿದ್ದಾರೆ ಜನ್ಯಾ?
ಅರ್ಜುನ್ ಜನ್ಯಾ ನಿರ್ದೇಶನ '45' ಸಿನಿಮಾ ಟೀಸರ್ ಸಖತ್ ಸದ್ದು ಮಾಡ್ತಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ತೆರೆಗೆ ಬರ್ತಿದೆ. ಪರಭಾಷಿಕರು ಕೂಡ ಟೀಸರ್ ನೋಡಿ ಫಿದಾ ಆಗಿದ್ದಾರೆ. ಇನ್ನು ಚಿತ್ರದ ಕಥೆ ಏನು? ಎಂದು ಕೆಲವರು ತಲೆ ಕೆಡಿಸಿಕೊಂಡಿದ್ದಾರೆ.
ಈ ಮಲ್ಟಿಸ್ಟಾರರ್ ಚಿತ್ರದಲ್ಲಿ ಶಿವರಾಜ್‌ಕುಮಾರ್, ಉಪೇಂದ್ರ ಹಾಗೂ ರಾಜ್. ಬಿ ಶೆಟ್ಟಿ ನಟಿಸಿದ್ದಾರೆ. ಟೈಟಲ್‌ನಿಂದಲೇ ಸಿನಿಮಾ ಕುತೂಹಲ ಮೂಡಿಸಿದೆ. ಟೀಸರ್‌ನಲ್ಲಿ ಸಾಕಷ್ಟು ವಿಚಾರಗಳನ್ನು ಹೇಳಲು ಚಿತ್ರತಂಡ ಪ್ರಯತ್ನಿಸಿದೆ. ಆದರೆ ನೇರವಾಗಿ ಏನನ್ನೂ ಹೇಳದೇ ಕುತೂಹಲ ಕಾಯ್ದುಕೊಂಡಿದೆ. '45' ಟೈಟಲ್ ಅರ್ಥ ಏನು? ಶಿವಣ್ಣ- ಉಪೇಂದ್ರ ಪಾತ್ರಗಳು ಏನು? ಇಬ್ಬರ ನಡುವೆ ಬಲಿಪಶು ರೀತಿ ಕಾಣುವ ರಾಜ್ ಬಿ ಶೆಟ್ಟಿ ಕಥೆ ಏನು? ಎನ್ನುವ ಪ್ರಶ್ನೆ ಮೂಡಿದೆ.

ಈಗಾಗಲೇ ಸಾಕಷ್ಟು ಜನ '45' ಸಿನಿಮಾ ಟೀಸರ್ ಡಿಕೋಡ್ ಮಾಡಲು ಆರಂಭಿಸಿದ್ದಾರೆ. ಚಿತ್ರದ ಕಥೆಗೆ ಪೌರಾಣಿಕ ಕಥೆಗಳ ಲಿಂಕ್ ಇದೆ ಎಂದು ಊಹಿಸುತ್ತಿದ್ದಾರೆ. ಮುಖ್ಯವಾಗಿ ನಂದಿ ಅಂದರೆ ಶಿವನ ಪಾತ್ರದಂತೆ ಶಿವಣ್ಣನ ಪಾತ್ರ ಇರಲಿದೆ. ಇನ್ನು ಮಾನ್‌ಸ್ಟರ್ ರೀತಿ ಕೆಟ್ಟದರ ಸಂಕೇತ ಯಮ ಎನ್ನುವಂತೆ ಉಪ್ಪಿ ಪಾತ್ರವನ್ನು ಡಿಸೈನ್ ಮಾಡಿರೋದು ಗೊತ್ತಾಗುತ್ತಿದೆ. ಒಳ್ಳೆಯದು ಹಾಗೂ ಕೆಟ್ಟದರ ನಡುವಿನ ಹೋರಾಟದ ಕಥೆ ಚಿತ್ರದಲ್ಲಿದೆ.
"ಶಿವನಾಗಿ ಶಿವಣ್ಣ, ಯಮನಾಗಿ ಉಪೇಂದ್ರ. '45' ದಿನಗಳಲ್ಲಿ ರಾಜ್ ಬಿ ಶೆಟ್ಟಿಯ ಪ್ರಾಣವನ್ನು, ಶಿವ ಉಳಿಸ್ತಾನಾ ಅಥವಾ ಯಮ ತೆಗಿತ್ತಾನಾ? ಎನ್ನುವುದೇ ಸಿನಿಮಾ ಕಥೆ" ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ. ಇದೇ ಸಿನಿಮಾ ಕಥೆ ಆಗಿದ್ದಲ್ಲಿ ಈ ಥೀಮ್‌ನಲ್ಲಿರುವ ಕೆಲ ಪೌರಾಣಿಕ ಕಥೆಗಳು ಕಣ್ಮುಂದೆ ಬರುತ್ತದೆ.

ಮಾರ್ಕಂಡೇಯನ ಆಯಸ್ಸು ಮುಗಿಯಿತು ಎಂದು ಆತನನ್ನು ಕರೆದೊಯ್ಯಲು ಯಮ ಬರ್ತಾನೆ, ಆದರೆ ಕೊನೆಗೆ ಮಾರ್ಕಂಡೇಯನ ಭಕ್ತಿಗೆ ಮೆಚ್ಚಿ ಶಿವನೇ ಯಮನನ್ನು ತಡೆಯುತ್ತಾನೆ. ಮಾರ್ಕಂಡೇಯನಿಗೆ ಚಿರಂಜೀವಿಯಾಗಿ ಬಾಳುವಂತೆ ಆಶೀರ್ವಾದ ಮಾಡುತ್ತಾನೆ. '45' ಸಿನಿಮಾ ಕಥೆ ಈ ಕಥೆಗೆ ಬಹಳ ಹತ್ತಿರ ಎನಿಸುತ್ತದೆ ಎನ್ನುವುದು ಕೆಲವರ ಲೆಕ್ಕಾಚಾರ.
ರಾಮಾಯಣದಲ್ಲಿ ಒಂದು ಕಥೆ ಇದೆ. ಅದು '45' ಸಿನಿಮಾ ಕಥೆಯನ್ನೇ ಹೋಲುತ್ತದೆ. ತನ್ನ ಯಜ್ಞಕ್ಕೆ ಭಂಗ ಮಾಡಿದ ಶಕುಂತನನ್ನು 8 ದಿನದೊಳಗೆ ವಧಿಸುವಂತೆ ರಾಮನಿಗೆ ವಿಶ್ವಾಮಿತ್ರರು ಆಜ್ಞಾಪಿಸುತ್ತಾರೆ. ವಿಷಯ ತಿಳಿದ ಶಕುಂತ ಕಾಪಾಡುವಂತೆ ಆಂಜನೇಯನಿಗೆ ಶರಣು ಹೋಗುತ್ತಾನೆ. ಆದರೆ ಯಾರು ಶಕುಂತನನ್ನು ಕೊಲ್ಲಲು ಮುಂದಾಗಿದ್ದಾರೆ ಎಂದು ತಿಳಿಯದೇ ಆಂಜನೇಯ ಪ್ರಾಣಭಿಕ್ಷೆ ಕೊಡುವುದಾಗಿ ಮಾತು ಕೊಡುತ್ತಾನೆ. ಕೊನೆಗೆ ರಾಮ-ಆಂಜನೇಯ ನಡುವೆಯೇ ಯದ್ಧ ನಡೆಯುತ್ತದೆ. ರಾಮನಾಮದ ಶಕ್ತಿ ಎಂಥಾದ್ದು ಎಂದು ಜಗತ್ತಿಗೆ ಸಾರುವ ಕಥೆ ಇದು.
ಇನ್ನು '45' ಸಿನಿಮಾ ಟೀಸರ್‌ನಲ್ಲಿ 'ಓಂ' ಸಿನಿಮಾದ ಬಗ್ಗೆ ಪ್ರಸ್ತಾಪಿಸಿ ಶಿವಣ್ಣ ಹಾಗೂ ಉಪೇಂದ್ರ ನಡುವೆ ಡೈಲಾಗ್ ಇದೆ. ಕಥಾ ಉಪನಿಷತ್‌ನಲ್ಲಿ ಯಮ AUM(ಓಂ)ನ ಸತ್ಯವನ್ನು ನಚಿಕೇತನಿಗೆ ಬಹಿರಂಗಪಡಿಸುತ್ತಾನೆ ಎಂದು ಮತ್ತೊಬ್ಬರು ಟ್ವೀಟ್ ಮಾಡಿದ್ದಾರೆ. ಇದನ್ನೇ ಆಧರಿಸಿ ಅರ್ಜುನ್ ಜನ್ಯಾ 'ಓಂ' ಚಿತ್ರದ ವಿಚಾರವನ್ನು ಚಿತ್ರದಲ್ಲಿ ತಂದಿರಬಹುದು ಎನ್ನುವ ಲೆಕ್ಕಾಚಾರ ಶುರುವಾಗಿದೆ.
ಒಟ್ಟಾರೆ ಟೀಸರ್‌ನಿಂದಲೇ '45' ಸಿನಿಮಾ ಬಹಳ ನಿರೀಕ್ಷೆ ಹುಟ್ಟುಹಾಕಿದೆ. ಸಿನಿಮಾ ಬಿಡುಗಡೆ ಆಗುವವರೆಗೂ ಅಸಲಿ ಕಥೆ ಏನು? ಎನ್ನುವುದು ಗೊತ್ತಾಗಲ್ಲ ಎನಿಸುತ್ತಿದೆ. ಸೂರಜ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ರಮೇಶ್ ರೆಡ್ಡಿ ಚಿತ್ರಕ್ಕೆ ಹಣ ಹೂಡಿದ್ದಾರೆ. ಬಹಳ ಅದ್ಧೂರಿಯಾಗಿ ಸಿನಿಮಾ ನಿರ್ಮಾಣವಾಗುತ್ತಿದೆ. ಸತ್ಯಾ ಹೆಗಡೆ ಛಾಯಾಗ್ರಹಣ ಚಿತ್ರಕ್ಕಿದೆ. ನಿರ್ದೇಶನದ ಜೊತೆ ಚಿತ್ರಕ್ಕೆ ಅರ್ಜುನ್ ಜನ್ಯಾ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಆಗಸ್ಟ್ 15ಕ್ಕೆ ಸಿನಿಮಾ ತೆರೆಗೆ ಬರಲಿದೆ.


Click it and Unblock the Notifications











