»   » ದಿ ಮೇಕಿಂಗ್‌ ಆಫ್‌ ಅಶೋಕ

ದಿ ಮೇಕಿಂಗ್‌ ಆಫ್‌ ಅಶೋಕ

Posted By: Super
Subscribe to Filmibeat Kannada
Shahrukh
ಒಂದು ಸಿನಿಮಾ ಮಾಡುವಾಗ ಕಳೆಯುವ ತೆರೆ ಹಿಂದಿನ ಕ್ಷಣಗಳು ವೀಕ್ಷಕರಿಗೆ ಮುಟ್ಟಿರುವುದುಂಟೇ? ಟಿವಿ ಪರದೆ ಮೇಲೆ ಅರ್ಧ ತಾಸಿನಲ್ಲಿ 'ಮೇಕಿಂಗ್‌ ಆಫ್‌....' ಅಂತ ಕೆಲವಾರು ಸಿನಿಮಾ ಶೂಟಿಂಗ್‌ ತುಣುಕುಗಳು ಕಂಡಿರುವುದುಂಟು. ಆದರೆ ಒಂದು ಸಿನಿಮಾ ಪ್ರೊಜೆಕ್ಟು ಹೇಗೆ ಶುರುವಾಗಿ ಎನಿತು ಮುಗಿಯಿತು ಅನ್ನೋದರ ಪೂರಾ ಮಾಹಿತಿ ವೀಕ್ಷಕನಿಗೆ ಭಾರತೀಯ ಸಿನಿಮಾ ರಂಗದಲ್ಲಂತೂ ಮುಟ್ಟಿಲ್ಲ. ಈಗ ಆ ಕೊರತೆ ನೀಗಲಿದೆ. ತಮ್ಮ ಮಹತ್ವಾಕಾಂಕ್ಷೆಯ ಚಿತ್ರ ಅಶೋಕ ತೆರೆಗೆ ಬರುವ ಮುಂಚಿನ ಮಧುರ ಕ್ಷಣಗಳನ್ನೆಲ್ಲಾ ಶಾರುಖ್‌ ಖಾನ್‌ ಒಂದು ಪುಸ್ತಿಕೆಯ ರೂಪದಲ್ಲಿ ನೀಡುತ್ತಿದ್ದಾರೆ ! ಇದು ಭಾರತೀಯ ಚಿತ್ರರಂಗದ ಪ್ರಥಮ.

ಪುಸ್ತಕವನ್ನು ರಾಷ್ಟ್ರಪತಿಗಳು ಮುಂದಿನ ವಾರ ಬಿಡುಗಡೆ ಮಾಡಲಿದ್ದಾರೆ. ಉತ್ಸಾಹೀ ಯುವ ಪತ್ರಕರ್ತ ಹಾಗೂ ಸಿನಿಮಾಗಳಿಗೆ ಕತೆ- ಸಂಭಾಷಣೆ ಬರೆದು ಸೈ ಎನಿಸಿಕೊಂಡಿರುವ ಮುಷ್ತಾಕ್‌ ಶೇಕ್‌, ಸಿನಿಮಾ ಕತೆಯ ಜವಾಬ್ದಾರಿ ಜೊತೆಗೆ ಪುಸ್ತಕದ ಹೊಣೆಯನ್ನೂ ಹೊತ್ತಿದ್ದರು. ಅವರ ಮೊಗದಲ್ಲೀಗ ದೊಡ್ಡ ನಗೆ. ಮಾಡಿರುವ ಕೆಲಸ ಮುಗಿದಿದೆ. ಫಲಿತಾಂಶದ ನಿರೀಕ್ಷೆ ಕಣ್ಣಲ್ಲಿ ಮನೆಮಾಡಿದೆ.

ಸ್ಟಾರ್‌ ಟಿವಿಗೆ ಕೊಟ್ಟ ಸಂದರ್ಶನದಲ್ಲಿ ಪುಸ್ತಕದ ಬಗ್ಗೆ ಶೇಕ್‌ ಮಾತಾಡಿದರು- 'ದೇವಾನಾಂಪ್ರಿಯ ಅಶೋಕ ಎಲ್ಲರಿಗೂ ಗೊತ್ತು. ಆದರೆ ಪೂರ್ಣ ಪ್ರಮಾಣದಲ್ಲಿ ಗೊತ್ತಿರಲಿಕ್ಕಿಲ್ಲ. ಒಬ್ಬ ವ್ಯಕ್ತಿಯ ಚರಿತ್ರೆಯ ಬೆನ್ನೇರಿ ಹೊರಟಾಗ ದಕ್ಕುವುದು ಅಷ್ಟಿಷ್ಟಲ್ಲ. ಸಾಕಷ್ಟು ಪುಸ್ತಕಗಳನ್ನು ಓದಿ, ನಾನು ತಲೆಗೆ ತುಂಬಿಕೊಂಡದ್ದನ್ನು ಚಕ್ಕಳ ಮಕ್ಕಳ ಹಾಕಿ ಕತೆ ಹೇಳುವಂತೆ ಭಟ್ಟಿ ಇಳಿಸಬೇಕು. ಅಶೋಕ ಅಷ್ಟು ಸಲೀಸಲ್ಲ. ನನ್ನ ಜೀವಮಾನದ ದೊಡ್ಡ ಛಾಲೆಂಜ್‌ ಇದಾಗಿತ್ತು. ಸಾಕಷ್ಟು ಮುದದ ಕ್ಷಣಗಳು ಪುಸ್ತಕದಲ್ಲಿ ಉಂಟು'.

ಐತಿಹಾಸಿಕ, ಪೌರಾಣಿಕ. ಈ ಪೈಕಿ ಅಶೋಕ ಯಾವ ಕೆಟಗರಿಗೆ ಸೇರುತ್ತದೆ? ಶಾರುಖ್‌ ಖಾನ್‌ ಸಣ್ಣಗೆ ತಲೆಕೆರೆದು ಉತ್ತರಿಸಿದ್ದು, 'ಇದೊಂದು ಸಾಮಾನ್ಯ ಬಾಲಿವುಡ್‌ ಸಿನಿಮಾಗೂ ಮೀರಿದ ಮನರಂಜನಾ ಚಿತ್ರ. ಜನಕ್ಕೆ ಹೊಸತನ್ನು ಕೊಡಲು ಸಾಕಷ್ಟು ಕಷ್ಟಪಟ್ಟಿದ್ದೇವೆ. ಟ್ರೆಂಡ್‌ಮೇಕರ್‌ ಆಗುತ್ತದೋ ಬಿಡುತ್ತದೋ. ಆದರೆ, ಅಶೋಕ ಜನರನ್ನು ಖಂಡಿತ ಮುಟ್ಟುತ್ತಾನೆ ಅನ್ನುವ ವಿಶ್ವಾಸ ನಮ್ಮದು'.

ಪುಸ್ತಕ ಚಿತ್ರ ಬಿಡುಗಡೆಯಾಗುವ ಎಲ್ಲಾ ಥಿಯೇಟರ್‌ಗಳಲ್ಲಿ ದೊರೆಯಲಿದೆ. ತಾರೆಯರ ಸಂದರ್ಶನ, ಸಿನಿಮಾದ ವಸ್ತು ಅಶೋಕ ಹೇಗಾಯಿತು? ಸೆಟ್‌ಗಳಲ್ಲಿ ಕಳೆದ ಮುದ ಕೊಡುವ ಮಧುರ ಕ್ಷಣಗಳು ಹೇಗಿದ್ದವು? ಇವೆಲ್ಲವುಗಳ ಜೊತೆಗೆ ಅಶೋಕನ ಇತಿ ವೃತ್ತಾಂತದ ಕಿರು ಪರಿಚಯವೂ ಪುಸ್ತಕದಲ್ಲುಂಟು.

ಶಾರುಖ್‌ ಖಾನ್‌ ನಿರ್ಮಾಣ ಸಂಸ್ಥೆಯ ಪಾಲುದಾರರಾದ ನಟಿ ಜ್ಯೂಹಿ ಪ್ರಕಾರ ಇದೊಂದು ಒಳ್ಳೆ ಯೋಜನೆ. ಸಿನಿಮಾ ಹಾಗೂ ಪುಸ್ತಕ ಒಂದಕ್ಕೊಂದು ಪೂರಕವಾಗಿರುತ್ತವೆ. ಸಿನಿಮಾ ನೋಡಿದ ನಂತರ ಅದನ್ನು ಮೆಚ್ಚುವ ಪ್ರೇಕ್ಷಕನಿಗೆ ಹಸಿವು ಹೆಚ್ಚಿ, ಪುಸ್ತಕ ಕೊಳ್ಳಲು ಮುಂದಾಗಬಹುದು. ಪುಸ್ತಕ ಓದಿ, ಉತ್ಸಾಹ ಕೆರಳಿ ಸಿನಿಮಾ ನೋಡಬಹುದು. ಎಲ್ಲಕ್ಕೂ ಮೀರಿ ಸಿನಿಮಾ ನಿರ್ಮಾಣದ ಅಮೃತ ಘಳಿಗೆಗಳು ಸದಾ ಹಸುರಾಗಿರುತ್ತವೆ.

ಶಾರುಖ್‌ ಐಡಿಯಾ ಇದೀಗ ಹೊಸ ಟ್ರೆಂಡ್‌ : ಶಾರುಖ್‌ ಖಾನ್‌ ಅವರ ಈ ಐಡಿಯಾ ಈಗಾಗಲೇ ಬಾಲಿವುಡ್‌ನ್ನು ಆವರಿಸಿಕೊಳ್ಳುತ್ತಿದೆ. ಪೈಪ್‌ಲೈನ್‌ನಲ್ಲಿರುವ ದೇವದಾಸ್‌ ಹಾಗೂ ಕರಣ್‌ ಜೋಹರ್‌ ನಿರ್ದೇಶನದ ಕಭಿ ಖುಷಿ ಕಭಿ ಗಮ್‌ ಚಿತ್ರಗಳ ಶೂಟಿಂಗ್‌ ಶಾಂದಾರ್‌ ಘಳಿಗೆಗಳಿಗೆ ಪುಸ್ತಕದ ರೂಪು ಕೊಡುವ ಕೆಲಸ ನಡೆಯುತ್ತಿದೆ. ಬಾಲಿವುಡ್‌ ಚಿತ್ರೀಕರಣದ ಸಿಹಿ- ಕಹಿ ಕ್ಷಣಗಳನ್ನು ಬೇಕೆನಿಸಿದಾಗ ಓದುವ ಭಾಗ್ಯ ವೀಕ್ಷಕನಿಗೆ ಸಲ್ಲುತ್ತಿರುವುದು ಖಂಡಿತ ಸ್ವಾಗತಾರ್ಹ. ಸ್ವಲ್ಪ ತಡೆಯಿರಿ, ಮೇಕಿಂಗ್‌ ಆಫ್‌ ಅಶೋಕ ಪುಸ್ತಕದ ಕಾಫಿ ಟೇಬಲ್‌ ಪ್ರತಿಯ ದರ 995 ರುಪಾಯಿ ! ಶಾರುಖ್‌, ನಿಮ್ಮ ಪುಸ್ತಕ ತುಂಬಾ ದುಬಾರಿಯಾಯಿತಲ್ಲವೇ? ಇಷ್ಟು ಮೊತ್ತಕ್ಕೆ ಹದಿನೈದು ಇಪ್ಪತ್ತು ಸಿನಿಮಾ ನೋಡಬಹುದಲ್ಲ ಮಿ. ಖಾನ್‌?

English summary
Shahrukh is the first to document golden movements of film making in the form of a book

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada