ಅಕ್ಟೋಬರ್ ನಲ್ಲಿ ಅರ್ಜುನ್ ಸರ್ಜಾ 'ಅಭಿಮನ್ಯು'
ಆಕ್ಷನ್ ಹೀರೋ ಅರ್ಜುನ್ ಸರ್ಜಾ ಅವರು ನಟಿಸಿ, ನಿರ್ದೇಶಿಸಿ ಜೊತೆಗೆ ಕಥೆ ಚಿತ್ರಕಥೆ, ಸಂಭಾಷಣೆ ಹಾಗೂ ನಿರ್ಮಾಣ ಮಾಡಿರುವ ಚಿತ್ರ 'ಅಭಿಮನ್ಯು' ಚಿತ್ರದ ಬಗ್ಗೆ ಅವರ ಅಭಿಮಾನಿಗಳು ಸಾಕಷ್ಟು ಕಾತುರರಾಗಿದ್ದಾರೆ. ಈ ಚಿತ್ರ ಇದೀಗ ಸಿದ್ಧವಾಗಿದ್ದು ಅಕ್ಟೋಬರ್ ನಲ್ಲಿ ತೆರೆಕಾಣುತ್ತಿದೆ.
ಇಷ್ಟಕ್ಕೂ ಅಭಿಮನ್ಯು ಚಿತ್ರದ ಕಥೆ ಏನೆಂದರೆ ಭಾರತೀಯ ಶಿಕ್ಷಣ ವ್ಯವಸ್ಥೆ. ಶಿಕ್ಷಣ ಎಂಬ ಚಕ್ರವ್ಯೂಹವನ್ನು ಈ ಅಭಿಮನ್ಯು ಹೇಗೆ ಭೇದಿಸುತ್ತಾನೆ ಎಂಬುದೇ ಚಿತ್ರದ ಕಥಾಹಂದರ. ಮಹಾಭಾರತದ ಅಭಿಮನ್ಯು ಗೆದ್ದಂತೆ ಇಲ್ಲಿನ ಅಭಿಮನ್ಯು ಸೋಲಲ್ಲ ಎನ್ನುತ್ತಾರೆ ಅರ್ಜುನ್ ಸರ್ಜಾ. [ಜೀ ಕನ್ನಡ ಟಿವಿ ಶೋನಲ್ಲಿ ಕಣ್ಣೀರಿಟ್ಟ ಅರ್ಜುನ್ ಸರ್ಜಾ]
ನಮ್ಮ ಶಿಕ್ಷಣ ವ್ಯವಸ್ಥೆ ಹೇಗಿದೆ, ಹೇಗಾಗಬೇಕು, ಬದಲಾವಣೆ ತರಲು ಏನೆಲ್ಲಾ ಮಾಡಬೇಕು ಎಂಬ ಕಮರ್ಷಿಯಲ್ ಅಂಶಗಳನ್ನು ತುಂಬಿ ಕಥೆ ಹೆಣೆಯಲಾಗಿದೆ. ಕಥೆ ಕಮರ್ಷಿಯಲ್ ದೃಷ್ಟಿಕೋನದಲ್ಲಿ ಸಾಗಿದರೂ ವಾಸ್ತವಕ್ಕೆ ತುಂಬಾ ಹತ್ತಿರವಾಗಿರುತ್ತದೆ ಎಂಬುದು ಸರ್ಜಾ ಅವರ ಮಾತು.ತಮ್ಮ ಚಿತ್ರಕ್ಕೆ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರೇ ಸ್ಫೂರ್ತಿ ಎನ್ನುವ ಸರ್ಜಾ ಅವರು, ನಿಯತಕಾಲಿಕೆಯೊಂದರಲ್ಲಿ ಅವರು ಬರೆದಿದ್ದ ಲೇಖನವೇ ತಾವು ಈ ಚಿತ್ರ ಕೈಗೆತ್ತಿಕೊಳ್ಳಲು ಕಾರಣ ಎನ್ನುತ್ತಾರೆ. ನಮ್ಮ ಶಿಕ್ಷಣ ವ್ಯವಸ್ಥೆ ಬಗ್ಗೆ ಸಾಕಷ್ಟು ಅಧ್ಯಯನವನ್ನೂ ಮಾಡಿ ಕಥೆಗೆ ಒಂದು ಸುಂದರ ಚೌಕಟ್ಟು ಹಾಕಿದ್ದಾರೆ. ಬೆಳ್ಳಿ ತೆರೆಯ ಮೇಲೆ ಪ್ರತಿಯೊಬ್ಬ ಭಾರತೀಯ ನಾಗರೀಕನೂ ನೋಡಲೇ ಬೇಕಾದ ರಿಯಲಿಟಿ ಸಿನೆಮಾ ಇದು ಎನ್ನುತ್ತಾರೆ ಸರ್ಜಾ.

ಕೆ.ಕೆ ಸಂಕಲನ, ಶಶಿಧರ್ ಅಡಪ ಕಲಾನಿರ್ದೇಶನ, ರಾಜುಸುಂದರಂ ನೃತ್ಯ ನಿರ್ದೇಶನ ಹಾಗೂ ಶಿವಾರ್ಜುನ್ ನಿರ್ಮಾಣ ನಿರ್ವಹಣೆಯಿರುವ ಈ ಚಿತ್ರದ ತಾರಾಬಳಗದಲ್ಲಿ ಅರ್ಜುನ್ ಸರ್ಜಾ, ಸುರ್ವಿನ್ ಚಾವ್ಲಾ, ರವಿಕಾಳೆ, ಸಿಮ್ರಾನ್ ಕಪೂರ್, ರಾಹುಲ್ ದೇವ್, ಬಿರಾದಾರ್, ಜಹಂಗೀರ್, ವಿನಯಾಪ್ರಸಾದ್, ಸತೀಶ್ ಮುಂತಾದವರಿದ್ದಾರೆ. (ಫಿಲ್ಮಿಬೀಟ್ ಕನ್ನಡ)


Click it and Unblock the Notifications












