ಪುನೀತ್ ರಾಜ್‌ಕುಮಾರ್ ರಸ್ತೆ ಉದ್ಘಾಟನೆ: ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿದ ಅಶ್ವಿನಿ ಪುನೀತ್ ರಾಜ್‌ಕುಮಾರ್
ತಮ್ಮ ಸಿನಿಮಾಗಳ ಮೂಲಕ ಮಾತ್ರವಲ್ಲದೇ ತಮ್ಮ ದಾನ- ಧರ್ಮಗಳ ಮೂಲಕ ಅಭಿಮಾನಿಗಳ ಮನಸ್ಸಿನಲ್ಲಿ ಪುನೀತ್ ರಾಜ್‌ಕುಮಾರ್ ಅಜರಾಮರವಾಗಿದ್ದಾರೆ. ಅಪ್ಪು ಅಗಲಿಕೆಯ ನೋವಿನಿಂದ ಅಭಿಮಾನಿಗಳು ಇನ್ನು ಹೊರ ಬಂದಿಲ್ಲ. ರಸ್ತೆ, ಉದ್ಯಾನವನಗಳಿಗೆ ಅಪ್ಪು ಹೆಸರು ಇಡುವ ಕೆಲಸ ನಡೆಯುತ್ತಲೇ ಇದೆ.
ಕೆಲ ದಿನಗಳ ಹಿಂದೆ ನಾಯಂಡಳ್ಳಿ ಜಂಕ್ಷನ್‌ನಿಂದ ಬನ್ನೇರುಘಟ್ಟ ರಸ್ತೆಯ ವೇಗಾ ಸಿಟಿ ಮಾಲ್ ವರೆಗಿನ ರಸ್ತೆಗೆ ಕರ್ನಾಟಕ ರತ್ನ ಪುನೀತ್ ರಾಜ್‌ಕುಮಾರ್ ಹೆಸರನ್ನು ಈ ಹಿಂದೆ ಸರ್ಕಾರ ನಾಮಕರಣ ಮಾಡಿತ್ತು. ಸಿಎಂ ಬಸವರಾಜ ಬೊಮ್ಮಾಯಿ ರಸ್ತೆಯನ್ನು ಉದ್ಘಾಟನೆ ಮಾಡಿದ್ದರು. ಈ ಕಾರ್ಯಕ್ರಮದಲ್ಲಿ ಪುನೀತ್ ರಾಜ್‌ಕುಮಾರ್ ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್, ಸಹೋದರ ರಾಘವೇಂದ್ರ ರಾಜ್‌ಕುಮಾರ್, ಅಭಿಷೇಕ್ ಅಂಬರೀಶ್, ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಸೇರಿದಂತೆ ಹಲವರು ಭಾಗಿ ಆಗಿದ್ದರು.

ರಸ್ತೆಯ ನಾಮಕರಣ ಫಲಕ ಉದ್ಘಾಟಿಸಿ ಸಿಎಂ ಬಸವರಾಜ ಬೊಮ್ಮಾಯಿ ಅಪ್ಪು ನೆನೆದರು. ಪುನೀತ್ ರಾಜ್‌ಕುಮಾರ್ ಸ್ಮಾರಕ ನಿರ್ಮಾಣ ಮಾಡುವುದಾಗಿಯೂ ಹೇಳಿದರು. ರೇಸ್‌ಕೋರ್ಸ್ ರಸ್ತೆಗೆ ಅಂಬರೀಶ್ ರಸ್ತೆ ಎಂದು ಹೆಸರಿಡಲು ನಿರ್ಧರಿಸಿರುವುದಾಗಿ ಹೇಳಿದ್ದರು. ಇನ್ನು ರಿಂಗ್ ರಸ್ತೆಗೆ ಪುನೀತ್ ರಾಜ್‌ಕುಮಾರ್ ಹೆಸರು ನಾಮಕರಣ ಮಾಡಿದ್ದಕ್ಕೆ ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಸರ್ಕಾರಕ್ಕೆ ಕೃತಜ್ಞತೆ ತಿಳಿಸಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.


Click it and Unblock the Notifications











