ಇತಿಹಾಸವೆಂಬ ಕಸದ ತೊಟ್ಟಿಯಲ್ಲಿ ಹುಡುಕಿದರೆ ಅಶೋಕ್‌ ಬೆಳೆದು ಬಂದ ದಾರಿ, ಜಾರಿ ಬಿದ್ದ ಹೊಂಡಗಳು ಪತ್ತೆಯಾಗುತ್ತವೆ

By Staff

*ಸತ್ಯ ನಾರಾಯಣ

ರಾಜ್‌ ಅಪಹರಣ ಹಿನ್ನೆಲೆಯಲ್ಲಿ ಇಡೀ ಚಿತ್ರೋದ್ಯಮವನ್ನೇ ತಮ್ಮ ತೆಕ್ಕೆಯಲ್ಲಿರಿಸಿಕೊಂಡಂತೆ ಬೀಗುತ್ತಿರುವವರೆಂದರೆ ಅಶೋಕ್‌.

ಕ್ರಿಯಾ ಸಮಿತಿ ಮತ್ತು ಫಿಲಂ ಚೇಂಬರ್‌ ಸದಸ್ಯರೇ ಚಿತ್ರೋದ್ಯಮದ ಚಟುವಟಿಕೆಗಳು ಹಂತ ಹಂತವಾಗಿ ಆರಂಭವಾಗಲಿದೆ ಎಂದು ಘೋಷಿಸಿದರೂ, ಒಕ್ಕೂಟವನ್ನು ಗುರಾಣಿಯಾಗಿಸಿಕೊಂಡು ಅದಕ್ಕೆ ತಡೆಯಾಜ್ಞೆ ತಂದ ಕೀರ್ತಿ ಅಶೋಕ್‌ಗೆ ಸಲ್ಲಬೇಕು. ಇದೀಗ ಅಶೋಕ್‌ ಭಾವುಕ ಅಭಿಮಾನಿಗಳ ಕಣ್ಣಿಗೆ ಕನ್ನಡದ ಮಾನ ಕಾಪಾಡಿದ ಶೂರನಂತೆಯೂ, ಸಿನಿಮಾವನ್ನೇ ನೆಚ್ಚಿಕೊಂಡವರ ಪಾಲಿಗೆ ಅನ್ನ ಕಸಿದ ಆಜನ್ಮ ಶತ್ರುವಿನಂತೆಯೂ ಏಕಕಾಲದಲ್ಲಿ ಕಾಣಿಸುತ್ತಿದ್ದಾರೆ.

ರಾಜ್‌ ಅಪಹರಣವನ್ನೇ ನೆಪವಾಗಿರಿಸಿಕೊಂಡು ನಾಯಕನಾಗಿ ಮಿಂಚುತ್ತಿರುವ ಈ ಅಶೋಕ್‌ ಯಾರು ?

ಒಂದು ಕಾಲದಲ್ಲಿ ತೆರೆಯ ಮೇಲೆ ರಾಜ್‌ ಪಾತ್ರಕ್ಕೆ ಕಪಾಳ ಮೋಕ್ಷ ಮಾಡಿದ ತಪ್ಪಿಗೆ ಇದೇ ಅಭಿಮಾನಿಗಳು ಅಶೋಕ್‌ ಮೇಲೆ ಹಲ್ಲೆ ನಡೆಸಿದ್ದು ಯಾರಿಗಾದರೂ ನೆನಪಿದೆಯೇ ? . ಸಿನಿಮಾ ರಂಗದಲ್ಲಿ ಮೆರೆಯುವುದಕ್ಕೆ ಪ್ರತಿಭೆಯಾಂದೇ ರಹದಾರಿಯಲ್ಲ. ಬದಲಾಗಿ ಅವಕಾಶಗಳನ್ನು ತನ್ನ ಅನುಕೂಲಕ್ಕೆ ಬಳಸಿಕೊಳ್ಳುವ ಜಾಣತನವಿದ್ದರೂ ಸಾಕು ಅನ್ನುವುದಕ್ಕೂ ಇದೇ ವಿವರಗಳು ಉದಾಹರಣೆಯಾಗುತ್ತವೆ.

ಅಂಥಾದ್ದೊಂದು ಫ್ಲಾಷ್‌ ಬ್ಯಾಕ್‌ ನಿಮಗಾಗಿ ಇಲ್ಲಿದೆ. ಇದು ಒಬ್ಬ ಸಾಮಾನ್ಯ ನಟ, ಕಾರ್ಮಿಕ ನಾಯಕನಾಗಿ, ರಾಜಕಾರಣಿಯಾಗಿ, ಕೊನೆಗೆ ದಂಡನಾಯಕನಾಗಿ, ಬೆಳೆದ ರೋಚಕ ಕತೆಯೂ ಹೌದು.

ಅಶೋಕ್‌ ಹುಟ್ಟಿದ್ದು ಆನೇಕಲ್‌ನಲ್ಲಿ. ಅವರ ಪೂರ್ವಜರು ಸಾತನೂರಿನವರು. ತಂದೆ ಪೊಲೀಸ್‌ ಇನ್‌ಸ್ಪೆಕ್ಟರ್‌.(ಕೆಲವು ವರ್ಷಗಳ ಹಿಂದೆ ಪೊಲೀಸರು ಅಶೋಕ್‌ ಬೆನ್ನಿಗೆ ಬಿದ್ದಿದ್ದು ವಿಪರ್ಯಾಸ.) ಆದರೆ ಮಗನಿಗೆ ಸಿನಿಮಾ ನಟನಾಗುವ ಆಸೆ. ಹಾಗಾಗಿ ಪದವಿ ಮುಗಿಸಿದ ಕೂಡಲೆ ಅಶೋಕ್‌ ಮದ್ರಾಸಿನ ಫಿಲಂ ಇನ್‌ಸ್ಟಿಟ್ಯೂಟ್‌ ಸೇರಿದರು. ಅಲ್ಲಿ ಅಶೋಕ್‌ ಸಹಪಾಠಿಗಳಾಗಿದ್ದವರು ರಜನಿಕಾಂತ್‌, ರವಿಂದ್ರನಾಥ್‌, ರಘುನಂದನ್‌, ಹೇಮಾ ಚೌಧುರಿ ಮೊದಲಾದವರು. ಆ ಪೈಕಿ ರವೀಂದ್ರನಾಥ್‌ ಅನಂತರ ‘ವೀರಪ್ಪನ್‌’ ಚಿತ್ರ ನಿರ್ದೇಶಿಸಿದರು. ಅಶೋಕ್‌ ಸ್ವಂತ ನಿರ್ಮಾಣದ ‘ನಮ್ಮೂರ ಹುಡ್ಗ’ ಚಿತ್ರಕ್ಕೂ ಅವರೇ ನಿರ್ದೇಶಕರು. ರಘುನಂದನ್‌ ಈಗ ರಾಜ್‌ ಕ್ಯಾಂಪಿನ ಖಾಯಂ ಸದಸ್ಯ.

ಫಿಲಂ ಇನ್‌ಸ್ಟಿಟ್ಯೂಟ್‌ನ ಕನ್ನಡ ವಿಭಾಗದಲ್ಲಿ ಅಶೋಕ್‌ಗೆ ಮೊದಲ ರ್ಯಾಂಕ್‌ ಬಂದಿತ್ತು. ಆಗ ಅವರನ್ನು ಸಂದರ್ಶಿದವರ ಪೈಕಿ ಪುಟ್ಟಣ್ಣ ಕಣಗಾಲ್‌ ಕೂಡ ಇದ್ದರು.ಅನಂತರ ಪುಟ್ಟಣ್ಣ ಅವರ ಅವಸಾನಕ್ಕೆ ಅಶೋಕ್‌ ಪರೋಕ್ಷ ವಾಗಿ ಕಾರಣರಾದರು ಅನ್ನೋದು ಇನ್ನೊಂದು ವಿಪರ್ಯಾಸ.

ಅಶೋಕ್‌ ನಟಿಸಿದ ಮೊದಲ ಚಿತ್ರ‘ಹೆಣ್ಣು ಸಂಸಾರದ ಕಣ್ಣು’. ಪುಟ್ಟ ಪಾತ್ರವಾದರೂ ಅವರ ಮುಂದೆ ನಟಿಸಿದವರು ಯಾರು ಗೊತ್ತೇ ? -ಭಾರತೀಯ ಚಿತ್ರರಂಗವನ್ನೇ ಆಳಿದ ಶ್ರೀದೇವಿ. ಆದರೆ ಆ ಹೊತ್ತಿಗೆ ಆಕೆ ಕೂಡ ಪುಟ್ಟ ನಟಿಯೇ.

ಅದಾದ ನಂತರ ಬಂದದ್ದು ‘ಮತ್ತೆ ಎಂದೋ ಎಲ್ಲೋ’ ಎನ್ನುವ ಹೆಸರಿನ ಚಿತ್ರ. ಅದು ಹೆಸರಿಗೆ ತಕ್ಕಂತೆ ತೆರೆಕಾಣಲಿಲ್ಲ. ಅಶೋಕ್‌ ಬದುಕಿಗಂತೂ ಈ ಟೈಟಲ್‌ ಚೆನ್ನಾಗಿ ಹೊಂದಿಕೊಂಡಿತು. ಮತ್ತೆ ಎಂದೋ ಎಲ್ಲೋ ಕಾಣಿಸಿಕೊಳ್ಳುವ ಹವ್ಯಾಸವನ್ನು ಅವರು ಇಂದಿಗೂ ಬಿಟ್ಟಿಲ್ಲ.

‘ವಿಜಯವಾಣಿ’ ಚಿತ್ರದಲ್ಲಿ ಮೊದಲಬಾರಿ ನಾಯಕ ಪಟ್ಟ . ನಾಯಕಿಯಾಗಿದ್ದಾಕೆ ಅಶೋಕ್‌ ಕ್ಲಾಸ್‌ಮೇಟ್‌ ಹೇಮಾ ಚೌಧುರಿ. ಮುಂದ ಅಶೋಕ್‌ ಹೆಸರು ಮಾಡಿದ್ದು ‘ಬಯಲುದಾರಿ’ಯಲ್ಲಿ. ಆದರೆ ಅದರಲ್ಲೂ ಎರಡನೇ ನಾಯಕ. ‘ಕುಂಕುಮರಕ್ಷೆ ’ಚಿತ್ರದಲ್ಲಿ ಅಶೋಕ್‌ ಜೊತೆ ರಜನಿಕಾಂತ್‌ ಕೂಡ ನಟಿಸಿದ್ದರು.

ಆ ಹೊತ್ತಿಗಾಗಲೇ ಅಶೋಕ್‌ ಅಂದರೆ ರಾಜ್‌ಕುಮಾರ್‌ ಡ್ಯುಪ್ಲಿಕೇಟ್‌ ಅನ್ನುವ ಮಾತು ಕೇಳಿಬರುವುದಕ್ಕೆ ಶುರುವಾಗಿತ್ತು. ಕೆಲವು ಆ್ಯಂಗಲ್‌ಗಳಲ್ಲಿ ಅವರು ಆ ಥರ ಕಾಣಿಸಿಕೊಳ್ಳುತ್ತಿದುದು ಸುಳ್ಳಲ್ಲ. ರಾಜ್‌ ಉತ್ತರಾಧಿಕಾರಿ ಅನ್ನುವ ಪ್ರಚಾರವೂ ಅವರ ನೆರವಿಗೆ ಬಂತು. ಅದನ್ನು ಅಶೋಕ್‌ ಸಮರ್ಥವಾಗಿ ಬಳಸಿಕೊಳ್ಳುವುದಕ್ಕೂ ಶುರುಮಾಡಿದರು. ಸನಾದಿ ಅಪ್ಪಣ್ಣ , ಭಾಗ್ಯವಂತರು, ಚಿತ್ರಗಳಲ್ಲಿ ರಾಜ್‌ ಪುತ್ರನ ಪಾತ್ರವೂ ಅವರಿಗೆ ಸಿಕ್ಕಿತು.

ಆಗಲೇ ಎಡವಟ್ಟಾಗಿದ್ದು.

ಭಾಗ್ಯವಂತರು ಚಿತ್ರದಲ್ಲಿ ಹಾದಿತಪ್ಪಿದ ಮಗ, ತನ್ನ ಅಪ್ಪನ ಕೆನ್ನೆಗೇ ಬಾರಿಸುವ ದೃಶ್ಯವಿದೆ. ಅದು ಅಭಿಮಾನಿಗಳ ಕಣ್ಣಿಗೆ ರಾಜ್‌ ಕುಮಾರ್‌ ಮೇಲೆ ಹಲ್ಲೆಯಂತೆಯೇ ಕಾಣಿಸಿತು. ಅವರು ಅಶೋಕ್‌ ಮೇಲೆ ಎಂಥಾ ಪರಿ ಸಿಟ್ಟಾದರೆಂದರೆ ಅನಂತರ ರಾಜ್‌ ಚಿತ್ರಗಳಿಂದ ಶಾಶ್ವತವಾಗಿ ಅಶೋಕ್‌ಗೆ ಗೇಟ್‌ ಪಾಸ್‌ ಸಿಕ್ಕಿತು.

ನಾಯಕ ನಟರಾಗಿ ಅಶೋಕ್‌ಗೆ ಯಾವುದೇ ಸ್ಟಾರ್‌ ವ್ಯಾಲ್ಯೂ ಸಿಗದೇ ಇದ್ದರೂ ಜನಪ್ರಿಯ ನಾಯಕಿಯರ ಜೊತೆ ನಟಿಸುವ ಅವಕಾಶವಂತೂ ಪ್ರಾಪ್ತಿಯಾಯಿತು. ಮಂಜುಳಾ ಅಶೋಕ್‌ ಜೋಡಿಗೆ ಬೇಡಿಕೆಯಿತ್ತು . ಅದೇ ರೀತಿ ಆರತಿ ಅಶೋಕ್‌ ಸಂಬಂಧ ತೆರೆಯೀಚೆಗೆ ಹರಿದು ಬಂತು. ರಂಗನಾಯಕಿ ಚಿತ್ರದ ನಂತರ ಇವರಿಬ್ಬರ ಸಂಬಂಧ ಇನ್ನಷ್ಟು ಗಾಢವಾಯಿತು. ಇದರಿಂದ ವಿಚಲಿತವಾದವರೆಂದರೆ ಪುಟ್ಟಣ್ಣ ಕಣಗಾಲ್‌. ಆರತಿ ಮತ್ತು ಅಶೋಕ್‌ ಮೇಲೆ ಸೇಡು ತೀರಿಸಿಕೊಳ್ಳಲೋ ಎಂಬಂತೆ ಅವರು ‘ಮಾನಸ ಸರೋವರ’ ಚಿತ್ರ ಮಾಡಿದರು. ಅಲ್ಲಿಂದಾಚೆಗೆ ಪುಟ್ಟಣ್ಣ ಚೇತರಿಸಿಕೊಳ್ಳಲೇ ಇಲ್ಲ.

ಅಶೋಕ್‌ ಆರತಿ ಸಂಬಂಧವೂ ಬಹುಕಾಲ ಬಾಳಲಿಲ್ಲ. ನಟನಾಗಿ ಅಶೋಕ್‌ಗೆ ಅವಕಾಶ ಕಡಿಮೆಯಾಗುತ್ತಿದ್ದಂತೆ ಆರತಿ ಒಲವು ರಾಜಕಾರಣಿ ರಘುಪತಿಯತ್ತ ಹೊರಳಿತು. ಆರತಿ ಪ್ರೀತಿ ಸಂಪಾದನೆಗಾಗಿ ಅಶೋಕ್‌ ಮನೆ ಕಳಕೊಂಡರು ಎಂದು ಚಿತ್ರೋದ್ಯಮ ಮಾತಾಡಿಕೊಂಡಿತು.

ಮುಖಪುಟ / ಸ್ಯಾಂಡಲ್‌ವುಡ್‌

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X