ಹೊಸ ಚಿತ್ರಕ್ಕೆ ಕಥೆ ಬರೆದು ಲಕ್ಷ ಗೆಲ್ಲಿ; ಸಿನಿಮಾದಲ್ಲಿ ಕೆಲಸ ಮಾಡುವ ಸುವರ್ಣಾವಕಾಶವೂ ಕಾದಿದೆ
ಕನ್ನಡ ಚಿತ್ರರಂಗದಲ್ಲಿ ವರ್ಷಕ್ಕೆ 200ಕ್ಕೂ ಅಧಿಕ ಸಿನಿಮಾಗಳು ಬಿಡುಗಡೆ ಆಗುತ್ತವೆ. ಆದರೆ ಸಕ್ಸಸ್ ರೇಟ್ ಮಾತ್ರ ಬಹಳ ಕಮ್ಮಿ. ಕೇವಲ ಬೆರಳೆಣಿಯಷ್ಟು ಸಿನಿಮಾಗಳಷ್ಟೇ ಗೆಲ್ಲುತ್ತವೆ. ಉಳಿದ ಬಹುತೇಕ ಸಿನಿಮಾಗಳು ಸೋತು ನಷ್ಟ ಅನುಭವಿಸುತ್ತವೆ. ಕನ್ನಡ ಸಿನಿಮಾಗಳಲ್ಲಿ ಒಳ್ಳೆ ಕಥೆಗಳು ಇಲ್ಲ ಎನ್ನುವುದು ಬಹಳ ದೊಡ್ಡ ಆರೋಪ.
ಒಂದು ಸಿನಿಮಾ ಗೆಲ್ಲಬೇಕು ಅಂದ್ರೆ ಕಥೆ ಬಹಳ ಮುಖ್ಯವಾಗುತ್ತದೆ. ಆದರೆ ಕನ್ನಡ ಚಿತ್ರರಂಗದಲ್ಲಿ ಕಥೆಗಾರರನ್ನು ಪ್ರೋತ್ಸಾಹಿಸುವವರು ಕಮ್ಮಿ. ಇನ್ನು ದಶಕಗಳ ಕಾಲ ರೀಮೆಕ್ ಹಾವಳಿ ಹೆಚ್ಚಾಗಿ ಉತ್ತಮ ಕಥೆಗಳು ನಮ್ಮಲ್ಲಿ ಬರುತ್ತಿರಲಿಲ್ಲ. ಪ್ಯಾನ್ ಇಂಡಿಯಾ ಜಮಾನ ಶುರುವಾಗಿ ರೀಮೆಕ್‌ಗೆ ಭಾಗಶಃ ಬ್ರೇಕ್ ಬಿದ್ದಿದೆ. ಇದೀಗ ಸ್ಟಾರ್ ನಟರು, ಫಿಲ್ಮ್ ಮೇಕರ್ಸ್ ಹೊಸ ಹೊಸ ಕಥೆಗಳ ಹುಡುಕಾಟದಲ್ಲಿದ್ದಾರೆ.

ಮಲಯಾಳಂನಲ್ಲಿ ಒಳ್ಳೆಯ ಕಥೆಗಳನ್ನು ಬರೆಯುತ್ತಿದ್ದಾರೆ. ಅಂತಹ ಕಥೆಗಳು ಯಾಕೆ ನಮ್ಮಲ್ಲಿ ಸೃಷ್ಟಿಯಾಗುತ್ತಿಲ್ಲ ಎಂದು ಕೆಲವರು ಕೇಳುತ್ತಾರೆ. ಇತ್ತೀಚೆಗೆ ಕ್ರೇಜಿಸ್ಟಾರ್ ರವಿಚಂದ್ರನ್ ಇದೇ ವಿಚಾರದ ಬಗ್ಗೆ ಮಾತನಾಡಿದ್ದರು. ಮಲಯಾಳಂನಲ್ಲಿ ಅಷ್ಟು ಒಳ್ಳೆಯ ಕಥೆಗಳಿದ್ದರೆ ನಮ್ಮವರು ಅಲ್ಲೇ ಹೋಗಿ ಕಥೆ ತಂದು ಸಿನಿಮಾ ಮಾಡಬಹುದಲ್ಲ. ಅದಕ್ಕೆ ಅವಕಾಶ ಇದೆ ಅಲ್ವಾ? ಯಾಕೆ ಮಾಡಬಾರದು? ಎಂದಿದ್ದರು.
ಸಿನಿಮಾ ನೋಡುವ ಪ್ರತಿಯೊಬ್ಬ ಪ್ರೇಕ್ಷಕನು, ಕಥೆ ಹೀಗಿರಬೇಕಿತ್ತು, ಹಾಗಿದ್ದರೆ ಚೆಂದ. ನಾನೇ ಇದಕ್ಕಿಂತ ಒಳ್ಳೆಯ ಕಥೆ ಬರೆಯುತ್ತೇನೆ ಎಂದು ಮಾತನಾಡುವುದನ್ನು ಕೇಳಿರುತ್ತೇವೆ. ಕೆಲವರು ನನ್ನ ಬಳಿ ಒಳ್ಳೆ ಕತೆ ಇದೆ ಒಮ್ಮೆ ಕೇಳಿ ಎಂದು ನಟ, ನಿರ್ಮಾಪಕರನ್ನು ಸೋಶಿಯಲ್ ಮೀಡಿಯಾದಲ್ಲಿ ಕೇಳುತ್ತಿರುತ್ತಾರೆ. ಅಂತಹವರಿಗಾಗಿ ಸುವರ್ಣಾವಕಾಶ ಬಂದಿದೆ. ನೀವು ಕೂಡ ಕಥೆ ಬರೆದು ಬಹುಮಾನ ಗೆಲ್ಲಿ. ಒಳ್ಳೆ ಕಥೆ ಬರೆದವರಿಗೆ ಸಿನಿಮಾದಲ್ಲಿ ಕೆಲಸ ಮಾಡುವ ಅವಕಾಶ ಕೂಡ ಸಿಗಲಿದೆ.
ಆರೋಹ ಪ್ರೊಡಕ್ಷನ್ಸ್ ಸಂಸ್ಥೆ ತನ್ನ ಎರಡನೇ ನಿರ್ಮಾಣದ ಚಿತ್ರಕ್ಕೆ ಮುಂದಾಗಿದೆ. ಈ ಚಿತ್ರಕ್ಕೆ ಕಥೆ ಬರೆಯಲು ಸಂಸ್ಥೆ ಹೊಸ ಕಥೆಗಾರರಿಗೆ ಆಹ್ವಾನ ನೀಡಿದೆ. ಇದೇ ಸಂಸ್ಥೆ ಇತ್ತೀಚೆಗೆ ಆದಿತ್ಯ ಅಭಿನಯದ 'ಕಾಂಗರೂ' ಎನ್ನುವ ಚಿತ್ರ ನಿರ್ಮಿಸಿತ್ತು. ಶಾಲಾ ಕಾಲೇಜು ದಿನದಲ್ಲಿ ನೀವು ಮಾಡಿದ ಮೋಜು ಮಸ್ತಿ ಬಗ್ಗೆ ಕಥೆ ಬರೆಯಿರಿ. ಹೌದು, ನಿಮ್ಮ ಶಾಲಾ ಹಾಗೂ ಕಾಲೇಜು ದಿನಗಳಲ್ಲಿ ನಿಮ್ಮ ಸ್ನೇಹಿತರ ಜೊತೆ ನೀವು ಸಂಭ್ರಮಿಸಿದ ಖುಷಿಯ ಕ್ಷಣಗಳು ಮತ್ತು ನೀವು ಮಾಡಿರುವ ಕಿರಿಕ್‌ಗಳು ಹಾಗೂ ನಿಮ್ಮ ಹಳೆಯ ಲವ್ ಸ್ಟೋರಿಗಳ ಬಗ್ಗೆ 3 ಪುಟ ಮೀರದಂತೆ ಬರೆದು ಕಳುಹಿಸಿ ಎಂದು ಕೇಳಿದೆ.
ಆಯ್ಕೆಯಾದ ಕಥೆಗೆ ಒಂದು ಲಕ್ಷ ಬಹುಮಾನವನ್ನು ಘೋಷಿಸಿದ್ದಾರೆ. ಪ್ರಥಮ ಬಹುಮಾನ 1 ಲಕ್ಷ ರೂ. 2ನೇ ಬಹುಮಾನ 50 ಸಾವಿರ ರೂ. ಹಾಗೂ 3ನೇ ಬಹುಮಾನವಾಗಿ 10 ಕಥೆಗಳಿಗೆ ತಲಾ 25 ಸಾವಿರ ಬಹುಮಾನವಾಗಿ ಸಿಗಲಿದೆ. ಇದು ಸಿನಿಮಾವೊಂದಕ್ಕೆ ಬೇಕಾಗಿರುವ ಬರಹ. ಹಾಗಾಗಿ ರೋಚಕ ಎನಿಸುವ ನಿಮ್ಮ ಬರಹಕ್ಕೆ ಸೂಕ್ತ ಬಹುಮಾನವಿದೆ ಎಂದು ಸಂಸ್ಥೆ ವಿವರಿಸಿದೆ.
ನಿಮ್ಮ ಬರವಣಿಗೆ ಸ್ವಾರಸ್ಯಕರವಾಗಿದ್ದರೆ ಪ್ರಥಮ ಆದ್ಯತೆ, ಪೂರ್ತಿ ಕಥೆ ಬೇಡ. ನೀವು ಅನುಭವಿಸಿರುವ ಕೆಲ ಸನ್ನಿವೇಶಗಳನ್ನು ವಿವರವಾಗಿ ಬರೆದು ಕಳುಹಿಸಿ ಸಾಕು. ಪ್ರಥಮ ಮತ್ತು ದ್ವಿತೀಯ ಸ್ಥಾನಗಳನ್ನು ಗಳಿಸುವವರು ನಮ್ಮ ಸಿನಿಮಾದ ಚಿತ್ರಕಥೆ ವಿಭಾಗದಲ್ಲಿ ನಿಮ್ಮ ಹೆಸರನ್ನು ಬಳಸಲಾಗುವುದು, ನಿಮ್ಮ ಲೇಖನ ಈ 9844460128 ವಾಟ್ಸಾಪ್ ನಂಬರ್ ಗೆ ಕಳುಹಿಸಿ ಅಥವಾ [email protected] ಇದಕ್ಕೆ ಮೇಲ್ ಮಾಡಬಹುದು.
ನಿರ್ದೇಶಕ ಕಿಶೋರ್ ಮೇಗಳಮನೆ, ಕಥೆಗಾರ, ಸಂಭಾಷಣೆಗಾರ ಮಾಸ್ತಿ, ಹಿರಿಯ ನಿರ್ದೇಶಕ ಶಿವಮಣಿ ಸೇರಿದಂತೆ ಕೆಲ ನಿರ್ದಶಕರು ತೀರ್ಪುಗಾರರ ಮಂಡಳಿಯಲ್ಲಿರುತ್ತಾರೆ ಎಂದು ತಿಳಿಸಿದೆ. ಮತ್ಯಾಕೆ ತಡ ನೀವು ಕೂಡ ಈ ಸುವರ್ಣಾವಕಾಶ ಬಳಸಿಕೊಳ್ಳಿ. ಬಹುಮಾನ ಗೆಲ್ಲುವುದರ ಜೊತೆಗೆ ಸಿನಿಮಾ ಅವಕಾಶ ಪಡೆಯಿರಿ.


Click it and Unblock the Notifications











