ಮೊದಲು ಸ್ವಾರಿ ಕೇಳ್ತಿದ್ದಿದ್ದು ಯಾರು, ಅಪ್ಪು ಪ್ರಪೋಸ್ ಮಾಡಿದ್ದು ಎಲ್ಲಿ- ಅಶ್ವಿನಿ ಮನದಾಳ
ಪುನೀತ್ ರಾಜ್‌ಕುಮಾರ್ 4ನೇ ವರ್ಷದ ಪುಣ್ಯಸ್ಮರಣೆ ಹತ್ತಿರವಾಗುತ್ತಿದೆ. ಅಪ್ಪು ಅಗಲಿಕೆ ನೋವು ಅಭಿಮಾನಿಗಳು ಕಾಡುತ್ತಲೇ ಇದೆ. ಇತ್ತೀಚೆಗೆ ಪುನೀತ್ ಫ್ಯಾನ್‌ಡಮ್ ಆಪ್ ಟ್ರೈಲರ್ ಅನಾವರಣವಾಗಿತ್ತು. ಆಂಡ್ರಾಯ್ಡ್ ಹಾಗೂ ಐಓಎಸ್ ಬಳಕೆದಾರಿಗಾಗಿ ಈ ಆಪ್ ಬರ್ತಿದೆ. ಇದರಲ್ಲಿ ಪುನೀತ್ ರಾಜ್‌ಕುಮಾರ್‌ಗೆ ಸಂಬಂಧಿಸಿದ ಸಾಕಷ್ಟು ವಿಷಯಗಳು ಲಭ್ಯವಾಗಲಿದೆ.
ಇನ್ನು ಪುನೀತ್ ಫ್ಯಾನ್‌ಡಮ್ ಆಪ್ ಹಿನ್ನೆಲೆಯಲ್ಲಿ ಸ್ಪೆಷಲ್ ಪಾಡ್‌ಕಾಸ್ಟ್‌ನಲ್ಲಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಭಾಗಿ ಆಗಿದ್ದಾರೆ. 'ನಾ ಕಂಡ ಅಪ್ಪು' ಶೋನಲ್ಲಿ ಅನುಶ್ರೀ ನಿರೂಪಣೆಯಲ್ಲಿ ಅಪ್ಪು ಕುರಿತು ಸಾಕಷ್ಟು ವಿಚಾರಗಳನ್ನು ಅಶ್ವಿನಿ ತೆರೆದಿಟ್ಟಿದ್ದಾರೆ. ಅದಕ್ಕೆ ಸಂಬಂಧಿಸಿದ ಪ್ರೋಮೊ ರಿಲೀಸ್ ಆಗಿ ವೈರಲ್ ಆಗ್ತಿದೆ. ಪತಿ ಪುನೀತ್ ಜೊತೆಗಿನ ಸುಂದರ ಕ್ಷಣಗಳನ್ನು ಅಶ್ವಿನಿ ಹಂಚಿಕೊಂಡಿದ್ದಾರೆ.

ಅಪ್ಪು ಹೀರೋ ಆಗಬೇಕು ಎಂದು ನೀವು ಬಯಸ್ಸಿದ್ರಾ? ಎನ್ನುವ ಪ್ರಶ್ನೆಗೆ ಅಶ್ವಿನಿ ಇಲ್ಲ ಎಂದು ಹೇಳಿದ್ದಾರೆ. ಇಬ್ಬರೂ ಕೋಪಗೊಂಡಾಗ ಯಾರು ಮೊದಲು ಸ್ವಾರಿ ಕೇಳ್ತಿದ್ರಿ ಎನ್ನುವ ಪ್ರಶ್ನೆಗೆ ಖಂಡಿತ ಅಪ್ಪು ಎಂದಿದ್ದಾರೆ. ಮತ್ತೊಂದು ಘಟನೆಯನ್ನು ಈ ವೇಳೆ ಹಂಚಿಕೊಂಡಿದ್ದಾರೆ. ಒಮ್ಮೆ ಅಮ್ಮ, ಅಪ್ಪು ಕಾಲಿಗೆ ನಮಸ್ಕರಿಸಬೇಕು ಅಂದಾಗ ಛಾನ್ಸೇ ಇಲ್ಲ, ನಾನು ನಮಸ್ಕಾರ ಮಾಡಲ್ಲ ಎಂದಿದ್ದೆ ಅಂತ ನಕ್ಕಿದ್ದಾರೆ.
ಅಪ್ಪು ಸರ್ ಪ್ರಪೋಸ್ ಮಾಡಿದ ದಿನ ನೆನಪಿದ್ಯಾ ಎನ್ನುವ ಪ್ರಶ್ನೆಗೆ ಕಂಡಿತ. ಯಾವುದೋ ರೆಸ್ಟೋರೆಂಟ್‌ಗೆ ಹೋಗಿದ್ವಿ, ಅದು ಯಾವ ರೆಸ್ಟೋರೆಂಟ್ ಅಂತ ಹೇಳಲ್ಲ. ಅಪ್ಪ ಸಖತ್ ರೊಮ್ಯಾಂಟಿಕ್ ಎಂದು ಅಶ್ವಿನಿ ಪುನೀತ್ ರಾಜ್‌ಕುಮಾರ್ ಹೇಳಿದ್ದಾರೆ. ಇದು ಬರೀ ಪ್ರೋಮೊ ಅಷ್ಟೆ. ಇನ್ನು ಸಾಕಷ್ಟು ವಿಚಾರಗಳು ಪೂರ್ತಿ ಎಪಿಸೋಡ್‌ನಲ್ಲಿ ಇರಲಿದೆ.
ಇಂದು(ಅಕ್ಟೋಬರ್ 25) ಸಂಜೆ 7 ಗಂಟೆಗೆ PRK appನಲ್ಲಿ ಈ ಸಂಪೂರ್ಣ ಪಾಡ್‌ಕಾಸ್ಟ್ ಸಂದರ್ಶನ ನೀವು ವೀಕ್ಷಿಸಬಹುದು. ಪುನೀತ್ ರಾಜ್‌ಕುಮಾರ್ ಪ್ರತಿಭೆ, ಸಾಧನೆ, ಸೇವೆ, ಆದರ್ಶ ಗುಣಗಳನ್ನು ಪ್ರತಿಯೊಬ್ಬರಿಗೂ ತಲುಪಿಸಲು ಆ ಮೂಲಕ ಸ್ಫೂರ್ತಿ ತುಂಬಲು ಈ ಅಪ್ಲಿಕೇಶನ್ ಅನ್ನು ಸಿದ್ಧಪಡಿಸಲಾಗಿದೆ.
ಅಪ್ಲಿಕೇಶನ್ನ ಪ್ರೋಮೊಗೆ ಕಿಚ್ಚ ಸುದೀಪ್ ಧ್ವನಿ ನೀಡಿದ್ದರು. "ಅಪ್ಪು.. 1975ರಲ್ಲಿ ರಾಜನ ಮಗನಾಗಿ ಹುಟ್ಟಿದ್ರು.. ಪುಟ್ಟ ವಯಸ್ಸಲ್ಲೇ ಬೆಟ್ಟದ ಹೂವಾಗಿ ರಾಷ್ಟ್ರಪ್ರಶಸ್ತಿ ತಂದ್ರು. ಅಶ್ವಿನಿ ಎನ್ನುವ ಅನುಬಂಧದ ಜೊತೆ ಅಜರಾಮರಾದರು. ಅವರು ಮುಟ್ಟಿದ್ದೆಲ್ಲಾ ಹಿಟ್ಸ್, ಕೊಟ್ಟಿದೆಲ್ಲಾ ಬ್ಲಾಕ್‌ಬಸ್ಟರ್" ಎಂದು ಅಪ್ಪು ಆಪ್ ಬಗ್ಗೆ ಸುದೀಪ್ ಮಾತನಾಡಿದ್ದರು.
"ಪ್ರತಿ ಅಭಿಮಾನಿಯ ಹೃದಯದಿಂದ - ಪ್ರತಿಯೊಂದು ಮನೆಯವರೆಗೂ ಅಪ್ಪುವಿನ ನೆನಪು ಅಜರಾಮರ... ಪ್ರೀತಿಸುವ ಹೃದಯಗಳಿಂದ ನಿರ್ಮಾಣವಾದ ವಿಶ್ವದ ಮೊಟ್ಟಮೊದಲ ಫ್ಯಾನ್‌ಡಮ್ ಆ್ಯಪ್" ಎಂದು ಅಶ್ವಿನಿ ಪುನೀತ್ ರಾಜ್‌ಕುಮಾರ್ ಮಾಹಿತಿ ನೀಡಿದ್ದರು.
ಬಾಲ್ಯದಿಂದ ಅಗಲಿಕೆಯವರೆಗೆ ಅಪ್ಪು ಕುರಿತು ಸಾಕಷ್ಟು ವಿಷಯಗಳು ಈ ಆಪ್‌ನಲ್ಲಿ ಸಿಗಲಿದೆ. ಅಪರೂಪದ ಫೋಟೊ, ವೀಡಿಯೋಗಳು ಲಭ್ಯವಾಗಲಿದೆ. 'AI' ತಂತ್ರಜ್ಞಾನ ಬಳಸಿ ಮತ್ತಷ್ಟು ಸೊಗಸಾಗಿ ಅಪ್ಪು ಮೌಲ್ಯಗಳನ್ನು ಜನರ ಬಳಿಗೆ ತೆಗೆದುಕೊಂಡು ಹೋಗುತ್ತಿದ್ದಾರೆ. 2021, ಅಕ್ಟೋಬರ್ 29ರಂದು ನಟ ಪುನೀತ್ ರಾಜ್‌ಕುಮಾರ್ ಹೃದಯಾಘಾತದಿಂದ ನಿಧನರಾಗಿದ್ದರು. ನೇತ್ರದಾನ ಮಾಡಿ ಸಾವಿನಲ್ಲೂ ಅಪ್ಪು ಸಾರ್ಥಕತೆ ಮೆರೆದಿದ್ದರು. ಅವರಿಗೆ ಸ್ಫೂರ್ತಿಗೊಂಡು ಸಾಕಷ್ಟು ಜನ ನೇತ್ರದಾನದ ವಾಗ್ದಾನ ಮಾಡಿದ್ದಾರೆ.
ಪುನೀತ್ ಫ್ಯಾನ್‌ಡಮ್ ಆಪ್ ಅನ್ನು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಗೂ ಗಣ್ಯರು ಅನಾವರಣ ಮಾಡಲಿದ್ದಾರೆ. ಇತ್ತೀಚೆಗೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ಖುದ್ದಾಗಿ ಹೋಗಿ ಅವರನ್ನು ಭೇಟಿ ಮಾಡಿ ಆಹ್ವಾನ ನೀಡಿದ್ದರು. ಅಪ್ಪು ಅವರನ್ನು ಅಮರರಾಗಿಡಲು ಅಭಿಮಾನಿಗಳಿಗೆ ಮತ್ತಷ್ಟು ಹತ್ತಿರ ಮಾಡಲು ಅಶ್ವಿನಿ ಪುನೀತ್ ರಾಜ್‌ಕುಮಾರ್ ಈ ಆಪ್ ಪ್ರಯತ್ನ ಮಾಡಿದ್ದಾರೆ.


Click it and Unblock the Notifications











