'ಮೊಗ್ಗಿನ ಮನಸ್ಸು' ಚಿತ್ರಕ್ಕಾಗಿ ಸ್ವಲ್ಪ ಅಡ್ಜಸ್ಟ್ ಮಾಡ್ಕೊಳ್ಳಿ ಅಂದ್ರು.. ಆಶಿತಾ ಹೇಳಿಕೆಗೆ ಶಶಾಂಕ್ ಆಕ್ರೋಶ
ಶಶಾಂಕ್ ನಿರ್ದೇಶನದ 'ಮೊಗ್ಗಿನ ಮನಸ್ಸು' ಸೂಪರ್ ಹಿಟ್ ಆಗಿದ್ದು ಗೊತ್ತೇಯಿದೆ. ಯಶ್, ರಾಧಿಕಾ ಪಂಡಿತ್ ಹಾಗೂ ಶುಭಾ ಪೂಂಜಾ ಮೂವರಿಗೂ ಚಿತ್ರ ಒಳ್ಳೆ ಹೆಸರು ತಂದು ಕೊಟ್ಟಿತ್ತು. ನಿರ್ದೇಶಕರಾಗಿ ಶಶಾಂಕ್ ಅವರಿಗೂ ಇದು ಎರಡನೇ ಸಿನಿಮಾ ಆಗಿತ್ತು. ಚಿತ್ರದ ಹಾಡುಗಳು ಇವತ್ತಿಗೂ ಸಿನಿರಸಿಕರು ಮರೆತ್ತಿಲ್ಲ.
ಒಂದು ಚಿತ್ರಕ್ಕೆ ಬೇರೆ ಬೇರೆ ಕಲಾವಿದರಿಗೆ ಪಾತ್ರ ಮಾಡುವ ಅವಕಾಶ ಸಿಗುತ್ತದೆ. ಕಾರಣಾಂತರಗಳಿಂದ ಕೆಲವರು ನಟಿಸೋಕೆ ಸಾಧ್ಯವಿಲ್ಲ. ಅಂತಿಮವಾಗಿ ಮತ್ತೊಬ್ಬರು ನಟಿಸುತ್ತಾರೆ. ಸಿನಿಮಾ ಹಿಟ್ ಆಗಿಬಿಟ್ಟರೆ ಈ ಬಗ್ಗೆ ಎಲ್ಲರೂ ಮಾತನಾಡುತ್ತಾರೆ. ಸೋತರೆ ಯಾರು ತಲೆ ಕೆಡಿಸಿಕೊಳ್ಳುವುದಿಲ್ಲ. 'ಮೊಗ್ಗಿನ ಮನಸ್ಸು' ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸುವ ಅವಕಾಶ ನನಗೆ ಸಿಕ್ಕಿತ್ತು. ಆದರೆ ಕೊಂಚ ಅಡ್ಜೆಸ್ಟ್ ಮಾಡಿಕೊಳ್ಳೋಕೆ ಹೇಳಿದ್ರು. ನಾನು ಒಪ್ಪಲಿಲ್ಲ ಎಂದು ನಟಿ ಆಶಿತಾ ಹೇಳಿದ್ದಾರೆ.

ಸಂದರ್ಶನವೊಂದರಲ್ಲಿ ನಟಿ ಆಶಿತಾ ಮಾತನಾಡಿ 'ಮೊಗ್ಗಿನ ಮನಸ್ಸು' ಚಿತ್ರದಲ್ಲಿ ನಟಿಸುವಂತೆ ನಿರ್ದೇಶಕ ಶಶಾಂಕ್ ಕೇಳಿದ್ದು ಬಳಿಕ ಚಿತ್ರತಂಡದಿಂದ ಸಂಭಾವನೆ ವಿಚಾರವಾಗಿ ಚರ್ಚೆ ನಡೆದಿದ್ದು ಎಲ್ಲವನ್ನು ವಿವರಿಸಿದ್ದಾರೆ. ಆದರೆ ಈ ಬಗ್ಗೆ ನಿರ್ದೇಶಕ ಶಶಾಂಕ್ ಟ್ವೀಟ್ ಮಾಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಿಮಗೆ ಪ್ರಮುಖ ಪಾತ್ರ ಹೇಳಿರಲಿಲ್ಲ. ಅದು ಬೇರೆಯದ್ದೇ ಪಾತ್ರ, ನಾಯಕಿ ಪಾತ್ರ ಅಲ್ಲ ಎಂದು ಮಾಡಲು ಒಪ್ಪಲಿಲ್ಲ. ಈಗ ನಿರ್ಮಾಣ ಸಂಸ್ಥೆ ಮೇಲೆ ಆರೋಪ ಮಾಡುವುದು ಸರಿಯಲ್ಲ ಎಂದಿದ್ದಾರೆ.
ನಟಿ ಆಶಿತಾ ಮಾತನಾಡಿ "ಬಾ ಬಾರೋ ರಸಿಕ ಚಿತ್ರಕ್ಕೆ ಶಶಾಂಕ್ ಸಾಹಿತ್ಯ ಬರೆದಿದ್ದರು. ಸೆಟ್‌ಗೆ ಬಂದಾಗ ನಾವು ಮಾತನಾಡಿದ್ದೀವಿ. ಮುಂದೆ ಸಿನಿಮಾ ಮಾಡಿದ್ರೆ, ನಿಮಗೆ ಅವಕಾಶ ಕೊಡ್ತೀನಿ ಅಂದಿದ್ರು. ಆ ಬಳಿಕ 'ಮೊಗ್ಗಿನ ಮನಸ್ಸು' ಚಿತ್ರ ಆರಂಭಿಸಿದ್ದರು. ಚಿತ್ರದಲ್ಲಿ ಎರಡು ಪ್ರಮುಖ ಪಾತ್ರ ಇತ್ತು. ಎರಡರಲ್ಲಿ ಒಂದು ಪ್ರಮುಖ ಪಾತ್ರ ಅಂದಿದ್ರು. ನನಗೆ ಪದವಿ ಅಂತಿಮ ವರ್ಷದ ಪರೀಕ್ಷೆ ಇತ್ತು. ಹಾಗಾಗಿ ಸಿನಿಮಾಗಿಂತ ಪರೀಕ್ಷೆ ಮುಖ್ಯ ಆಗಿತ್ತು. ಪರೀಕ್ಷೆ ಇದೆ ನಟಿಸೋಕೆ ಕಷ್ಟ ಅಂದೆ. ಅದೆಲ್ಲಾ ನೋಡೋಣ ಅಂದ್ರು.. ಬಳಿಕ ನಿರ್ಮಾಪಕರು ಮಾತನಾಡ್ತಾರೆ ಅಂದ್ರು ಸರಿ ಎಂದು ಒಪ್ಪಿಕೊಂಡೆ" ಎಂದಿದ್ದಾರೆ.

ಕೆಲ ದಿನಗಳ ಬಳಿಕ ಪ್ರೊಡಕ್ಷನ್ ಟೀಮ್ ಇಂದ ಕರೆ ಬಂತು.. ಆ ದಿನ ಅವ್ರು ಮಾತನಾಡಿದ್ದು ಸರಿ ಅನ್ನಿಸಲಿಲ್ಲ ಎಂದು ಆಶಿತಾ ತಿಳಿಸಿದ್ದಾರೆ. "ಸಂಭಾವನೆ ನನಗೆ ಒಪ್ಪಿಗೆ ಇಲ್ಲ. ಅವ್ರು ಬಹಳ ಕಮ್ಮಿ ಹೇಳಿದ್ರು.. ಇಷ್ಟು ಸಿನಿಮಾ ಆದ್ಮೇಲೆ ಇಷ್ಟು ಕಮ್ಮಿ ಸಂಭಾವನೆಗೆ ನಟಿಸೋಕೆ ಸಾಧ್ಯವಿಲ್ಲ ಅಂದೆ. ಅದಕ್ಕೆ ಅವ್ರು ಸ್ವಲ್ಪ ಅಡ್ಜೆಸ್ಟ್ ಮಾಡ್ಕೊಂಡ್ರೆ ಸಂಭಾವನೆ ಜಾಸ್ತಿ ಕೊಡ್ತೀವಿ ಅಂದ್ರು.. ನಾನು ಸಾಧ್ಯವೇ ಇಲ್ಲ ಅಂದೆ.. ಯಾರು ಕರೆ ಮಾಡಿದ್ರು, ಅವ್ರ ಹೆಸರೇನು ಗೊತ್ತಿಲ್ಲ" ಎಂದಿದ್ದಾರೆ.
ಆಶಿತಾ ಹೇಳಿಕೆಯನ್ನು ನಿರ್ದೇಶಕ ಶಶಾಂಕ್ ಖಂಡಿಸಿದ್ದಾರೆ. "ನಟಿ ಆಶಿತಾ 'ಮೊಗ್ಗಿನಮನಸ್ಸು' ಚಿತ್ರದ ನಿರ್ಮಾಣ ಸಂಸ್ಥೆ/ವ್ಯಕ್ತಿಯ ವಿಚಾರವಾಗಿ ಹೇಳಿರುವ ಮಾತುಗಳು ಶುದ್ಧ ಸುಳ್ಳು! ಆಕೆಗೆ ನಾವು ಆಫರ್ ಮಾಡಿದ್ದು, "ದೀಕ್ಷಾ" ಎಂಬ ಪಾತ್ರವನ್ನು.. ಅದು, ಪ್ರಮುಖ ಪಾತ್ರ ಅಲ್ಲ ಎಂಬ ಕಾರಣಕ್ಕೆ ಆಕೆಯೇ ಹಿಂದೆ ಸರಿದು, ಈಗ ಈ ರೀತಿ ತಿರುಚಿ ಮಾತನಾಡಿರುವುದು ತಪ್ಪು.. ಒಂದು ಪ್ರತಿಷ್ಠಿತ ನಿರ್ಮಾಣ ಸಂಸ್ಥೆಯ ಕುರಿತು ಮಾತನಾಡುವಾಗ ಸ್ವಲ್ಪ ಜವಾಬ್ದಾರಿ ಇರಬೇಕಿತ್ತು. ಇಂತಹ ಸುಳ್ಳುಗಳಿಗೆ ಬೆಂಬಲ ನೀಡಬಾರದು, ತಪ್ಪು ಸಂದೇಶ ರವಾನೆ ಆಗುತ್ತದೆ" ಎಂದು ಬರೆದುಕೊಂಡಿದ್ದಾರೆ.


Click it and Unblock the Notifications











