'ಪುಷ್ಪ' ನಿರ್ಮಾಪಕರ ತೆಕ್ಕೆಗೆ '45' ತೆಲುಗು ರೈಟ್ಸ್; ಕೆನಡಾದಲ್ಲಿ ಶೋಗಳು ಸೋಲ್ಡೌಟ್
ಅರ್ಜುನ್ ಜನ್ಯಾ ನಿರ್ದೇಶನದ '45' ಸಿನಿಮಾ ದೊಡ್ಡಮಟ್ಟದಲ್ಲಿ ಸದ್ದು ಮಾಡ್ತಿದೆ. ಮುಂದಿನ ವಾರ ಕ್ರಿಸ್‌ಮಸ್ ಸಂಭ್ರಮದಲ್ಲಿ ಸಿನಿಮಾ ತೆರೆಗಪ್ಪಳಿಸುತ್ತಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ಪ್ರೇಕ್ಷಕರ ಮುಂದೆ ಬರ್ತಿದೆ. ತೆಲುಗು, ತಮಿಳು, ಹಿಂದಿ, ಮಲಯಾಳಂ ರೈಟ್ಸ್ ಭರ್ಜರಿ ಬೆಲೆಗೆ ಬಿಕರಿಯಾಗಿದೆ.
ಕರ್ನಾಟಕ ಹಾಗೂ ವಿದೇಶಗಳಲ್ಲಿ ಬಿಡುಗಡೆಯಾದ ಒಂದು ವಾರ ತಡವಾಗಿ ಬೇರೆ ರಾಜ್ಯಗಳಲ್ಲಿ '45' ಆರ್ಭಟ ಶುರುವಾಗಲಿದೆ. ಕನ್ನಡದಲ್ಲಿ ಸಿನಿಮಾ ಬಿಡುಗಡೆ ಬಳಿಕ ಚಿತ್ರತಂಡ ಬೇರೆ ಬೇರೆ ರಾಜ್ಯಗಳಿಗೆ ತೆರಳಿ ಪ್ರಚಾರ ಮಾಡಲಿದೆ. ಈಗಾಗಲೇ ಹೈದರಾಬಾದ್ ಸೇರಿದಂತೆ ಹಲವು ಕಡೆಗಳಲ್ಲಿ ಪ್ರಮೋಷನ್ ಶುರುವಾಗಿದೆ. ಟ್ರೈಲರ್ ಎಲ್ಲಾ ಭಾಷೆಗಳಲ್ಲಿ ಸೂಪರ್ ಹಿಟ್ ಆಗಿ ದಾಖಲೆ ಬರೆದಿದೆ.

ದೊಡ್ಡ ದೊಡ್ಡ ಸಂಸ್ಥೆಗಳು ಬೇರೆ ಬೇರೆ ಭಾಷೆಗಳಲ್ಲಿ '45' ಚಿತ್ರದ ವಿತರಣೆ ಹಕ್ಕು ಕೊಂಡುಕೊಂಡಿದ್ದಾರೆ. ಕರ್ನಾಟಕದಲ್ಲಿ ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ ಭರ್ಜರಿ ಬೆಲೆಗೆ ರೈಟ್ಸ್ ಖರೀದಿಸಿದ್ದು ದೊಡ್ಡದಾಗಿ ಸಿನಿಮಾ ತೆರೆಗೆ ತರುತ್ತಿದ್ದಾರೆ. ಇನ್ನುಳಿದಂತೆ ಆಂಧ್ರ, ತೆಲಂಗಾಣ ರೈಟ್ಸ್ ಮೈತ್ರಿ ಮೂವಿ ಮೇಕರ್ಸ್ ಪಾಲಾಗಿದೆ. 'ಶ್ರೀಮಂತುಡು', 'ರಂಗಸ್ಥಳಂ' ಹಾಗೂ 'ಪುಷ್ಪ' ಸರಣಿ ಸೇರಿ ಹಲವು ಸಿನಿಮಾಗಳನ್ನು ಈ ಸಂಸ್ಥೆ ನಿರ್ಮಾಣ ಮಾಡಿದೆ. '45' ಚಿತ್ರದ ಕ್ರೇಜ್ ನೋಡಿ ಸಿನಿಮಾ ಕ್ವಾಲಿಟಿ ನೋಡಿ ಭಾರೀ ಮೊತ್ತಕ್ಕೆ ತೆಲುಗು ರಾಜ್ಯಗಳ ಹಕ್ಕುಗಳನ್ನು ಸ್ವಂತ ಮಾಡಿಕೊಂಡಿದ್ದಾರೆ.
ಜನವರಿ ಒಂದರಂದು ತೆಲುಗು ವರ್ಷನ್ ತೆರೆಗೆ ಬರಲಿದೆ. 'ಬಿಗಿಲ್', 'GOAT', 'ಡ್ರ್ಯಾಗನ್' ರೀತಿಯ ಸೆನ್ಸೇಷನ್ ಸಿನಿಮಾಗಳನ್ನು ತಮಿಳಿನಲ್ಲಿ ನಿರ್ಮಾಣವಾಗಿರುವ ಎಜಿಎಸ್ ಎಂಟರ್‌ಟೈನ್‌ಮೆಂಟ್ ಸಂಸ್ಥೆ ತಮಿಳುನಾಡು ರೈಟ್ಸ್ ಕೊಂಡುಕೊಂಡಿದ್ದಾರೆ. ದುಲ್ಕರ್ ಸಲ್ಮಾನ್ ಒಡೆತನದ ವೇಫೇರರ್ ಫಿಲ್ಮ್ಸ್ ಸಂಸ್ಥೆ ಕೇರಳ ರೈಟ್ಸ್ ಕೊಂಡುಕೊಂಡಿರುವುದು ವಿಶೇಷ. ಜೀ ಸ್ಟುಡಿಯೋ ಸಂಸ್ಥೆ ಉತ್ತರ ಭಾರತದಲ್ಲಿ ಸಿನಿಮಾ ಬಿಡುಗಡೆ ಮಾಡುತ್ತಿದೆ. ಹಾಗಾಗಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ದೊಡ್ಡದಾಗಿ '45' ಸಿನಿಮಾ ತೆರೆಗಪ್ಪಳಿಸಲಿದೆ.
ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ ಆಕ್ಷನ್ ಕಟ್ ಹೇಳಿರುವ ಮೊದಲ ಸಿನಿಮಾ ಇದು. ಟೀಸರ್‌ನಿಂದಲೇ ಭರವಸೆ ಮೂಡಿಸಿದ್ದ ಜನ್ಯಾ ಅದ್ಭುತವಾಗಿ ಟ್ರೈಲರ್ ಕಟ್ ಮಾಡಿ ಹುಬ್ಬೇರಿಸಿದ್ದಾರೆ. ಟ್ರೈಲರ್ ಕೊಟ್ಟ ಥ್ರಿಲ್ ಕಂಪ್ಲೀಟ್ ಸಿನಿಮಾ ಕೊಟ್ಟರೆ ಬಾಕ್ಸಾಫೀಸ್ ಶೇಕ್ ಆಗೋದು ಗ್ಯಾರಂಟಿ. ಶಿವಣ್ಣ ಹಾಗೂ ಉಪೇಂದ್ರ ಮುಖಾಮುಖಿಯೇ ಭಾರೀ ಕುತೂಹಲ ಮೂಡಿಸಿದೆ.
ಕೆನಡಾದಲ್ಲಿ ಟಿಕೆಟ್ ಸೋಲ್ಡೌಟ್
ದೂರದ ಕೆನಡಾದಲ್ಲಿ 2 ದಿನ ಮುನ್ನ ಅಂದರೆ ಡಿಸೆಂಬರ್ 23ರಂದೇ '45' ಸಿನಿಮಾ ತೆರೆಗೆ ಬರಲಿದೆ. ಈಗಾಗಲೇ ಒಂದೆರಡು ಶೋಗಳ ಟಿಕೆಟ್ ಸೋಲ್ಡೌಟ್ ಆಗೋಗಿದೆ. ಇದು ಸಹಜವಾಗಿಯೇ ಚಿತ್ರತಂಡದ ಸಂತಸಕ್ಕೆ ಕಾರಣವಾಗಿದೆ ಓವರ್‌ಸೀಸ್ ಮಾರ್ಕೆಟ್‌ನಲ್ಲಿ ಸಿನಿಮಾ ದೊಡ್ಡದಾಗಿ ಸದ್ದು ಮಾಡುವ ಸುಳಿವು ಸಿಕ್ಕಿದೆ.
ಟ್ರೈಲರ್ ದಾಖಲೆ
3 ದಿನಗಳ ಹಿಂದೆ ಬಿಡುಗಡೆಯಾಗಿದ್ದ '45' ಚಿತ್ರದ ಟ್ರೈಲರ್‌ಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿತ್ತು. ಇದೀಗ 25 ಮಿಲಿಯನ್‌ಗೂ ಅಧಿಕ ವೀವ್ಸ್ ಸಾಧಿಸಿ ಟ್ರೈಲರ್ ದಾಖಲೆ ಬರೆದಿದೆ. ಭಿನ್ನ ವಿಭಿನ್ನ ಅವತಾರಗಳಲ್ಲಿ ಶಿವಣ್ಣ ಹಾಗೂ ಉಪ್ಪಿ ಗಮನ ಸೆಳೆದಿದ್ದಾರೆ. ಅದರಲ್ಲೂ ಶಿವಣ್ಣ ಸ್ತ್ರೀ ವೇಷ ಕೊಂಚ ಹೆಚ್ಚೇ ಕುತೂಹಲ ಮೂಡಿಸಿದೆ.
ಕುತೂಹಲಭರಿತ ಕಥೆ
'45' ಚಿತ್ರದ ಟೈಟಲ್, ಕಥೆ ಎಲ್ಲವೂ ನಿರೀಕ್ಷೆ ಹೆಚ್ಚಿಸಿದೆ. ಟ್ರೈಲರ್‌ನಲ್ಲಿ ಕೂಡ ಕಥೆ ರಿವೀಲ್ ಆಗದಂತೆ ಜನ್ಯಾ ಎಚ್ಚರಿಕೆ ವಹಿಸಿದ್ದಾರೆ. ಇನ್ನು ಈಗಾಗಲೇ ಚಿತ್ರದ ಟಿವಿ ಹಾಗೂ ಓಟಿಟಿ ರೈಟ್ಸ್ ದಾಖಲೆ ಮೊತ್ತಕ್ಕೆ ಸೇಲ್ ಆಗಿದೆ. ಜೀ ಸಂಸ್ಥೆ ರೈಟ್ಸ್ ಸ್ವಂತ ಮಾಡಿಕೊಂಡಿದೆ.


Click it and Unblock the Notifications











