ಸಮಯ ಕೇಳಿದ ಶ್ರುತಿ ಹರಿಹರನ್, ವಿಚಾರಣೆ ಮುಂದೂಡಿಕೆ
Recommended Video

ನಟಿ ಶ್ರುತಿ ಹರಿಹರನ್ ವಿರುದ್ಧ ಅರ್ಜುನ್ ಸರ್ಜಾ ಸಲ್ಲಿಸಿದ್ದ ಮಾನನಷ್ಟ ಮೊಕದ್ದಮೆ ಹಾಗೂ ನಿರ್ಬಂಧ ಹೇರಿಕೆ ಅರ್ಜಿ ವಿಚಾರಣೆಯನ್ನ ನಾಳೆಗೆ ಮುಂದೂಡಲಾಗಿದೆ. ಇಂದು ಈ ಅರ್ಜಿಯ ವಿಚಾರಣೆ ನಡೆಯಬೇಕಿತ್ತು. ಆದ್ರೆ, ಶ್ರುತಿ ಹರಿಹರನ್ ಪರ ವಕೀಲರು ಆಕ್ಷೇಪಣೆ ಸಲ್ಲಿಸಿದ ಪರಿಣಾಮ ಮೇಯೋ ಹಾಲ್ ನ 22 ಸಿಸಿಹೆಚ್ ನ್ಯಾಯಾಧೀಶರು ನಾಳೆಗೆ ಮುಂದೂಡಿದ್ದಾರೆ.
ಶ್ರುತಿ ಹರಿಹರನ್ ಪರ ವಕೀಲ ಜೈನಾ ಕೊಠಾರಿ ಅವರು, ಸರ್ಜಾ ಸಲ್ಲಿಸಿದ್ದ ಅರ್ಜಿಗೆ ಆಕ್ಷೇಪಣೆ ಸಲ್ಲಿಸಿದ್ದಾರೆ. ಕೋರ್ಟ್ ಕೂಡ ಇದಕ್ಕೆ ಅವಕಾಶ ಮಾಡಿಕೊಟ್ಟಿದ್ದು ನಾಳೆ ಬೆಳಿಗ್ಗೆ ವಿಚಾರಣೆ ನಡೆಸುವ ತೀರ್ಮಾನ ಮಾಡಲಾಗಿದೆ.
ಇದಕ್ಕೂ ಮುಂಚೆ ನಟಿ ಶ್ರುತಿ ಹರಿಹರನ್ ಅವರು, ಅರ್ಜುನ್ ವಿರುದ್ಧ ಮೀಟೂ ಆರೋಪ ಮಾಡಿದ್ದರು. ಸರ್ಜಾ ಅವರಿಂದ ನನಗೆ ಲೈಂಗಿಕ ಕಿರುಕುಳ ಆಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿಕೊಂಡಿದ್ದರು. ಇದರಿಂದ ನನ್ನ ಗೌರವಕ್ಕೆ ಧಕ್ಕೆ ಬರುತ್ತಿದೆ, ಶ್ರುತಿ ಹೇಳಿಕೆ ನೀಡದಂತೆ ನಿರ್ಬಂಧ ಹೇರಬೇಕು ಎಂದು ಸರ್ಜಾ ಕೋರ್ಟ್ ಮೊರೆ ಹೋಗಿದ್ದರು. ಇದರ ಜೊತೆ ಮಾನನಷ್ಟ ಮೊಕದ್ದಮೆ ಕೂಡ ಹೂಡಿದ್ದಾರೆ.

ಇದಾದ ಬಳಿಕ ಅರ್ಜುನ್ ಸರ್ಜಾ ವಿರುದ್ಧ ಶ್ರುತಿ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಲೈಂಗಿಕ ಕಿರುಕುಳ ಆರೋಪ ಮಾಡಿ ದೂರು ದಾಖಲಿಸಿದ್ದಾರೆ. ಕೇಸ್ ದಾಖಲಿಸಿಕೊಂಡಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.


Click it and Unblock the Notifications











