Ashwini Puneeth Rajkumar Birthday: ಅಂದು ಕೇಕ್ ಬೇಡ ಬೇಡ ಎಂದಿದ್ದ ಅಪ್ಪು.. ಆದರೆ ಈಗ.. ವಿಡಿಯೋ ವೈರಲ್
ದೊಡ್ಮನೆ ಸೊಸೆ, ಪುನೀತ್ ರಾಜ್‌ಕುಮಾರ್ ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಅಭಿಮಾನಿಗಳಿಗೂ ಸೋಶಿಯಲ್ ಮೀಡಿಯಾದಲ್ಲಿ ಶುಭಾಶಯ ಕೋರುತ್ತಿದ್ದಾರೆ. ಇನ್ನೆರಡು ದಿನ ಕಳೆದರೆ ಅಪ್ಪು ಹುಟ್ಟುಹಬ್ಬ. ಇದೆಲ್ಲದರ ನಡುವೆ ಅಭಿಮಾನಿಗಳ ಪ್ರೀತಿಯ ಪರಮಾತ್ಮ ದೈಹಿಕವಾಗಿ ಇಲ್ಲದ ನೋವು ಅಭಿಮಾನಿಗಳನ್ನು ಕಾಡುತ್ತಿದೆ. ಅಶ್ವಿನಿ ಅವರ ಹಳೇ ಬರ್ತ್‌ಡೇ ಸೆಲೆಬ್ರೇಷನ್ ವಿಡಿಯೋ ವೈರಲ್ ಆಗಿದೆ.
ಮನೆಯಲ್ಲಿ ಪತಿ ಹಾಗೂ ಆಪ್ತರ ಜೊತೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ಕೆಲ ವರ್ಷಗಳ ಹಿಂದೆ ಹುಟ್ಟುಹಬ್ಬ ಆಚರಿಸಿದ್ದರು. ನಗು ಮುಖದ ಒಡೆಯ ಪತಿ ಪುನೀತ್ ರಾಜ್‌ಕುಮಾರ್ ಜೊತೆ ಕೇಕ್ ಕತ್ತರಿಸಿದ್ದರು. ಸದಾ ವರ್ಕ್‌ಔಟ್, ಡಯೆಟ್ ಎನ್ನುತ್ತಿದ್ದ ಪುನೀತ್ ಕೇಕ್ ತಿನ್ನಲು ಹಿಂದೇಟು ಹಾಕುತ್ತಿದ್ದರು. ಆದರೆ ಪತ್ನಿಯ ಹುಟ್ಟುಹಬ್ಬದ ದಿನ ಒಲ್ಲದ ಮನಸ್ಸಿನಿಂದಲೇ ಕೊಂಚ ಕೇಕ್ ತಿಂದಿದ್ದರು. ಅದನ್ನು ಈ ವಿಡಿಯೋದಲ್ಲಿ ನೋಡಬಹುದು. ಇಂದು ಅಶ್ವಿನಿ ಅವರ ಹುಟ್ಟುಹಬ್ಬದ ಹಿನ್ನೆಲೆ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡ್ತಿದೆ. ವಿಡಿಯೋ ನೋಡಿ ಅಭಿಮಾನಿಗಳು ಮತ್ತೆ ಭಾವುಕರಾಗುತ್ತಿದ್ದಾರೆ.

ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬ(ಮಾರ್ಚ್ 17) ಹತ್ತಿರವಾಗುತ್ತಿದೆ. ಈಗಾಗಲೇ ಅದಕ್ಕಾಗಿ ಸಿದ್ಧತೆ ನಡೀತಿದೆ. ಅಪ್ಪು ಹುಟ್ಟುಹಬ್ಬ ಅಂದರೆ ಸದಾಶಿವನಗರದ ಮನೆಯಲ್ಲಿ ಸಂಭ್ರಮ ಸಡಗರ ಮುಗಿಲು ಮುಟ್ಟುತ್ತದೆ. ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ನಿವಾಸದತ್ತ ಜಮಾಯಿಸುತ್ತಿದ್ದರೆ. ಕೊರೋನಾ ಹಾವಳಿ ಹಿನ್ನೆಲೆ 2 ವರ್ಷ ಇದಕ್ಕೆ ಬ್ರೇಕ್ ಬಿದ್ದಿತ್ತು. 3ನೇ ವರ್ಷ ಆ ಸಂಭ್ರಮವನ್ನು ಜವರಾಯ ಕಿತ್ತುಕೊಂಡುಬಿಟ್ಟಿದ್ದ. ಕಳೆದ ಬಾರಿಯಂತೆ ಈ ಬಾರಿಗೆ ಅಪ್ಪು ಅನುಪಸ್ಥಿತಿಯಲ್ಲಿ ಅಭಿಮಾನಿಗಳು ಹುಟ್ಟುಹಬ್ಬ ಆಚರಿಸಿಸುವಂತಾಗಿದೆ. ಇಂತಹ ಸಮಯದಲ್ಲೇ ಪುನೀತ್ ರಾಜ್‌ಕುಮಾರ್ ಪತ್ನಿ ವಿದೇಶಕ್ಕೆ ತೆರಳಿದ್ದಾರೆ.
ಹೌದು ಅಪ್ಪು ಹುಟ್ಟುಹಬ್ಬ ಅಂದರೆ ಅಭಿಮಾನಿಗಳು ರಾಜ್ಯದ ಮೂಲೆ ಮೂಲೆಯಿಂದ ಬರುತ್ತಾರೆ. ಈ ಬಾರಿ ಅಭಿಮಾನಿಗಳು ನಿವಾಸದ ಬಳಿ ಬರೋದು ಬೇಡ ಎಂದು ಹೇಳಲು ಮನಸ್ಸಿಲ್ಲದೇ ಅಶ್ವಿನಿ ಮಾರ್ಚ್ 10ರಂದು ವಿದೇಶದಲ್ಲಿರುವ ಮಗಳ ಬಳಿ ತೆರಳಿದ್ದಾರೆ. ಮಾರ್ಚ್ 19ಕ್ಕೆ ಮತ್ತೆ ಬೆಂಗಳೂರಿಗೆ ವಾಪಸ್ಸಾಗಲಿದ್ದಾರೆ. ಇದೆಲ್ಲರ ನಡುವೆಯೇ (ಇಂದು) ಅಶ್ವಿನಿ ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬ ಬಂದಿದೆ. ಅಪ್ಪು ಅಗಲಿ ಒಂದೂವರೆ ವರ್ಷ ಕಳೆದಿದೆ. ಇದೀಗ ಪತ್ನಿ ಮುಖದಲ್ಲಿ ಕೊಂಚ ನಗು ಕಾಣಿಸುತ್ತಿದೆ. ಪತಿಯ ಅಗಲಿಕೆಯ ನೋವಿನಿಂದ ಅವರು ಇನ್ನು ಸಂಪೂರ್ಣವಾಗಿ ಹೊರಬಂದಿಲ್ಲ.

ಇನ್ನು ಅಪ್ಪು ಅಗಲಿಕೆಯ ನಂತರ ಮನೆಯ ಸಂಪೂರ್ಣ ಜವಾಬ್ದಾರಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಹೆಗಲೇರಿದೆ. ಮುಖ್ಯವಾಗಿ ಪಿಆರ್‌ಕೆ ಪ್ರೊಡಕ್ಷನ್ಸ್ ಅನ್ನು ಅಶ್ವಿನಿ ಅವರು ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ. ಅಪ್ಪು ಇದ್ದಾಗಲೇ ಕಥೆ ಕೇಳಿ ಶುರು ಮಾಡಿದ್ದ ಎರಡ್ಮೂರು ಪ್ರಾಜೆಕ್ಟ್‌ಗಳ ಕೆಲಸ ನಡೀತಿದೆ. ಇತ್ತೀಚೆಗೆ ಆಶಿಕಾ ರಂಗನಾಥ್ ನಟನೆಯ 'O2' ಸಿನಿಮಾ ಚಿತ್ರೀಕರಣ ಮುಗಿದಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಸಿನಿಮಾಗಳನ್ನು ತಮ್ಮ ಬ್ಯಾನರ್‌ನಲ್ಲಿ ನಿರ್ಮಿಸಲು ಅಶ್ವಿನಿ ಪುನೀತ್ ರಾಜ್‌ಕುಮಾರ್ ಮುಂದಾಗಿದ್ದಾರೆ. ಅತ್ತೆ ಪಾರ್ವತಮ್ಮ ರೀತಿಯಲ್ಲೇ ಕನ್ನಡ ಚಿತ್ರರಂಗಕ್ಕೆ ಅದ್ಭುತ ಸಿನಿಮಾಗಳನ್ನು ಕೊಡುವ ನಿರ್ಧಾರ ಮಾಡಿದ್ದಾರೆ.
ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬದ ಸಂಭ್ರಮದಲ್ಲಿ ಮಾರ್ಚ್ 17ಕ್ಕೆ ಅಮೇಜಾನ್ ಪ್ರೈಮ್‌ನಲ್ಲಿ 'ಗಂಧದಗುಡಿ' ಡಾಕ್ಯೂ ಸಿನಿಮಾ ಸ್ಟ್ರೀಮಿಂಗ್ ಆಗಲಿದೆ. ಪುನೀತ್ ರಾಜ್‌ಕುಮಾರ್ ಕನಸಿನ ಸಿನಿಮಾ ಇದು. ಅಮೋಘವರ್ಷ ಜೊತೆ ಸೇರಿ ಕರ್ನಾಟಕದ ಕಾಡು ಮೇಡು ಸುತ್ತಾಡಿ ಅಪ್ಪು ಈ ಡಾಕ್ಯುಮೆಂಟರಿ ಸಿನಿಮಾ ಕಟ್ಟಿಕೊಟ್ಟಿದ್ದರು. ಆದರೆ ಆ ಸಿನಿಮಾ ರಿಲೀಸ್‌ಗೂ ಮುನ್ನ ಅವರು ಇಹಲೋಕ ತ್ಯಜಿಸಿದ್ದರು. ನಂತರ ಅಶ್ವಿನಿ ಪುನೀತ್ ರಾಜ್‌ಕುಮಾರ್ 'ಗಂಧದ ಗುಡಿ'ಯನ್ನು ತೆರೆಗೆ ತಂದಿದ್ದರು.


Click it and Unblock the Notifications











