8 ಜಿಲ್ಲೆಗಳಲ್ಲಿ ಏಕಕಾಲಕ್ಕೆ '45' ಸಿನಿಮಾ ಟ್ರೈಲರ್ ಲಾಂಚ್; ಜನ್ಯಾ ಮಾಸ್ಟರ್ ಪ್ಲ್ಯಾನ್
ಈ ಬಾರಿ ಕ್ರಿಸ್‌ಮಸ್ ಬಾಕ್ಸಾಫೀಸ್ ಕ್ಲ್ಯಾಶ್ ಜೋರಾಗಿ ಇರಲಿದೆ. ದೊಡ್ಡ ದೊಡ್ಡ ಸಿನಿಮಾಗಳು ಡಿಸೆಂಬರ್ 25ರಂದು ತೆರೆಗೆ ಬರ್ತಿದೆ. ಅರ್ಜುನ್ ಜನ್ಯಾ ನಿರ್ದೇಶನದ '45' ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ಸದ್ಯ ಚಿತ್ರದ ಟ್ರೈಲರ್ ಬಿಡುಗಡೆಗೆ ಭರ್ಜರಿ ಪ್ಲ್ಯಾನ್ ನಡೀತಿದೆ.
ಶಿವರಾಜ್‌ಕುಮಾರ್, ಉಪೇಂದ್ರ ಹಾಗೂ ರಾಜ್. ಬಿ ಶೆಟ್ಟಿ ಒಟ್ಟಿಗೆ ನಟಿಸಿರೋ ಸಿನಿಮಾ ಇದು. ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ ಆಕ್ಷನ್ ಕಟ್ ಹೇಳಿದ್ದಾರೆ. ಸೂರಜ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ರಮೇಶ್ ರೆಡ್ಡಿ ಅದ್ಧೂರಿಯಾಗಿ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಡಿಸೆಂಬರ್ 15ರಂದು ಜಬರ್ದಸ್ತ್ ಟ್ರೈಲರ್ ಬಿಡುಗಡೆ ಆಗಲಿದೆ. ಏಕಕಾಲಕ್ಕೆ 7 ಜಿಲ್ಲೆಗಳಲ್ಲಿ ಸಿನಿಮಾ ಝಲಕ್ ನೋಡಬಹುದು.

ಯೂಟ್ಯೂಬ್‌ನಲ್ಲಿ ಮಾತ್ರವಲ್ಲೇ ಚಿತ್ರಮಂದಿರಗಳಲ್ಲಿ ಏಕಕಾಲಕ್ಕೆ ಟ್ರೈಲರ್ ತೆರೆಮೇಲೆ ಅಪ್ಪಳಿಸಲಿದೆ. ಜೊತೆಗೆ ಬೆಂಗಳೂರಿನಲ್ಲಿ ನಡೆಯುವ ಟ್ರೈಲರ್ ರಿಲೀಸ್ ಈವೆಂಟ್ ರಾಜ್ಯದ 7 ಜಿಲ್ಲೆಗಳ ಚಿತ್ರಮಂದಿರಗಳಲ್ಲಿ ಲೈವ್ ಪ್ರದರ್ಶನವಾಗಲಿದೆ. ತುಮಕೂರು, ದಾವಣಗೆರೆ, ಹೊಸಪೇಟೆ, ಮೈಸೂರ್, ಮಂಗಳೂರು, ಶಿವಮೊಗ್ಗ, ಹುಬ್ಬಳ್ಳಿಯ ಚಿತ್ರಮಂದಿರದಲ್ಲಿ ಲೈವ್ ಕಾರ್ಯಕ್ರಮ ನೋಡಬಹುದು. ಬೆಂಗಳೂರಿನ ಕಾರ್ಯಕ್ರಮದಲ್ಲಿ ವರ್ಚುವಲ್ ಆಗಿ ಕೂತು ಶಿವಣ್ಣ, ಉಪ್ಪಿ, ರಾಜ್ 7 ಜಿಲ್ಲೆಗಳ ಅಭಿಮಾನಿಗಳ ಜೊತೆ ಮಾತನಾಡಲಿದ್ದಾರೆ.
ಟ್ರೈಲರ್ ಅನ್ನು ಕೂಡ ಕ್ಯೂಬ್ ಸಹಾಯದಿಂದ ಏಕಕಾಲಕ್ಕೆ 7 ಕಡೆ ಚಿತ್ರಮಂದಿರಗಳಲ್ಲಿ ಪ್ರದರ್ಶಿಸಲಾಗುತ್ತಿದೆ. ಇದಕ್ಕಾಗಿ ಅಭಿಮಾನಿಗಳಿಗೆ ಪಾಸ್ ಕೊಡುತ್ತಿದ್ದು ಪಾಸ್ ಇರುವ ಅಭಿಮಾನಿಗಳು ಆಯಾ ಚಿತ್ರಮಂದಿರಗಳಿಗೆ ಹೋಗಿ ಕಾರ್ಯಕ್ರಮ ನೋಡಬಹುದು. ಇದು ಚಿತ್ರರಂಗದ ಇತಿಹಾಸದಲ್ಲೇ ಮೊದಲ ಪ್ರಯತ್ನ ಎನ್ನಲಾಗ್ತಿದೆ. ಅಂದಾಜು 100 ಕೋಟಿ ರೂ. ಬಜೆಟ್‌ನಲ್ಲಿ '45' ಸಿನಿಮಾ ನಿರ್ಮಾಣವಾಗಿದೆ. ಈಗಾಗಲೇ 'Afro ತಪಾಂಗ್' ಸಾಂಗ್ ಹಿಟ್ ಆಗಿ ಗಮನ ಸೆಳೆದಿದೆ.

ದೂರದ ಊರುಗಳಲ್ಲಿ ಇರುವ ಅಭಿಮಾನಿಗಳು ಟ್ರೈಲರ್ ಲಾಂಚ್ ಕಾರ್ಯಕ್ರಮದಲ್ಲಿ ಭಾಗಿ ಆಗಲು ಸಾಧ್ಯವಾಗಲ್ಲ. ಅದೇ ಕಾರಣಕ್ಕೆ ಈ ರೀತಿ ವಿಭಿನ್ನ ಪ್ರಯತ್ನ ಮಾಡಲಾಗ್ತಿದೆ. ಅವರೆಲ್ಲರನ್ನು ವರ್ಚುವಲ್ ಆಗಿ ಕಾರ್ಯಕ್ರಮದಲ್ಲಿ ಭಾಗಿ ಮಾಡಿಕೊಳ್ಳುವ ಪ್ರಯತ್ನ ನಡೀತಿದೆ. ಅದಕ್ಕಾಗಿ ಸಾಕಷ್ಟು ತಂತ್ರಜ್ಞರು ಶ್ರಮಿಸುತ್ತಿದ್ದಾರೆ. ಇತ್ತೀಚೆಗೆ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ನಿರ್ದೇಶಕ ಅರ್ಜುನ್ ಜನ್ಯಾ ಮಾಹಿತಿ ನೀಡಿದ್ದಾರೆ.
ಯಾವುದೇ ವಿಚಾರದಲ್ಲಿ ರಾಜಿಯಾಗೇ ಬಹಳ ಅದ್ಧೂರಿಯಾಗಿ '45' ಸಿನಿಮಾ ನಿರ್ಮಾಣ ಮಾಡಿದ್ದಾರೆ. ಆಗಸ್ಟ್ 15ಕ್ಕೆ ಸಿನಿಮಾ ರಿಲೀಸ್ ಪ್ಲ್ಯಾನ್ ನಡೆದಿತ್ತು. ಆದರೆ ಪೋಸ್ಟ್ ಪ್ರೊಡಕ್ಷನ್ ತಡವಾಗಿ ರಿಲೀಸ್ ದಿನಾಂಕ ಮುಂದೂಡಲಾಗಿತ್ತು. ಡಿಸೆಂಬರ್ 25ಕ್ಕೆ ಸಿನಿಮಾ ದೊಡ್ಡದಾಗಿ ರಿಲೀಸ್ ಆಗ್ತಿದೆ. ಬಹಳ ವರ್ಷಗಳ ಬಳಿಕ ಶಿವಣ್ಣ ಹಾಗೂ ಉಪ್ಪಿ ಮುಖಾಮುಖಿ ಆಗುತ್ತಿರುವುದು ಅಭಿಮಾನಿಗಳಿಗೆ ಹಬ್ಬವೇ ಸರಿ. ಇವರಿಬ್ಬರ ನಡುವೆ ರಾಜ್ ಬಿ ಶೆಟ್ಟಿ ಕಥೆ ಏನು ಎನ್ನುವುದನ್ನು ಕಾದು ನೋಡಬೇಕಿದೆ.
ಅರ್ಜುನ್ ಜನ್ಯಾ ಕಥೆ ಚಿತ್ರಕಥೆ ಬರೆದು ಮೊದಲ ಬಾರಿಗೆ ಆಕ್ಷನ್ ಕಟ್ ಹೇಳಿದ್ದಾರೆ. ಜೊತೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಇನ್ನು ಅನಿಲ್ ಕುಮಾರ್ ಸಂಭಾಷಣೆ, ಸತ್ಯಾ ಹೆಗ್ಡೆ ಛಾಯಾಗ್ರಹಣ ಹಾಗೂ ಕೆ. ಎಂ ಪ್ರಕಾಶ್ ಸಂಕಲನ ಚಿತ್ರಕ್ಕಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ 5 ಭಾಷೆಗಳಲ್ಲಿ '45' ಸಿನಿಮಾ ತೆರೆಗೆ ಬರ್ತಿದೆ. ಕೆಲ ದಿನಗಳ ಹಿಂದೆ ಬಿಡುಗಡೆಯಾಗಿದ್ದ ಟೀಸರ್‌ಗೆ ಪರಭಾಷಿಕರಿಂದಲೂ ಒಳ್ಳೆ ರೆಸ್ಪಾನ್ಸ್ ಸಿಕ್ಕಿತ್ತು. ಕೌಸ್ತುಭ ಮಣಿ ಮತ್ತು ಜಿಶು ಸೆಂಗುಪ್ತ ಕೂಡ ಚಿತ್ರದ ತಾರಾಗಣದಲ್ಲಿದ್ದಾರೆ.
ಬರೀ ಟೈಟಲ್‌ನಿಂದಲೇ '45' ಸಿನಿಮಾ ಬಹಳ ನಿರೀಕ್ಷೆ ಹುಟ್ಟಾಕ್ಕಿದೆ. ಕಂಪ್ಲೀಟ್ ಸಿನಿಮಾ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಈಗಾಗಲೇ ದೊಡ್ಡದಾಗಿ ಸಂಭ್ರಮಾಚರಣೆಗೆ ಸಿದ್ಧತೆ ನಡೀತಿದೆ. ವರ್ಷದ ಕೊನೆಗೆ ಪ್ರೇಕ್ಷಕರಿಗೆ ಒಂದೊಳ್ಳೆ ಪೈಸಾ ವಸೂಲ್ ಸಿನಿಮಾ ಕೊಡಲು ನಿರ್ದೇಶಕ ಅರ್ಜುನ್ ಜನ್ಯಾ ಮತ್ತವರ ತಂಡ ತಯಾರಿ ನಡೆಸಿದೆ.


Click it and Unblock the Notifications











