ಸಂಧಾನದ ಮಾತೇ ಇಲ್ಲ, ಮನಸ್ಸಿನ ನೋವು ತೋಡಿಕೊಂಡ ಸರ್ಜಾ
Recommended Video

ಇಂದು ಎಲ್ಲರ ಚಿತ್ತ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯತ್ತ ನೆಟ್ಟಿತ್ತು. ಕಳೆದ ನಾಲ್ಕೈದು ದಿನಗಳಿಂದ ಭಾರಿ ಸದ್ದು ಮಾಡುತ್ತಿರುವ ಶ್ರುತಿ ಹರಿಹರನ್ ಮತ್ತು ಅರ್ಜುನ್ ಸರ್ಜಾ ಅವರ ಮೀಟೂ ವಿವಾದಕ್ಕೆ ರೆಬೆಲ್ ಸ್ಟಾರ್ ಅಂಬರೀಶ್ ಅಂತ್ಯವಾಡ್ತಾರೆ ಎಂಬ ನಿರೀಕ್ಷೆಯಲ್ಲಿದ್ದರು.
ಆದ್ರೆ, ಆ ನಿರೀಕ್ಷೆ ಹುಸಿಯಾಗಿದೆ. ಸಭೆಯ ಬಳಿಕ ಮಾತನಾಡಿದ ಅರ್ಜುನ್ ಸರ್ಜಾ ಯಾವುದೇ ಕಾರಣಕ್ಕೂ ಸಂಧಾನಕ್ಕೆ ನಾನು ಸಿದ್ಧವಿಲ್ಲ ಎಂದು ಬಹಿರಂಗವಾಗಿ ಹೇಳಿದ್ದಾರೆ. ಅಲ್ಲಿಗೆ ಅಂಬರೀಶ್ ಅವರ ಪ್ರಯತ್ನ ನೀರಿನಲ್ಲಿ ಹೋಮವಾಯಿತು.
ಫಿಲ್ಮ್ ಚೇಂಬರ್ ಗೆ ಮತ್ತು ಅಂಬರೀಶ್ ಅವರಿಗೆ ಗೌರವ ಕೊಟ್ಟು ನಾನು ಇಲ್ಲಿಗೆ ಬಂದಿದ್ದೇನೆ. ಕಾನೂನು ಹೋರಾಟ ಪ್ರಾರಂಭಿಸಿದ್ದೇನೆ. ನನಗೆ ಆಗಿರುವ ಅವಮಾನಕ್ಕೆ ನಾನು ಅಲ್ಲಿಯೇ ನ್ಯಾಯ ಪಡೆಯುತ್ತೇನೆ ಎಂದು ಸರ್ಜಾ ನೇರವಾಗಿ ಹೇಳಿಬಿಟ್ಟಿದ್ದಾರೆ. ಈ ವೇಳೆ ತಮ್ಮ ಮನದಲ್ಲಿದ್ದ ನೋವನ್ನ ಹೇಳಿಕೊಂಡ ಸರ್ಜಾ ಭಾವುಕರಾದಂತೆ ಕಂಡರು. ಅಷ್ಟಕ್ಕೂ, ಸರ್ಜಾ ಹೇಳಿದ್ದೇನು.? ಮುಂದೆ ಓದಿ......

ನನಗೆ ತುಂಬಾ ನೋವಾಗಿದೆ
ವಾಣಿಜ್ಯ ಮಂಡಳಿಯ ಸಭೆಯ ಬಳಿಕ ಮಾತನಾಡಿದ ಅರ್ಜುನ್ ಸರ್ಜಾ ''ಈ ಸಂದರ್ಭದಲ್ಲಿ ಮಾತನಾಡುತ್ತಿರುವುದು ವಿಷಾದನೀಯ, ನನಗೆ ತುಂಬಾ ನೋವಾಗಿದೆ. ಕಲಾವಿದರಿಗೆ, ನಿರ್ದೇಶಕರಿಗೆ, ನಿರ್ಮಾಪಕರಿಗೆ ವಾಣಿಜ್ಯ ಮಂಡಳಿ ತಾಯಿ ಇದ್ದಂತೆ. ವಿಚಾರಣೆ ಮಾಡುವುದಕ್ಕೆ ಕರೆದರು. ಗೌರವ ಕೊಟ್ಟು ನಾನು ಬಂದೆ. ಮನಸ್ಸಿನಲ್ಲಿದ್ದ ನನ್ನ ನೋವನ್ನ ತೋಡಿಕೊಂಡೆ'' ಎಂದು ಬೇಸರ ವ್ಯಕ್ತಪಡಿಸಿದರು.

ನನ್ನ ಅಭಿಮಾನಿಗಳಿಗೆ ನೋವು ತಂದಿದೆ
'ಚಿತ್ರರಂಗ ಯಾವಾಗಲೂ ಚೆನ್ನಾಗಿರಬೇಕು ಎಂಬ ಆಸೆ ಎಲ್ಲರದ್ದು. ಇದು ನನಗೆ ಚಿಕ್ಕ ವಿಷ್ಯ. ಇದರಿಂದ ನನ್ನ ಕುಟುಂಬಕ್ಕೆ, ಫ್ಯಾನ್ಸ್, ಹಿತೈಷಿಗಳಿಗೆ ಆಘಾತ ತಂದಿದೆ. ಕರ್ನಾಟಕ, ತೆಲುಗು, ತಮಿಳುನಾಡಿನಲ್ಲಿ ನನ್ನ ವ್ಯಕ್ತಿತ್ವಕ್ಕೆ ಧಕ್ಕೆಯಾಗಿದೆ. ಇದೊಂದು ಉದಾಹರಣೆ. ಅಮಾಯಕರು ಯಾರೂ ಬಲಿಯಾಗಬಾರದು' ಎಂದು ಅಭಿಪ್ರಾಯ ಪಟ್ಟರು.

ಸಂಧಾನದ ಮಾತೇ ಇಲ್ಲ
'ನನಗೆ ನೋವು ತುಂಬ ಇದೆ. ಸಂಧಾನದ ಮಾತೆ ಇಲ್ಲ. ನಾನು ಆಗಲೇ ಕೋರ್ಟಿಗೆ ಹೋಗಿದ್ದೀನಿ. ನಾನು ತಪ್ಪು ಮಾಡಿದ್ರೆ ನನಗೆ, ಅವರು ತಪ್ಪು ಮಾಡಿದ್ರೆ ಅವರಿಗೆ ಖಂಡಿತಾ ಶಿಕ್ಷೆಯಾಗಲಿ. ಸಂಧಾನವಾದ್ರೆ, ನಾನು ತಪ್ಪು ಮಾಡಿದೆ ಅಂತಾ ಆಗುತ್ತೆ' ಎಂದು ತಮ್ಮ ನಿಲುವು ಸ್ಪಷ್ಟಪಡಿಸಿದರು.

ಹಿಂದೆ ಯಾರೋ ಇದ್ದಾರೆ
'ಸಿನಿಮಾದಲ್ಲಿ ಕೈ ಹಿಡಿದುಕೊಂಡ್ರು, ಊಟಕ್ಕೆ ಕರೆದುಬಿಟ್ರು, ಇದೆಲ್ಲಾ ಮೀಟೂ ಆಗುವುದು ಸರಿಯಲ್ಲ. ಮೀಟೂ ಅಭಿಯಾನ ಎನ್ನುವುದು ಅದ್ಭುತ ಪ್ರಕ್ರಿಯೆ. ಹೆಣ್ಣಿಗೆ ಆದ ಅನ್ಯಾಯವನ್ನ ಹೇಳಿಕೊಳ್ಳುವುದು ಒಳ್ಳೆ ವೇದಿಕೆ. ನಾನು ಮಹಿಳೆಯರ ಪರವಾಗಿ ಹಲವು ಉತ್ತಮ ಕೆಲಸ ಮಾಡಿದ್ದೇನೆ, ಮಾಡುತ್ತಿದ್ದೇನೆ. ಅದನ್ನ ಬಹಿರಂಗವಾಗಿ ಹೇಳಿಕೊಳ್ಳುವುದು ಪ್ರಚಾರವಾಗುತ್ತೆ ಅಷ್ಟೇ. ಇದರ ಹಿಂದೆ ಯಾರೂ ಷಡ್ಯಂತ್ರ ಮಾಡ್ತಿದ್ದಾರೆ ಎನ್ನುವುದು ನನ್ನ ಅನುಮಾನ. ಮುಂದೆ ನಿಮಗೆ ಗೊತ್ತಾಗುತ್ತೆ'' ಎಂದು ಸರ್ಜಾ ತಿಳಿಸಿದರು.


Click it and Unblock the Notifications











