#ArrestPrakashRaj: 'ಅರೆಸ್ಟ್ ಪ್ರಕಾಶ್ ರಾಜ್'.. ವಿಕ್ರಂ ಲ್ಯಾಂಡರ್ ಚಂದ್ರನ ಮೇಲೆ ಇಳಿಯುವುದಕ್ಕೂ ಮುನ್ನ ಏನಿದು ಸುದ್ದಿ?
ಕಳೆದ ಕೆಲವು ದಿನಗಳಿಂದ ಪ್ರಕಾಶ್ ರಾಜ್ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ. ಇತ್ತೀಚೆಗೆ ಚಾಲ್‌ವಾಲಾನ ಕಾರ್ಟೂನ್ ಫೋಟೊ ಹಾಕಿ 'ಚಂದ್ರಯಾನ್ 3' ಬಗ್ಗೆ ಪೋಸ್ಟ್ ಮಾಡಿದ್ದರು. ಇದು ನೆಟ್ಟಿಗರನ್ನು ನಿದ್ದೆ ಕೆಡಿಸಿತ್ತು. ಈ ಟ್ವೀಟ್ ಸಂಬಂಧ ಸೋಶಿಯಲ್ ಮೀಡಿಯಾದಲ್ಲಿ ಪ್ರಕಾಶ್ ರಾಜ್‌ರನ್ನು ಜನರು ತರಾಟೆಗೆ ತೆಗೆದುಕೊಂಡಿದ್ದರು.
ನೆಟ್ಟಿಗರು ಹಾಗೂ ರಾಜಕೀಯ ಮುಖಂಡರ ಆಕ್ರೋಶ ವ್ಯಕ್ತಪಡಿಸುತ್ತಿದ್ದಂತೆ ಪ್ರಕಾಶ್ ರಾಜ್ ಆ ಟ್ವೀಟ್ ಬಗ್ಗೆ ಸ್ಪಷ್ಟತೆ ಕೊಟ್ಟಿದ್ದರು. ನೀಲ್ ಆರ್ಮ್‌ಸ್ಟ್ರಾಂಗ್ ಚಂದ್ರನ ಮೇಲೆ ಕಾಲಿಟ್ಟಾಗ ಮಲಯಾಳಿ ಚಾಯ್‌ವಾಲನ ಬಗ್ಗೆ ಜೋಕ್ ಹುಟ್ಟಿಕೊಂಡಿತ್ತು. ಅದನ್ನು ಶೇರ್ ಮಾಡಿದ್ದು, ಅದು ಗೋಧಿ ಮೀಡಿಯಾ ಹಾಗೂ ಅನಕ್ಷರಸ್ಥ ಟ್ರೋಲಿಗರಿಗೆ ಅರ್ಥವಾದಂತೆ ಕಾಣುತ್ತಿಲ್ಲ ಎಂಬರ್ಥದಲ್ಲಿ ತಿರುಗೇಟು ನೀಡಿದ್ದರು.

ಇದೆಲ್ಲದರ ಹೊರತಾಗಿ ಪ್ರಕಾಶ್ ರಾಜ್ ವಿರುದ್ಧ ನೆಟ್ಟಿಗರ ಕೋಪ ಕಡಿಮೆಯಾದಂತೆ ಕಾಣುತ್ತಿಲ್ಲ. ಚಂದ್ರನ ಮೇಲೆ ವಿಕ್ರಂ ಲ್ಯಾಂಡರ್ ಇನ್ನೇನು ಇಳಿಯುವುದಕ್ಕೆ ಕೆಲವೇ ಗಂಟೆಗಳು ಇರುವಾಗಲೇ ಸೋಶಿಯಲ್ ಮೀಡಿಯಾದಲ್ಲಿ ಅರೆಸ್ಟ್ ಪ್ರಕಾಶ್ ರಾಜ್ ಅನ್ನೋ ಅಭಿಯಾನ ಶುರುವಾಗಿದೆ.
'ಅರೆಸ್ಟ್ ಪ್ರಕಾಶ್ ರಾಜ್' ಟ್ರೆಂಡಿಂಗ್
'ಚಂದ್ರಯಾನ 3' ಫಲಿತಾಂಶ ಹೊರಬೀಳುವುದಕ್ಕೆ ಇನ್ನು ಕೆಲವೇ ಗಂಟೆಗಳು ಬಾಕಿ ಉಳಿದಿವೆ. ಚಂದ್ರನ ಮೇಲೆ ಪ್ರತಿಕೂಲ ವಾತಾವರಣವಿದ್ದರೆ, ಇಂದು (ಆಗಸ್ಟ್ 23) ಸಂಜೆ 6 ಗಂಟೆ 4 ನಿಮಿಷಕ್ಕೆ ವಿಕ್ರಮ್ ಲ್ಯಾಂಡರ್ ಇಳಿಯಲಿದೆ. ಈ ಹಂತದಲ್ಲಿ 'ಚಂದ್ರಯಾನ 3' ಯಶಸ್ವಿಯಾದರೆ ಭಾರತ ವಿಶ್ವ ಮಟ್ಟದಲ್ಲಿ ಸದ್ದು ಮಾಡಲಿದೆ. ಇದೇ ವೇಳೆ ಟ್ವಿಟರ್‌ನಲ್ಲಿ 'ಅರೆಸ್ಟ್ ಪ್ರಕಾಶ್ ರಾಜ್' ಟ್ರೆಂಡಿಂಗ್‌ನಲ್ಲಿದೆ.

ಪ್ರಕಾಶ್ ರಾಜ್ ವಿರುದ್ಧ ಥ್ರಿಲ್ಲರ್ ಮಂಜು
'ಚಂದ್ರಯಾನ 3' ಬಗ್ಗೆ ಪ್ರಕಾಶ್ ರಾಜ್ ಮಾಡಿದ ಟ್ವೀಟ್‌ಗೆ ಸ್ಯಾಂಡಲ್‌ವುಡ್‌ನಲ್ಲೂ ವಿರೋಧ ವ್ಯಕ್ತವಾಗುತ್ತಿದೆ. ಕನ್ನಡ ಚಿತ್ರರಂಗದ ಸಾಹಸ ನಿರ್ದೇಶಕ ಡಾ. ಥ್ರಿಲ್ಲರ್ ಮಂಜು ಕೂಡ ಪ್ರಕಾಶ್ ವಿರುದ್ಧ ತಿರುಗಿಬಿದ್ದಿದ್ದಾರೆ. "ನಮ್ಮ ದೇಶದ ಹೆಮ್ಮೆಯ ವಿಜ್ಞಾನಿಗಳನ್ನು ಹೀಯಾಳಿಸುವ ವ್ಯಂಗ್ಯ ಚಿತ್ರವನ್ನು ಹಾಕಿ ಪ್ರಧಾನಿ ಅವರನ್ನು ಅವಹೇಳನ ಮಾಡಿರುವ ದೇಶದ್ರೋಹಿ ಪ್ರಕಾಶ್ ರಾಜ್‌ಗೆ ನನ್ನ ಧಿಕ್ಕಾರ" ಎಂದು ಟ್ವೀಟ್ ಮಾಡಿದ್ದಾರೆ.
ಪ್ರಕಾಶ್ ರಾಜ್ ಘಟನೆ ಏನು?
'ಚಂದ್ರಯಾನ 3' ಕಳೆದೊಂದು ತಿಂಗಳಿನಿಂದ ವಿಶ್ವದ ಗಮನ ಸೆಳೆಯುತ್ತಿತ್ತು. ಈ ಸಂದರ್ಭದಲ್ಲಿ ಪ್ರಕಾಶ್ ರಾಜ್ 'ಚಂದ್ರಯಾನ 3' ಕುರಿತು ಟ್ವೀಟ್ ಮಾಡಿದ್ದರು. "ಬ್ರೇಕಿಂಗ್ ನ್ಯೂಸ್: ಚಂದ್ರನಿಂದ ವಿಕ್ರಂ ಲ್ಯಾಂಡರ್ ಕಳುಹಿಸಿದ ಮೊದಲ ಫೋಟೊ.. ವಾವ್ಹ್.." ಎಂದು ಟೀ ಸುರಿಯುತ್ತಿರುವ ಕಾರ್ಟೂನ್ ವ್ಯಕ್ತಿಯ ಫೋಟೊವನ್ನು ಪೋಸ್ಟ್ ಮಾಡಿದ್ದರು. ಇದೇ ಫೋಟೊ ಹಾಗೂ ಟ್ವೀಟ್ ವಿವಾದಕ್ಕೆ ಎಡೆ ಮಾಡಿಕೊಟ್ಟಿತ್ತು. ಭಾರತದ ವಿಜ್ಞಾನಿಗಳು ಹಾಗೂ ದೇಶಕ್ಕೆ ಅವಮಾನ ಮಾಡಲಾಗಿದೆ ಎಂದು ಕಿಡಿ ಕಾರಿದ್ದರು.
ಪ್ರಕಾಶ್ ರಾಜ್ ಪ್ರತಿಕ್ರಿಯೆ ಏನು?
ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ, ಪ್ರಕಾಶ್ ರಾಜ್ ಪ್ರತಿಕ್ರಿಯೆ ನೀಡಿದ್ದರು. "ಗೋದಿ ಮೀಡಿಯಾದವರಿಗೆ ಹಾಗೂ ಅನಕ್ಷರಸ್ಥ ಟ್ರೋಲಿಗರಿಗೆ ತಿಳಿದಿರೋದು ಒಬ್ಬ ಚಾಯ್‌ವಾಲ. 1960ರ ಕಾಲದಿಂದಲೂ ಸ್ಫೂರ್ತಿಯಾಗಿರುವ ಮಲಯಾಳಿ ಚಾಯ್‌ವಾಲ ಬಗ್ಗೆ ಹೆಮ್ಮೆಯಿಂದ ಹೇಳುತ್ತಿದ್ದೇನೆ. ತಿಳಿದುಕೊಳ್ಳುವ ಮನಸ್ಸಿದ್ದರೆ ಓದಿ" ಚಾಯ್‌ವಾಲ ಬಗ್ಗೆ ಇರುವ ಅಸಲಿ ಜೋಕ್‌ನ ಲಿಂಕ್ ಶೇರ್ ಮಾಡಿದ್ದರು.


Click it and Unblock the Notifications











