ಸಿಗರೇಟ್ ಹಿಡಿದು ಬಂದ ಆಶಿಕಾ ರಂಗನಾಥ್: ಅಚ್ಚರಿ ಮೂಡಿಸಿದ ಹೊಸ ಲುಕ್
ಕನ್ನಡ ಸಿನಿಮಾರಂಗದ ಬೇಡಿಕೆಯ ನಟಿಯರಲ್ಲಿ ಆಶಿಕಾ ರಂಗನಾಥ್ ಕೂಡ ಒಬ್ಬರು. ಈಗಾಗಲೇ ಮುಗುಳುನಗೆ, ರ್ಯೊಂಬೊ-2 ಸಿನಿಮಾಗಳ ಮೂಲಕ ಕನ್ನಡ ಚಿತ್ರಾಭಿಮಾನಿಗಳ ಗಮನ ಸೆಳೆದಿರುವ ನಟಿ ಆಶಿಕಾಗೆ ಇಂದು ವಿಶೇಷವಾದ ದಿನ. ಹೌದು, ಇಂದು (ಆಗಸ್ಟ್ 5) ನಟಿ ಆಶಿಕಾ ರಂಗನಾಥ್ ಹುಟ್ಟಿದ್ದ ದಿನ. ಅಭಿಮಾನಿಗಳು, ಸಿನಿಮಾರಂಗದ ಗಣ್ಯರು ಮತ್ತು ಆತ್ಮೀಯರಿಂದ ಹುಟ್ಟುಹಬ್ಬ ಶುಭಾಶಯಗಳ ಸುರಿಮಳೆಯೇ ಹರಿದುಬರುತ್ತಿದೆ.
ಇಂದು ಹುಟ್ಟುಹಬ್ಬದ ದಿನವೇ ಆಶಿಕಾ ವಿಭಿನ್ನ ಗೆಟಪ್ ನಲ್ಲಿ ಕಾಣಿಸಿಕೊಳ್ಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಸಿಗರೇಟು ಸೇದುತ್ತಾ ಅಭಿಮಾನಿಗಳ ಮುಂದೆ ಬಂದಿರುವ ಆಶಿಕಾ ತನ್ನ ಮತ್ತೊಂದು ಮುಖವನ್ನು ಪರಿಚಯಿಸಿದ್ದಾರೆ. ಅಂದಹಾಗೆ ಇದು 'ಮದಗಜ' ಸಿನಿಮಾದ ಸಿನಿಮಾದ ಪೋಸ್ಟರ್. ಶ್ರೀಮುರಳಿ ನಾಯಕನಾಗಿ ನಟಿಸುತ್ತಿರುವ 'ಮದಗಜ' ಚಿತ್ರದಲ್ಲಿ ಆಶಿಕಾ ನಾಯಕಿಯಾಗಿ ನಟಿಸುತ್ತಿದ್ದಾರೆ.
ಈಗಾಗಲೇ 'ಮದಗಜ' ಚಿತ್ರದಿಂದ ಆಶಿಕಾ ಅವರ ಹಳ್ಳಿ ಲುಕ್ ಬಿಡುಗಡೆಯಾಗಿತ್ತು. ಮುಗ್ಧ ಹುಡುಗಿಯ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದ ಆಶಿಕಾ ದಿಢೀರ್ ಅಂತ ಬೋಲ್ಡ್ ಅವತಾರ ತಾಳಿರುವುದು ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ. ಅಂದಹಾಗೆ ಆಶಿಕಾ ಇದುವರೆಗೂ ಈ ರೀತಿಯ ಪಾತ್ರಗಳಲ್ಲಿ ಕಾಣಿಸಿಕೊಂಡಿರಲಿಲ್ಲ. ಗ್ಲಾಮರ್ ಜೊತೆಗೆ ಸೀದಸಾದ ಹುಡುಗಿಯಾಗಿ ತೆರೆಮೇಲೆ ಬರುತ್ತಿದ್ದ ಆಶಿಕಾ ಇದೀಗ ಸಿಗರೇಟ್ ಹಿಡಿದು ಶಾಕ್ ನೀಡಿದ್ದಾರೆ. ಮುಂದೆ ಓದಿ..

'ಮದಗಜ' ಚಿತ್ರದಲ್ಲಿ ಆಶಿಕಾರ ಎರಡು ಶೇಡ್
ಅಂದಹಾಗೆ ಮದಗಜ ಚಿತ್ರದಲ್ಲಿ ಆಶಿಕಾ ಅವರದ್ದು ಶೇಡ್ ಇರುವುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ಒಂದು ಹಳ್ಳಿ ಹುಡುಗಿ ಅವತಾರ ಮತ್ತು ಮತ್ತೊಂದು ಸಖತ್ ಮಾರ್ಡನ್ ಲುಕ್. ಈ ಎರಡು ಲುಕ್ ಕೂಡ ಈಗಾಗಲೇ ರಿವೀಲ್ ಆಗಿದ್ದು ಆಶಿಕಾ ಪಾತ್ರ ಏನಾಗಿರಲಿದೆ ಎನ್ನುವ ಕುತೂಹಲ ಮೂಡಿಸಿದೆ. ಸದ್ಯ ರಿಲೀಸ್ ಆಗಿರುವ ಬೋಲ್ಡ್ ಪೋಸ್ಟರ್ ಅಭಿಮಾನಿಗಳ ನಿರೀಕ್ಷೆಯನ್ನು ಹೆಚ್ಚಿಸಿದೆ.

ಕೊನೆಯ ಹಂತದ ಚಿತ್ರೀಕರಣದಲ್ಲಿ 'ಮದಗಜ'
ಮದಗಜ 'ಅಯೋಗ್ಯ' ಸಿನಿಮಾ ಖ್ಯಾತಿಯ ಮಹೇಶ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಮಹೇಶ್ ನಿರ್ದೇಶನದ ಎರಡನೇ ಸಿನಿಮಾ ಇದಾಗಿದೆ. ಮೊದಲ ಸಿನಿಮಾದ ಸಕ್ಸಸ್ ಬಳಿಕ ಶ್ರೀಮುರಳಿ ಜೊತೆ ಸಿನಿಮಾ ಮಾಡುತ್ತಿರುವ ಮಹೇಶ್ ಈ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈಗಾಗಲೇ ಬಹುತೇಕ ಚಿತ್ರೀಕರಣ ಮುಗಿಸಿರುವ ಸಿನಿಮಾತಂಡ ಸದ್ಯ ಕೊನೆಯ ಹಂತದ ಚಿತ್ರೀಕರಣಕ್ಕೆ ಲಗ್ಗೆ ಇಟ್ಟಿದ್ದಾರೆ. ಕೊರೊನಾ ಹಾವಳಿಯ ನಡುವೆಯೂ ಮದಗಜ ಚಿತ್ರೀಕರಣವನ್ನು ಯಶಸ್ವಿಯಾಗಿ ಮುಗಿಸುತ್ತಿದೆ ಸಿನಿಮಾತಂಡ.

ಅಭಿಮಾನಿಗಳಿಗೆ ಆಶಿಕಾ ಸಂದೇಶ
ಇನ್ನು ಇಂದು ಹುಟ್ಟುಹಬ್ಬದ ಆಚರಿಸಿಕೊಳ್ಳುತ್ತಿರುವ ಆಶಿಕಾ ಅಭಿಮಾನಿಗಳನ್ನು ಭೇಟಿ ಮಾಡಲು ಸಾಧ್ಯವಾಗುವುದಿಲ್ಲ ಎಂದು ಹೇಳಿದ್ದಾರೆ. ಕೊರೊನಾ ಕಾರಣದಿಂದ ಯಾರನ್ನು ಭೇಟಿ ಮಾಡುತ್ತಿಲ್ಲ ಎಂದಿದ್ದಾರೆ. ಅಲ್ಲದೆ "ಚಿತ್ರೀಕರಣ ಕಾರಣ ಮನೆಯಲ್ಲಿ ಇರುವುದಿಲ್ಲ, ಈ ದಿನ ಅಭಿಮಾನಿಗಳನ್ನು ಭೇಟಿ ಮಾಡದೆ ಇರುವುದು ತುಂಬಾ ಬೇಸರ ತಂದಿದೆ" ಎಂದಿದ್ದಾರೆ. ಜೊತೆಗೆ ಸದ್ಯದಲ್ಲೇ ಅಭಿಮಾನಿಗಳ ಜೊತೆ ಲೈವ್ ಚಾಟ್ ಮಾಡಿವುದಾಗಿ ಹೇಳಿದ್ದಾರೆ. ಸಾಮಾಜಿಕ ಜಾಲತಾಣದ ಮೂಲಕವೇ ವಿಶ್ ಮಾಡಿ ಎಂದು ಆಶಿಕಾ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

2016ರಲ್ಲಿ ಆಶಿಕಾ ಚಿತ್ರರಂಗಕ್ಕೆ ಎಂಟ್ರಿ
ನಟಿ ಆಶಿಕಾ 'ಕ್ರೇಜಿ ಬಾಯ್' ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. 2016ರಲ್ಲಿ ಈ ಸಿನಿಮಾ ಬಿಡುಗಡೆಯಾಗಿದೆ. ಈ ಸಿನಿಮಾ ಬಳಿಕ ಮಾಸ್ ಲೀಡರ್ ಮೂಲಕ ಅಭಿಮಾನಿಗಳ ಮುಂದೆ ಬಂದರು. ನಂತರ ಗೋಲ್ಡನ್ ಸ್ಟಾರ್ ಗಣೇಶ್ ಜೊತೆ ಮಗುಳು ನಗೆ ಸಿನಿಮಾದಲ್ಲಿ ಕಾಣಿಸಿಕೊಂಡಿರು. ಈ ಸಿನಿಮಾ ಆಶಿಕಾ ವೃತ್ತಿ ಜೀವನಕ್ಕೆ ಮೈಲೇಜ್ ತಂದು ಕೊಟ್ಟಿತು.

ಸುದೀಪ್ ಜೊತೆ ಹೆಜ್ಜೆಹಾಕಿದ ಆಶಿಕಾ
'ರಾಜು ಕನ್ನಡ ಮೀಡಿಯಂ' ಮತ್ತು 'ರ್ಯಾಂಬೋ -2' ಚಿತ್ರಗಳ ಮೂಲಕ ಆಶಿಕಾ ಅಭಿಮಾನಿಗಳ ಮನ ಸೆಳೆದರು. ರ್ಯಾಂಬೋ-2 ಚಿತ್ರದ 'ಚುಟು ಚುಟು...' ಹಾಡು ಸಿಕ್ಕಾಪಟ್ಟೆ ಸದ್ದು ಮಾಡಿತು. ನಟ ಶರಣ್ ಜೊತೆ ಹೆಜ್ಜೆ ಹಾಕಿದ್ದ ಆಶಿಕಾಗೆ ಫಿದಾ ಆಗದವರಿಲ್ಲ. ಈ ಸಿನಿಮಾ ಬಳಿಕ ಆಶಿಕಾ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಕಿಚ್ಚ ಸುದೀಪ್ ಜೊತೆ 'ಕೋಟಿಗೊಬ್ಬ-3' ಚಿತ್ರದಲ್ಲೂ ಕಾಣಿಸಿಕೊಂಡಿದ್ದಾರೆ. ಸುದೀಪ್ ಜೊತೆ ಪಟಾಕಿ ಪೋರಿಯೋ ಹಾಡಿನಲ್ಲಿ ಹೆಜ್ಜೆ ಹಾಕಿದ್ದಾರೆ.

'ಅವತಾರ ಪುರುಷ' ಲುಕ್
ಇನ್ನು ನಟ ಶರಣ್ ಜೊತೆ ಅವತಾರ ಪುರುಷ, ರೆಮೋ ಮತ್ತು ಗರುಡ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಅವತಾರ ಪುರುಷ ಸಿನಿಮಾತಂಡ ಕೂಡ ಹುಟ್ಟುಹಬ್ಬದ ವಿಶೇಷವಾಗಿ ಪೋಸ್ಟರ್ ಬಿಡುಗಡೆ ಮಾಡಿದೆ. ಸದ್ಯ ಈ ಎಲ್ಲಾ ಸಿನಿಮಾಗಳ ಚಿತ್ರೀಕರಣ ಬಹುತೇಕ ಮುಗಿಸಿರುವ ಆಶಿಕಾ ಮುಂದಿನ ಸಿನಿಮಾ ಯಾವುದು ಎನ್ನುವ ಕುತೂಹಲ ಮೂಡಿಸಿದ್ದಾರೆ.


Click it and Unblock the Notifications











