'ಥಗ್ಸ್ ಆಫ್ ಮಾಲ್ಗುಡಿ' ಕಿಚ್ಚನಿಗೆ ಆಸೆ? ರಕ್ಷಿತ್‌ಗೆ..? ಫ್ಯಾನ್ಸ್ ಮರೆತುಬಿಡೋದೇ ಒಳ್ಳೇದಾ?
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ 'ಮ್ಯಾಕ್ಸ್' ಸಿನಿಮಾದಲ್ಲಿ ತೊಡಗಿಸಿಕೊಂಡಿದ್ದಾರೆ. ಸಾಧ್ಯವಾದಷ್ಟು ಬೇಗ ಚಿತ್ರವನ್ನು ಪ್ರೇಕ್ಷಕರ ಮುಂದೆ ತರುವ ಪ್ರಯತ್ನ ಮಾಡುತ್ತಿದ್ದಾರೆ. ಮಹಾಬಲಿಪುರಂನಲ್ಲೇ ಚಿತ್ರದ ಬಹುತೇಕ ಚಿತ್ರೀಕರಣ ನಡೀತಿದೆ. ಅಭಿಮಾನಿಗಳು ಅಪ್‌ಡೇಟ್ ಕೇಳಿಕೇಳಿ ಸುಸ್ತಾಗಿದ್ದಾರೆ. ಇನ್ನು ಬಹಳ ಹಿಂದೆ ಘೋಷಣೆ ಆಗಿದ್ದ 'ಥಗ್ಸ್ ಆಫ್ ಮಾಲ್ಗುಡಿ' ಸಿನಿಮಾ ಮೇಲೂ ನಿರೀಕ್ಷೆಯಿದೆ.
ಬಹಳ ಹಿಂದೆ ಕಿಚ್ಚ ಸುದೀಪ್ ಜೊತೆ 'ಥಗ್ಸ್ ಆಫ್ ಮಾಲ್ಗುಡಿ' ಎನ್ನುವ ಸಿನಿಮಾ ಮಾಡುವುದಾಗಿ ರಕ್ಷಿತ್ ಶೆಟ್ಟಿ ಘೋಷಣೆ ಮಾಡಿದ್ದರು. 'ಉಳಿದವರು ಕಂಡಂತೆ' ಬಳಿಕ ರಕ್ಷಿತ್ ಶೆಟ್ಟಿ ನಿರ್ದೇಶನದಲ್ಲಿ ಸುದೀಪ್ ನಟಿಸುತ್ತಾರೆ ಎನ್ನುವುದನ್ನು ಕಲ್ಪಿಸಿಕೊಂಡೇ ಅಭಿಮಾನಿಗಳು ಥ್ರಿಲ್ಲಾಗಿದ್ದರು. ಇದೇ ಕಾರಣಕ್ಕೆ ಪದೇ ಪದೇ ಈ ಸಿನಿಮಾ ಬಗ್ಗೆ ಅಭಿಮಾನಿಗಳು ಕೇಳುತ್ತಲೇ ಇರುತ್ತಾರೆ.

ಸಾಕಷ್ಟು ಬಾರಿ ರಕ್ಷಿತ್ ಶೆಟ್ಟಿ ಹಾಗೂ ಸುದೀಪ್ ಎದುರು 'ಥಗ್ಸ್ ಆಫ್ ಮಾಲ್ಗುಡಿ' ಸಿನಿಮಾ ಯಾವಾಗ? ಎನ್ನುವ ಪ್ರಶ್ನೆ ಇಡಲಾಗಿತ್ತು. ಆದಷ್ಟು ಬೇಗ ಎಂದು ಇಬ್ಬರು ಹೇಳಿಕೊಂಡು ಬಂದಿದ್ದಾರೆ. ಆದರೆ ಅಂತಾದೊಂದು ಕ್ರೇಜಿ ಪ್ರಾಜೆಕ್ಟ್ ಶುರುವಾಗುವ ಯಾವುದೇ ಲಕ್ಷಣಗಳು ಗೊತ್ತಾಗಲಿಲ್ಲ. ಸಿಂಪಲ್ ಸ್ಟಾರ್ ತಮ್ಮದೇ ಸಿನಿಮಾಗಳಲ್ಲಿ ಬ್ಯುಸಿಯಾದರು. ಸುದೀಪ್ ಕೂಡ ಬೇರೆ ಸಿನಿಮಾಗಳಲ್ಲಿ ಮುಳುಗಿದ್ದರು.
ಬಹಳ ದಿನಗಳ ಬಳಿಕ ಮತ್ತೆ 'ಥಗ್ಸ್ ಆಫ್ ಮಾಲ್ಗುಡಿ' ಸಿನಿಮಾ ಬಗ್ಗೆ ಚರ್ಚೆ ಶುರುವಾಗಿದೆ. ಈ ಬಾರಿ ಖುದ್ದು ಸುದೀಪ್ ಪ್ರತಿಕ್ರಿಯಿಸಿದ್ದಾರೆ. ಸುದೀಪ್ ಮಾತು ಕೇಳಿದ ಮೇಲೆ 'ಥಗ್ಸ್ ಆಫ್ ಮಾಲ್ಗುಡಿ' ಚಿತ್ರವನ್ನು ಮರೆತುಬಿಡುವುದು ಒಳ್ಳೆಯದು ಎಂದು ಅಭಿಮಾನಿಗಳು ನಿರ್ಧಾರಕ್ಕೆ ಬಂದಿದ್ದಾರೆ. #AskKichcha ಸೆಷನ್ ವೇಳೆ ಅಭಿಮಾನಿಗಳ ಸಾಕಷ್ಟು ಪ್ರಶ್ನೆಗಳಿಗೆ ಸುದೀಪ್ ಉತ್ತರಿಸಿದ್ದಾರೆ.

ಅಭಿಮಾನಿಯೊಬ್ಬರು "ಸರ್, ರಕ್ಷಿತ್ ಶೆಟ್ಟಿ ಅವರ ಜೊತೆ 'ಥಗ್ಸ್ ಆಫ್ ಮಾಲ್ಗುಡಿ' ಮಾಡ್ತೀರಾ? ನೀವಿಬ್ಬರು ಒಟ್ಟಿಗೆ ಕೆಲಸ ಮಾಡಿದರೆ ಅದ್ಭುತವಾಗಿರುತ್ತದೆ" ಎಂದು ಕೇಳಿದ್ದಾರೆ. ಇದಕ್ಕೆ ರಿಪ್ಲೇ ಮಾಡಿರುವ ನಟ ಸುದೀಪ್ "ನನಗೂ ಗೊತ್ತು ಅದು ಚೆನ್ನಾಗಿರುತ್ತದೆ ಎಂದು. ಆದರೆ ರಕ್ಷಿತ್ ಶೆಟ್ಟಿಗೆ ಈಗ ತನ್ನದೇ ಆದ ಜೀವನವಿದೆ. ಆತನ ಮೇಲೆ ಒತ್ತಡ ಹೇರುವುದು ಸರಿಯಲ್ಲ" ಎಂದು ಸುದೀಪ್ ಹೇಳಿದ್ದಾರೆ.
ಕಿಚ್ಚನ ರಿಪ್ಲೇ ನೋಡಿ 'ಥಗ್ಸ್ ಆಫ್ ಮಾಲ್ಗುಡಿ' ಸಿನಿಮಾ ಬರೋದು ಅನುಮಾನ. ಇನ್ನು ಆ ಸಿನಿಮಾವನ್ನು ಮರೆತುಬಿಡುವುದು ಒಳ್ಳೆಯದು ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ. ರಕ್ಷಿತ್ ಶೆಟ್ಟಿ ದೊಡ್ಡ ದೊಡ್ಡ ಕನಸುಗಳನ್ನು ಕಾಣುತ್ತಿದ್ದಾರೆ. 4 ಸಿನಿಮಾಗಳಿಗೆ ಪ್ಲ್ಯಾನ್ ಮಾಡುತ್ತಿದ್ದಾರೆ. ಆದರೆ ಲಿಸ್ಟ್‌ನಲ್ಲಿ 'ಥಗ್ಸ್ ಆಫ್ ಮಾಲ್ಗುಡಿ' ಇದ್ದಂತೆ ಕಾಣುತ್ತಿಲ್ಲ. ಆ 5 ಸಿನಿಮಾಗಳನ್ನು ಮಾಡಿ ಮುಗಿಸುವುದು ಯಾವಾಗ? ಬಳಿಕ 'ಥಗ್ಸ್ ಆಫ್ ಮಾಲ್ಗುಡಿ' ಶುರುವಾಗುವುದು ಯಾವಾಗ? ಅನ್ನೋದು ಗೊತ್ತಿಲ್ಲ. ಹಾಗಾಗಿ 'ಥಗ್ಸ್ ಆಫ್ ಮಾಲ್ಗುಡಿ' ಸಿನಿಮಾ ಆಸೆಗೆ ಅಭಿಮಾನಿಗಳು ಎಳ್ಳು ನೀರು ಬಿಡುವುದು ಉಚಿತ ಎಂದು ನೆಟ್ಟಿಗರು ಹೇಳುತ್ತಿದ್ದಾರೆ.
'ಸಪ್ತಸಾಗರದಾಚೆ ಎಲ್ಲೋ' ಸರಣಿ ಬಳಿಕ ರಕ್ಷಿತ್ ಶೆಟ್ಟಿ 'ಉಳಿದವರು ಕಂಡಂತೆ' ಪ್ರೀಕ್ವೆಲ್ 'ರಿಚರ್ಡ್ ಆಂಟನಿ' ಸಿನಿಮಾ ಕೈಗೆತ್ತಿಕೊಳ್ಳುತ್ತಿದ್ದಾರೆ. ಬಳಿಕ ತಮ್ಮ ಕನಸಿನ 'ಪುಣ್ಯಕೋಟಿ' ಚಿತ್ರವನ್ನು 2 ಭಾಗಗಳಾಗಿ ತೆರೆಗೆ ತರುವ ಮನಸ್ಸು ಮಾಡಿದ್ದಾರೆ. 'ಮಿಡ್ ನೈಟ್ ಟು ಮೋಕ್ಷ' ಎನ್ನುವ ಮತ್ತೊಂದು ಚಿತ್ರಕ್ಕೂ ಪ್ಲ್ಯಾನ್ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ರಿಷಬ್ ಶೆಟ್ಟಿ ಹಾಗೂ ರಾಜ್. ಬಿ ಶೆಟ್ಟಿ ಕೂಡ ಕೆಲಸ ಮಾಡುತ್ತಾರೆ ಎಂದಿದ್ದಾರೆ.
ರಕ್ಷಿತ್ ಶೆಟ್ಟಿ ಕನಸಿನ 4 ಸಿನಿಮಾಗಳು ಬಹಳ ದೊಡ್ಡ ಪ್ರಾಜೆಕ್ಟ್‌ಗಳು. ಇದಕ್ಕಾಗಿ ಬಹಳ ಸಮಯ, ಶ್ರಮ ವ್ಯಯಿಸಲು ಸಿಂಪಲ್ ಸ್ಟಾರ್ ತೀರ್ಮಾನಿಸಿದ್ದಾರೆ. ಈ ಸಿನಿಮಾಗಳು ಯಾವಾಗ ತೆರೆಗೆ ಬರುತ್ತದೆ ಎನ್ನುವುದು ಖುದ್ದು ರಕ್ಷಿತ್ ಶೆಟ್ಟಿಗೂ ಐಡಿಯಾ ಇಲ್ಲ.


Click it and Unblock the Notifications











