ಅವಹೇಳನಕಾರಿ ಪೋಸ್ಟ್ ಬಗ್ಗೆ ಮೌನ ಮುರಿದ ಅಶ್ವಿನಿ ಪುನೀತ್ ರಾಜ್‌ಕುಮಾರ್
ಗಜಪಡೆ ಟ್ವಿಟರ್ ಪೇಜ್‌ನಿಂದ ಹಾಕಿದ್ದ ಪೋಸ್ಟ್‌ವೊಂದು ಕಳೆದೆರಡು ದಿನಗಳಿಂದ ಭಾರೀ ಚರ್ಚೆ ಹುಟ್ಟಾಕ್ಕಿದೆ. ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಕುರಿತು ಮಾಡಲಾಗಿದ್ದ ಆ ಅವಹೇಳಕಾರಿ ಪೋಸ್ಟ್ ಬಗ್ಗೆ ಈಗಾಗಲೇ ದೂರು ಕೂಡ ದಾಖಲಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ದರ್ಶನ್ ಹಾಗೂ ಪುನೀತ್ ಅಭಿಮಾನಿಗಳ ನಡುವೆ ಕೆಸರೆರಚಾಟ ತಾರಕಕ್ಕೇರಿದೆ.
ಆರ್‌ಸಿಬಿ ಅನ್‌ಬಾಕ್ಸ್ ಈವೆಂಟ್‌ಗೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ಸಹ ಭಾಗಿ ಆಗಿದ್ದರು. "ಗಂಡ ಇಲ್ಲದ ಮಹಿಳೆಯನ್ನು ಶುಭ ಕಾರ್ಯಕ್ಕೆ ಕರೆಸಿದ್ದರಿಂದಲೇ ಆರ್‌ಸಿಬಿ ಪದೇ ಪದೆ ಸೋಲುತ್ತಿದೆ" ಎಂದು ಗಜಪಡೆ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಲಾಗಿತ್ತು. ಬಹಳ ಕೆಟ್ಟ ಪದಗಳನ್ನು ಬಳಸಲಾಗಿತ್ತು. ನಟ ದರ್ಶನ್ ಅವರ ಅಭಿಮಾನಿ ಈ ಪೋಸ್ಟ್ ಮಾಡಿದ್ದಾನೆ ಎಂದು ಕೆಲವರು ಆರೋಪಿಸಿದ್ದಾರೆ. ಆದರೆ ಪೊಲೀಸ್ ತನಿಖೆ ಬಳಿಕ ಅಸಲಿ ಸಂಗತಿ ಬಯಲಾಗುತ್ತದೆ.

ಅವಹೇಳನಕಾರಿ ಪೋಸ್ಟ್ ಬಗ್ಗೆ ಇದೀಗ ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಪ್ರತಿಕ್ರಿಯಿಸಿದ್ದಾರೆ. ಪಿಆರ್‌ಕೆ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ 'O2' ಎನ್ನುವ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ನಗರದ ಖಾಸಗಿ ಹೋಟೆಲ್‌ನಲ್ಲಿ ಈ ಚಿತ್ರದ ಸುದ್ದಿಗೋಷ್ಠಿ ನಡೀತು. ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಸಹ ಭಾಗಿ ಆಗಿ ಸಿನಿಮಾ ಬಗ್ಗೆ ಮಾತನಾಡಿದ್ದಾರೆ.
ಇದೇ ವೇಳೆ ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. "ಪಾಸಿಟಿವ್ ಮತ್ತು ನೆಗೆಟಿವ್ನ ಹೇಗೆ ಸ್ವೀಕರಿಸುತ್ತೀರಿ" ಎನ್ನುವ ಪ್ರಶ್ನೆಗೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ಉತ್ತರ ನೀಡಿದ್ದಾರೆ. "ಬೇರೆ ಆಯ್ಕೆ ಇಲ್ಲ. ಜೀವನ ಸಾಗಲೇಬೇಕು. ಎರಡನ್ನೂ ಸಮಾನವಾಗಿ ಸ್ವೀಕರಿಸುತ್ತೇನೆ" ಎಂದು ಹೇಳಿದ್ದಾರೆ. ಈ ಮೂಲಕ ಭಾರೀ ಚರ್ಚೆ ಹುಟ್ಟಾಕ್ಕಿರುವ ವಿಚಾರದ ಬಗ್ಗೆ ಪರೋಕ್ಷವಾಗಿ ಪ್ರತಿಕ್ರಿಯಿಸಿದ್ದಾರೆ.
ಗಜಪಡೆ ಅವಹೇಳಕಾರಿ ಟ್ವೀಟ್ ಬಗ್ಗೆ ಅಪ್ಪು ಅಭಿಮಾನಿಗಳು, ನೆಟ್ಟಿಗರು ಖಂಡಿಸುತ್ತಿದ್ದಾರೆ. ಒಬ್ಬ ಮಹಿಳೆ ಬಗ್ಗೆ ಈ ರೀತಿ ಪೋಸ್ಟ್ ಮಾಡಿದ್ದು ಸರಿಯಲ್ಲ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. 'ಅಪ್ಪು ಹುಡುಗರು ಕರ್ನಾಟಕ' ಸಂಘದವರು ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ. ಮೊದಲಿಗೆ ಗಜಪಡೆ ಟ್ವಿಟರ್ ಖಾತೆಯಿಂದ ಪೋಸ್ಟ್ ಮಾಡಲಾಗಿತ್ತು. ಬಳಿಕ ಖಾತೆ ಹೆಸರನ್ನು ಸುದೀಪ್ ಅಭಿಮಾನಿ ಎಂದು ಬದಲಿಸಲಾಗಿತ್ತು.
ಈ ಕೀಳುಮಟ್ಟದ ಪೋಸ್ಟ್ ವಿಚಾರ ನಟ ದರ್ಶನ್ ಗಮನಕ್ಕೂ ಬಂದಿದೆ. ಅವರು ಇದನ್ನು ನೋಡಿ ಬೇಸರ ಮಾಡಿಕೊಂಡಿದ್ದಾರೆ ಎಂದು ಆಪ್ತರು ಮಾಹಿತಿ ನೀಡಿದ್ದಾರೆ. ಯಾರೇ ಮಾಡಿದ್ದರೂ ಇದು ತಪ್ಪು ಎಂದು ನಟ ದರ್ಶನ್ ಹೇಳಿದ್ದಾಗಿ ಗೊತ್ತಾಗಿದೆ. ಸದ್ಯ ಅವರ ಎಡಗೈಗೆ ಶಸ್ತ್ರ ಚಿಕಿತ್ಸೆ ಆಗಿದ್ದು ವಿಶ್ರಾಂತಿ ಪಡೆಯುತ್ತಿದ್ದಾರೆ. ಶೀಘ್ರದಲ್ಲೇ ಮತ್ತೆ 'ಡೆವಿಲ್' ಸಿನಿಮಾ ಚಿತ್ರೀಕರಣದಲ್ಲಿ ಭಾಗಿ ಆಗಲಿದ್ದಾರೆ.

ಇನ್ನು ಪಿಆರ್‌ಕೆ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ನಿರ್ಮಾಣವಾಗಿರುವ ಹತ್ತನೇ ಸಿನಿಮಾ 'O2'. ಆಶಿಕಾ ರಂಗನಾಥ್ ಈ ಚಿತ್ರದ ಲೀಡ್ ರೋಲ್‌ನಲ್ಲಿ ನಟಿಸಿದ್ದಾರೆ. ರಾಘವ್ ನಾಯಕ್ ಹಾಗೂ ಪ್ರಶಾಂತ್ ರಾಜ್ ಆಕ್ಷನ್ ಕಟ್ ಹೇಳಿದ್ದಾರೆ. ಪ್ರವೀಣ್ ತೇಜ್, ಪ್ರಕಾಶ್ ಬೆಳವಾಡಿ, ಸಿರಿ ರವಿಕುಮಾರ್ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಏಪ್ರಿಲ್ 19ಕ್ಕೆ ಈ ಥ್ರಿಲ್ಲರ್ ಸಿನಿಮಾ ತೆರೆಗೆ ಬರಲಿದೆ. ಕೆಆರ್‌ಜಿ ಸ್ಟುಡಿಯೋಸ್ ಸಂಸ್ಥೆ ಸಿನಿಮಾ ವಿತರಣೆ ಮಾಡಲಿದೆ.
ಪುನೀತ್ ರಾಜ್‌ಕುಮಾರ್ ಕಥೆ ಕೇಳಿ ಆರಂಭಿಸಿದ್ದ ಸಿನಿಮಾಗಳಲ್ಲಿ 'O2' ಕೂಡ ಒಂದು. ಈಗಾಗಲೇ ಚಿತ್ರದ ಟೀಸರ್, ಟ್ರೈಲರ್ ಬಿಡುಗಡೆಯಾಗಿ ಗಮನ ಸೆಳೆದಿದೆ. ನವೀನ್ ಕುಮಾರ್ ಛಾಯಾಗ್ರಹಣ, ವಿವನ್ ರಾಧಕೃಷ್ಣ ಸಂಗೀತ ಚಿತ್ರಕ್ಕಿದೆ.


Click it and Unblock the Notifications











