ಅಪ್ಪುವಿನ ಆ ಕೊನೆಯ ಅಪ್ಪುಗೆ ಮರೆಯಲಾರೆ: ಎಂ.ಕೆ. ಮಠ
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಿಧನಕ್ಕೆ ಇಡೀ ರಾಜ್ಯ ಶೋಕತಪ್ತವಾಗಿದೆ. ಅಪ್ಪುವಿನ ಕೋಟ್ಯಂತರ ಅಭಿಮಾನಿಗಳಿಗೆ ಅಪ್ಪುವಿನ ಅಕಾಲಿಕ ನಿಧನ ದೊಡ್ಡ ಶಾಕ್ ನೀಡಿದೆ. ತನ್ನ ಮನೆಯ ಹುಡುಗನನ್ನು ಕಳೆದುಕೊಂಡ ಭಾವ ಸಮಸ್ತ ಕನ್ನಡಿಗರದ್ದಾಗಿದೆ. ಪುನೀತ್ ರಾಜ್ ಕುಮಾರ್ ರವರ ಕೊನೆಯ 'ಯುವರತ್ನ' ಚಿತ್ರದಲ್ಲಿ ಕನ್ನಡಿಗರ ಮನಸ್ಸನ್ನು ಕಂಪಿಸಿದ್ದ ಅಟೆಂಡರ್‌ನ್ನು ಅಪ್ಪುವ ಕ್ಲೈಮಾಕ್ಸ್ ದೃಶ್ಯ ದ ಅಟೆಂಡರ್ ಪಾತ್ರಧಾರಿ, ಹಿರಿಯ ಕಲಾವಿದ ಎಂ.ಕೆ ಮಠ ಇನ್ನೂ ಅಪ್ಪು ನಿಧನದ ಶಾಕ್ ನಿಂದ ಹೊರಬಂದಿಲ್ಲ.
ಅಪ್ಪುವಿನ ಕೊನೆಯ ಬಿಸಿ ಅಪ್ಪುಗೆಯ ನೆನಪು ಇನ್ನೂ ಎಂ.ಕೆ ಮಠ ಅವರನ್ನು ಕಾಡುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ನಿವಾಸಿಯಾಗಿರುವ ಮಠ ಶುಕ್ರವಾರ ಬೆಳಗ್ಗಿನಿಂದ ಮನೆ ಬಿಟ್ಟು ಹೊರ ಹೋಗಿಲ್ಲ. ಡಾ.ರಾಜ್ ಕುಟುಂಬದ ಅಪ್ಪಟ ಅಭಿಮಾನಿಯಾಗಿರುವ ಎಂ.ಕೆ ಮಠ ಅಪ್ಪುವಿನ ಬಳಿ ಅಣ್ಣಾವ್ರ ವ್ಯಕ್ತಿತ್ವವನ್ನು ಕಂಡಿದ್ದರು. ಪುನೀತ್ ರಾಜ್ ಕುಮಾರ್ ಜೊತೆಗಿನ ಒಡನಾಟವನ್ನು ನೆನಪು ಹಾಕುತ್ತಾ ಎಂ.ಕೆ ಮಠ ಗದ್ಗದಿತರಾಗಿದ್ದಾರೆ.
ಎಂ.ಕೆ ಮಠ ಪುನೀತ್ ರಾಜ್ ಕುಮಾರ್ ಜೊತೆಗೆ ಎರಡು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ರಾಜಕುಮಾರ ಮತ್ತು ಯುವರತ್ನ ಚಿತ್ರಗಳಲ್ಲಿ ಪುನೀತ್ ಜೊತೆ ಮಠ ಸ್ಕ್ರೀನ್ ಹಂಚಿಕೊಂಡಿದ್ದಾರೆ. ಅಪ್ಪುವಿನ ಜೊತೆಗಿನ ಅತ್ಯಮೂಲ್ಯ ಸಮಯವನ್ನು ಎಂ.ಕೆ ಮಠ ಮೆಲುಕು ಹಾಕಿದ್ದಾರೆ.

ಡಾ.ರಾಜ್ ಕುಮಾರ್ ಕುಟಂಬದ ಅಭಿಮಾನಿಯಾಗಿದ್ದ ಎಂ.ಕೆ ಮಠ ಪುನೀತ್ ಅವರಲ್ಲಿ ರಾಜಕುಮಾರ್ ರವರ ವ್ಯಕ್ತಿತ್ವ ಕಂಡಿದ್ದರು. ರಾಜಕುಮಾರ ಚಿತ್ರದಲ್ಲಿ ಒಂದು ದೃಶ್ಯದಲ್ಲಿ ಪುನೀತ್ ಜೊತೆಗೆ ನಟನೆ ಮಾಡುವ ಅವಕಾಶ ಲಭ್ಯವಾಗಿತ್ತು. ಆ ಸಂಧರ್ಭದಲ್ಲಿ ಅಪ್ಪುವಿನ ಜೊತೆ ಹೆಚ್ಚಿನ ಒಡನಾಟ ಇರಲಿಲ್ಲ. ಆ ಬಳಿಕ ಬಂದ ಯುವರತ್ನ ಚಿತ್ರದಲ್ಲೂ ಅಪ್ಪುವಿನ ಜೊತೆಗೆ ನಟನೆ ಮಾಡುವ ಅವಕಾಶ ಸಿಕ್ಕಿತ್ತು. ಆ ಚಿತ್ರ ಪುನೀತ್ ಜೊತೆ ಬೆರೆಯುವ ಅವಕಾಶ ನೀಡಿತ್ತು ಅಂತಾ ಎಂ.ಕೆ ಮಠ ಹೇಳಿದ್ದಾರೆ.
ಚಿತ್ರದ ಕೊನೆಯ ಕ್ಲೈಮಾಕ್ಸ್ ಸಂಧರ್ಭದಲ್ಲಿ ಪುನೀತ್ ಬಿಗಿದಪ್ಪುವ ದೃಶ್ಯ ಇದೆ ಅಂತಾ ನಿರ್ದೇಶಕರು ಹೇಳಿದ್ದರು. ನಾನು ಆ ದೃಶ್ಯಕ್ಕಾಗಿಯೇ ಕಾಯುತ್ತಿದ್ದೆ. ಕೊನೆಗೆ ಅಪ್ಪು ಬಿಗಿಯಾಗಿ ಅಪ್ಪಿಕೊಳ್ಳುವ ಸಂದರ್ಭದಲ್ಲಿ, ಸ್ವತಃ ಡಾ.ರಾಜ್ ಕುಮಾರ್ ಬಿಗಿದಪ್ಪಿದ ಅನುಭವಾಯಿತು. ಆ ಅಪ್ಪುಗೆಯ ಬಿಸಿ ನನ್ನ ದೇಹದಿಂದ ಇನ್ನೂ ಆರಿಲ್ಲ. ಆ ನೆನಪು ಜೀವ ಇರುವವರೆಗೂ ಶಾಶ್ವತ ಅಂತಾ ಎಂ.ಕೆ ಮಠ ಅಪ್ಪುವಿನ ವಿನಯತೆಯ ಬಗ್ಗೆ ಮಾತನಾಡುತ್ತಾ ಭಾವುಕರಾಗಿದ್ದಾರೆ.

ಯುವರತ್ನ ಚಿತ್ರದ ಸಂಧರ್ಭದಲ್ಲಿ, ಅಪ್ಪುವಿನ ಬೇರೆ ದೃಶ್ಯದ ಚಿತ್ರೀಕರಣವಾಗುತ್ತಿರುವ ಸಂಧರ್ಭದಲ್ಲಿ ಮರೆಯಲ್ಲಿ ನಿಂತು ಅವರ ದೃಶ್ಯಗಳನ್ನು ನೋಡುತ್ತಿದ್ದೆ. ಆಗ ನನನ್ನು ಗಮನಿಸಿದ ಪುನೀತ್, ನನ್ನನ್ನು ಹತ್ತಿರ ಕರೆದು 'ಮಠ ಸರ್ ಹೇಗಿದ್ದೀರಿ?' ಅಂತಾ ವಿಚಾರಿಸಿಕೊಳ್ಳುತ್ತಿದ್ದರು. ದೊಡ್ಮನೆಯ ಹುಡುಗನಾಗಿದ್ದರೂ, ಸಣ್ಣ ಕಲಾವಿದರಿಗೆ ಅವರು ನೀಡುತ್ತಿದ್ದ ಗೌರವ ಅಪ್ಪನಂತೆಯೇ ಮಗ ಎಂಬುವುದನ್ನು ನಿರೂಪಿಸಿತ್ತು ಅಂತಾ ಎಂ.ಕೆ ಮಠ ಹೇಳಿದ್ದಾರೆ.
ಶುಕ್ರವಾರ ಬೆಳಗ್ಗೆ ಅಪ್ಪು ವಿಗೆ ಆರೋಗ್ಯ ಸಮಸ್ಯೆಯಿರುವ ಬಗ್ಗೆ ಮಾಹಿತಿ ಸಿಕ್ಕಿತ್ತು. ಆ ಬಳಿಕ ಮನೆಯಲ್ಲಿ ಹೆಂಡತಿ ಮಕ್ಕಳು ಅಪ್ಪು ಹುಷಾರಾಗಿ ಬರಲಿ ಎಂದು ಪ್ರಾರ್ಥಿಸಿದೆವು. ಮನೆಯಿಂದ ಹೊರ ಹೋಗೋದಕ್ಕೂ ಸಾಧ್ಯವಾಗುತ್ತಿಲ್ಲ. ಯಾರೋ ಬಿಟ್ಟು ಹೋದ ಅನಾಥ ಪ್ರಜ್ಞೆ ಕಾಡುತ್ತಿದೆ. ಬೆಂಗಳೂರಿಗೆ ಹೋಗಿ ಅಂತಿಮ ದರ್ಶನ ಪಡೆಯೋಕೂ ಮನಸ್ಸು ಒಪ್ಪುತ್ತಿಲ್ಲ. ಪುನೀತ್ ಪಾರ್ಥೀವ ಶರೀರ ಈ ಕಣ್ಣಿನಲ್ಲಿ ತುಂಬೋದು ಬೇಡ ಅಂತಾ ಅನ್ನಿಸುತ್ತಿದೆ ಅಂತಾ ಎಂ.ಕೆ ಮಠ ಭಾವುಕರಾಗಿದ್ದಾರೆ.
ರಂಗಭೂಮಿ ಕಲಾವಿದರಾಗಿರುವ ಎಂ.ಕೆ ಮಠ ಡಾ.ರಾಜ್ ಕುಟುಂಬದ ಅಪ್ಪಟ ಅಭಿಮಾನಿಯಾಗಿದ್ದಾರೆ. ಡಾ.ರಾಜ್ ಅಪಹರಣವಾದ ಸಂದರ್ಭದಲ್ಲಿ ಚಹಾ, ಬಿಸಿ ನೀರು ಸ್ನಾನವನ್ನು ಎಂ.ಕೆ ಮಠ ತ್ಯಜಿಸಿದ್ದರು. ಇದಾದ ಬಳಿಕ ಡಾ.ರಾಜ್ ಕುಮಾರ್, ಎಂ.ಕೆ ಮಠ ಅವರನ್ನು ಭೇಟಿಯಾಗಲು ದಿನ ನಿಗದಿಪಡಿಸಿದ್ದರು. ಆದರೆ, ಭೇಟಿಯಾಗುವ ದಿನದ ಎರಡು ದಿನ ಮುನ್ನವೇ ಡಾ.ರಾಜ್ ದೈವಾಧೀನರಾಗಿದ್ದರು.


Click it and Unblock the Notifications