»   » ರಾಮಯ್ಯ ಮೇಸ್ಟ್ರಾಗಿ ‘ನಮ್ಮ ಮೇಸ್ಟ್ರು’

ರಾಮಯ್ಯ ಮೇಸ್ಟ್ರಾಗಿ ‘ನಮ್ಮ ಮೇಸ್ಟ್ರು’

Posted By: Super
Subscribe to Filmibeat Kannada

ಹಸಸಿಂಹ ವಿಷ್ಣು ವರ್ಧನ್‌ಗೆ ಬ್ರೇಕ್‌ಕೊಟ್ಟ 'ನಾಗರಹಾವು" ಚಿತ್ರವನ್ನು ನೀವು ನೋಡಿದ್ದೀರಾ? ಹಾಗಾದರೆ, ನಿಮಗೆ ಚಾಮಯ್ಯ ಮೇಸ್ಟ್ರು ಜ್ಞಾಪಕ ಇರಲೇಬೇಕು. ನಾಗರಹಾವು ಚಿತ್ರದಲ್ಲಿ ವಿಷ್ಣುವರ್ಧನ್‌ರಷ್ಟೇ ಹೆಸರು ಮಾಡಿದ ಕೆ.ಎಸ್‌. ಅಶ್ವತ್ಥ್‌ 'ಚಾಮಯ್ಯ ಮೇಸ್ಟ್ರ" ಪಾತ್ರದಲ್ಲಿ ಮಿಂಚಿದ್ದರು.

ಈಗ ಅಶ್ವತ್ಥ್‌ ಮತ್ತೊಮ್ಮೆ ಮೇಸ್ಟ್ರಾಗ್ತಿದ್ದಾರೆ. ಈ ಮೇಸ್ಟ್ರ ಹೆಸರು ಚಾಮಯ್ಯ ಅಲ್ಲ ಬದಲಿಗೆ ರಾಮಯ್ಯ. ಆದರೆ ಇದು ಸಿನಿಮಾ ಅಲ್ಲ, ದೂರದರ್ಶನ ಧಾರಾವಾಹಿ. ಹೆಸರು 'ನಮ್ಮ ಮೇಸ್ಟ್ರು". ಅಶ್ವತ್ಧ್‌ರನ್ನು ಮತ್ತೊಮ್ಮೆ ಮೇಸ್ಟ್ರ ಪಾತ್ರದಲ್ಲಿ ಜನರ ಮುಂದೆ ತರುತ್ತಿರುವವರು ಯಾರು ಗೊತ್ತೆ? ಅಶ್ವತ್ಥ್‌ ಅವರ ಪುತ್ರ ಶಂಕರ್‌ ಅಶ್ವತ್ಥ್‌.

ಹಲವಾರು ಚಿತ್ರಗಳಲ್ಲಿ ಚಿಕ್ಕಪುಟ್ಟ ಪಾತ್ರಗಳಲ್ಲಿ ಅಭಿನಯಿಸಿರುವ - ಅಭಿನಯಿಸುತ್ತಿರುವ ಶಂಕರ್‌ ಅಶ್ವತ್ಥ್‌ ಮನೆತನ ಧಾರಾವಾಹಿಯಿಂದ ಹೆಸರು ಮಾಡಿದರು. ದೂರದರ್ಶನ ಧಾರಾವಾಹಿಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರು. ನಾಗರಹಾವು ಚಿತ್ರದಲ್ಲಿ ತಮ್ಮ ತಂದೆಯ ಅತ್ಯಮೋಘ ಅಭಿನಯದಿಂದ ಪ್ರಭಾವಿತರಾದ ಶಂಕರ್‌ ಮತ್ತೊಮ್ಮೆ ತಂದೆಯನ್ನು ಮೇಸ್ಟ್ರು ಮಾಡಲು ಹೊರಟಿದ್ದಾರೆ.

ಅಂದಹಾಗೆ ಅಕ್ಟೋಬರ್‌ 25ರ ಗುರುವಾರದಿಂದ ಈ ಧಾರಾವಾಹಿ ದೂರದರ್ಶನದ ಚಂದನದಲ್ಲಿ ಸಂಜೆ 6-30ರಿಂದ 7 ಗಂಟೆ ವರೆಗೆ ಪ್ರಸಾರವಾಗಲಿದೆ. 52 ಕಂತುಗಳ ಈ ಧಾರಾವಾಹಿಯ ಕಥಾವಸ್ತುವನ್ನು ಶಂಕರ್‌ ಸ್ವತಃ ಹೆಣೆದಿದ್ದಾರೆ. ಆದರೆ ಕಥೆಯ ಪರಿಷ್ಕರಣೆಯನ್ನು ಎರಡು ವರ್ಷಗಳ ಸುದೀರ್ಘ ಅವಧಿಯಲ್ಲಿ ಅಶ್ವತ್‌ ಮಾಡಿದ್ದಾರೆ. ಆಶಾ ಇಮೇಜಸ್‌ಲಾಂಛನದಲ್ಲಿ ಧಾರಾವಾಹಿ ಸಿದ್ಧವಾಗಿದೆ.

ಅಂದಹಾಗೆ ಶಂಕರ್‌ ಅಶ್ವತ್ಥ್‌ ತಮ್ಮ ತಂದೆ ಅಶ್ವತ್ಥ್‌ರ ಮೊದಲಕ್ಷರ ಹಾಗೂ ತಾಯಿ ಶಾರದಮ್ಮ ಹೆಸರಿನ ಮೊದಲೆರಡು ಅಕ್ಷರಗಳನ್ನು ಕಲೆಹಾಕಿ 'ಆಶಾ" ಇಮೇಜಸ್‌ ಸಂಸ್ಥೆ ಹುಟ್ಟುಹಾಕಿದ್ದಾರೆ. ನಾಗರಹಾವು ಚಿತ್ರದಲ್ಲಿ ಅಶ್ವತ್ಥ್‌ ಜೋಡಿಯಾಗಿ ನಟಿಸಿದ್ದ ಲೀಲಾವತಿ ಅವರೇ ಈ ಧಾರಾವಾಹಿಯಲ್ಲೂ ಅಶ್ವತ್‌ರೊಂದಿಗೆ ನಟಿಸುತ್ತಿದ್ದಾರೆ. ಅಂದರೆ, ನಾಗರಹಾವಿನ ನೆನಪುಗಳು ಮತ್ತೆ ಮರುಕಳಿಸುವುದು ಖಂಡಿತ.

ಧಾರಾವಾಹಿಗೆ ಗೀತೆ ಹಾಗೂ ಸಂಭಾಷಣೆಯನ್ನು ಯೋಗಾನರಸಿಂಹ ರಚಿಸಿದ್ದಾರೆ. ಎಂ.ಎಸ್‌. ರಾಮಯ್ಯ ಕಮ್ಯೂನಿಕೇಷನ್ಸ್‌ ಸಹಕಾರ, ಬಿ. ಸುಬ್ರಹ್ಮಣ್ಯ ಅವರ ಛಾಯಾಗ್ರಹಣ ಇರುವ ಈ ಧಾರಾವಾಹಿಯಲ್ಲಿ ಅಶ್ವತ್ಥ್‌, ಶಂಕರ್‌ ಅಶ್ವತ್ಥ್‌, ಲೀಲಾವತಿ, ಬ್ರಹ್ಮಾವರ್‌, ಶ್ರೀದೇವಿ ಮೊದಲಾದವರು ಅಭಿನಯಿಸಿದ್ದಾರೆ.

English summary
K.S. Ashwath, Chamayya mestru of Nagarahavu back in action as Ramaiah mestru

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada